ಅಸಮಾನತೆ ವಿರುದ್ಧ ಹೋರಾಡಿದ್ದ ಚೌಡಯ್ಯ

7

ಅಸಮಾನತೆ ವಿರುದ್ಧ ಹೋರಾಡಿದ್ದ ಚೌಡಯ್ಯ

Published:
Updated:

ಮಡಿಕೇರಿ: ‘ಸಮಾಜದಲ್ಲಿನ ಅಸಮಾನತೆ ವಿರುದ್ಧ ಹೋರಾಟ ನಡೆಸಿ ಕ್ರಾಂತಿಕಾರಕ ಸುಧಾರಣೆ ತರಲು ಅಂಬಿಗರ ಚೌಡಯ್ಯ ಶ್ರಮಿಸಿದ್ದರು’ ಎಂದು ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಸ್ಮರಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಹಳೇ ಕೋಟೆ ವಿಧಾನಸಭಾ ಸಭಾಂಗಣದಲ್ಲಿ ಸೋಮವಾರ ನಡೆದ ನಿಜಶರಣ ಅಂಬಿಗರ ಚೌಡಯ್ಯ ಜಯಂತಿಯಲ್ಲಿ ಅವರು ಮಾತನಾಡಿದರು.

‘ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ ಅವರ ಸಮಕಾಲೀನರು. ಸುಮಾರು 150ಕ್ಕೂ ಹೆಚ್ಚು ವಚನಗಳನ್ನು ರಚಿಸಿ ಸಮಾಜಕ್ಕೆ ಮಾದರಿ ವ್ಯಕ್ತಿಯಾಗಿದ್ದರು. ವಚನಗಳು ಮೂಲಕ ಸಮಾಜವನ್ನು ತಿದ್ದುವ ಕೆಲಸ ಮಾಡಿದ್ದರು’ ಎಂದು ಹೇಳಿದರು.

ಸಾಹಿತಿ ಆನಂದತೀರ್ಥ ಕೆ. ಭಾರದ್ವಾಜ್ ಮಾತನಾಡಿ, ‘ಅಂಬಿಗ ಎಂದರೆ ದೇವರು. ದೋಣಿ ನಡೆಸುವ ಅಂಬಿಗರ ಚೌಡಯ್ಯ ಅವರು ತಾವು ಮಾಡುವ ವೃತ್ತಿಯಲ್ಲಿ ದೇವರನ್ನು ಕಂಡಿದ್ದರು’ ಎಂದು ಪ್ರತಿಪಾದಿಸಿದರು. ಅಸಮಾನತೆ ವಿರುದ್ಧ ಬಂಡಾಯ ಸಾರಿದ್ದ ಅಂಬಿಗರ ಚೌಡಯ್ಯ ಅವರು ಕುಂಟುಂಬದಲ್ಲಿ ಶಾಂತಿ, ನೆಮ್ಮದಿ ನೆಲೆಸಲು ಅವಿಭಕ್ತ ಕುಟುಂಬ ಉತ್ತಮ ಎಂದು ಸಾರಿದ್ದರು ಎಂದು ನುಡಿದರು.

‘ದೇವರು ಒಬ್ಬನೇ, ನಾಮ ಹಲವು, ವೃತ್ತಿಯೇ ದೇವರು ಎಂದು ಹೇಳಿದ್ದರು. ಆ ದಿಸೆಯಲ್ಲಿ ಅಂಬಿಗರ ಚೌಡಯ್ಯ ಅವರ ವಚನಗಳನ್ನು ಪ್ರತಿಯೊಬ್ಬರೂ ಅಧ್ಯಯನ ಮಾಡಬೇಕು’ ಎಂದು ಸಲಹೆ ನೀಡಿದರು.

ನಗರಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಸಾಹಿತ್ಯ ರೂಪದಲ್ಲಿ ಜನರಿಗೆ ಸಾಮಾಜಿಕ ಅಸಮಾನತೆ ವಿರುದ್ಧ ಹೋರಾಡಲು ಪ್ರೇರಣೆಯಾದವರು ಅಂಬಿಗರ ಚೌಡಯ್ಯ ಎಂದು ತಿಳಿಸಿದರು.

‘ಪುಣ್ಯ ಪುರುಷರು ದಾರ್ಶನಿಕರು ಸ್ವಾರ್ಥಿಗಳಾಗದೆ ಸಮಾಜಕ್ಕಾಗಿ ಬದುಕಿದರು. ಸೇವೆ ರೂಪದಲ್ಲಿ ಸಮಾಜಕ್ಕೆ ಕಾಣಿಕೆಯನ್ನು  ನೀಡಿದರು. ಬುದ್ಧ, ಬಸವ, ಅಂಬೇಡ್ಕರ್ ಇವರು ಅಸ್ಪೃಶ್ಯತೆ, ಅಸಮಾನತೆಯನ್ನು ಹೋಗಲಾಡಿಸಲು ಪ್ರಯತ್ನಿಸಿದರು. ಇವರ ಸಿದ್ಧಾಂತವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಡಿವೈಎಸ್‌ಪಿ ಸುಂದರ್ ರಾಜ್ ತಿಳಿಸಿದರು

ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಬೆಳ್ಳಿಯಪ್ಪ ಮಾತನಾಡಿ, 12ನೇ ಶತಮಾನದ ಚೇತನ ಅಂಬಿಗರ ಚೌಡಯ್ಯ ಅವರ ಸಂದೇಶಗಳು ಈ ಕಾಲಕ್ಕೂ ಅನುಕರಣೀಯ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯದರ್ಶಿ ಶ್ರೀಕಂಠಮೂರ್ತಿ, ಆಹಾರ ಇಲಾಖೆ ಉಪ ನಿದೇಶಕರ ಪುಟ್ಟಸ್ವಾಮಿ, ನಗರಸಭೆ ಆಯುಕ್ತೆ ಬಿ. ಶುಭಾ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವೈದ್ಯಾಧಿಕಾರಿ ಡಾ.ಆನಂದ್, ಕಾರ್ಮಿಕ ಇಲಾಖೆ ರಾಮಕೃಷ್ಣ ಹಾಜರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ಚಿನ್ನಸ್ವಾಮಿ ಸ್ವಾಗತಿಸಿದರು. ಮಣಜೂರು ಮಂಜುನಾಥ್ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry