ವಿರೋಧದ ನಡುವೆಯೂ ಸಾಕಾನೆ ರವಾನೆ

7

ವಿರೋಧದ ನಡುವೆಯೂ ಸಾಕಾನೆ ರವಾನೆ

Published:
Updated:
ವಿರೋಧದ ನಡುವೆಯೂ ಸಾಕಾನೆ ರವಾನೆ

ಕುಶಾಲನಗರ: ಕೊಡಗು ಜಿಲ್ಲೆಯ ಪ್ರಮುಖ ಪ್ರವಾಸಿ ತಾಣ ದುಬಾರೆ ಸಾಕಾನೆ ಶಿಬಿರದಿಂದ ಮೂರು ಸಾಕಾನೆಗಳನ್ನು ಮಾವುತರ ವಿರೋಧದ ನಡುವೆಯೂ ಸೋಮವಾರ ಲಾರಿಗಳ ಮೂಲಕ ಛತ್ತೀಸಗಡ ರಾಜ್ಯಕ್ಕೆ ಕಳುಹಿಸಲಾಯಿತು.

ಛತ್ತೀಸಗಡದಲ್ಲಿ ಕಾಡಾನೆ ಹಾವಳಿ ತೀವ್ರಗೊಂಡಿದ್ದು, ಇದರಿಂದ ರೈತರ ಬೆಳೆ ನಷ್ಟ ಹಾಗೂ ಆನೆ ಮಾನವ ಸಂಘರ್ಷ ತೀವ್ರವಾಗಿದೆ. ಅದನ್ನು ತಡೆಯಲು ಕೇಂದ್ರ ಸರ್ಕಾರ ಆದೇಶದ ಮೇರೆಗೆ ರಾಜ್ಯ ಸರ್ಕಾರ ದುಬಾರೆ ಸಾಕಾನೆ ಶಿಬಿರದ ಅಜಯ (27), ತೀರ್ಥರಾಮ (25) ಹಾಗೂ ಪರಶುರಾಮ (18) ಎಂಬ ಹೆಸರಿನ ಸಾಕಾನೆಗಳನ್ನು ರವಾನೆ ಮಾಡಲಾಯಿತು.

ದುಬಾರೆ ಶಿಬಿರದಿಂದ ಛತ್ತೀಸಗಡದ ಮಾವುತರು ಹಾಗೂ ದುಬಾರೆ ಮಾವುತರ ಸಹಾಯದಿಂದ ಮೂರು ಆನೆಗಳನ್ನು ಲಾರಿಗೆ ಹತ್ತಿಸಿ, ಸಂಜೆಯ ವೇಳೆಗೆ ಕೊಡಗು ಜಿಲ್ಲೆಯ ಗಡಿದಾಟಿದವು. ಈ ಮೂರು ಆನೆಗಳು ಮತ್ತಿಗೋಡಿ ಮೂರು ಆನೆಗಳೊಂದಿಗೆ ಸೇರಿಕೊಂಡು ಉತ್ತರ ಭಾರತದತ್ತ ಪ್ರಯಾಣ ಬೆಳೆಸಲಿವೆ.

ಆರಂಭದಲ್ಲಿ ಪರಶುರಾಮ ಲಾರಿಗೆ ಹತ್ತಲು ನಿರಾಕರಿಸಿ ಜೋರಾಗಿ ಕಿರುಚುತ್ತ ರಂಪ ಮಾಡಿದ. ಆಗ ಇತರೆ ಸಾಕಾನೆಗಳ ಸಹಾಯದಿಂದ ಆನೆಯನ್ನು ಲಾರಿಗೆ ಹತ್ತಿಸುವಲ್ಲಿ ಮಾವುತರು ಯಶಸ್ವಿಯಾದರು. ಅಜಯ ಆನೆಗೆ ಮದವೇರಿ ಗಲಾಟೆ ಮಾಡಲು ಆರಂಭಿಸಿತು. ಜೋರಾಗಿ ಕಿರುಚುತ್ತ ಓಡಾಡುತ್ತಿತ್ತು. ಈ ಹಿನ್ನೆಲೆಯಲ್ಲಿ ಸ್ವಲ್ಪ ಸಮಯ ಆನೆಗಳನ್ನು ಏಕಾಂಗಿಯಾಗಿ ಬಿಡಲಾಯಿತು. ಲಾರಿ ಹತ್ತಿದ ಪರಶುರಾಮ ಲಾರಿ ಒಳಗೆಯೂ ಗಲಾಟೆ ನಡೆಸಿದ.

ಸೋಮವಾರಪೇಟೆ ವಿಭಾಗ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಸ್. ಚಿಣ್ಣಪ, ‘ಈ ಆನೆಗಳು ಉತ್ತಮ ತರಬೇತಿ ಹೊಂದಿವೆ. ಆನೆಗಳೊಂದಿಗೆ ಮಾವುತರು ತೆರಳಿ ಅಲ್ಲಿ ಕೆಲವು ದಿನಗಳ ಕಾಲ ಅಲ್ಲಿನ ಮಾವುತರಿಗೆ ತರಬೇತಿ ನೀಡಿ ನಂತರ ದುಬಾರೆಗೆ ಬರಲಿದ್ದಾರೆ’ ಎಂದರು ಕುಶಾಲನಗರ ವಲಯ ಅರಣ್ಯಾಧಿ ಕಾರಿ ಅರುಣ್, ದುಬಾರೆ ಅರಣ್ಯಾಧಿಕಾರಿ ರಂಜನ್, ಡಾ.ಮಜೀದ್, ಸಿಬ್ಬಂದಿ ಹಾಗೂ ಮಾವುತರು ಇದ್ದರು.

ಕಾದು ಕುಳಿತ ಅಧಿಕಾರಿಗಳು: ದುಬಾರೆಯಿಂದ ಆನೆಗಳನ್ನು ಕೊಂಡ್ಯೊಯಲು ಛತ್ತೀಸಗಡದ ಅರಣ್ಯ ಅಧಿಕಾರಿಗಳು ಕಾದು ಕುಳಿತಿದ್ದರು. ದುಬಾರೆ ಸಾಕಾನೆ ಶಿಬಿರದ ಆನೆಗಳ ಬಗ್ಗೆ ಅಧ್ಯಯನ ಮಾಡಿ ನಂತರ ಇಲ್ಲಿನ ಆನೆಗಳ ಶಿಸ್ತು ಹಾಗೂ ಕಾರ್ಯ ಚಟುವಟಿಕೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ರಾಜ್ಯಕ್ಕೆ ಕೊಂಡೊಯ್ಯುವ ನಿರ್ಧಾರ ಕೈಗೊಂಡಿದ್ದರು ಎನ್ನಲಾಗಿದೆ.

ಛತ್ತೀಸಗಡ ಸಿಸಿಎಫ್ ತಿವಾರಿ, ಮಾತನಾಡಿ, ನಮ್ಮ ರಾಜ್ಯದಲ್ಲಿ ಕಾಡಾನೆ ಹಾವಳಿ ತೀವ್ರಗೊಂಡಿದೆ. ಆನೆ ಮಾನವ ಸಂಘರ್ಷಕ್ಕೆ ವರ್ಷಕ್ಕೆ 150ರಿಂದ 200 ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಆನೆಗಳು ಹಳ್ಳಿಗಳಿಗೆ ನುಗ್ಗಿ ರೈತರ ಬೆಳೆ ನಾಶ ಪಡಿಸುತ್ತಿವೆ. ದುಬಾರೆಯಿಂದ ಕೊಂಡೊಯ್ದ ಆನೆಗಳಿಂದ ಪುಂಡಾನೆಗಳನ್ನು ಆಪರೇಷನ್ ಎಲಿಫೆಂಟ್ ಮೂಲಕ ಸೆರೆ ಹಿಡಿದು ಅವುಗಳನ್ನು ಪಳಗಿಸಲಾಗುವುದು’ ಎಂದು ಹೇಳಿದರು.

ಕಣ್ಣೀರು ಸುರಿಸಿದ ಮಾವುತರು

ಸಾಕಾನೆಗಳೊಂದಿಗೆ ಉತ್ತಮ ಒಡನಾಟ ಹೊಂದಿದ್ದ ಮಾವುತರು ಛತ್ತೀಸಗಡ ರಾಜ್ಯಕ್ಕೆ ದುಬಾರೆ ಆನೆಗಳನ್ನು ಕಳುಹಿಸಲು ತೀವ್ರ ವಿರೋಧ ವ್ಯಕ್ತಪಡಿಸಿದರು.

ಛತ್ತೀಸಗಡಕ್ಕೆ ಆನೆಗಳನ್ನು ಕಳುಹಿಸಲು ಲಾರಿ ತಂದರೂ ಕೂಡ ಮಾವುತರು ಮಾತ್ರ ಆನೆಗಳನ್ನು ಲಾರಿಗೆ ಹತ್ತಿಸಲು ನಿರಾಕರಿಸಿದರು. ಇದರಿಂದ ಎರಡು ತಾಸಿಗೂ ಹೆಚ್ಚು ಕಾಲ ಮಾವುತರಿಗಾಗಿ ಕಾಯಬೇಕಾಯಿತು ಮಾವುತರಾದ ಉರುಣೆ, ಜಯ, ಅಣ್ಣಯ್ಯ ಅವರು ತಮ್ಮ ಅಚ್ಚುಮೆಚ್ಚಿನ ಆನೆಗಳನ್ನು ಹೊರ ರಾಜ್ಯಕ್ಕೆ ಕಳುಹಿಸುತ್ತಿರುವುದರಿಂದ ದುಃಖಿತರಾಗಿದ್ದರು.

ಅರಣ್ಯ ಅಧಿಕಾರಿ ಎಂ.ಎಸ್. ಚಿಣ್ಣಪ್ಪ ಹಾಗೂ ಇತರೆ ಅಧಿಕಾರಿಗಳು ಮಾವುತರನ್ನು ಮನವೊಲಿಸಿದರು. ಇದು ಸರ್ಕಾರದ ಆದೇಶ ನಾವು ಪಾಲನೆ ಮಾಡಲೇ ಬೇಕೆಂದು ಸಮಾಧಾನ ಪಡಿಸಿದರು. ಮಾವುತರೂ ಕಣ್ಣೀರು ಹಾಕುತ್ತಲೇ ಕಳುಹಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry