ಶಿಕ್ಷಕರ ನಿಯೋಜನೆ ವಿರೋಧಿಸಿ ವಿದ್ಯಾರ್ಥಿಗಳ ಪ್ರತಿಭಟನೆ

7

ಶಿಕ್ಷಕರ ನಿಯೋಜನೆ ವಿರೋಧಿಸಿ ವಿದ್ಯಾರ್ಥಿಗಳ ಪ್ರತಿಭಟನೆ

Published:
Updated:

ಕನಕಗಿರಿ: ಪಟ್ಟಣದ ಆದರ್ಶ ವಿದ್ಯಾಲಯದ ಮೂವರು ಶಿಕ್ಷಕರನ್ನು ಬೇರೆಡೆಗೆ ನಿಯೋಜನೆಗೊಳಿಸಿರುವುದನ್ನು ವಿರೋಧಿಸಿ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಸೋಮವಾರ ಶಾಲೆ ಮುಂದೆ ಪ್ರತಿಭಟನೆ ನಡೆಸಿದರು.

ಶಾಲೆ ಶಿಕ್ಷಕರಾದ ಮಂಜುನಾಥ ಕೆ.ಎಲ್, ಗುರುಪ್ರಸಾದ ಹಾಗೂ ಸಂತೋಷಕುಮಾರ ಅವರನ್ನು ಕ್ರಮವಾಗಿ ಸೋಮಸಾಗರ, ಗೌರಿಪುರ ಹಾಗೂ ಕಲಕೇರಿ ಗ್ರಾಮದ ಪ್ರೌಢಶಾಲೆಗಳಿಗೆ ನಿಯೋಜನೆ ಮಾಡಲಾಗಿದ್ದು, ಕೂಡಲೆ ರದ್ದುಗೊಳಿಸುವಂತೆ ವಿದ್ಯಾರ್ಥಿಗಳು ಒತ್ತಾಯಿಸಿದರು.

ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ ಹತ್ತಿರವಾಗುತ್ತಿದ್ದು, ಶಿಕ್ಷಕರ ನಿಯೋಜನೆಯಿಂದ ಪಾಠ ಪ್ರವಚನಗಳಿಗೆ ತೊಂದರೆಯಾಗುತ್ತಿದೆ. ಶಿಕ್ಷಕರು ಬರುವವರೆಗೂ ತರಗತಿಯೊಳಗೆ ಕಾಲಿಡುವುದಿಲ್ಲ ಎಂದು ತಿಳಿಸಿದರು.

ಶಿಕ್ಷಕರ ನಿಯೋಜನೆ ಕುರಿತು ಶಾಲೆ ಎಸ್‌ಡಿಎಂಸಿ ಅಧ್ಯಕ್ಷ ಡಾ.ದೇವರಾಜ ಮಂಗಳೂರು ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಉಪಾಧ್ಯಕ್ಷೆ ಕವಿತಾ, ಸದಸ್ಯರಾದ ಬಸವರಾಜ ಕಂಪ್ಲಿ, ನೀಲಕಂಠಗೌಡ, ವಿಶ್ವನಾಥರಡ್ಡಿ ಓಣಿಮನಿ, ರುದ್ರಮುನಿ ದೋಟಿಹಾಳ ಮಾತನಾಡಿ, ಎರವಲು ಸೇವೆಗೆ ತೆರಳಿದ ಶಿಕ್ಷಕರನ್ನು ಮರಳಿ ಶಾಲೆಗೆ ತರುವಂತೆ ಕೋರಿ ಕ್ಷೇತ್ರ ಶಿಕ್ಷಣಾಧಿಕಾರಿಗೆ ಪತ್ರ ಬರೆಯಲು ತೀರ್ಮಾನಿಸಿದರು.

ಅಧ್ಯಕ್ಷ ದೇವರಾಜ ಮಂಗಳೂರು ಮಾತನಾಡಿ, ಮೂರು ಗ್ರಾಮಗಳ ಹೊಸ ಪ್ರೌಢಶಾಲೆಗಳಲ್ಲಿ ಶಿಕ್ಷಕರ ಕೊರತೆ ಇರುವ ಕಾರಣ ಅಧಿಕಾರಿಗಳು ನಿಯೋಜನೆ ಗೊಳಿಸಿದ್ದಾರೆ, ಗ್ರಾಮೀಣ ಮತ್ತು ಪಟ್ಟಣದ ವಿದ್ಯಾರ್ಥಿಗಳಿಗೆ ಅನ್ಯಾಯವಾಗದಂತೆ ಪೂರ್ಣ ಪ್ರಮಾಣದ ನಿಯೋಜನೆ ರದ್ದುಗೊಳಿಸಿ ಮೂರು ದಿನಗಳ ಕಾಲ ಈ ಶಾಲೆಯಲ್ಲಿ ಕೆಲಸ ಮಾಡಲು ತಿಳಿಸಲಾಗುವುದು ಎಂದು ಹೇಳಿದರು. ಪಟ್ಟಣ ಪಂಚಾಯಿತಿ ಸದಸ್ಯ ಮಂಜುನಾಥರಡ್ಡಿ ಮಾದಿನಾಳ, ವೆಂಕೋಬ ಭೋವಿ, ಪರಶುರಾಮ ಸೂಡಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry