ಹಕ್ಕಿಗೂಡಿನಂತಿದೆ ಪ್ರಾಥಮಿಕ ಆರೋಗ್ಯ ಕೇಂದ್ರ

7

ಹಕ್ಕಿಗೂಡಿನಂತಿದೆ ಪ್ರಾಥಮಿಕ ಆರೋಗ್ಯ ಕೇಂದ್ರ

Published:
Updated:
ಹಕ್ಕಿಗೂಡಿನಂತಿದೆ ಪ್ರಾಥಮಿಕ ಆರೋಗ್ಯ ಕೇಂದ್ರ

ಯಲಬುರ್ಗಾ: ತಾಲ್ಲೂಕಿನ ಬಂಡಿಹಾಳ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ಹಕ್ಕಿಗೂಡಿನಂತಿದೆ. ಆಶ್ರಯ ಮನೆಗಿಂತಲೂ ಕಿರಿದಾಗಿರುವ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ತಪಾಸಣೆ ಕೈಗೊಳ್ಳಲು ಸಾಧ್ಯವೇ ಎನ್ನುವಂತಿದೆ.

ತಾಲ್ಲೂಕಿನ ಗಡಿಭಾಗವಾದ ಬಂಡಿಹಾಳ ಅಭಿವೃದ್ಧಿಯಲ್ಲಿ ಹಿಂದುಳಿದೆ. ಇದ್ದು ಇಲ್ಲದಂತಿರುವ ಇಲ್ಲಿಯ ಆಸ್ಪತ್ರೆಗೆ ಪ್ರತಿದಿನ 80ರಿಂದ 90 ಜನರು ತಪಾಸಣೆಗಾಗಿ ಭೇಟಿ ನೀಡುತ್ತಾರೆ. ಅವರಿಗೆ ಸೂಕ್ತ ಚಿಕಿತ್ಸೆ ಲಭಿಸದ ಕಾರಣ ಪಕ್ಕದ ಗದಗ, ನರೇಗಲ್ಲ ಹಾಗೂ ಯಲಬುರ್ಗಾ ಪಟ್ಟಣಕ್ಕೆ ಹೋಗಿ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಬರುವುದು ಸಾಮಾನ್ಯವಾಗಿದೆ.

ಆರೋಗ್ಯ ಕೇಂದ್ರ ತಗ್ಗು ಪ್ರದೇಶದಲ್ಲಿದ್ದು, ಮಳೆ ಬಂದರೆ ಆಸ್ಪತ್ರೆಯೊಳಗೆ ನೀರು ನುಗ್ಗುತ್ತವೆ. ಅಲ್ಲದೇ ಆಸ್ಪತ್ರೆ ಮುಂದೆಯೇ ಮಳೆ ನೀರು ನಿಂತು ದುರ್ನಾತ ಹಾಗೂ ಸೊಳ್ಳೆಗಳ ಕಾಟ ಹೆಚ್ಚುತ್ತದೆ. ಸರಿಯಾದ ಸ್ಥಳದಲ್ಲಿ ಆಸ್ಪತ್ರೆ ಕಟ್ಟಡ ನಿರ್ಮಿಸಿಕೊಡುವಂತೆ ಒತ್ತಾಯಿಸುತ್ತಾ ಬಂದರೂ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಆಸಕ್ತಿ ತೋರುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು.

ವೈದ್ಯರು ಹಾಗೂ ಸಿಬ್ಬಂದಿಗೆ ಕುಳಿತುಕೊಳ್ಳಲು ಸ್ಥಳವಕಾಶವಿಲ್ಲ. ಪರಿಕರಗಳಿದ್ದರೂ ರೋಗಿಗಳನ್ನು ಕೂಡಿಸಿಕೊಂಡು ಸರಿಯಾಗಿ ಚಿಕಿತ್ಸೆಗೆ ಅವಕಾಶವಿಲ್ಲದಷ್ಟು ಇಕ್ಕಟ್ಟಾಗಿದೆ. ಇಂತಹ ಪರಿಸ್ಥಿತಿ ಬಗ್ಗೆ ಶಾಸಕರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಶರಣು ಕಳಸಪ್ಪನವರ್ ಹೇಳಿದ್ದಾರೆ.

ಗ್ರಾಮದ ವ್ಯಾಪ್ತಿಯ ಅನೇಕ ಕಡೆಗಳಲ್ಲಿ ಸರ್ಕಾರದ ಜಮೀನು ಇದೆ. ಆದರೆ ಜಮೀನು ಕೊಡುವವರಿಲ್ಲ ಎಂಬ ನೆಪ ಹೇಳಿ ಗ್ರಾಮದ ಜನರಿಗೆ ಅನ್ಯಾಯ ಮಾಡುತ್ತಿದ್ದಾರೆ. ಸರ್ಕಾರ ಆಸ್ಪತ್ರೆಗೆ ಅಗತ್ಯ ಸೌಲಭ್ಯ ಕಲ್ಪಿಸಿಕೊಡುವಲ್ಲಿ ವಿಫಲವಾಗಿದೆ.  ಕಟ್ಟಡ, ಸಲಕರಣೆಗಳು, ಔಷಧಿ ಹಾಗೂ ಅಗತ್ಯ ಸಿಬ್ಬಂದಿ ನೇಮಿಸಿ ಗ್ರಾಮಸ್ಥರ ಆರೋಗ್ಯ ಸುಧಾರಣೆಗೆ ಶ್ರಮಿಸಬೇಕಾಗಿದೆ ಎಂದು ಕೊಟ್ರೇಶ. ಬಸವರಾಜ ಸಿದ್ದಲಿಂಗಪ್ಪ ಒತ್ತಾಯಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry