ಪ್ರಯಾಣಿಕರಿಗೆ 8 ಕಿ.ಮೀ ನರಕ ದರ್ಶನ

7

ಪ್ರಯಾಣಿಕರಿಗೆ 8 ಕಿ.ಮೀ ನರಕ ದರ್ಶನ

Published:
Updated:
ಪ್ರಯಾಣಿಕರಿಗೆ 8 ಕಿ.ಮೀ ನರಕ ದರ್ಶನ

ಬಾದಾಮಿ: ‘ಪಟ್ಟದಕಲ್ಲು ಮತ್ತು ಐಹೊಳೆ ನಡುವಿನ ರಸ್ತೆ ಕಳೆದೊಂದು ದಶಕದಿಂದ ಸಂಪೂರ್ಣವಾಗಿ ಕಿತ್ತು ಹೋಗಿದೆ. ಚಾಲುಕ್ಯ ಉತ್ಸವ ಆರಂಭ ವಾಗುವ ಮುನ್ನವೇ ರಾಷ್ಟ್ರೀಯ ಹೆದ್ದಾರಿ ದುರಸ್ತಿ ಕಾಮಗಾರಿ ಪೂರ್ಣ ಗೊಳಿಸುವಂತೆ’ ಪಟ್ಟದಕಲ್ಲು ಮತ್ತು ಕಾಟಾಪುರ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಕೆಶಿಪ್‌ ಯೋಜನೆಯಡಿ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿ ನಡೆದಿದೆ. ಸವದತ್ತಿಯಿಂದ ಕಮತಗಿವರೆಗಿನ (130 ಕಿ.ಮೀ) ನಡುವಿನ ಬಾದಾಮಿ ರೈಲ್ವೆ ಸ್ಟೇಷನ್‌ ರಸ್ತೆಯ ಕೋಣಮ್ಮ ದೇವಾಲಯದಿಂದ ಕಮತಗಿವರೆಗೆ ಅಶೋಕಾ ಕನ್ಸಲ್ಟಿಂಗ್‌ ಗುತ್ತಿಗೆದಾರರು ರಸ್ತೆ ಕಾಮಗಾರಿ ಮುಗಿಸಿದ್ದಾರೆ.

ಪಟ್ಟದಕಲ್ಲು, ಕಾಟಾಪುರ ಕ್ರಾಸ್‌, ಮಂಗಳಗುಡ್ಡ ಮತ್ತು ರಾಮತಾಳ ಗ್ರಾಮದವರೆಗೆ ಅಂದಾಜು ಎಂಟು ಕಿ.ಮೀ ರಸ್ತೆ ಕಾಮಗಾರಿ ಸ್ಥಗಿತವಾಗಿದೆ. ಇಲ್ಲಿ ವಾಹನ ಚಾಲಕರು, ಪ್ರವಾಸಿಗರು ಮತ್ತು ಪ್ರಯಾಣಿಕರು ನಿತ್ಯ ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಿಡಿಶಾಪ ಹಾಕುತ್ತಲೇ ಸಾಗುತ್ತಾರೆ.

ಬಾದಾಮಿಯಿಂದ ಪಟ್ಟದಕಲ್ಲಿಗೆ ಹೋಗುವಾಗ ಪ್ರಾಥಮಿಕ ಆರೋಗ್ಯ ಕೇಂದ್ರದ ಸಮೀಪದ ಜೈನ ದೇವಾ ಲಯದಿಂದ ಪಟ್ಟದಕಲ್ಲು ಸ್ಮಾರಕಗಳ ಮಲಪ್ರಭಾ ನದಿ ದಂಡೆಯ ವರೆಗಿನ ರಸ್ತೆ ಕಾಮಗಾರಿ ಸ್ಥಗಿತವಾಗಿದೆ. 10 ವರ್ಷಗಳಿಂದ ಈ ರಸ್ತೆ ಕಲ್ಲು ಮಣ್ಣುಗಳಿಂದ ಕೂಡಿದ್ದು ದೂಳುಮಯವಾಗಿದೆ.

‘ಭಾರತೀಯ ಪುರಾತತ್ವ ಇಲಾಖೆ ಮತ್ತು ಅರಣ್ಯ ಇಲಾಖೆಯ ಅನುಮತಿ ದೊರೆಯದ ಕಾರಣ ರಸ್ತೆ ಕಾಮಗಾರಿ ಸ್ಥಗಿತವಾಗಿದೆ. ಗುತ್ತಿಗೆದಾರರು ಕಳೆದ ಆರು ತಿಂಗಳಿಂದ ಇಲಾಖೆಯ ಅನುಮತಿ ಪತ್ರದ ದಾರಿಯನ್ನು ಕಾಯುತ್ತಿದ್ದಾರೆ. ಸರ್ಕಾರ ಗುತ್ತಿಗೆದಾರರಿಗೆ ಗುತ್ತಿಗೆ ಕೊಡುವ ಮುನ್ನವೇ ಇಲಾಖೆ ಅನುಮತಿ ಪಡೆಯಬೇಕಿತ್ತು’ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಾರೆ.

ಚಾಲುಕ್ಯ ಉತ್ಸವಕ್ಕಿಂತ ಮುಂಚೆ ಇಲ್ಲಿ ಸ್ಥಗಿತಗೊಂಡಿರುವ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಲು ಕಾಟಾಪುರ, ಪಟ್ಟದಕಲ್ಲು ಗ್ರಾಮಗಳ ಸಿದ್ದಪ್ಪ ಮಾದರ, ಶಿವಪ್ಪ ಸುಂಕದ, ಬಸಯ್ಯ ಹಿರೇಮಠ, ಮಲ್ಲಪ್ಪ ನಾಗರಾಳ, ದೇವೇಂದ್ರಪ್ಪ ಶಿವಪೂರ, ಮದ್ದಾನೆಪ್ಪ ಕಿಳ್ಳಿಕ್ಯಾತರ, ಜಗನ್ನಾಥ ಹಜೇರಿ, ಬಸವರಾಜ ಚಲವಾದಿ, ಲಕ್ಷ್ಮಣ ಕಿಳ್ಳಿಕ್ಯಾತರ ಒತ್ತಾಯಿಸಿದ್ದಾರೆ.

‘ಅರಣ್ಯ ಇಲಾಖೆಯ ಅನುಮತಿ ಬಂದಿದೆ. ರಾಮತಾಳ ಸಮೀಪದ ರಸ್ತೆ ಕಾಮಗಾರಿ ಆರಂಭವಾಗಿದೆ. ಮಂಗಳಗುಡ್ಡ ಮತ್ತು ಕಾಟಾಪುರ ಗ್ರಾಮದ ರೈತರಿಗೆ ಪರಿಹಾರ ಧನ ಬಂದಿದೆ. ಇಲ್ಲಿಯೂ ರಸ್ತೆ ಕಾಮಗಾರಿ ಶೀಘ್ರ ಆರಂಭವಾಗುತ್ತದೆ. ಆದರೆ ಭಾರತೀಯ ಪುರಾತತ್ವ ಇಲಾಖೆಯ ಅನುಮತಿ ಬಾರದ ಕಾರಣ ಪಟ್ಟದಕಲ್ಲು ಸ್ಮಾರಕಗಳ ಸಮೀಪದ ರಸ್ತೆ ಕಾಮಗಾರಿ ಆರಂಭವಾಗಿಲ್ಲ’ ಎಂದು ಕೆಶಿಪ್‌ ಎಂಜಿನಿಯರ್‌ ಎಸ್‌.ವಿ. ನಾಯಕ ‘ಪ್ರಜಾವಾಣಿ’ಗೆ ತಿಳಿಸಿದರು.

* * 

ಪಟ್ಟದಕಲ್ಲು ಸ್ಮಾರಕಗಳ ಸಮೀಪದ ರಸ್ತೆ ಕಾಮಗಾರಿಗೆ ಎಎಸ್‌ಐ ಇಲಾಖೆಯಿಂದ ಅನುಮತಿ ಬಂದಿಲ್ಲವಾದ್ದರಿಂದ ರಸ್ತೆ ಕಾಮಗಾರಿ ಸ್ಥಗಿತವಾಗಿದೆ ಎಸ್‌.ವಿ. ನಾಯಕ ಕೆಶಿಪ್‌ ಎಂಜಿನಿಯರ್‌, ಬೆಳಗಾವಿ ವಿಭಾಗ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry