‘ಬಾಕಿ ಸಂಬಳ ಕೊಡದೆ ಕೆಲಸ ಇಲ್ಲ'

7

‘ಬಾಕಿ ಸಂಬಳ ಕೊಡದೆ ಕೆಲಸ ಇಲ್ಲ'

Published:
Updated:
‘ಬಾಕಿ ಸಂಬಳ ಕೊಡದೆ ಕೆಲಸ ಇಲ್ಲ'

ವಿಜಯಪುರ: ‘ಐದು ತಿಂಗಳಿನಿಂದ ನಮಗೆ ಸಂಬಳ ಕೊಟ್ಟಿಲ್ಲ. ಮಕ್ಕಳಿಗೆ ಪರೀಕ್ಷೆಗಳು ಬರ್ತಿವೆ. ಅವರಿಗೆ ಶಾಲಾ ಶುಲ್ಕ ಕಟ್ಟಿಲ್ಲ. ಮನೆಗಳಲ್ಲಿ ಜೀವನ ನಿರ್ವಹಣೆಗೆ ಮಾಡಿಕೊಂಡಿರುವ ಸಾಲ ಕಟ್ಟಿಲ್ಲ. ಮನೆ ಬಾಡಿಗೆ ಕಟ್ಟಿಲ್ಲ. ಯಾರಿಗಾದರೂ ಆರೋಗ್ಯ ಕೆಟ್ಟರೆ ಆಸ್ಪತ್ರೆಗೆ ಹೋಗಲಿಕ್ಕೂ ಹಣ ಇಲ್ಲ. ಇಂತಹ ಪರಿಸ್ಥಿತಿ ಇದ್ದರೂ ಕೆಲಸ ಮಾಡುತ್ತಲೇ ಇದ್ದೇವೆ’ ಎಂದು ತಹಶೀಲ್ದಾರ್ ರಾಜಣ್ಣ ಅವರ ಮುಂದೆ ಪೌರಕಾರ್ಮಿಕರು ನೋವು ತೋಡಿಕೊಂಡರು.

ಇಲ್ಲಿನ ಪುರಸಭಾ ಕಾರ್ಯಾಲಯದ ಮುಂಭಾಗದಲ್ಲಿ ಸೋಮವಾರ 40 ಕ್ಕೂ ಹೆಚ್ಚು ಮಂದಿ ಪೌರಕಾರ್ಮಿಕರು ಸಂಬಳ ಕೊಟ್ಟಿಲ್ಲವೆಂದು ಪ್ರತಿಭಟನೆ ನಡೆಸಿದರು. ಕಸ ತುಂಬಿದ ವಾಹನಗಳನ್ನು ಪುರಸಭೆಯ ಆವರಣದಲ್ಲಿ ನಿಲ್ಲಿಸಿದ್ದರು. ಸ್ಥಳಕ್ಕೆ ಬಂದಿದ್ದ ತಹಶೀಲ್ದಾರ್ ಅವರಿಗೆ ಅಹವಾಲು ಸಲ್ಲಿಸಿದರು.

‘ಅನೇಕ ವರ್ಷಗಳಿಂದ ಪಟ್ಟಣದಲ್ಲಿ ಸ್ವಚ್ಛತೆ ಮಾಡುವ ಕೆಲಸ ಮಾಡುತ್ತಿದ್ದೇವೆ. ಬೆಳಿಗ್ಗೆ 4 ಗಂಟೆಗೆ ಕೆಲಸಕ್ಕೆ ಬಂದರೆ ಮನೆಗೆ ಹೋಗುವಷ್ಟರಲ್ಲಿ ಮಧ್ಯಾಹ್ನ 12 ಗಂಟೆಯಾಗುತ್ತೆ' ಎಂದರು.

‘ಹಾದಿ ಬೀದಿಗಳಲ್ಲಿ ಬಿದ್ದಿರುವ ಕಸವನ್ನೆಲ್ಲಾ ತೆಗಿತೀವಿ. ಬೀದಿಗಳನ್ನು ಗುಡಿಸ್ತೀವಿ. ಜನ ನಿದ್ದೆಯಿಂದ ಏಳುವಷ್ಟರಲ್ಲಿ ಶುಭ್ರವಾಗಿಡ್ತೀವಿ. ಇಷ್ಟೆಲ್ಲಾ ಮಾಡಿದ್ರೂ ನೆಮ್ಮದಿಯಿಂದ ಬದುಕುವಂತಹ ಅವಕಾಶಗಳಿಲ್ಲ ಅಂದ್ರೆ ಹೇಗೆ ಸ್ವಾಮಿ’ ಎಂದು ಕೇಳಿದರು.

‘ನಿಮಗೆ ಸರ್ಕಾರ ಸಂಬಳ ಕೊಡೋದು ಒಂದು ತಿಂಗಳು ತಡ ಮಾಡಿದರೆ, ನೀವು ಹೇಗೆ ಜೀವನ ಮಾಡ್ತೀರಿ. ನಿಮಗೆ ಒಂದು ತಿಂಗಳು ಬರ್ಲಿಲ್ಲ ಅಂದ್ರೂ ಇನ್ನೊಂದು ತಿಂಗಳು ಬರುತ್ತೆ. ನಮಗೆ ಐದು ತಿಂಗಳಿನಿಂದ ಕೊಟ್ಟಿಲ್ಲ. ಪುರಸಭೆಯವರನ್ನು ಕೇಳಿದರೆ, ಡಿಸಿಯವರಿಗೆ ಕಳುಹಿಸಿದ್ದೀವಿ ಅಂತಾರೆ. ನಾವೇನು ಡಿಸಿ ಆಫೀಸಿಗೆ ಹೋಗಿ ಕೆಲಸ ಮಾಡೋಕೆ ಆಗುತ್ತಾ’ ಎಂದು ಪ್ರಶ್ನಿಸಿದರು.

ಪ್ರತಿಭಟನಾಕಾರರನ್ನು ಸಮಾಧಾನಪಡಿಸಿದ ತಹಶೀಲ್ದಾರ್ ರಾಜಣ್ಣ ಅವರು, ಜಿಲ್ಲಾಧಿಕಾರಿ ಹಾಗೂ ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ಜತೆ ಚರ್ಚೆ ಮಾಡುತ್ತೇನೆ ಎಂದರು. ಫೆಬ್ರುವರಿ ತಿಂಗಳ ಒಳಗೆ ಸಮಸ್ಯೆ ಬಗೆಹರಿಸುತ್ತೇವೆ. ಪ್ರತಿಭಟನೆ ಕೈ ಬಿಡಿ ಎಂದು ಮನವೊಲಿಸಿದ ನಂತರ ಪ್ರತಿಭಟನೆ ಕೈ ಬಿಟ್ಟರು.

ತಹಶೀಲ್ದಾರರು ಇಲ್ಲಿಂದ ವಾಪಸ್ ಹೋದ ನಂತರ ಪೌರಕಾರ್ಮಿಕರು, ‘ಪ್ರತಿಬಾರಿ ಇದೇ ರೀತಿ ಭರವಸೆ ಕೊಡ್ತಿದ್ದೀರಿ, ಕೇಳಿ ಕೇಳಿ ನಮಗೆ ಸಾಕಾಗಿದೆ. ನಮಗೆ ಸಂಬಳ ಕೊಡುವವರೆಗೂ ನಾವ್ಯಾರೂ ಕೆಲಸಕ್ಕೆ ಬರಲ್ಲ’ ಎಂದು ಪುರಸಭೆ ಮುಖ್ಯಾಧಿಕಾರಿ ಎ.ಎಚ್.ನಾಗರಾಜ್ ಅವರ ಮುಂದೆ ಪಟ್ಟು ಹಿಡಿದರು.

‘ನಿಮಗಾಗಿ ಎಲ್ಲಾ ಪ್ರಯತ್ನ ಮಾಡುತ್ತಿದ್ದೇವೆ. ಈಗ ಈ ರೀತಿಯಾಗಿ ಪಟ್ಟು ಹಿಡಿದರೆ ಹೇಗೆ. ಸ್ವಲ್ಪ ಸಮಾಧಾನದಿಂದ ಕಾಯಿರಿ’ ಎಂದು ತಿಳಿಸಿದರು. ಆದರೆ, ಕಾರ್ಮಿಕರು ಕಚೇರಿಯಿಂದ ಹೊರನಡೆದರು.

ಕೆಲಸ ಮಾಡುವುದಿಲ್ಲ:ನಂತರ ಕಾರ್ಮಿಕರನ್ನು ಸಮಾಧಾನಪಡಿಸುವಂತೆ ನೀರ ಗಂಟಿಗಳನ್ನು ಕಳುಹಿಸಿದರೂ ಪ್ರಯೋಜನವಾಗಲಿಲ್ಲ. ‘ನಾಳೆಯಿಂದ ನಾವು ಕೆಲಸ ಮಾಡುವುದಿಲ್ಲ’ ಎಂದು ಹೇಳಿದರು.

ಪೌರಕಾರ್ಮಿಕರಾದ ಶ್ರೀನಿವಾಸ್, ಮಂಜುನಾಥ್, ಅಣ್ಣಪ್ಪ, ಪ್ರಸಾದ್, ಚಂದ್ರು, ರವಿ, ಶಂಕರ್, ನರಸಿಂಹ, ಪಾರ್ವತಮ್ಮ, ಚೈತ್ರಮ್ಮ, ಮಂಗಳ, ಲಕ್ಷ್ಮಮ್ಮ, ಶಿವಕುಮಾರ್, ಮೂರ್ತಿ, ಮಂಜುನಾಥ್, ಹರೀಶ್, ಲಕ್ಷ್ಮೀದೇವಮ್ಮ, ಕೋಕಿಲ, ಕೃಷ್ಣಪ್ಪ, ಲಕ್ಷ್ಮಣ, ಶಿವ, ಮುನಿರಾಜು, ಗಣೇಶ, ಕಿರಣ್, ಮಾರಪ್ಪ, ಇದ್ದರು.

* * 

ಕಷ್ಟಪಟ್ಟು ಕೆಲಸ ಮಾಡಿದರೂ ನಮ್ಮ ಕಷ್ಟಕ್ಕೆ ತಕ್ಕ ಪ್ರತಿಫಲ ಸಿಗುತ್ತಿಲ್ಲ. ಐದು ತಿಂಗಳಾದರೂ ಸಂಬಳ ಕೊಟ್ಟಿಲ್ಲ. ಬಾಕಿ ಸಂಬಳ ಕೊಡೋವರೆಗೂ ಕೆಲಸಕ್ಕೆ ಬರಲ್ಲ.

ಲಕ್ಷ್ಮಣ್, ಪೌರಕಾರ್ಮಿಕ ಮೇಸ್ತ್ರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry