ಮಿನಿವ್ಯಾನ್‌ ಅಪಘಾತ, 10 ಜನರಿಗೆ ಗಾಯ

7

ಮಿನಿವ್ಯಾನ್‌ ಅಪಘಾತ, 10 ಜನರಿಗೆ ಗಾಯ

Published:
Updated:
ಮಿನಿವ್ಯಾನ್‌ ಅಪಘಾತ, 10 ಜನರಿಗೆ ಗಾಯ

ದೊಡ್ಡಬಳ್ಳಾಪುರ: ಸಿದ್ಧ ಉಡುಪು ಕಾರ್ಖಾನೆಗಳಿಗೆ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಮಿನಿ ವ್ಯಾನ್‌ ತಾಲ್ಲೂಕಿನ ಕನಕೇನಹಳ್ಳಿ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಸೋಮವಾರ ಅಪಘಾತಕ್ಕೆ ಒಳಗಾಗಿದೆ.

ಮಿನಿ ಬಸ್‌ನಲ್ಲಿದ್ದ 25ಕ್ಕೂ ಹೆಚ್ಚು ಮಹಿಳಾ ಕಾರ್ಮಿಕರ ಪೈಕಿ ಹತ್ತು ಜನ ಗಾಯಗೊಂಡಿದ್ದಾರೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸಾಸಲು ಗ್ರಾಮದ ನಾಗರತ್ನಮ್ಮ, ಗೌರಮ್ಮ, ಆಶಾ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗಳಿಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಉಳಿದ ಗಾಯಾಳುಗಳಿಗೆ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮಿನಿಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಉದ್ಯೋಗಿ ಸವಿತಾ ಮಾತನಾಡಿ, ಮಿನಿಬಸ್‌ ಸುಸಜ್ಜಿತವಾಗಿ ಇಲ್ಲದೇ ಇರುವ ಬಗ್ಗೆ ಹಲವಾರು ಬಾರಿ ಸಿಲ್ವರ್ಸ್‌ ಪಾರ್ಕ್‌ ಗಾರ್ಮೆಂಟ್ಸ್‌ ಮುಖ್ಯಸ್ಥರ ಗಮನಕ್ಕೆ ತರಲಾಗಿತ್ತು ಎಂದು ತಿಳಿಸಿದರು.

ಎಷ್ಟು ಬಾರಿ ತಿಳಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ.ಉತ್ತಮವಾದ ವಾಹನ ವ್ಯವಸ್ಥೆ ಮಾಡಿರಲಿಲ್ಲ. ಹೀಗಾಗಿ ಚಾಲಕನ ನಿಯಂತ್ರಣ ತಪ್ಪಿ ಅಪಾಘಾತ ನಡೆದಿದೆ ಎಂದರು.

ಅದೃಷ್ಟವಶಾತ್‌ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಇನ್ನು ಮುಂದೆಯಾದರು ಗಾರ್ಮೆಂಟ್ಸ್‌ಗಳಿಗೆ ಮಹಿಳಾ ಉದ್ಯೋಗಿಗಳನ್ನು ಕರೆದೊಯ್ಯುವ ಮಿನಿಬಸ್‌ಗಳನ್ನು ಉತ್ತಮವಾಗಿರುವಂತೆ ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಆಸ್ಪತ್ರೆಗೆ ಶಾಸಕರ ಭೇಟಿ: ಅಪಘಾತದಲ್ಲಿ ಗಾಯಗೊಂಡು ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳಾ ಕಾರ್ಮಿಕರನ್ನು ಭೇಟಿ ಮಾಡಿದ ಶಾಸಕ ಟಿ.ವೆಂಕಟರಮಣಯ್ಯ ಆರೋಗ್ಯ ವಿಚಾರಿಸಿದರು.

ಕಾರ್ಖಾನೆಗೆ ಮಹಿಳಾ ಉದ್ಯೋಗಿಗಳನ್ನು ಕರೆದೊಯ್ಯುತ್ತಿರುವ ಮಿನಿಬಸ್‌ಗಳನ್ನು ತಪಾಸಣೆ ನಡೆಸಿ ಸೂಕ್ತ ದಾಖಲಾತಿ ಹಾಗೂ ಸುಸಜ್ಜಿತವಾಗಿಲ್ಲದ ವಾಹನಗಳನ್ನು ಮತ್ತೆ ಬಳಸದಂತೆ ಕ್ರಮ ಕೈಗೊಳ್ಳಲು ಸ್ಥಳದಲ್ಲೇ ಹಾಜರಿದ್ದ ಸರ್ಕಲ್‌ ಇನ್‌ಸ್ಪೆಕ್ಟರ್‌ ಜಿ.ಸಿದ್ದರಾಜು ಅವರಿಗೆ ಸೂಚನೆ ನೀಡಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಚ್‌.ವಿ.ಶ್ರೀವತ್ಸ, ಉಪಾಧ್ಯಕ್ಷೆ ಮೀನಾಕ್ಷಿ ಕೆಂಪಣ್ಣ, ಕಾಂಗ್ರೆಸ್‌ ಗ್ರಾಮಾಂತರ ಬ್ಲಾಕ್‌ ಅಧ್ಯಕ್ಷ ಎಂ.ಭೈರೇಗೌಡ, ನಗರ ಬ್ಲಾಕ್‌ ಅಧ್ಯಕ್ಷ ಕೆ.ಜಿ.ಅಶೋಕ್‌, ಕಸಬಾ ಬ್ಲಾಕ್‌ ಅಧ್ಯಕ್ಷ ವೆಂಕಟೇಶ್‌, ಎಸ್ಸಿ ನಗರ ಘಟಕದ ಅಧ್ಯಕ್ಷ ಬಿ.ಮುನಿರಾಜು, ತಹಶೀಲ್ದಾರ್‌ ಬಿ.ಎ.ಮೋಹನ್‌ ಇದ್ದರು.

ಅಪಘಾತ ಇದೇ ಮೊದಲಲ್ಲ

ನಗರದ ಹೊರವಲಯದ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿನ ಕಾರ್ಖಾನೆಗಳಿಗೆ ಮಹಿಳಾ ಉದ್ಯೋಗಿಗಳನ್ನು ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಕರೆತರಲು ಹೊರಗುತ್ತಿಗೆ ನೀಡಲಾಗಿದೆ.

ಸುಮಾರು 120ಕ್ಕೂ ಹೆಚ್ಚಿನ ಬಸ್‌ ಹಾಗೂ ಮಿನಿಬಸ್‌ಗಳಲ್ಲಿ ಕಾರ್ಮಿಕರನ್ನು ಪ್ರತಿ ನಿತ್ಯ ಇಂಥ ಕಾರ್ಖಾನೆಗಳಿಗೆ ಕರೆತರಲಾಗುತ್ತದೆ. ಈ ಎಲ್ಲ ವಾಹನಗಳಿಗೂ ಯಾವುದೇ ದಾಖಲಾತಿ ಸರಿ ಇಲ್ಲ.

ಗುಜರಿ ಸೇರಬೇಕಾದ ವಾಹನಗಳನ್ನು ಕಾರ್ಮಿಕರನ್ನು ಸಾಗಾಣಿಕೆ ಮಾಡಲು ಬಳಸಲಾಗುತ್ತಿದೆ. ಪ್ರತಿ ಆರು ತಿಂಗಳಿಗೆ ಒಮ್ಮೆಯಾದರು ಇಂಥ ವಾಹನಗಳು ಅಪಘಾತಕ್ಕೆ ಒಳಗಾಗುತ್ತಲೇ ಇವೆ ಎಂದು ಸ್ಥಳೀಯರು ದೂರಿದ್ದಾರೆ.

ಕಾರ್ಮಿಕರು ಕೈಕಾಲುಗಳನ್ನು ಮುರಿದುಕೊಂಡು ಮನೆ ಸೇರುತ್ತಲೇ ಇದ್ದಾರೆ. ಆದರೆ ಆರ್‌ಟಿಒ ಸೇರಿದಂತೆ ಪೊಲೀಸರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಅಪಘಾತಗಳು ನಡೆದಾಗ ಮಾತ್ರ ಆರ್‌ಟಿಒ ಅಧಿಕಾರಿಗಳು ನಗರಕ್ಕೆ ಬಂದು ವಾಹನಗಳ ತಪಾಸಣೆ ನಡೆಸುವ ನಾಟಕ ಮಾಡುತ್ತಿದ್ದಾರೆ ಎಂದು ನೌಕರರು ಟೀಕಿಸಿದ್ದಾರೆ.

ಗುಜರಿ ಸೇರಬೇಕಾದ ವಾಹನಗಳನ್ನು ಕಾರ್ಮಿಕರನ್ನು ಕುರಿಗಳನ್ನು ತುಂಬಿಕೊಂಡು ಹೋಗುವಂತೆ ಮಿನಿ ಬಸ್‌ಗಳಲ್ಲಿ ತುಂಬಿಕೊಂಡು ಹೋಗುವುದು ಮಾತ್ರ ನಿಂತಿಲ್ಲ ಎಂದು ಕಾರ್ಮಿಕರು ತೀವ್ರ ಅಸಮದಾನ ವ್ಯಕ್ತಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry