ಗಾಂಧಿಜಿಗೂ ಸ್ವಲ್ಪ ಜಾಗ ಕೊಡಿ

7

ಗಾಂಧಿಜಿಗೂ ಸ್ವಲ್ಪ ಜಾಗ ಕೊಡಿ

Published:
Updated:
ಗಾಂಧಿಜಿಗೂ ಸ್ವಲ್ಪ ಜಾಗ ಕೊಡಿ

ಬಳ್ಳಾರಿ: ‘ಕೊಟ್ಟೂರಿನ ಕೆರೆಗೆ ನೀರು ಬಂದಿದೆ, ಕೊಟ್ರೇಶ್ವರರಿಗೆ ಹೊಸ ತೇರು ಬಂದಿದೆ, ಕೊಟ್ಟೂರು ತೇರು ನೋಡಲು ಬರುವವರೆಲ್ಲಾ ಈ

ಮಹಾತ್ಮನ ಮುಂದೆಯೇ ಓಡಾಡಬೇಕು, ಎಲ್ಲಾ ಹೊಸದಾಗಿ ಕಾಣುತ್ತಿರುವಾಗ ನಮಗೆ ಸ್ವಾತಂತ್ರ್ಯ ತಂದುಕೊಟ್ಟವರು ಏಕೆ ಹೀಗಿರಬೇಕು?’

ಕೊಟ್ಟೂರೇಶ್ವರ ರಥೋತ್ಸವಕ್ಕೆ, ಗಣರಾಜ್ಯೋತ್ಸವಕ್ಕೆ ಸಜ್ಜಾಗುತ್ತಿರುವ ಜಿಲ್ಲೆಯ ಕೊಟ್ಟೂರಿನಲ್ಲಿರುವ ಗಾಂಧೀಜಿ ಪ್ರತಿಮೆಗೆ ಒದಗಿರುವ ದುಸ್ಥಿತಿಯ ಕುರಿತು ಅಲ್ಲಿನ ನಿವಾಸಿ ಅಂಚೆ ಕೊಟ್ರೇಶ್‌ ಹೀಗೆ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಪ್ರಶ್ನಿಸಿದ್ದಾರೆ.

ಅವರ ಈ ಪ್ರಶ್ನೆಯನ್ನು 81 ಮಂದಿ ಇಷ್ಟಪಟ್ಟು ಲೈಕ್‌ ಒತ್ತಿದ್ದಾರೆ, ಅವರಿಗೆ ಮಂಜುಳಾ ಕೊಟ್ರೇಶ್‌ ಮತ್ತು ಲಕ್ಷ್ಮಿಪತಿ ಯಾದವ್‌ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ.

‘80 ವರ್ಷದ ಹಿಂದೆ ಕೊಟ್ಟೂರಿಗೂ ಮೋಹನದಾಸ ಕರಮಚಂದ್ರ ಗಾಂಧಿ ಬಂದಿದ್ದರು ಎಂದು ನನ್ನ ತಂದೆ ಹೇಳುತ್ತಿದ್ದರು. ಈ ಮಾತು ಕೊಟ್ಟೂರಿನ ಗಾಂಧಿ ಪ್ರತಿಮೆಯನ್ನು ಹಾಗೂ ಕೂಡ್ಲಿಗಿಯ ಗಾಂಧಿ ಚಿತಾಭಸ್ಮ ಸ್ಮಾರಕವನ್ನು ನೋಡಿದಾಗಲೆಲ್ಲಾ ನೆನಪಾಗುತ್ತದೆ, ಆದರೆ ಆ ಮಹಾತ್ಮನನ್ನು ಜನವರಿ 26 ಕ್ಕೆ ಮಾತ್ರ ನೆನಪಾಗುವ ವ್ಯಕ್ತಿಯಾಗಿ ಉಳಿಸಿಕೊಂಡು ಬಂದಿದ್ದೇವೆ’ ಎಂದು ಕೊಟ್ರೇಶ್‌ ವಿಷಾದಿಸಿದ್ದಾರೆ.

‘ಈ ಸ್ಥಳದಲ್ಲಿ ಜಾಗ ವಿಶಾಲವಾಗಿದ್ದು ಕಾಂಪೌಂಡ್ ಇದ್ದದ್ದು ನೆನಪಿದೆ, ರಾಜಕಾರಣಿಗಳ ಭರಾಟೆಯಲ್ಲಿ ಗಾಂಧಿ ತಾತ ಕಳೆದು ಹೋಗದಿರಲಿ’ ಎಂಬ ಆಶಯವನ್ನೂ ಅವರು ವ್ಯಕ್ತಪಡಿಸಿದ್ದಾರೆ.

‘ಗಾಂಧಿಜಿ ಅವರ ಪ್ರತಿಮೆಯೂ ಮತ್ತು ಆ ಜಾಗವೂ ಸ್ವಚ್ಛವಾಗಿಡುವ ಹಾಗೆ ನಮ್ಮ ಕೊಟ್ಟೂರಿನ ಪಟ್ಟಣ ಪಂಚಾಯತಿಯವರು ಕೆಲಸ ಮಾಡುತ್ತಾರೆ ಎನ್ನುವ ನಂಬಿಕೆ ನನ್ನದು, ಹೊಸ ತೇರನ್ನು ನೋಡಿ ಗಾಂಧಿ ತಾತನು ಖುಷಿ ಪಡಲಿ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಅವರಿಗೆ ಪ್ರತಿಕ್ರಿಯಿಸಿರುವ ಲಕ್ಷ್ಮಿಪತಿ, ‘ಎಷ್ಟೋ ವರ್ಷಗಳ ನಂತರ ಕೂಡ್ಲಿಗಿಯ ಚಿತಾಭಸ್ಮಕ್ಕೆ ಹೊಸ ರೂಪ ಬಂದಿದೆ. ಈಗ ಕೊಟ್ಟೂರಿನ ಗಾಂಧಿ ಪ್ರತಿಮೆಗೆ ಹೊಸ ರೂಪ ಬರಬೇಕಾದರೆ ಇನ್ನೂ ಎಷ್ಟು ವರ್ಷ ಬೇಕೋ ಗೊತ್ತಿಲ್ಲ. ಈ ರಾಜಕಾರಣಿಗಳಿಗೆ ಇದು ಬೇಕಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಪ್ರತಿಮೆ ಬಳಿ ತುಂಬಾ ಜಾಗ ಇತ್ತು’ ಎಂದು ಮಂಜುಳಾ ಎಂಬುವರು ಹೇಳಿದ್ದಾರೆ. ಅವರಿಗೆ ಪ್ರತಿಕ್ರಿಯಿಸಿರುವ ಕೊಟ್ರೇಶ್‌, ‘ಜಾಗ ಕಳೆದುಹೋಗಿದೆ. ಹುಡುಕಿದರೂ ಸಿಗುವುದಿಲ್ಲ. ಆದ್ದರಿಂದ ಇರುವ ಜಾಗವನ್ನಾದರೂ ಕೊಟ್ಟೂರಿನವರೆಲ್ಲ ಸೇರಿ ರಕ್ಷಿಸೋಣ’ ಎಂದು ಕರೆ ನೀಡಿದ್ದಾರೆ.

* * 

ಗಾಂಧೀಜಿ ಪ್ರತಿಮೆ ಇರುವ ಸ್ಥಳವನ್ನು ಸಂರಕ್ಷಿಸುವುದಾಗಿ ಪುರಸಭೆ ಮುಖ್ಯಾಧಿಕಾರಿ ಪಂಪಾಪತಿ ನಾಯ್ಕ ಭರವಸೆ ನೀಡಿದ್ದಾರೆ ಅಂಚೆ

ಕೊಟ್ರೇಶ್‌ ಕೊಟ್ಟೂರು ನಿವಾಸಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry