ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

9ತಿಂಗಳಿಂದ ಸಿಗದ ವೇತನ; ನೌಕರರ ಅಳಲು

Last Updated 23 ಜನವರಿ 2018, 9:31 IST
ಅಕ್ಷರ ಗಾತ್ರ

ಯಳಂದೂರು: ಪಟ್ಟಣಕ್ಕೆ ಕಾವೇರಿ ನದಿಯಿಂದ ಕುಡಿಯುವ ನೀರನ್ನು ಪೂರೈಸಲು ಯಾವುದೇ ವ್ಯತ್ಯಯ ಆಗಬಾರದು ಎಂದು ಶಾಸಕ ಎಸ್.ಜಯಣ್ಣ ಸೂಚನೆ ನೀಡಿದರು. ಉತ್ತಂಬಳ್ಳಿ ಗ್ರಾಮದ ಬಳಿ ಇರುವ ಕಾವೇರಿ ಕುಡಿಯುವ ನೀರಿನ ಶುದ್ಧೀಕರಣ ಘಟಕಕ್ಕೆ ಸೋಮವಾರ ಭೇಟಿ ನೀಡಿ ಅವರು ಮಾತನಾಡಿದರು.

ಪಟ್ಟಣಕ್ಕೆ ಸರಬರಾಜಾಗುವ ಕಾವೇರಿ ಕುಡಿಯುವ ನೀರಿನ ಬಗ್ಗೆ ಸಾರ್ವಜನಿಕರು ದೂರು ನೀಡಿದ್ದಾರೆ. ಘಟಕದ ಸುತ್ತಲೂ ಅನೈರ್ಮಲ್ಯ ಹೆಚ್ಚಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮುಖ್ಯಾಧಿಕಾರಿಗೆ ತರಾಟೆ: ಕುಡಿಯುವ ನೀರಿಗೆ ಕ್ಲೋರಿನ್ ಹಾಕಿ ಸಂಸ್ಕರಿಸಿ ಪೂರೈಸಬೇಕು ಎಂಬ ನಿಯಮವಿದೆ. ಆದರೆ, ಇಲ್ಲಿನ ಘಟಕದಲ್ಲಿ ಕ್ಲೋರಿನ್ ಟ್ಯಾಂಕ್ ಖಾಲಿ ಇದೆ. ಇದರ ಯಂತ್ರ ಕೆಟ್ಟು ಹಲವು ತಿಂಗಳುಗಳಾಗಿವೆ. ಜತೆಗೆ, ಅನುದಾನದ ಕೊರತೆಯಿಂದ ಕ್ಲೋರಿನ್ ಹಾಕುತ್ತಿಲ್ಲ ಎಂದು ಮುಖ್ಯಾಧಿಕಾರಿ ಎಸ್.ಉಮಾಶಂಕರ ಮಾಹಿತಿ ನೀಡಿದರು.

ಇದರಿಂದ ಕೆರಳಿದ ಶಾಸಕರು ಮುಖ್ಯಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಅನುದಾನದ ಕೊರತೆ ಇರುವಾಗ ಸ್ಥಳೀಯ ಶಾಸಕರಿಗೆ ಮಾಹಿತಿ ನೀಡಬೇಕು. ಹಣಕ್ಕೆ ಕೊರತೆ ಇಲ್ಲ. ಕೊರತೆಯನ್ನು ಸರಿಪಡಿಸಿ ಪಟ್ಟಣಕ್ಕೆ ಕುಡಿಯುವ ಶುದ್ಧ ನೀರನ್ನು ಪೂರೈಸಲು ಕ್ರಮ ವಹಿಸಬೇಕು. ಸುತ್ತಲ ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕು ಎಂದು ತಾಕೀತು ಮಾಡಿದರು.

9 ತಿಂಗಳಿಂದ ಸಂಬಳವೇ ಇಲ್ಲ: ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಸ್ಥಳ ನೀಡಿ ಗುತ್ತಿಗೆ ನೌಕರರಾಗಿ ದುಡಿಯುವ ಸಂತೋಷ್ ಕುಮಾರ್, ಮಹದೇವಸ್ವಾಮಿ, ಜಗದೀಶ್, ಎಂ.ಬಿ.ಚಂದ್ರಶೇಖರಮೂರ್ತಿ, ಬಸವರಾಜು ಹಾಗೂ ರಘುಪತಿ 9 ತಿಂಗಳಿಂದ ಸಂಬಳ ಇಲ್ಲದೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಜಿಲ್ಲಾಧಿಕಾರಿಗೆ ಹಾಗೂ ವಿವಿಧ ಸಭೆಗಳಲ್ಲಿ ಮನವಿ ಸಲ್ಲಿಸಿದ್ದರೂ ಸಂಬಳ ನೀಡಿಲ್ಲ ಎಂದರು. ಜಿ.ಪಂ.ಉಪಾಧ್ಯಕ್ಷ ಜೆ.ಯೋಗೇಶ್ ಗೋವಿಂದಶೆಟ್ಟಿ, ಪ್ರಕಾಶ್ ಮುಖ್ಯಾಧಿ ಕಾರಿ ಎಸ್.ಉಮಾಶಂಕರ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT