ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಗಾರಿಕಾ ವಲಯ ಸ್ಥಾಪನೆಗೆ ವಿಶೇಷ ಒತ್ತು

Last Updated 23 ಜನವರಿ 2018, 9:53 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ತಾಲ್ಲೂಕಿನ ಯುವಶಕ್ತಿ ವಲಸೆ ಹೋಗುವುದನ್ನು ತಪ್ಪಿಸಲು ಕೈಗಾರಿಕೆ ಸ್ಥಾಪಿಸಲು ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಶಾಸಕ ಎಂ.ರಾಜಣ್ಣ ಭರವಸೆ ನೀಡಿದರು.

ನಗರದ ನೆಹರು ಕ್ರೀಡಾಂಗಣದಲ್ಲಿ ಸೋಮವಾರ ತಾಲ್ಲೂಕು ಆಡಳಿತ ಹಮ್ಮಿಕೊಂಡಿದ್ದ ದಶಮಾನೋತ್ಸವ ಸಂಭ್ರಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ತಾಲ್ಲೂಕಿನ ರೈತರು ಮಳೆ ಹಾಗೂ ಅಂತರ್ಜಲವನ್ನಷ್ಟೇ ನಂಬಿದ್ದಾರೆ. ನೀರಿನ ಕೊರತೆಯಿದ್ದರೂ ಹಾಲು ಮತ್ತು ರೇಷ್ಮೆಯಿಂದ ರಾಷ್ಟ್ರ ಮಟ್ಟದಲ್ಲಿ ತಾಲ್ಲೂಕು ಖ್ಯಾತಿ ಗಳಿಸಿದೆ. ನಗರಗಳಿಗೆ ಹಣ್ಣು, ತರಕಾರಿ ಸರಬರಾಜು ಮಾಡುತ್ತಿದ್ದಾರೆ. ಅದಾಗ್ಯೂ ರೈತರ ಪಾಲಿಗೆ ಕೃಷಿ ಲಾಭದಾಯಕವಾಗಿಲ್ಲ ಎಂದು ಹೇಳಿದರು.

ಕೆಲವೇ ಮಂದಿ ಆಧುನಿಕ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಯಾವುದೇ ರಾಜಕೀಯವಿಲ್ಲದೆ ಬಯಲುಸೀಮೆಗೆ ನೀರು ಹರಿಸಿ, ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಿಸಿಕೊಡಲು ಗಮನ ಹರಿಸಬೇಕು. ಜನ ಹಿತದ ಎಲ್ಲ ರೀತಿಯ ಹೋರಾಟಕ್ಕೆ ತಾವು ಬದ್ಧ ಎಂದು ಹೇಳಿದರು. ಜಿಲ್ಲೆಯು ಹತ್ತು ವರ್ಷ ಪೂರೈಸಿರುವ ಪ್ರಯುಕ್ತ ದಶಮಾನೋ ತ್ಸವ ಸಂಭ್ರಮವನ್ನು ರೈತ ಹಬ್ಬದಂತೆ ಆಚರಿಸುತ್ತಿರುವುದು ಅರ್ಥಪೂರ್ಣ ವಾಗಿದೆ ಎಂದು ನುಡಿದರು.

ಹಾಪ್‌ಕಾಮ್ಸ್‌ ಅಧ್ಯಕ್ಷ ಎ.ಎಸ್‌. ಚಂದ್ರೇಗೌಡ ಮಾತನಾಡಿ, ಜಿಲ್ಲೆಯಲ್ಲಿ ಅಂತರ್ಜಲ ಕುಸಿಯುತ್ತಿದೆ. ಎರಡು ವರ್ಷಗಳಲ್ಲಿ ಈ ಭಾಗದ ಕೆರೆಗಳನ್ನು ತುಂಬಿಸುವುದಾಗಿ ಹೇಳಿದ ಭರವಸೆಯ ಮಾತುಗಳು ಇದುವರೆಗೆ ಈಡೇರಿಲ್ಲ. ಕೃಷಿ ಅಭಿವೃದ್ಧಿಗೆ ಪೂರಕವಾದ ನೀರನ್ನು ಹರಿಸುವ ಅಗತ್ಯವಿದೆ. ವೈಯಕ್ತಿಕ ರಾಜಕೀಯ ಹಿತಾಸಕ್ತಿ ಮರೆತು ಕ್ಷೇತ್ರದ ಅಭಿವೃದ್ಧಿಯ ಚಿಂತನೆ ಮಾಡಬೇಕು. ಶುದ್ಧೀಕರಿಸಿದ ನೀರಿನಿಂದ ಯಾವುದೇ ರೀತಿಯ ಅಪಾಯವಿಲ್ಲ. ಕೆರೆಗೆ ನೀರು ತುಂಬಿ ರೈತರ ಬದುಕು ಹಸನಾಗಲಿ ಎಂದು ಹೇಳಿದರು.

ತಹಶೀಲ್ದಾರ್‌ ಅಜಿತ್‌ ಕುಮಾರ್‌ ರೈ ಮಾತನಾಡಿ, , ಆಡಳಿತವನ್ನು ಜನರ ಸಮೀಪ ತರುವುದು, ಅಭಿವೃದ್ಧಿಯ ವೇಗ ಹೆಚ್ಚಿಸುವುದು ಹಾಗೂ ಜನರಿಗೆ ಸೌಲಭ್ಯ ಒದಗಿಸುವ ಉದ್ದೇಶದಿಂದ ಸರ್ಕಾರವು ಚಿಕ್ಕಬಳ್ಳಾಪುರ ಉಪವಿಭಾಗವನ್ನು ಸ್ವತಂತ್ರ ಜಿಲ್ಲೆಯಾಗಿ ರೂಪಿಸಿದೆ. ಇದರಿಂದಾಗಿ ಆಡಳಿತ ಮತ್ತು ಅಭಿವೃದ್ಧಿಗೆ ಅನುಕೂಲಗಳಾಗಿವೆ. ಚಿಕ್ಕಬಳ್ಳಾಪುರ ಜಿಲ್ಲೆ ಆಡಳಿತಾತ್ಮಕವಾಗಿ ಕೋಲಾರದಿಂದ ಬೇರ್ಪಟ್ಟಿದ್ದರೂ ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಹಾಗೂ ಭಾವನಾತ್ಮಕವಾಗಿ ಬಾಂಧವ್ಯ ಇಂದಿಗೂ ಉಳಿಸಿಕೊಂಡಿದೆ ಎಂದರು.

ನಗರಸಭೆ ಪ್ರಭಾರ ಅಧ್ಯಕ್ಷೆ ಪ್ರಭಾವತಿ ಸುರೇಶ್‌ ಮಾತನಾಡಿ, ಹಿಂದಿನದನ್ನು ಮೆಲುಕು ಹಾಕುತ್ತಾ ಮುಂದೆ ಆಗಬೇಕಾದ ಯೋಜನೆಗಳ ಅಗತ್ಯಗಳ ಬಗ್ಗೆ ಗಂಭೀರವಾಗಿ ಆಲೋಚಿಸಬೇಕಾಗಿದೆ ಎಂದು ಅವರು ನುಡಿದರು..

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣರೆಡ್ಡಿ, ಸದಸ್ಯರಾದ ರಾಜಶೇಖರ್‌, ಪಂಕಜಾ ನಿರಂಜನ್‌, ಶೋಭಾ ಶಶಿಕುಮಾರ್‌, ಕಾರ್ಯ ನಿರ್ವಾಹಣಾಧಿಕಾರಿ ವೆಂಕಟೇಶ್‌, ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಂಕ್‌ ಮುನಿಯಪ್ಪ, ಸತೀಶ್‌, ನಗರಸಭಾ ಆಯುಕ್ತ ಚಲಪತಿ, ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ ಬಾಬು, ಸಿಡಿಪಿಒ ಲಕ್ಷ್ಮೀದೇವಮ್ಮ, ತಹಶೀಲ್ದಾರ್‌ (ತರಬೇತಿ) ಮಮತಾಕುಮಾರಿ, ಬೆಸ್ಕಾಂ ಅನ್ಸರ್‌ ಬಾಷಾ, ಪಶು ಇಲಾಖೆಯ ಡಾ.ಮುನಿನಾರಾಯಣರೆಡ್ಡಿ, ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ತಾಲ್ಲೂಕು ಘಟಕದ ಅಧ್ಯಕ್ಷ ರವಿಕುಮಾರ್‌, ತಾದೂರು ಮಂಜುನಾಥ್‌, ದ.ಸಂ.ಸ ಜಿಲ್ಲಾ ಸಂಘಟನಾ ಸಂಚಾಲಕ ಮುನಯ್ಯ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಕೇಶವರೆಡ್ಡಿ, ಎಚ್‌.ಜಿ. ಗೋಪಾಲಗೌಡ, ಜೆ.ಎಸ್‌. ವೆಂಕಟಸ್ವಾಮಿ, ನಾರಾಯಣಸ್ವಾಮಿ, ಸರ್ಕಲ್‌ ಇನ್‌ಸ್ಪೆಪೆಕ್ಟರ್‌ ಸಿದ್ದರಾಜು ಹಾಜರಿದ್ದರು.

ಆ ರೋಗ್ಯದೆಡೆಗೆ ನಮ್ಮ ನಡಿಗೆ: ಮುಂಜಾನೆ ಕೋರ್ಟ್‌ ಮುಂಭಾಗದಿಂದ ಶಾಮಣ್ಣ ಬಾವಿಯವರೆಗೆ ‘ಆರೋಗ್ಯ ದೆಡೆಗೆ ನಮ್ಮ ನಡಿಗೆ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ನ್ಯಾಯಾಧೀಶರು, ವಕೀಲರು, ನಗರಸಭಾ ಸಿಬ್ಬಂದಿ, ಕ್ರೀಡಾ ಪಟುಗಳು, ಶಾಸಕರು ಪಾಲ್ಗೊಂಡಿದ್ದರು. ‘ಜಿಲ್ಲಾ ದಶಮಾನೋತ್ಸವ ಶಿಡ್ಲಘಟ್ಟ ತಾಲ್ಲೂಕು’ ಎಂಬ ಬರಹದ ಬಿಳಿ ಟೀ ಶರ್ಟ್‌ ಧರಿಸಿ ಜಾಗೃತಿ ಜಾಥಾ ನಡೆಸಲಾಯಿತು.

ಸ್ವಚ್ಛತೆ: ಬೆಳಿಗ್ಗೆ ಅಗ್ರಹಾರ ಬೀದಿ ಶಾಮಣ್ಣ ಬಾವಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಸುಮಾರು 400 ವರ್ಷಗಳಷ್ಟು ಹಳೆಯದಾದ ಬಾವಿಯನ್ನು ಕಲ್ಲಿನ ಚಪ್ಪಡಿಗಳಿಂದ ಚತುಷ್ಕೋನಾಕಾರದಲ್ಲಿ ನಿರ್ಮಿಸ ಲಾಗಿದೆ. ಗೌಡನ ಕೆರೆಯಿಂದ ಹೆಚ್ಚಾದ ನೀರು ಕಲ್ಯಾಣಿಗೆ ಹರಿಯುವಂತೆ ತೂಬನ್ನು ನಿರ್ಮಿಸಲಾಗಿದೆ. ಜನಪ್ರತಿನಿಧಿ ಗಳು, ಅಧಿಕಾರಿಗಳು, ಕ್ರೀಡಾಪಟುಗಳು ನಗರಸಭೆ ಸಿಬ್ಬಂದಿ, ವಕೀಲರು ಒಗ್ಗೂಡಿ ಕಳೆಗಿಡಗಳು, ತ್ಯಾಜ್ಯದ ರಾಶಿಯನ್ನು ತೆರವುಗೊಳಿಸಿದರು. ಜಲ ಮೂಲ ತೆರೆದುಕೊಳ್ಳುವಂತೆ ಮಾಡಿದರು.

ಗಮನ ಸೆಳೆದ ಟಗರು, ಕುರಿ

ಒಂದೂಕಾಲು ಲಕ್ಷ ರೂಪಾಯಿ ಮೌಲ್ಯದ ಜಮುನಾಪಾರಿ ಮೇಕೆಗಳು, ಅವಳಿ ಮರಿಗಳನ್ನು ನೀಡುವ ನಾರಿ ಸುವರ್ಣ ಟಗರು, ದಕ್ಷಿಣ ಆಫ್ರಿಕಾ ಮೂಲದ ಡಾರ್ಪರ್‌ ಟಗರು, ಬಂಡೂರು ಕುರಿಗಳು, ಕಡಿಮೆ ನೀರಿನಲ್ಲಿ ಹಸಿಮೇವನ್ನು ಬೆಳೆಯುವ ಹೈಡ್ರೋಫೋನಿಕ್‌ ಪದ್ಧತಿಯ ಪ್ರಾತ್ಯಕ್ಷಿಕೆಯನ್ನು ಪಶುಪಾಲನಾ ಮತ್ತು ಪಶುಸೇವಾ ಇಲಾಖೆಯ ಮಳಿಗೆಯಲ್ಲಿ ಕಂಡುಬಂದಿತು.

ಕೋಚಿಮುಲ್‌ ಮಳಿಗೆಯಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಪ್ರದರ್ಶನ, ಆರೋಗ್ಯ ಇಲಾಖೆಯ ಮಳಿಗೆಗಳಲ್ಲಿ ಆರೋಗ್ಯ ಅರಿವು, ತೋಟಗಾರಿಕಾ ಮಳಿಗೆಯಲ್ಲಿ ತರಕಾರಿ, ಫಲ ಪುಷ್ಪಗಳ ಪ್ರದರ್ಶನ, ರೇಷ್ಮೆ ಇಲಾಖೆಯ ಮಳಿಗೆಯಲ್ಲಿ ರೇಷ್ಮೆ ಉತ್ಪನ್ನಗಳು, ರೈತ ಸಂಘದ ಮಳಿಗೆಯಲ್ಲಿ ವಿವಿಧ ಕೃಷಿ ಪರಿಕರಗಳ ಪ್ರದರ್ಶನ, ಬೋದಗೂರು ಸಿರಿ ಸಮೃದ್ಧಿ ರೈತ ಕೂಟದಿಂದ ಸಂಕ್ರಾಂತಿಯ ಆಚರಣೆಯನ್ನೇ ಮಾಡಲಾಗಿತ್ತು. ರೈತ ವೆಂಕಟಸ್ವಾಮಿರೆಡ್ಡಿ ಅವರ ಸಿರಿ ಧಾನ್ಯಗಳ ಪ್ರದರ್ಶನ, ಅರಣ್ಯ ಇಲಾಖೆ, ಬೆಸ್ಕಾಂ ಇಲಾಖೆಯ ಮಾಹಿತಿ ನೀಡುವ ಮಳಿಗೆಗಳೂ ಇದ್ದವು.

ಕಲಾತಂಡಗಳ ಮೆರವಣಿಗೆ

ಬಸ್‌ ನಿಲ್ದಾಣದಿಂದ ನೆಹರು ಕ್ರೀಡಾಂಗಣದವರೆಗೆ ವಿವಿಧ ಕಲಾತಂಡಗಳು ಮತ್ತು ಸ್ತಬ್ದ ಚಿತ್ರಗಳೊಂದಿಗೆ ದಶಮಾನೋತ್ಸವದ ತೇರಿಗೆ ಶಾಸಕ ಎಂ. ರಾಜಣ್ಣ ಚಾಲನೆ ನೀಡಿದರು. ಬಂಡೂರು ಕುರಿಗಳು, ಎತ್ತಿನ ಬಂಡಿಗಳು, ಕರಡಿ ವೇಷಧಾರಿ, ಗಾರ್ಡಿ ಬೊಂಬೆಗಳು, ತಮಟೆ ವಾದನ, ನಾಸಿಕ್‌ ಡೋಲ್‌, ವಿವಿಧ ಶಾಲೆಗಳ ವಾದ್ಯ ತಂಡಗಳು, ಪೂರ್ಣಕುಂಭ ಹೊತ್ತ ಮಹಿಳೆಯರು, ಶಾಲಾ ವಿದ್ಯಾರ್ಥಿಗಳು ಮೆರವಣಿಗೆಯ ಆಕರ್ಷಣೆ ಹೆಚ್ಚಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT