ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಯಲ್ಲಿ ಕುಟುಂಬ ರಾಜಕಾರಣ ಇಲ್ಲ

Last Updated 23 ಜನವರಿ 2018, 9:58 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಕಾಂಗ್ರೆಸ್‌ ಮತ್ತು ಜೆಡಿಎಸ್‌ನಲ್ಲಿ ಜಾತಿ, ಹಣ, ಕುಟುಂಬ ರಾಜಕಾರಣವೇ ಪ್ರಧಾನವಾಗಿದ್ದು, ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿವೆ’ ಎಂದು ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ಪ್ರಕಾಶ್‌ ಜಾವ್ಡೇಕರ್‌ ಟೀಕಿಸಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಸೋಮವಾರ ಏರ್ಪಡಿಸಿದ್ದ ಬಿಜೆಪಿ ಜಿಲ್ಲಾ ವಿಶೇಷ ಸಭೆಯಲ್ಲಿ ಅವರು ಮಾತನಾಡಿದರು. ಚುನಾವಣೆಯಲ್ಲಿ ಮತದಾರರಿಗೆ ಜೆಡಿಎಸ್‌ನವರು ₹ 1ಸಾವಿರ ಆಮಿಷವೊಡ್ಡಿದರೆ, ಕಾಂಗ್ರೆಸ್‌ನವರು ₹ 2ಸಾವಿರ, ಜೆಡಿಎಸ್‌ನವರು ₹ 2ಸಾವಿರ ಆಮಿಷವೊಡ್ಡಿದರೆ, ಕಾಂಗ್ರೆಸ್‌ನವರು ₹ 3ಸಾವಿರ ಆಮಿಷವೊಡ್ಡುತ್ತಾರೆ. ಬಿಜೆಪಿಯಲ್ಲಿ ಕುಟುಂಬ ರಾಜಕಾರಣ ಇಲ್ಲ. ಚುನಾವಣೆಯಲ್ಲಿ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಮಣಿಸಲು ಬಿಜೆಪಿ ಕಾರ್ಯಕರ್ತರು ಸನ್ನದ್ಧರಾಗಬೇಕು’ ಎಂದು ಹೇಳಿದರು.

‘ಉತ್ತರ ಪ್ರದೇಶ, ಮಹಾರಾಷ್ಟ್ರ ರಾಜ್ಯಗಳಲ್ಲಿ ರೈತರು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರು ಪಡೆದಿರುವ ಸಾಲವನ್ನು ಅಲ್ಲಿನ ಬಿಜೆಪಿ ಸರ್ಕಾರ ಮನ್ನಾ ಮಾಡಿದೆ. ಆದರೆ, ಕರ್ನಾಟಕದ ಕಾಂಗ್ರೆಸ್‌ ಸರ್ಕಾರವು ಈ ನಿಟ್ಟಿನಲ್ಲಿ ಕ್ರಮ ವಹಿಸದೆ, ಕೇಂದ್ರ ಸರ್ಕಾರದ ಕಡೆಗೆ ಬೊಟ್ಟು ಮಾಡುತ್ತಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಕ್ರಮ ಕೈಮಗೊಂಡಿದ್ದಾರೆ. ಆದರೆ, ಇಲ್ಲಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್‌ ಸರ್ಕಾರದ ನೆಪವೊಡ್ಡಿ ಜವಾಬ್ದಾರಿಯಿಂದ ನುಣುಚಿಕೊಂಡಿದ್ದಾರೆ’ ಎಂದು ದೂಷಿಸಿದರು.

‘ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಅಧಿಕಾರಾವಧಿಯಲ್ಲಿ ಈವರೆಗೆ ರಾಜ್ಯದಲ್ಲಿ ಸುಮಾರು 3,500 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬರಗಾಲದಿಂದ ತೋಟಗಾರಿಕೆ, ಕೃಷಿ ಬೆಳೆಗಳು ನಷ್ಟವಾಗಿ ರೈತರು ಕಂಗಾಲಾಗಿದ್ದಾರೆ. ರೈತರ ಹಿತ ಕಾಯುವಲ್ಲಿ ರಾಜ್ಯ ಸರ್ಕಾರವು ವಿಫಲವಾಗಿದೆ’ ಎಂದರು.

‘ದತ್ತ ಪೀಠ ಸಮಸ್ಯೆ ಇತ್ಯರ್ಥಪಡಿಸಲು ಕ್ರಮ ವಹಿಸಿಲ್ಲ. ಕುಡಿಯವ ನೀರಿನ ಸಮಸ್ಯೆ ಪರಿಹರಿಸಿಲ್ಲ. ಮೂಡಿಗೆರೆ ಭಾಗದಲ್ಲಿ ಕಾಡಾನೆ ದಾಳಿಯಿಂದ ಈಚೆಗೆ ನಾಲ್ವರು ಮೃತಪಟ್ಟಿದ್ದಾರೆ. ಆಹಾರ ಹುಡುಕಿಕೊಂಡು ಕಾಡಾನೆಗಳು ನಾಡಿಗೆ ಬರುತ್ತಿವೆ. ಅವುಗಳಿಗೆ ಕಾಡಿನಲ್ಲಿ ಆಹಾರ ಲಭಿಸುವಂತೆ ಮಾಡಬೇಕು. ಕಾಡಿನಲ್ಲಿ ಲಂಟಾನ ಬೆಳೆದಿರುವ ಪ್ರದೇಶಗಳಲ್ಲಿ ಬಿದಿರು ಬೆಳೆಸಬೇಕು. ಬಿದಿರು ಬೆಳೆಸಲು ಕೇಂದ್ರ ಸರ್ಕಾರವು ಅನುದಾನ ಒದಗಿಸಿದ್ದರೂ, ಬಳಸಿಕೊಂಡಿಲ್ಲ’ ಎಂದು ದೂರಿದರು.

‘ರಾಜ್ಯದಲ್ಲಿನ ಕಾಂಗ್ರೆಸ್‌ ಸರ್ಕಾರ ಜನರ ಸಮಸ್ಯೆಗಳಿಗೆ ಸ್ಪಂದಿಸಲು ವಿಫಲವಾಗಿದೆ. ಎಸ್‌ಡಿಪಿಐನಂಥ ಸಂಘಟನೆಗಳೊಂದಿಗೆ ಸಖ್ಯ ಇಟ್ಟುಕೊಂಡಿದೆ’ ಎಂದು ದೂಷಿಸಿದರು.

‘ಚಿಕ್ಕಮಗಳೂರು ಒಂದೊಮ್ಮೆ ಕಾಂಗ್ರೆಸ್‌ನ ಭದ್ರಕೋಟೆಯಾಗಿತ್ತು. ಇಂದಿರಾಗಾಂಧಿ ಈ ಕ್ಷೇತ್ರ ಪ್ರತಿನಿಧಿಸಿ ಗೆಲವು ಸಾಧಿಸಿದ್ದರು. ನಂತರ ಅವರು ಇತ್ತ ಗಮನಹರಿಸಲಿಲ್ಲ. ಜಿಲ್ಲೆಯಲ್ಲಿ ಬಿಜೆಪಿ ಬೇರು ಬಿಟ್ಟಿದೆ. ಈ ಬಾರಿ ಐದೂ ವಿಧಾನ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಲು ಕಾರ್ಯಕರ್ತರು ಶ್ರಮಿಸಬೇಕು’ ಎಂದರು.

‘ಕೇಂದ್ರ ಸರ್ಕಾರವು ಕಾಫಿ ಮಂಡಳಿಗೆ ಕಾಫಿ ಬೆಳೆಗಾರರನ್ನೇ ಅಧ್ಯಕ್ಷರಾಗಿ ನೇಮಿಸಿದೆ. ಅಲ್ಲದೇ, ಕಾಳು ಮೆಣಸು ಆಮದಿಗೆ ಸುಂಕ ವಿಧಿಸಿ ಬೆಳೆಗಾರರಿಗೆ ಅನುಕೂಲ ಮಾಡಿಕೊಟ್ಟಿದೆ. ಬಿಜೆಪಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸಬೇಕು’ ಎಂದರು. ಮುಖಂಡರಾದ ಡಿ.ಎಸ್‌.ಸುರೇಶ್, ಎಂ.ಪಿ.ಕುಮಾರಸ್ವಾಮಿ, ಡಾ.ವಿಶ್ವನಾಥ್, ಜಗದೀಶ್‌ ಇದ್ದರು.

‘ಸಿ.ಎಂ ಸಿದ್ದರಾಮಯ್ಯ ಹಾವಭಾವ ದುರ್ಯೋಧನ ಪಾತ್ರಕ್ಕೆ ಹೋಲಿಕೆ’

ಚಿಕ್ಕಮಗಳೂರು: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹಾವಭಾವಗಳು ದುರ್ಯೋಧನನ ಪಾತ್ರವನ್ನು ಹೋಲುತ್ತವೆ. ರಾಜ್ಯ ಕಾಂಗ್ರೆಸ್‌ ಸರ್ಕಾರವು ನಿಶ್ವಿತವಾಗಿಯೂ ಕೌರವರ ಸರ್ಕಾರ, ಸಿದ್ದರಾಮಯ್ಯ ಅದರ ನೇತೃತ್ವ ವಹಿಸಿದ್ದಾರೆ’ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕಟಕಿಯಾಡಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಸೋಮವಾರ ಏರ್ಪಡಿಸಿದ್ದ ಬಿಜೆಪಿ ಜಿಲ್ಲಾ ವಿಶೇಷ ಸಭೆಯಲ್ಲಿ ಅವರು ಮಾತನಾಡಿದರು. ‘ವಿಧಾನಸಭೆ ಚುನಾವಣೆಯೆಂಬ ಕುರುಕ್ಷೇತ್ರ ಯುದ್ಧದಲ್ಲಿ ಕಾಂಗ್ರೆಸ್‌ನವರು ಪಾಂಡವರ ಪಕ್ಷ, ಬಿಜೆಪಿಯವರು ಕೌರವರ ಪಕ್ಷ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ರಾಜ್ಯದಲ್ಲಿನ ಕಾಂಗ್ರೆಸ್‌ ಸರ್ಕಾರದ ಆಡಳಿತದಲ್ಲಿ ಅತಿಹೆಚ್ಚು ಭ್ರಷ್ಟಾಚಾರ, ಅತ್ಯಾಚಾರ, ಹತ್ಯೆಗಳು, ಕೋಮು ಗಲಭೆಗಳು ನಡೆದಿವೆ. ಹೀಗಿರುವಾಗ, ಪಾಂಡವರ ಪಕ್ಷವಾಗಲು ಕಾಂಗ್ರೆಸ್‌ ಹೇಗೆ ಸಾಧ್ಯ ಎಂಬುದನ್ನು ಸಿದ್ದರಾಮಯ್ಯ ಸ್ಪಷ್ಟಪಡಿಸಬೇಕು’ ಎಂದು ಸವಾಲು ಹಾಕಿದರು.

‘ಪಾಂಡವರು ಇದ್ದ ಕಡೆ ಶ್ರೀಕೃಷ್ಣ ಇರುತ್ತಾನೆ. ಉಡುಪಿಯ ಶ್ರೀಕೃಷ್ಣನ ದರ್ಶನ ಮಾಡಲು ನಿಮಗೆ ಮನಸ್ಸಿಲ್ಲ. ಶ್ರೀಕೃಷ್ಣ ವಿರೋಧಿಯಂತೆ ವರ್ತನೆ ಮಾಡಿದ ನೀವು ಪಾಂಡವರಾಗಲು ಹೇಗೆ ಸಾಧ್ಯ’ ಎಂದು ಪ್ರಶ್ನಿಸಿದರು.

‘ಶ್ರೀಕೃಷ್ಣ ಗೋವು ರಕ್ಷಕ. ರಾಜ್ಯದಲ್ಲಿ ಗೋವು ಹಂತಕರಿಗೆ, ಭಕ್ಷಕರಿಗೆ ರಕ್ಷಣೆ ಸಿಕ್ಕಿದೆ. ಸಾರ್ವಜನಿಕವಾಗಿ ಗೋಮಾಂಸ ಭಕ್ಷಣೆ ಮಾಡುವವರು ನಿಮ್ಮ ಖಾಸಗಿ ಒಡ್ಡೋಲಗದಲ್ಲಿ ಇದ್ದಾರೆ. ಪಾಂಡವರ ರಾಜ್ಯದಲ್ಲಿ ಸುಭಿಕ್ಷೆ ಇತ್ತು. ಧರ್ಮದ ನೆಲೆಯಲ್ಲಿ ರಾಜ್ಯಭಾರ ನಡೆಯುತ್ತಿತ್ತು’ ಎಂದರು.

‘ಸರ್ಕಾರದ ಕೊನೆಗಾಲದಲ್ಲಿಯೂ ಸಿದ್ದರಾಮಯ್ಯ ಅವರ ಮನಪರಿವರ್ತನೆಯಾದರೆ ಸದ್ಗತಿಯಾದರೂ ದೊರಕುತ್ತದೆ. ಮತಪರಿವರ್ತನೆಗೆ ನಾಟಕವಾಡಿದರೆ ದುರ್ಗತಿ ತಪ್ಪಿದ್ದಲ್ಲ’ ಎಂದು ಕುಟುಕಿದರು.

‘ರಾಜ್ಯದ ಎಲ್ಲ ಕೆರೆಗಳನ್ನು ಭರ್ತಿ ಮಾಡುವುದು ಬಿಜೆಪಿಯ ನವಕರ್ನಾಟಕ ನಿರ್ಮಾಣದ ಆದ್ಯತೆಯಾಗಿದೆ. ನವ ಚಿಕ್ಕಮಗಳೂರಿನಲ್ಲಿ ಕೃಷಿ ಆಧಾರಿತ ಮೌಲ್ಯವರ್ಧಿತ ಕೈಗಾರಿಕೆಗಳನ್ನು ಸ್ಥಾಪಿಸಲು ಒತ್ತು ನೀಡುತ್ತೇವೆ. ತೋಟಗಾರಿಕಾ ಬೆಳೆಗಳ ಮೌಲ್ಯವರ್ಧನೆ ನಿಟ್ಟಿನಲ್ಲಿ ಕ್ರಮಗಳ ಇದೇ 27ರಂದು ನಡೆಯುವ ಪ್ರಣಾಳಿಕಾ ಕಾರ್ಯಕ್ರಮದಲ್ಲಿ ಚರ್ಚಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT