ವರಿಷ್ಠರ ವಿಶ್ವಾಸ ಉಳಿಸಿಕೊಳ್ಳಲು ಸಿದ್ಧ

7

ವರಿಷ್ಠರ ವಿಶ್ವಾಸ ಉಳಿಸಿಕೊಳ್ಳಲು ಸಿದ್ಧ

Published:
Updated:

ಚಿತ್ರದುರ್ಗ: ‘ವರಿಷ್ಠರು ನನ್ನ ಮೇಲೆ ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ಗೆಲ್ಲುವ ವಿಶ್ವಾಸವಿಟ್ಟು ಅಭ್ಯರ್ಥಿಯಾಗಿ ಘೋಷಿಸಿದ್ದಾರೆ. ಅದನ್ನು ಖಂಡಿತ ಉಳಿಸಿಕೊಳ್ಳುತ್ತೇನೆ’ ಎಂದು ಜೆಡಿಎಸ್ ಅಭ್ಯರ್ಥಿ ಕೆ.ಸಿ.ವೀರೇಂದ್ರ (ಪಪ್ಪಿ) ತಿಳಿಸಿದರು.

‘ಹನ್ನೆರಡು ವರ್ಷಗಳಿಂದಲೂ ಜೆಡಿಎಸ್‌ನ ಸಾಮಾನ್ಯ ಕಾರ್ಯಕರ್ತನಾಗಿ ನಿಷ್ಠೆಯಿಂದ ದುಡಿದಿರುವುದನ್ನು ಗಮನಿಸಿ ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡ, ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ನನಗೆ ನೀಡಿರುವ ಈ ಜವಾಬ್ದಾರಿಯಲ್ಲಿ ಯಶಸ್ಸು ಕಾಣಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಲಿಂಗಾಯತ ಸಮುದಾಯದ ಭೀಮಸಮುದ್ರದ ಬಿ.ಟಿ.ಚನ್ನಬಸಪ್ಪ, ಎಸ್.ಕೆ.ಬಸವರಾಜನ್ ಅವರನ್ನು ಗುರುತಿಸಿದ್ದು ಜೆಡಿಎಸ್ ಮಾತ್ರ. ಬೇರೆ ಯಾವ ಪಕ್ಷದಲ್ಲಿಯೂ ವೀರಶೈವ ಲಿಂಗಾಯತರಿಗೆ ಮಾನ್ಯತೆ ಸಿಕ್ಕಿಲ್ಲ. ಕಾಂಗ್ರೆಸ್ ಅಭ್ಯರ್ಥಿಯಿಂದ ನನಗೆ ಯಾವ ತೊಂದರೆಯೂ ಇಲ್ಲ. ಬಿಜೆಪಿ ಅಭ್ಯರ್ಥಿಯೇ ನನಗೆ ನೇರ ಪೈಪೋಟಿ ಆಗುವುದರಿಂದ ತಂತ್ರಕ್ಕೆ ಪ್ರತಿತಂತ್ರ ರೂಪಿಸಿ ಚುನಾವಣೆಯಲ್ಲಿ ಗೆಲ್ಲುತ್ತೇನೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

‘ನಾನು ಖಂಡಿತ ಹೊರಗಿನವನಲ್ಲ. ಇದೇ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನಲ್ಲಿ ಜನಿಸಿದವನು. ಚಿತ್ರದುರ್ಗ ನಗರದಲ್ಲೇ ಏಳು ವರ್ಷ ವಾಸವಿದ್ದೆ. ಇಲ್ಲಿನ ಪ್ರತಿ ಬಡಾವಣೆ, ಗಲ್ಲಿಯೂ ನನಗೆ ಗೊತ್ತು. ನನ್ನ ಉದ್ಯಮ ಆರಂಭಗೊಂಡಿದ್ದೇ ಇಲ್ಲಿಂದ. ಈಗ ನನ್ನ ರಾಜಕೀಯ ಭವಿಷ್ಯವೂ ಇಲ್ಲಿಂದಲೇ ಆರಂಭವಾಗುತ್ತಿರುವ ಬಗ್ಗೆ ನನಗೆ ಖುಷಿ ಇದೆ. ಲಿಂಗಾಯತ ಸಮುದಾಯ ಸೇರಿದಂತೆ ಇತರೆ ಸಮುದಾಯಗಳು ನನ್ನನ್ನು ಬೆಂಬಲಿಸುವ ವಿಶ್ವಾಸವಿದೆ’ ಎಂದು ಹೇಳಿದರು.

ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕಾಂತರಾಜ್ ಮಾತನಾಡಿ, ‘ವೀರೇಂದ್ರ ಗೆದ್ದರೆ ಕ್ಷೇತ್ರಕ್ಕೆ ಇಬ್ಬರು ಶಾಸಕರಿದ್ದಂತೆ. ಅವರ ಅಧಿಕಾರ ನಾನು ಚಲಾಯಿಸುವುದಿಲ್ಲ. ಆದರೆ, ಅವರ ಅನುಪಸ್ಥಿತಿಯಲ್ಲೂ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಲು ಪಕ್ಷದ ಒಬ್ಬ ಮುಖಂಡನಾಗಿ ಶ್ರಮಿಸುತ್ತೇನೆ’ ಎಂದು ಭರವಸೆ ನೀಡಿದರು.

‘ಕುಮಾರಸ್ವಾಮಿ ಅವರು ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿ ಆಗಬೇಕು. ಅದಕ್ಕಾಗಿ ಜಿಲ್ಲೆಯ ಆರು ಕ್ಷೇತ್ರಗಳಲ್ಲಿ ಕಡೆ ಪಕ್ಷ ನಾಲ್ಕು ಸ್ಥಾನವನ್ನಾದರೂ ಜೆಡಿಎಸ್ ತನ್ನ ತೆಕ್ಕೆಗೆ ಹಾಕಿಕೊಳ್ಳಬೇಕು. ಈ ಹಿನ್ನೆಲೆಯಲ್ಲಿ ಈಗಿನಿಂದಲೇ ಕಾರ್ಯ ಪ್ರವೃತ್ತರಾಗಬೇಕು’ ಎಂದು ಸಲಹೆ ನೀಡಿದರು.

ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಯಶೋಧರ ಮಾತನಾಡಿದರು. ಜಿಲ್ಲಾ ವಕ್ತಾರ ಡಿ.ಗೋಪಾಲಸ್ವಾಮಿ ನಾಯಕ, ತಾಲ್ಲೂಕು ಅಧ್ಯಕ್ಷ ತಿಮ್ಮಣ್ಣ, ನಗರಸಭೆ ಸದಸ್ಯ ಸಿ.ಟಿ. ರಾಜೇಶ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry