ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರದ ಅನುದಾನ ಇಲ್ಲದೆ ಗ್ರಾಮಸ್ಥರಿಂದಲೇ ಸೇತುವೆ ನಿರ್ಮಾಣಕ್ಕೆ ಚಾಲನೆ.

Last Updated 23 ಜನವರಿ 2018, 10:05 IST
ಅಕ್ಷರ ಗಾತ್ರ

ಚಿಕ್ಕಜಾಜೂರು: ಗ್ರಾಮಸ್ಥರು, ವಿದ್ಯಾರ್ಥಿಗಳು ಮತ್ತು ವಾಹನಗಳ ಸುಗಮವಾಗಿ ಸಂಚಾರಕ್ಕೆ ಹಳ್ಳಕ್ಕೆ ಸೇತುವೆ ನಿರ್ಮಿಸಿಕೊಡಬೇಕೆಂದು ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು ಹಲವುಬಾರಿ ಮನವಿಮಾಡಿದ್ದರೂ, ಅಧಿಕಾರಿಗಳಾಗಲಿ, ಜನಪ್ರತಿನಿದಿಗಳಾಗಲಿ ಸ್ಪಂಧಿಸದೇ ಇದ್ದುದರಿಂದ ಗ್ರಾಮಸ್ಥರೆ ಸ್ವಂತ ಖರ್ಚಿನಲ್ಲಿ ಸೇತುವೆ ನಿರ್ಮಾಣಕ್ಕೆ ಮುಂದಾಗಿರುವುದು ಬೆಳಕಿಗೆ ಬಂದಿದೆ.

ಸಮೀಪದ ಅಂದನೂರು ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು ಬಸ್‌ ನಿಲ್ದಾಣಕ್ಕೆ ಹೋಗಲು ಒಂದುವರೆ ಕಿ.ಮೀ. ದೂರದಲ್ಲಿರುವ ಗೇಟ್‌ಗೆ ಹೋಗಬೇಕು. ಗ್ರಾಮದ ಬಳಿ ಇರುವ ಹಳ್ಳ ಸುಗಮ ಸಂಚಾರಕ್ಕೆ ಅಡ್ಡಿಯಾಗಿದೆ. ಮಳೆಗಾಲದಲ್ಲಿ ಗ್ರಾಮದಿಂದ ಮತ್ತು ಅಂದನೂರು ಬಡಾವಣೆ ಮತ್ತು ಹೊಲಗಳಿಂದ ಸಾಕಷ್ಟು ನೀರು ಹರಿದು ಬಂದು ಗ್ರಾಮದ ಬಳಿಯ ಹಳ್ಳವನ್ನು ಸೇರುತ್ತದೆ. ಈ ಸಂದರ್ಭದಲ್ಲಿ ಹಳ್ಳದಲ್ಲಿ ಸುಮಾರು 3–4 ಅಡಿಯಷ್ಟು ನೀರು ರಭಸವಾಗಿ ತುಂಬಿ ಹರಿಯುವುದು. ಇದರಿಂದಾಗಿ ಮಕ್ಕಳು, ವಾಹನಗಳ ಸಂಚಾರಕ್ಕೆ ತುಂಬಾ ಅಡಚಣೆಯಾಗುತ್ತದೆ.

ಸ್ಪಂದಿಸದ ಇಲಾಖೆ ಅಧಿಕಾರಿಗಳು, ಜನ ಪ್ರತಿನಿಧಿಗಳು: ಸೇತುವೆ ನಿರ್ಮಾಣದ ಬಗ್ಗೆ ಗ್ರಾಮಸ್ಥರು ಕಳೆದ ರ್ನಾಲ್ಕು ವರ್ಷಗಳಿಂದ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್‌ಗಳಿಗೆ ಖುದ್ದು ಹೋಗಿ ಹಲವು ಬಾರಿ ಮನವಿ ಸಲ್ಲಿಸಿದ್ದೆವು. ಆದರೂ, ಯಾವೊಬ್ಬ ಅಧಿಕಾರಿಗಳೂ ಸಹ ಇದುವರೆಗೂ ಗಮನ ಹರಿಸಿಲ್ಲ.

ಅಲ್ಲದೆ, ಗ್ರಾಮಸ್ಥರು ಸಚಿವರಿಗೂ ಮನವಿ ಸಲ್ಲಿಸಿದ್ದೆವು. ಅವರು ಅಧಿಕಾರಿಗಳಿಗೆ ಹೇಳಿದರೇ ವಿನಃ, ಇದರ ಬಗ್ಗೆ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ, ಗ್ರಾಮದ ಸಮಸ್ಯೆ ನಿವಾರಣೆಗೆ ಗ್ರಾಮಸ್ಥರೇ ಮುಂದಾಗಿದ್ದು, ಕಳೆದ ವಾರ ಸುಮಾರು 75 ಲೋಡ್‌ನಷ್ಟು ಮಣ್ಣನ್ನು ಹಳ್ಳಕ್ಕೆ ಹಾಕಲಾಗಿದೆ. ಮಣ್ಣು ಕುಳಿತ ನಂತರ, ನೀರು ಸರಾಗವಾಗಿ ಹರಿಯಲು ದೊಡ್ಡ ಕೊಳವೆಗಳನ್ನು ಹಾಕಿ, ಅದರ ಮೇಲೆ ರಸ್ತೆ ಮತ್ತು ಸೇತುವೆಯನ್ನು ನಿರ್ಮಿಸಲು ಗ್ರಾಮಸ್ಥರು ತೀರ್ಮಾನಿಸಿದ್ದಾರೆ ಎಂದು ಗ್ರಾಮಸ್ಥರಾದ ರಾಜಶೇಖರ್‌, ರವೀಂದ್ರ, ಶಿವಕುಮಾರ್‌, ಎಸ್‌.ಎಚ್‌. ರುದ್ರಪ್ಪ, ಕುಮಾರಪ್ಪ, ವಿನಾಯಕ ಮೊದಲಾದವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT