ರುಚಿ ಮೊಗ್ಗು ಅರಳಿಸಿದ ವಿದ್ಯಾರ್ಥಿಗಳು

7

ರುಚಿ ಮೊಗ್ಗು ಅರಳಿಸಿದ ವಿದ್ಯಾರ್ಥಿಗಳು

Published:
Updated:
ರುಚಿ ಮೊಗ್ಗು ಅರಳಿಸಿದ ವಿದ್ಯಾರ್ಥಿಗಳು

ದಾವಣಗೆರೆ: ವಿವಿಧ ರಾಜ್ಯಗಳ ವಿಶೇಷ ಖಾದ್ಯಗಳು ಒಂದೇ ಸೂರಿನಡಿ ಸಿಕ್ಕರೆ ಆಹಾರಪ್ರಿಯರಿಗೆ ಎಷ್ಟು ಖುಷಿಯಾಗಬಹುದು! ಅಂಥದೊಂದು ವಿಶೇಷ  ‘ಫುಡ್‌ ಫೆಸ್ಟ್‌–2018’ ಆಹಾರ ಮೇಳವನ್ನು ಭದ್ರಾ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ ಅಂಡ್‌ ಇನ್‌ಫರ್ಮೇಶನ್‌ ಸೈನ್ಸ್‌ ಸ್ಟಡೀಸ್‌ ಕಾಲೇಜಿನ ವಿದ್ಯಾರ್ಥಿಗಳು ನಗರದ ಬಾಪೂಜಿ ಬ್ಯಾಂಕ್‌ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದರು.

ಈ ಮೇಳದಲ್ಲಿ ಗುಜರಾತ್‌, ರಾಜಸ್ಥಾನ, ಪಶ್ಚಿಮ ಬಂಗಾಳ, ಆಂಧ್ರಪ್ರದೇಶ, ಕೇರಳ, ತಮಿಳುನಾಡಿನ ಖಾದ್ಯಗಳು ವಿಶೇಷವಾಗಿದ್ದವು. ಕೆಲವು ವಿದ್ಯಾರ್ಥಿಗಳು ಖಾದ್ಯಗಳು ಪ್ರತಿನಿಧಿಸುವ ರಾಜ್ಯಗಳ ಜನರು ತೊಡುವ ಉಡುಪು ಧರಿಸಿ ಮೇಳಕ್ಕೆ ಮತ್ತಷ್ಟು ಮೆರುಗು ತಂದಿದ್ದರು. ಈ ಮೇಳದಲ್ಲಿ ವಿದ್ಯಾರ್ಥಿಗಳ ಒಟ್ಟು 6 ಮಳಿಗೆಗಳಿವೆ. ಒಂದೊಂದು ಮಳಿಗೆಯನ್ನು 30ರಿಂದ 35 ವಿದ್ಯಾರ್ಥಿಗಳು ನಿರ್ವಹಣೆ ಮಾಡುತ್ತಿದ್ದಾರೆ.

ಮಳಿಗೆಗೆ ಪ್ರವೇಶ ಚೀಟಿ ದರ ನಿಗದಿಪಡಿಸಲಾಗಿದೆ. ಅದಲ್ಲದೆ ಪ್ರಾಯೋಜಕತ್ವ ಪಡೆಯುವ ಮೂಲಕ ವಿದ್ಯಾರ್ಥಿಗಳು ಆಯಾ ಮಳಿಗೆಯ ಖರ್ಚು ವೆಚ್ಚದ ನಿರ್ವಹಣೆ ಮಾಡುತ್ತಾರೆ. ಖಾದ್ಯಗಳಿಗೆ ಅನುಗುಣವಾಗಿ ಪ್ರವೇಶ ಚೀಟಿ ದರವನ್ನು ₹ 100–120 ನಿಗದಿ ಮಾಡಲಾಗಿದೆ. ಮೇಳಕ್ಕೂ ವಾರದ ಮುಂಚೆಯೇ ವಿದ್ಯಾರ್ಥಿಗಳು ಪ್ರವೇಶ ಚೀಟಿಗಳನ್ನು ಸ್ನೇಹಿತರಿಗೆ, ಸಂಬಂಧಿಕರಿಗೆ, ಸಾರ್ವಜನಿಕರಿಗೆ ಮಾರಾಟ ಮಾಡಿದ್ದರು. ಅದರಿಂದ ಸಂಗ್ರಹವಾದ ಹಣದ ಜತೆಗೆ ತಾವೂ ಒಂದಿಷ್ಟು ಹಣ ಹಾಕಿ ಸುಮಾರು ₹ 1 ಲಕ್ಷ  ಬಂಡವಾಳದಿಂದ ಆಹಾರ ಮೇಳ ನಡೆಸಿದ್ದರು ಎಂದು ಭದ್ರಾ ಪದವಿ ಕಾಲೇಜು ಪ್ರಾಚಾರ್ಯ ಪ್ರೊ.ಟಿ.ಮುರುಗೇಶ್‌ ಮಾಹಿತಿ ನೀಡಿದರು.

2ನೇ ಆಹಾರ ಮೇಳ: ವಿದ್ಯಾರ್ಥಿಗಳಲ್ಲಿ ಉದ್ಯಮ ಪ್ರವೃತ್ತಿ, ವ್ಯಾವಹಾರಿಕ ಜ್ಞಾನ, ನಿರ್ವಹಣ ಕೌಶಲವನ್ನು ಬೆಳೆಸುವ ನಿಟ್ಟಿನಲ್ಲಿ ಕಾಲೇಜಿನಿಂದ ವರ್ಷಕ್ಕೊಮ್ಮೆ ಆಹಾರ ಮೇಳವನ್ನು ಆಯೋಜಿಸಲಾಗುತ್ತದೆ. ಕಳೆದ ವರ್ಷ ಆಯೋಜಿಸಿದಾಗ ವಿದ್ಯಾರ್ಥಿಗಳು, ಪೋಷಕರು ಹಾಗೂ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು ಎನ್ನುತ್ತಾರೆ ಭದ್ರಾ ಎಜುಕೇಷನ್‌ ಟ್ರಸ್ಟ್‌ನ ಕಾರ್ಯದರ್ಶಿ ಎಂ.ಸಂಕೇತ್.

ಆಹಾರ ಮೇಳ ಉದ್ಘಾಟಿಸಿ ಮಾತನಾಡಿದ ಹೋಟೆಲ್‌ ಉದ್ಯಮಿ ಅಣಬೇರು ರಾಜಣ್ಣ, ‘ಹಿಂದಿನ ಕಾಲದಲ್ಲಿ ಹೋಟೆಲ್‌ ಕೆಲಸವೆಂದರೆ ಕೀಳಾಗಿ ನೋಡಲಾಗುತ್ತಿತ್ತು. ಆದರೆ, ಈಗ ಮನಸ್ಥಿತಿ ಬದಲಾಗಿದ್ದು ಯುವ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಈ ಕ್ಷೇತ್ರಕ್ಕೆ ಬರುತ್ತಿದ್ದಾರೆ. ಮ್ಯಾನೇಜ್‌ಮೆಂಟ್‌ ಕೋರ್ಸ್‌ಗಳನ್ನು ಮಾಡಿದವರಿಗೆ ಬೇಡಿಕೆ ಹೆಚ್ಚಿದೆ. ಕಲಿಕೆಯ ಹಂತದಲ್ಲಿಯೇ ವಿವಿಧ ಚಟುವಟಿಕೆಗಳ ಮೂಲಕ ವ್ಯಾವಹಾರಿಕ ಅಂಶಗಳನ್ನು ಮೈಗೂಡಿಸಿಕೊಳ್ಳಬೇಕು’ ಎಂದರು.

‘ನಮ್ಮ ಮಳಿಗೆಯಲ್ಲಿ ಚೈನೀಸ್‌ ಫುಡ್‌ಗೆ ಆದ್ಯತೆ ನೀಡಿ, ಸಮೋಸ, ಬಗೆ ಬಗೆಯ ರೋಲ್‌ಗಳನ್ನು ಮಾಡಲಾಗಿತ್ತು. ಕೇವಲ ₹ 6000 ಬಂಡವಾಳ ಹಾಕಿದ್ದೆವು. ಜತೆಗೆ ಪ್ರಾಯೋಜಕರಿಂದಲೂ ಹಣ ಪಡೆದಿದ್ದೆವು. 230ಕ್ಕೂ ಹೆಚ್ಚು ಜನ ಊಟಮಾಡಿದ್ದು, ₹ 21,000  ಸಂಗ್ರಹವಾಗಿದೆ’ ಎಂದು ದ್ವಿತೀಯ ಬಿ.ಕಾಂ ವಿದ್ಯಾರ್ಥಿನಿ ತನುಜಾ ‘ಪ್ರಜಾವಾಣಿ’ಯೊಂದಿಗೆ ಸಂತಸ ಹಂಚಿಕೊಂಡರು.

ಮೇಳದಲ್ಲಿ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳನ್ನು ಒಳಗೊಂಡಂತೆ 1,500ಕ್ಕೂ ಹೆಚ್ಚು ಜನ ಭಾಗವಹಿಸಿ ಬಗೆ ಬಗೆಯ ಖಾದ್ಯಗಳನ್ನು ಸವಿದರು. ಪಾಲಿಕೆ ಸದಸ್ಯ ಶಿವನಹಳ್ಳಿ ರಮೇಶ್‌, ಭದ್ರಾ ಕಾಲೇಜು ಮುಖ್ಯಸ್ಥ ಪ್ರೊ.ಸಿ.ಎಚ್‌.ಮುರುಗೇಂದ್ರಪ್ಪ, ಪ್ರಾಚಾರ್ಯ ಪ್ರೊ.ಯು.ಗುರುಸ್ವಾಮಿ ಅವರೂ ಮೇಳದಲ್ಲಿ ಇದ್ದರು.

ಜಯಪ್ರಕಾಶ್‌ ಬಿರಾದಾರ್‌

* * 

ಹೋಟೆಲ್‌ ಉದ್ಯಮ ಮತ್ತು ಅದರ ನಿರ್ವಹಣೆಯ ಒತ್ತಡ ಏನು ಎಂದು ತಿಳಿಯಿತು. ನಮ್ಮ ಮಳಿಗೆಯಲ್ಲಿ ₹20,000 ವ್ಯಾಪಾರವಾಗಿದೆ.

ಮಾಲತೇಶ್‌. ವಿದ್ಯಾರ್ಥಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry