ಬೆಂಕಿ ಆಕಸ್ಮಿಕ: ಮಕ್ಕಳಿಗೆ ಪ್ರಾಯೋಗಿಕ ತರಬೇತಿ

7

ಬೆಂಕಿ ಆಕಸ್ಮಿಕ: ಮಕ್ಕಳಿಗೆ ಪ್ರಾಯೋಗಿಕ ತರಬೇತಿ

Published:
Updated:

ಗದಗ: ಶಾಲೆಯ ಕೊಠಡಿಗಳಲ್ಲಿ ಆವರಿಸಿದ್ದ ಹೊಗೆ, ಗಾಬರಿಗೊಂಡು ಶಾಲಾ ಮೈದಾನಕ್ಕೆ ಓಡಿ ಬಂದ ಮಕ್ಕಳು, ಪುಟಾಣಿಗಳ ರಕ್ಷಣೆಗೆ ಮುಂದಾಗಿದ್ದ ಅಗ್ನಿಶಾಮಕ ಸಿಬ್ಬಂದಿ...

ಹೌದು, ಕಟ್ಟಡದಲ್ಲಿ ಬೆಂಕಿ ತಗುಲಿದ ವೇಳೆಯಲ್ಲಿ ಯಾವ ರೀತಿ ಪಾರಾಗಬೇಕು, ಬೆಂಕಿ ನಂದಿಸುವುದು ಹಾಗೂ ಅಪಾಯದಲ್ಲಿ ಸಿಲುಕಿದವರನ್ನು ಹೇಗೆ ರಕ್ಷಿಸಬೇಕು ಎನ್ನುವ ಕುರಿತು ಜಿಲ್ಲಾ ಅಗ್ನಿಶಾಮಕ ಇಲಾಖೆಯ ಸಿಬ್ಬಂದಿ ಪ್ರಾಯೋಗಿಕ ತರಬೇತಿ ನೀಡಿದ ಸಂದರ್ಭದಲ್ಲಿ ಕಂಡುಬಂದ ದೃಶ್ಯ ಇದು.

ಬೆಳಗಿನ ಅವಧಿಯಲ್ಲಿ ಶಾಲೆಯೊಂದರಲ್ಲಿ ತರಗತಿಗಳು ನಡೆಯುತ್ತಿದ್ದ ವೇಳೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಕಟ್ಟಡದಲ್ಲಿ ಸಿಲುಕಿದ್ದ ವಿದ್ಯಾರ್ಥಿಗಳನ್ನು ಹೇಗೆ ಪ್ರಾಣಾಪಾಯದಿಂದ ಪಾರು ಮಾಡಲಾಯಿತು ಎನ್ನುವುದನ್ನು ಅಣಕು ಪ್ರದರ್ಶನದ ಮೂಲಕ ಮಕ್ಕಳಿಗೆ ಮನವರಿಕೆ ಮಾಡಿಕೊಡಲಾಯಿತು.

ಇಲ್ಲಿನ ಮುಂಡರಗಿ ರಸ್ತೆಯಲ್ಲಿರುವ ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ಗುರುಬಸವ ಇಂಗ್ಲಿಷ್ ಮಾಧ್ಯಮದ ಪ್ರಾಥಮಿಕ ಹಾಗೂ ಪ್ರೌಢಶಾಲೆಯ 2 ಮತ್ತು 3ನೇ ಮಹಡಿಯಲ್ಲಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಂತೆ ಕೃತಕವಾಗಿ ಸನ್ನಿವೇಶ ಸೃಷ್ಟಿಸಲಾಗಿತ್ತು. ಶಾಲೆಯಲ್ಲಿದ್ದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಗಾಬರಿಯಿಂದ ಬೆಂಕಿ, ಬೆಂಕಿ ಎಂದು ಹೊರಗೆ ಓಡಿ ಬಂದರು. ಕೊಠಡಿಯಲ್ಲಿ ಪ್ರಜ್ವಲ ಕೋಳೂರ, ಅಮೃತಾ ವಾಲಿ, ತೇಜಸ್ ಮರಿಗೌಡರ, ಚಿರಾಗ್, ವಡ್ರಾಯಿ, ಸಂಜನಾ ಬುರಬುರೆ, ರಕ್ಷಿತಾ ಶೆಟ್ಟೆಣ್ಣವರ, ಲಿಂಗರಾಜ ಪೂಜಾರ ಸೇರಿದಂತೆ 19 ವಿದ್ಯಾರ್ಥಿಗಳು ಪ್ರಜ್ಞೆ ತಪ್ಪಿದ್ದ ಸ್ಥಿತಿಯಲ್ಲಿ ಬಿದ್ದರು. ಅಗ್ನಿಶಾಮಕ ಸಿಬ್ಬಂದಿಯು ಮಕ್ಕಳಿಗೆ ಉಸಿರಾಟದ ಕಿಟ್‌ಗಳನ್ನು ನೀಡುವ ಮೂಲಕ ಅವರನ್ನು ರಕ್ಷಣೆ ಮಾಡಿದರು. ಹಲವು ಮುಚ್ಚರಿಕೆ ಕ್ರಮಗಳನ್ನು ಕೈಗೊಂಡ ಸಿಬ್ಬಂದಿ ಮಕ್ಕಳನ್ನು ರಕ್ಷಿಸಿ, ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.

ಗಾಯಗೊಂಡ ವಿದ್ಯಾರ್ಥಿಗಳನ್ನು ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಲಾಯಿತು. ಈ ಅಣಕು ಪ್ರದರ್ಶನ ಮುಗಿಯುತ್ತಿದ್ದಂತೆ ಶಾಲಾ ಮೈದಾನದಲ್ಲಿ ಕುಳಿತಿದ್ದ ವಿದ್ಯಾರ್ಥಿಗಳು ಜೋರಾಗಿ ಚಪ್ಪಾಳೆ ತಟ್ಟುವ ಮೂಲಕ ಸಿಬ್ಬಂದಿಗೆ ಅಭಿನಂದನೆ ಸಲ್ಲಿಸಿದರು.

ಅಗ್ನಿಶಾಮಕ ಇಲಾಖೆಯು ಈ ಕಾರ್ಯಕ್ರಮಕ್ಕಾಗಿ ಮೂರು ದಿನಗಳ ಕಾಲ ವಿದ್ಯಾರ್ಥಿಗಳ ಜತೆಗೆ ಪೂರ್ವತಯಾರಿ ಮಾಡಿಕೊಂಡಿತ್ತು. ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಎನ್.ಎಸ್.ಕಗ್ಗಲಗೌಡರ ನೇತೃತ್ವದಲ್ಲಿ ಸಿಬ್ಬಂದಿ ಕಟ್ಟಡದಲ್ಲಿ ಅಗ್ನಿ ಅವಘಡ ಸಂಭವಿಸಿದಾಗ, ಬಾಂಬ್ ಸ್ಫೋಟಗೊಂಡಾಗ ಕೈಗೊಳ್ಳುವ ಅಗತ್ಯ ಕ್ರಮಗಳ ಕುರಿತು ಮಕ್ಕಳಿಗೆ ಮಾಹಿತಿ ನೀಡಲಾಯಿತು.

‘ಅಗ್ನಿ ದುರಂತದಂತಹ ಘಟನೆಗಳು ನಡೆದಾಗ ಜೀವ ರಕ್ಷಣೆ ಕುರಿತು ಮಕ್ಕಳಿಗೆ ಶಿಕ್ಷಣ ನೀಡಬೇಕು. ಇದರಿಂದ ಅವರಲ್ಲಿ ಸಮಸ್ಯೆಗಳನ್ನು ಎದುರಿಸುವ ಸಾಮರ್ಥ್ಯ ಬರುತ್ತದೆ’ ಎಂದು ಮುಖ್ಯ ಶಿಕ್ಷಕ ಕೆ.ಮಂಜುನಾಥ ಹೇಳಿದರು.

‘ಸಿಲಿಂಡರ್ ಸ್ಫೋಟ, ಶಾರ್ಟ್‌ ಸರ್ಕಿಟ್‌ ಹಾಗೂ ವಿವಿಧ ಪ್ರಕಾರದ ಅಗ್ನಿ ಅವಘಡಗಳನ್ನು ಟಿವಿಯಲ್ಲಿ ನೋಡಿದ್ದೇವೆ. ದುರ್ಘಟನೆ ವೇಳೆ ಕೈಗೊಳ್ಳುವ ರಕ್ಷಣಾ ಕ್ರಮಗಳನ್ನು ಪ್ರಾಯೋಗಿಕವಾಗಿ ನೋಡಿದ್ದು ಇದೇ ಮೊದಲು’ ಎನ್ನುತ್ತಾರೆ ವಿದ್ಯಾರ್ಥಿ ಲಿಂಗರಾಜ ಪೂಜಾರ.

* * 

ಅಗ್ನಿ ಅವಘಡ ಸಂಭವಿಸಿದ ಸಮಯದಲ್ಲಿ ಯಾವ ರೀತಿ ರಕ್ಷಣೆ ಪಡೆದುಕೊಳ್ಳಬೇಕು ಎನ್ನುವ ಬಗ್ಗೆ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ತಿಳಿಸುವುದು ತುಂಬ ಅವಶ್ಯ ಎನ್.ಎಸ್.ಕಗ್ಗಲಗೌಡರ

ಜಿಲ್ಲಾ ಅಗ್ನಿಶಾಮಕ ಅಧಿಕಾರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry