ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದಗ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ

Last Updated 23 ಜನವರಿ 2018, 10:20 IST
ಅಕ್ಷರ ಗಾತ್ರ

ಗದಗ: ‘ಸರ್ಕಾರಿ ವೈದ್ಯಕೀಯ ಕಾಲೇಜುಗಳು ಇದ್ದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನೀಡದಿರಲು ಸರ್ಕಾರ ತೀರ್ಮಾನಿಸಿದೆ. ಆದರೆ, ಗದಗ ಜಿಲ್ಲೆಗೆ ಈ ನಿಯಮಕ್ಕೆ ವಿನಾಯ್ತಿ ನೀಡಿ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಒದಗಿಸಲು ಮುಖ್ಯಮಂತ್ರಿಗಳ ಜತೆಗೆ ಚರ್ಚಿಸಿ ಮಂಜೂರು ಮಾಡಲಾಗುವುದು’ ಎಂದು ಆರೋಗ್ಯ ಸಚಿವ ಕೆ.ಆರ್.ರಮೇಶಕುಮಾರ ಹೇಳಿದರು.

ಇಲ್ಲಿನ ಕೆ.ಸಿ.ರಾಣಿ ರಸ್ತೆಯಲ್ಲಿ ₹19 ಕೋಟಿ ಅನುದಾನದಲ್ಲಿ ನವೀಕೃತಗೊಂಡ ನೂರು ಹಾಸಿಗೆಗಳ ದಂಡಪ್ಪ ಮಾನ್ವಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಸರ್ಕಾರಿ ಆಸ್ಪತ್ರೆಗಳಲ್ಲಿ ಎಲ್ಲ ಸೌಲಭ್ಯಗಳು ದೊರೆಯಬೇಕು. ಅನಿವಾರ್ಯತೆ ಇದ್ದಾಗ ಮಾತ್ರ ಖಾಸಗಿ ಆಸ್ಪತ್ರೆಗೆ ಬಡ ಹಾಗೂ ಮಧ್ಯಮ ವರ್ಗದ ಜನತೆ ಹೋಗಬೇಕು. ನ್ಯಾಯಯುತ ದರದಲ್ಲಿ ಚಿಕಿತ್ಸೆ ಸಿಗಬೇಕು ಎಂಬ ಕಾರಣಕ್ಕೆ ಕಾಯ್ದೆಗೆ ತಿದ್ದುಪಡಿ ತರಲಾಗಿದೆ’ ಎಂದರು.

‘ಬಡವರಿಗೆ ಉತ್ತಮ ವೈದ್ಯಕೀಯ ಚಿಕಿತ್ಸೆ ನಿಗದಿತ ಸಮಯದಲ್ಲಿ ಸಿಗಬೇಕು ಎನ್ನುವುದು ಸರ್ಕಾರದ ಆಶಯ. ಈ ನಿಟ್ಟಿನಲ್ಲಿ ಗದುಗಿನ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಅಗತ್ಯ ವೈದ್ಯಕೀಯ ಉಪಕರಣಗಳನ್ನು ನೀಡಲಾಗಿದೆ. ಬಡವರಿಗೆ ವೈದ್ಯರು ಉತ್ತಮ ಸೇವೆ ಒದಗಿಸಬೇಕು. ಈ ಆಸ್ಪತ್ರೆಗಾಗಿ 1932ರಲ್ಲಿ ದುಂಡಪ್ಪ ಮಾನ್ವಿ ಅವರು ತಮ್ಮ ಭೂಮಿಯನ್ನು ದಾನ ನೀಡಿದರು’ ಎಂದರು. ‘ದೇಶದಲ್ಲಿ ಸಾರ್ವಜನಿಕವಾಗಬೇಕಿದ್ದ ವೈದ್ಯಕೀಯ ಹಾಗೂ ಶೈಕ್ಷಣಿಕ ಸೇವೆಗಳು ಖಾಸಗಿಯಾಗುತ್ತಿವೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಗದಗ ಜಿಲ್ಲೆ ವೈದ್ಯಕೀಯ ರಂಗದಲ್ಲಿ ಗಮನಾರ್ಹ ಸಾಧನೆ ಮಾಡಿದೆ. ಹಿಂದಿನ ಹೆರಿಗೆ ಆಸ್ಪತ್ರೆಯ ಪಾರಂಪರಿಕ ಕಟ್ಟಡವನ್ನು ಉಳಿಸಿಕೊಳ್ಳಲಾಗಿದ್ದು, ವಿವಿಧ ಸೌಲಭ್ಯಗಳನ್ನು ಒದಗಿಸಲು ಹೊಸ ಕಟ್ಟಡವನ್ನು ರೂಪಿಸಿಕೊಳ್ಳಲಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಹೇಳಿದರು.

ಗದಗ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ವಾಸಣ್ಣ ಕುರಡಗಿ, ಉಪಾಧ್ಯಕ್ಷೆ ರೂಪಾ ಅಂಗಡಿ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಕೃಷ್ಣಗೌಡ ಪಾಟೀಲ, ಉಪಾಧ್ಯಕ್ಷ ಎ.ಆರ್.ನದಾಫ, ಗದಗ ನಗರಸಭೆ ಅಧ್ಯಕ್ಷ ಬಿ.ಬಿ.ಅಸೂಟಿ, ಉಪಾಧ್ಯಕ್ಷ ಪ್ರಕಾಶ ಬಾಕಳೆ, ಗದಗ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರಭು ಬುರಬುರೆ, ರಾಜುಗೌಡ ಕೆಂಚನಗೌಡ್ರ, ಸಿದ್ದು ಪಾಟೀಲ, ಹನುಮಂತಪ್ಪ ಪೂಜಾರ, ಅನ್ನದಾನೇಶ್ವರ ಮಾನ್ವಿ, ಜಿಲ್ಲಾಧಿಕಾರಿ ಮನೋಜ್ ಜೈನ್, ಎಸ್ಪಿ ಕೆ.ಸಂತೋಷ ಬಾಬು, ಎಂಜಿನಿಯರ್‌ ಉದಯ ಶಂಕರ ಡಿ, ಜಿಮ್ಸ್ ನಿರ್ದೇಶಕ ಡಾ.ಪಿ.ಎಸ್.ಭೂಸರೆಡ್ಡಿ ಮತ್ತು ಇತರರು ಕಾರ್ಯಕ್ರಮದಲ್ಲಿ ಇದ್ದರು.

* * 

ಗದಗ ಜಿಲ್ಲಾ ಆಸ್ಪತ್ರೆಗೆ ಅಗತ್ಯವಿರುವ ಸಿಟಿ ಸ್ಕ್ಯಾನ್ ಮತ್ತು ಎಂ.ಆರ್‍.ಐ ಸ್ಕ್ಯಾನ್ ವ್ಯವಸ್ಥೆಯನ್ನು ತಿಂಗಳೊಳಗೆ ಕಲ್ಪಿಸಲಾಗುವುದು
ರಮೇಶಕುಮಾರ್ ಆರೋಗ್ಯ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT