ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆ: ಸರ್ಕಾರದ ವಿರುದ್ಧ ದೇವೇಗೌಡ ಆಕ್ರೋಶ

Last Updated 23 ಜನವರಿ 2018, 10:46 IST
ಅಕ್ಷರ ಗಾತ್ರ

ಬೆಂಗಳೂರು: ‘ಪ್ರಾಮಾಣಿಕ ಅಧಿಕಾರಿಯನ್ನು ಸರ್ಕಾರ ವರ್ಗ ಮಾಡಿದೆ. ಅವರು ಬಂದು ಆರು ತಿಂಗಳು ಕೂಡ ಆಗಿಲ್ಲ, ಈ ಹಿಂದಿನ ಜಿಲ್ಲಾಧಿಕಾರಿಗಳಿಗೂ ಕೂಡ ಸರ್ಕಾರ ಹೀಗೆಯೇ ಮಾಡಿದೆ’ ಎಂದು ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ವರ್ಗಾವಣೆ ಕುರಿತು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡ ಅಸಮಾಧಾನ ವ್ಯಕ್ತಪಡಿಸಿದರು.

‘ಮಹಾಮಸ್ತಕಾಭಿಷೇಕದ ಸಿದ್ಧತೆ ಕೆಲಸ ನಡೆಯುತ್ತಿದೆ. ಇದರಲ್ಲಿ ಹಣ ಹೊಡೆಯಲು ಆ ಹೆಣ್ಣುಮಗಳು ಬಿಡಲಿಲ್ಲ. ಅಲ್ಲಿನ ಉಸ್ತುವಾರಿ ಸಚಿವರು ಏನು ಮಾಡುತ್ತಿದ್ದಾರೆ ಎಂಬುದು ತಿಳಿದಿದೆ. ಇಂಥ ಪವಿತ್ರ ಕಾರ್ಯದಲ್ಲೂ ಪರ್ಸೆಂಟೇಜ್‌ ಬೇಕೆ? ಇದನ್ನೆಲ್ಲ ತಡೆಯಲು ಮುಂದಾದ ಕಾರಣಕ್ಕೆ ವರ್ಗಾವಣೆ ನಡೆದಿದೆ’ ಎಂದು ಆರೋಪಿಸಿದರು.

(ರೋಹಿಣಿ ಸಿಂಧೂರಿ)

ಭ್ರಷ್ಟಾಚಾರ ವಿಚಾರದಲ್ಲಿ ಬಹಳ ಕಠಿಣವಾಗಿದ್ದ ರೋಹಿಣಿ ಅವರ ವರ್ಗಾವಣೆ ಒಬ್ಬ ಮಂತ್ರಿಯ ಒತ್ತಡದಿಂದಾಗಿ ನಡೆದಿದೆ. ‘ಮಹಾಮಸ್ತಕಾಭಿಷೇಕ ಕಾರ್ಯ ಆಗಬೇಕು. ಈಗ ಅವರನ್ನು ವರ್ಗಾಯಿಸಬೇಡಿ ಎಂದು ಮುಖ್ಯಕಾರ್ಯದರ್ಶಿ ಅವರಿಗೆ ಮನವಿ ಮಾಡಿದ್ದೆ. ಆದರೆ, ರಾತ್ರೋ ರಾತ್ರಿ ವರ್ಗಾವಣೆ ಆದೇಶ ಹೊರಬಿದ್ದಿದೆ. ಮುಖ್ಯಕಾರ್ಯದರ್ಶಿ ಅವರನ್ನ ಕೇಳಿದಾಗ ಇದರಲ್ಲಿ ನಮ್ಮ ಪಾತ್ರ ಇಲ್ಲ, ಸರ್ಕಾರ ನೇರವಾಗಿ ಆದೇಶಮಾಡಿ ವರ್ಗ ಮಾಡಿದೆ’ ಎಂದರು.

ರಾಜ್ಯ ಸರ್ಕಾರದ ಆಡಳಿತ ವಿರುದ್ಧ ಗುಡುಗಿರುವ ಅವರು ರಾಷ್ಟ್ರಪತಿಗಳೂ ಈ ಸಂಬಂಧ ಪತ್ರ ಬರೆಯುವುದಾಗಿ ತಿಳಿಸಿದರು ಫೆ.7ರಂದು ಹಾಸನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗಿಯಾಗದಿರಲು ಅವರು ನಿರ್ಧರಿಸಿರುವುದಾಗಿ ಹೇಳಿದರು.

ಜ.25 ರಂದು ದೇವೇಗೌಡರ ನೇತೃತ್ವದಲ್ಲಿ ಪ್ರತಿಭಟನೆ

ಹಾಸನ: ‘ಡಿಸಿ ರೋಹಿಣಿ ಸಿಂಧೂರಿ ವರ್ಗ ವಿಷಯ ಮುಖ್ಯ ಕಾರ್ಯದರ್ಶಿಗೆ ಗೊತ್ತೇ ಇಲ್ಲ, ಕಾಂಗ್ರೆಸ್ ನವರು ದೂರು ಕೊಟ್ಟ ತಕ್ಷಣ ವರ್ಗ ಮಾಡಿದ್ದು ಸರಿಯಲ್ಲ, ರಾಜ್ಯ ಸರ್ಕಾರ ಯಾರ ಪರ’ ಎಂದು ಶಾಸಕ ಎಚ್.ಡಿ.ರೇವಣ್ಣ ಪ್ರಶ್ನಿಸಿದರು.

ರಾಜ್ಯದಲ್ಲಿ ಚುನಾವಣೆ ಸಿದ್ಧತಾ ಕಾರ್ಯ ನಡೆಯುತ್ತಿದೆ. ಈ ನಡುವೆಯೇ ರಾಜಕೀಯ ದುರುದ್ದೇಶದಿಂದ ವರ್ಗ ಮಾಡಲಾಗಿದೆ ಎಂದು ಕಿಡಿಕಾರಿದರು.

ಯಾವ ಕಾರಣಕ್ಕೆ ವರ್ಗಾವಣೆ ನಡೆದಿದೆ ಎಂಬುದನ್ನು ತಿಳಿಸಬೇಕು. ಕೇಂದ್ರ-ರಾಜ್ಯ ಚುನಾವಣಾ ಆಯೋಗ ಮಧ್ಯೆ ಪ್ರವೇಶ ಮಾಡಬೇಕು. ಇಲ್ಲವಾದರೆ ಜಿಲ್ಲೆ, ರಾಜ್ಯದಲ್ಲಿ ನಿಷ್ಪಕ್ಷಪಾತ ಚುನಾವಣೆ ನಡೆಯಲ್ಲ, ಈ ಸಂಬಂಧ ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ ಬರೆಯಲಾಗುವುದು. ಜ.25 ರಂದು ದೇವೇಗೌಡರ ನೇತೃತ್ವದಲ್ಲಿ ಪ್ರತಿಭಟನೆ ನಡೆಸುತ್ತೇವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT