ರೋಹಿಣಿ ವರ್ಗ –ಸಚಿವರ ಒತ್ತಡಕ್ಕೆ ಮಣಿದ ಸರ್ಕಾರ

7

ರೋಹಿಣಿ ವರ್ಗ –ಸಚಿವರ ಒತ್ತಡಕ್ಕೆ ಮಣಿದ ಸರ್ಕಾರ

Published:
Updated:

ಹಾಸನ: ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ಒತ್ತಡಕ್ಕೆ ಮಣಿದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ದಾಸರಿ ಅವರನ್ನು ರಾಜ್ಯ ಕೈಗಾರಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಸ್ಥಾನಕ್ಕೆ ವರ್ಗಾವಣೆ ಮಾಡಿ ಸರ್ಕಾರ ಸೋಮವಾರ ಆದೇಶ ಹೊರಡಿಸಿದೆ.

2017ರ ಜುಲೈ 14ರಂದು ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದ ರೋಹಿಣಿ ಸಿಂಧೂರಿ, ಆರಂಭದಲ್ಲೆ ಆಡಳಿತ ಯಂತ್ರಕ್ಕೆ ಚುರುಕುಮುಟ್ಟಿಸಿ ಹುಬ್ಬೇರುವಂತೆ ಮಾಡಿದ್ದರು. ಸಾರ್ವಜನಿಕರ ಕುಂದು-ಕೊರತೆ ಆಲಿಸಲು ಮತ್ತು ಇದ್ದಲ್ಲೆ ದೂರು ಸಲ್ಲಿಸಿ ಕೆಲವೇ ದಿನಗಳಲ್ಲಿ ಪರಿಹಾರ ಕಂಡುಕೊಳ್ಳಲು ಅನುಕೂಲವಾಗುವ ಸ್ಪಂದನ ಹೆಸರಿನ ವೆಬ್ ಪೋರ್ಟಲ್ ಆರಂಭಿಸಿ ಸಾರ್ವಜನಿಕರಿಗೆ ನೆರವಾಗಿದ್ದರು.

ಮುಖ್ಯವಾಗಿ ಮುಂದಿನ ತಿಂಗಳು ನಡೆಯುವ ಮಹಾಮಸ್ತಕಾಭಿಷೇಕ ಹಿನ್ನಲೆಯಲ್ಲಿ ಕೈಗೊಂಡಿರುವ ನೂರಾರು ಕೋಟಿ ರೂಪಾಯಿ ವೆಚ್ಚದ ಬೃಹತ್ ಅಭಿವೃದ್ಧಿ ಕಾಮಗಾರಿಗಳು ಅಚ್ಚುಕಟ್ಟು ಹಾಗೂ ತ್ವರಿತವಾಗಿ ನಡೆಯಲು ಸಾಕಷ್ಟು ಶ್ರಮಿಸಿದ್ದರು. ಜತೆಗೆ ದಿನದ 24 ಗಂಟೆ ಹಾಸನಾಂಬೆ ದರ್ಶನಕ್ಕೆ ಅವಕಾಶ ನೀಡಿ ಭಕ್ತರ ಮೆಚ್ಚುಗೆಗೆ ಪಾತ್ರವಾಗಿದ್ದರು.

ಕೆಲ ದಿನಗಳ ಹಿಂದೆ ಜಿಲ್ಲೆಯಲ್ಲಿ ನಡೆದ ಸಾಧನಾ ಸಮಾವೇಶಕ್ಕೆ ಬಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಡಿ.ಸಿ ವಿರುದ್ಧ ಸಚಿವ ಮಂಜು, ಕೆಪಿಸಿಸಿ ಉಪಾಧ್ಯಕ್ಷ ಶಿವರಾಂ, ಜಿಲ್ಲಾ ಘಟಕದ ಅಧ್ಯಕ್ಷ ಜಾವಗಲ್‌ ಮಂಜುನಾಥ್‌ ಸೇರಿದಂತೆ ಹಲವು ಮುಖಂಡರು ದೂರುಗಳ ಸುರಿಮಳೆಗೈದಿದ್ದರು.

‘ಸತ್ತರೆ ಅಂತ್ಯಸಂಸ್ಕಾರ ಮಾಡಲು ಸ್ಮಶಾನದ ಭೂಮಿ ಕೊಡಿ ಎಂದು ಢಣಾಯಕನಹಳ್ಳಿಯಲ್ಲಿ ಹೋರಾಟ ಮಾಡಿದ ದಲಿತರು ಜೈಲುಶಿಕ್ಷೆ ಅನುಭವಿಸುವಂತೆ ಮಾಡಿದರು’ ಎಂದು ಕೆಲವು ದಲಿತ ಮುಖಂಡರು ಜಿಲ್ಲಾಧಿಕಾರಿ ವಿರುದ್ಧ ಗಂಭೀರ ಆರೋಪ ಮಾಡಿದ್ದರು.

‘ತಮ್ಮ ಮಾತು ಕೇಳದ ಜಿಲ್ಲಾಧಿಕಾರಿ ಯನ್ನು ವರ್ಗಾವಣೆ ಮಾಡಲೇಬೇಕು’ ಎಂದು ಸಚಿವರು ಪಟ್ಟು ಹಿಡಿದಿದ್ದರು. ರೋಹಿಣಿ ವರ್ಗಾವಣೆಯಿಂದ ತೆರವಾದ ಸ್ಥಾನಕ್ಕೆ ಸದ್ಯ ಹಾವೇರಿ ಜಿಲ್ಲಾಧಿಕಾರಿ ಆಗಿರುವ ಎಂ.ವಿ ವೆಂಕಟೇಶ್ ಅವರನ್ನು ನಿಯೋಜನೆ ಮಾಡಲಾಗಿದೆ. 2009ನೇ ಬ್ಯಾಚ್‌ನ ಐಎಎಸ್ ಅಧಿಕಾರಿ ವೆಂಕಟೇಶ್ ಹಿಂದೆ ಚಿಕ್ಕಬಳ್ಳಾಪುರ ಡಿ.ಸಿ. ಆಗಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry