ವೀರಶೈವ–ಲಿಂಗಾಯತರಿಗೆ ಟಿಕೆಟ್‌ ಸಿಗದಿದ್ದರೆ ತಕ್ಕಪಾಠ

7

ವೀರಶೈವ–ಲಿಂಗಾಯತರಿಗೆ ಟಿಕೆಟ್‌ ಸಿಗದಿದ್ದರೆ ತಕ್ಕಪಾಠ

Published:
Updated:
ವೀರಶೈವ–ಲಿಂಗಾಯತರಿಗೆ ಟಿಕೆಟ್‌ ಸಿಗದಿದ್ದರೆ ತಕ್ಕಪಾಠ

ಬೇಲೂರು: ‘ಹಾಸನ ಜಿಲ್ಲೆ ಸೇರಿ ಮೈಸೂರು ಪ್ರಾಂತ್ಯದಲ್ಲಿ ರಾಜಕೀಯ ಪಕ್ಷಗಳು ವೀರಶೈವ–ಲಿಂಗಾಯತರಿಗೆ ಪ್ರಾತಿನಿಧ್ಯ ನೀಡಲು ವಿಫಲವಾಗಿವೆ’ ಎಂದು ವಿಶ್ವ ವೀರಶೈವ ಲಿಂಗಾಯತ ಒಕ್ಕೂಟದ ಅಧ್ಯಕ್ಷ ಜ್ಯೋತಿ ಪ್ರಕಾಶ್‌ ಮಿರ್ಜಿ ಆರೋಪಿಸಿದರು.

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಹಾಸನ ಜಿಲ್ಲೆಯ ಅರಸೀಕೆರೆ ಮತ್ತು ಬೇಲೂರು ವಿಧಾನಸಭಾ ಕ್ಷೇತ್ರಗಳಲ್ಲಿ ಮೂರು ಪಕ್ಷಗಳು ವೀರಶೈವ ಲಿಂಗಾಯಿತರಿಗೆ ಟಿಕೆಟ್‌ ನೀಡದಿದ್ದರೆ ತಕ್ಕಪಾಠ ಕಲಿಸಲಿದ್ದೇವೆ ಎಂದು ಸೋಮವಾರ ಎಚ್ಚರಿಸಿದರು.

ವೀರಶೈವ–ಲಿಂಗಾಯತ ಸೇವಾ ಟ್ರಸ್ಟ್‌ ಮತ್ತು ತಾಲ್ಲೂಕು ವೀರಶೈವ ಮಹಾಸಭಾ ಸೋಮವಾರ ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಏರ್ಪಡಿಸಿದ್ದ ಬೃಹತ್ ಜನಜಾಗೃತಿ ಸಮಾವೇಶದಲ್ಲಿ ಅವರು ಮಾತನಾಡಿದರು.

ಹಾಸನ ಜಿಲ್ಲೆಯ ರಾಜಕೀಯ ಕ್ಷೇತ್ರದಲ್ಲಿ ಜೆಡಿಎಸ್‌, ಕಾಂಗ್ರೆಸ್‌ ಮತ್ತು ಬಿಜೆಪಿ ಪಕ್ಷಗಳು ವೀರಶೈವ–ಲಿಂಗಾಯಿತರಿಗೆ ಸೂಕ್ತ ಸ್ಥಾನಮಾನ ನೀಡಲು ವಿಫಲವಾಗಿವೆ. ಈ ವರ್ಗದ ಜನರನ್ನು ಈ ಮೂರು ಪಕ್ಷಗಳು ಕಡೆಗಣಿಸಿವೆ ಎಂದು ಆರೋಪ ಮಾಡಿದರು.

‘ನಮ್ಮ ಮಠಗಳಲ್ಲಿ ಬೆಳೆದ ಮುಖಂಡರು ನಮ್ಮ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ, ನಮ್ಮ ಬಗ್ಗೆ ಮಲತಾಯಿ ಧೋರಣೆ ಸಲ್ಲದು. ಬೇಲೂರಿನಲ್ಲಿ ಅಂಬೇಡ್ಕರ್ ಹಾಗೂ ಕೆಂಪೇಗೌಡ ಪ್ರತಿಮೆ ನಿರ್ಮಿಸಲಾಗಿದೆ. ಆದರೆ ಬಸವೇಶ್ವರರ ಪ್ರತಿಮೆ ಸ್ಥಾಪಿಸಲು ವಿಳಂಬ ಮಾಡಲಾಗುತ್ತಿದೆ’ ಎಂದರು.

‘ಪುಷ್ಪಗಿರಿಯ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಅವರು, ‘ವೀರಶೈವ–ಲಿಂಗಾಯತ ಧರ್ಮದಲ್ಲಿ ಜಾತಿ ಉಪ ಜಾತಿಗಳ ಗೊಂದಲವೂ ಸಾಮಾಜಿಕ, ಶೈಕ್ಷಣಿಕವಾಗಿ ಮತ್ತು ರಾಜಕೀಯವಾಗಿ ಹಿಂದುಳಿಯಲು ಕಾರಣ’ ಎಂದರು.

‘ರಾಜಕೀಯ ಶಕ್ತಿಗಾಗಿ ವೀರಶೈವ–ಲಿಂಗಾಯತರು ಸಂಘಟಿತರಾಗಬೇಕು. ಅಧಿಕಾರ ನಡೆಸುವ ಸರ್ಕಾರಗಳು ಜಾತಿ ಹೆಸರಿನಲ್ಲಿ ಯೋಜನೆಗಳನ್ನು ರೂಪಿಸಿ ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿವೆ. ಇದರಿಂದಾಗಿ ವೀರಶೈವ–ಲಿಮಗಾಯಿತರು ಸರ್ಕಾರದ ಸವಲತ್ತುಗಳನ್ನು ಪಡೆಯಲು ಅನ್ಯಾಯ

ವಾಗುತ್ತಿದೆ ಎಂದು ವ್ಯಾಖ್ಯಾನಿಸಿದರು.

ಈ ಹಿನ್ನೆಲೆಯಲ್ಲಿ ವೀರಶೈವ–ಲಿಂಗಾಯತರು ಉಪ ಜಾತಿಗಳನ್ನು ಬಿಟ್ಟು ಧರ್ಮದ ಸಂಘಟನೆಗೆ ಮುಂದಾಗಿ ಸರ್ಕಾರದ ಸವಲತ್ತು ಪಡೆದುಕೊಳ್ಳಬೇಕು ಎಂದರು. ವೀರಶೈವ– ಲಿಂಗಾಯತ ಅಭಿವೃದ್ಧಿ ಟ್ರಸ್ಟ್‌ನ ಅಧ್ಯಕ್ಷ ಸಿ.ಎಂ.ನಿಂಗರಾಜು ಅವರು, ‘ಬೇಲೂರು ಕ್ಷೇತ್ರದಲ್ಲಿ ಸುಮಾರು 65 ಸಾವಿರ ಮತದಾರರಿದ್ದಾರೆ. ಈವರೆಗೆ ರಾಜಕೀಯ ಸ್ಥಾನ-ಮಾನ ಸಿಕ್ಕಿಲ್ಲ. ಹೀಗಾಗಿ, ಸಂಘಟನೆಗಾಗಿ ಸಮಾವೇಶ ಹಮ್ಮಿಕೊಳ್ಳಲಾಗಿದೆ’ ಎಂದು ತಿಳಿಸಿದರು.

ಕಾಂಗ್ರೆಸ್ ಪಕ್ಷದಿಂದ ಬಿ.ಶಿವರುದ್ರಪ್ಪ, ಜೆಡಿಎಸ್ ಪಕ್ಷದಿಂದ ಕೆ.ಎಸ್.ಲಿಂಗೇಶ್, ಗ್ರಾನೈಟ್ ರಾಜಶೇಖರ್, ಬಿಜೆಪಿಯಿಂದ ಕೊರಟಕೆರೆ ಪ್ರಕಾಶ್, ಸಂತೋಷ್, ಕಾಂತರಾಜು ಆಕಾಂಕ್ಷಿಗಳಾಗಿದ್ದಾರೆ ಎಂದು ಹೇಳಿದರು.

ಚಿಕ್ಕಮಗಳೂರು ಕಲ್ಯಾಣ ಮಂದಿರದ ಜಯಬಸವಸ್ವಾಮೀಜಿ, ದೊಡ್ಡಮಠದ ಮಲ್ಲಿಕಾರ್ಜನ ಸ್ವಾಮೀಜಿ, ಚನ್ನರಾಯಪಟ್ಟಣ ತಾಲ್ಲೂಕು ನುಗೇಹಳ್ಳಿಯ ಮಹೇಶ್ವರ ಸ್ವಾಮೀಜಿ, ಕಾರ್ಜುವಳ್ಳಿಯ ಷಟ್‌ಸ್ಥಳ ಬ್ರಹ್ಮ ಶಂಭುಲಿಂಗ ಸ್ವಾಮೀಜಿ, ಸದಾಶಿವ ಸ್ವಾಮೀಜಿ, ಹುಲಿಕೆರೆ ಮಠದ ವಿರೂಪಾಕ್ಷಲಿಂಗ ಸ್ವಾಮೀಜಿ, ತೊರೆನೂರಿನ ಮಲ್ಲೇಶ್ವರ ಸ್ವಾಮೀಜಿ, ವೀರಶೈವ ಮಹಾಸಭಾ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಎಸ್.ರಾಜಶೇಖರ್, ಮುಖಂಡರಾದ ಬಿ.ಶಿವರುದ್ರಪ್ಪ, ಕೆ.ಎಸ್.ಲಿಂಗೇಶ್, ಕೊರಟಿಕೆರೆ ಪ್ರಕಾಶ್, ಗ್ರಾನೈಟ್ ರಾಜಶೇಖರ್, ಕಾಂತರಾಜು, ಚಂದ್ರಶೇಖರ್, ಉಮಾಶಂಕರ್, ಬಿ.ಕೆ.ಚಂದ್ರಕಲಾ, ವಿರೂಪಾಕ್ಷ ಹಾಜರಿದ್ದರು.

ಮೆರವಣಿಗೆ: ಸಮಾವೇಶಕ್ಕೂ ನೆಹರು ನಗರ ವೃತ್ತದಿಂದ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದವರೆಗೆ ಭಾರಿ ಮೆರವಣಿಗೆ ನಡೆಯಿತು. ವೀರಗಾಸೆ, ಡೊಳ್ಳುಕುಣಿತ ಸೇರಿ ವಿವಿಧ ಜಾನಪದ ಕಲಾ ತಂಡಗಳು ಭಾಗವಹಿಸಿದ್ದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry