ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಳುಮೆಣಸು: ರಾಜ್ಯದ ಹೆಗ್ಗಳಿಕೆ

Last Updated 23 ಜನವರಿ 2018, 19:30 IST
ಅಕ್ಷರ ಗಾತ್ರ

ಸಾಂಬಾರ ಬೆಳೆಗಳ ರಾಜನೆಂದೇ ಖ್ಯಾತಿ ಪಡೆದಿರುವ  ಕಾಳುಮೆಣಸು ಬೆಳೆಯಲ್ಲಿ ಇಡೀ ದೇಶದಲ್ಲೇ ಕರ್ನಾಟಕ ಮೊದಲ ಸ್ಥಾನ ಪಡೆದಿದೆ. ಕೇಂದ್ರ ಸಾಂಬಾರ ಮಂಡಳಿ ಇತ್ತೀಚೆಗೆ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ ಕೇರಳವನ್ನು ಎರಡನೇ ವರ್ಷ ಹಿಂದಿಕ್ಕಿ ಮೊದಲ ಸ್ಥಾನ ಪಡೆದಿದೆ. ಇದು ಕಾಳುಮೆಣಸು ಬೆಳೆಯು ರಾಜ್ಯದ ರೈತರ ಕೈಹಿಡಿದಿದೆ ಎಂಬುದನ್ನು ತೋರಿಸಿದೆ. ಕಾಳುಮೆಣಸು ರೈತರಿಗೂ ಉತ್ತಮ ಆದಾಯ ತರಬಲ್ಲ ವಾಣಿಜ್ಯ ಬೆಳೆಯಾಗಿಯೂ ಬದಲಾಗಿದೆ. ದೇಶದ ಮೆಣಸು ಉತ್ಪಾದನೆ 70 ಸಾವಿರ ಟನ್‌. ಆದರೆ ಅದರಲ್ಲಿ  ಕರ್ನಾಟಕದ ಉತ್ಪಾದನೆಯೇ 33 ಸಾವಿರ ಟನ್‌. ಇದೇ ವೇಳೆ ಕೇರಳದ್ದು 28 ಸಾವಿರ ಟನ್‌.

ಕಾಳುಮೆಣಸನ್ನು ಭಾರತದಲ್ಲಿ ಪ್ರಮುಖವಾಗಿ ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರ ಪ್ರದೇಶ, ಒಡಿಶಾ, ಮಹಾರಾಷ್ಟ್ರ, ಗೋವಾ, ಅಸ್ಸಾಂ, ಮೇಘಾಲಯ ಹಾಗೂ ತ್ರಿಪುರಾಗಳಲ್ಲಿ ಬೆಳೆಯಲಾಗುತ್ತದೆ. ಕರ್ನಾಟಕದಲ್ಲಿ ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು ಜಿಲ್ಲೆಗಳಲ್ಲಿ ಮೆಣಸು ಹೆಚ್ಚಾಗಿ ಬೆಳೆಯಲಾಗುತ್ತದೆ. ಅದರಲ್ಲೂ ಅಡಿಕೆ, ಕಾಫಿ, ರಬ್ಬರ್‌ ಮತ್ತು ತೆಂಗು ಬೆಳೆಗಳ ನಡುವೆ ಉಪಬೆಳೆಯಾಗಿ.

ಭಾರತದಲ್ಲಿ ಕಾಳುಮೆಣಸನ್ನು 1.29 ಲಕ್ಷ ಹೆಕ್ಟೇರ್‌ ‍ಪ್ರದೇಶದಲ್ಲಿ ಬೆಳೆಯಲಾಗುತ್ತದೆ. ಇದರಿಂದ ವಾರ್ಷಿಕ 55 ಸಾವಿರ ಟನ್‌ ಇಳುವರಿ ದೊರೆಯುತ್ತಿದೆ. ಆದರೆ ವರ್ಷ ವರ್ಷ ಈ ಪ್ರಮಾಣದಲ್ಲಿ ಏರಿಳಿತವಾಗುತ್ತಿದೆ. ಇದಕ್ಕೆ ಹಲವು ಕಾರಣಗಳಿವೆ. ಬೆಳೆಯನ್ನು ಕಾಡುತ್ತಿರುವ ರೋಗದ ಹಾವಳಿ ಹೆಚ್ಚಿದೆ.

ಕೇರಳದಲ್ಲಿ ಉತ್ಪಾದನೆ ಕುಸಿತ

ಕೇರಳದಲ್ಲಿ ಕಾಳು ಮೆಣಸು ಇಳುವರಿ ಕುಸಿಯಲು ಹಲವು ಕಾರಣಗಳಿದ್ದವು. ಅವುಗಳಲ್ಲಿ ಪ್ರಮುಖವಾದವು ಬಳ್ಳಿಗಳು ಏಕಾಏಕಿ ಒಣಗಿ ಕುಸಿದುಬಿದ್ದಿರುವುದು, ಕಾಯಿಲೆ, ಬಳ್ಳಿಗಳು ಒಣಗಿಹೋಗಿರುವುದು. ವಯನಾಡು ಜಿಲ್ಲೆಯೊಂದರಲ್ಲಿ ಶೇ 90 ರಷ್ಟು ಬಳ್ಳಿಗಳು ರೋಗದಿಂದ ನಾಶವಾಗಿವೆ.  ಇದನ್ನು ತಡೆಯಲು ಸಾಂಬಾರ ಮಂಡಳಿ ತೀವ್ರ ತರದ ಸಂಶೋಧನೆ ನಡೆಸುತ್ತಿದೆ. ಈ ಎಲ್ಲವೂ ಕರ್ನಾಟಕ ಮೆಣಸು ಉತ್ಪಾದನೆಯಲ್ಲಿ ಮೊದಲ ಸ್ಥಾನ ಪಡೆಯಲು ಕಾರಣವಾಯಿತು.

ದೇಶದಲ್ಲಿನ ಮೆಣಸು ಸ್ಥಿತಿಗತಿ

ಕೆಲವು ವರ್ಷಗಳ ಹಿಂದೆ ಭಾರತದಲ್ಲಿ ಕೇರಳ ದೊಡ್ಡ ಉತ್ಪಾದಕ ರಾಜ್ಯವಾಗಿತ್ತು. ಕ್ರಮೇಣ ಕಾರ್ಮಿಕರ ಕೊರತೆ  ಹಾಗೂ ಇತರ ಕಾರಣಗಳಿಂದ 2005ರ ಸುಮಾರಿಗೆ ಅಲ್ಲೂ ಬೆಳೆ ಬಿದ್ದು ಹೋಯಿತು. ಆಗ ಬೆಲೆ ₹40 ರಿಂದ ₹50 ಇತ್ತು. 1.50 ಲಕ್ಷ ಹೆಕ್ಟೇರ್‌ನಲ್ಲಿ ಇದ್ದ ಬೆಳೆ ಕಡಿಮೆಯಾಗುತ್ತಾ ಬಂದಿತು.

ಕರ್ನಾಟಕದಲ್ಲಿ ಹೆಚ್ಚಾಗಿ ಕಾಳು ಮೆಣಸನ್ನು ಕಾಫಿ ಪ್ಲಾಂಟೇಷನ್‌ಗಳಲ್ಲಿ ಬೆಳೆಯಲಾಗುತ್ತದೆ. ಮರವಿದ್ದರೆ ಮಾತ್ರ ಕಾಫಿ ಬೆಳೆಯಲು ಸಾಧ್ಯ. ಆದ್ದರಿಂದಲೇ ಇಡೀ ವಿಶ್ವದಲ್ಲಿ ಭಾರತದ ಕಾಳು ಮೆಣಸಿಗೆ ಉತ್ತಮ ಬೆಲೆ ಸಿಗುತ್ತಿದೆ. ಹೀಗೆ ಮರವಿದ್ದಲ್ಲಿ ಪ್ರತಿ ಮರಕ್ಕೆ ಮೆಣಸಿನ ಬಳ್ಳಿ ಹಬ್ಬಿಸುತ್ತಾ ಬರುವುದು ರೂಢಿಯಾಗಿದೆ.

ಕಾಫಿ ಬೆಲೆ ಕುಸಿಯುತ್ತಾ ಇದ್ದಂತೆ, ತೋಟಗಳನ್ನು ನಿರ್ವಹಿಸುವುದು ದುಸ್ತರವಾದ್ದರಿಂದ ಮೆಣಸು ರೈತರಿಗೆ ಪೂರಕ ಆದಾಯ ತಂದುಕೊಡುವ ಬೆಳೆಯಾಗಿ ಪರಿವರ್ತನೆಯಾಯಿತು. ರೋಬಾಸ್ಟ ಕಾಫಿ ಬೆಳೆಯುವ ತೋಟದಲ್ಲಿ ಎಕರೆಗೆ 100 ಕಾಳು ಮೆಣಸು ಬಳ್ಳಿ ಹಾಕಬಹುದು. ಆದರೆ ಅರೇಬಿಕಾ ತೋಟದಲ್ಲಿ ಎಕರೆಗೆ 150 ರಿಂದ 200 ಬಳ್ಳಿ ಹಬ್ಬಿಸಬಹುದಾಗಿದೆ.

ಭಾರತದಲ್ಲಿ 2010 ರ ನಂತರ ಕಾಳು ಮೆಣಸಿಗೆ ಒಳ್ಳೆಯ ದರ ಸಿಗಲಾರಂಭಿಸಿತು. 2012–13ರಲ್ಲಿ 14 ರಲ್ಲಿ ಕೆ.ಜಿ ಗೆ 700 ಸಿಕ್ಕಿತ್ತು. ಆಗ ತೋಟ ಮತ್ತು ಕೃಷಿ ಉಳಿಸಿಕೊಳ್ಳಲು ಮೆಣಸು ಸಹಕಾರಿಯಾಯಿತು. ಮೆಣಸು ಕೃಷಿಗೆ ಗಮನ ನೀಡುವವರಿಗೆ  ಆಗ ಈ ವಹಿವಾಟಿನಲ್ಲಿನ ಲಾಭ ಮನವರಿಕೆ ಆಗತೊಡಗಿತು. ಒಟ್ಟಾರೆ ಭಾರತದಲ್ಲಿ ಮೂರು ಲಕ್ಷ ಹೆಕ್ಟೇರ್‌ನಲ್ಲಿ ಕಾಫಿ ಬೆಳೆಯಲಾಗುತ್ತದೆ. ಇಡೀ ವಿಶ್ವಕ್ಕೆ ಹೋಲಿಸಿದರೆ ಭಾರತದಲ್ಲಿ ಸಾಕಷ್ಟು ಕಾಳು ಮೆಣಸು ಉತ್ಪಾದನೆ ಮಾಡಲಾಗುತ್ತಿದೆ. ಅದರಲ್ಲೂ ಕರ್ನಾಟಕ ದೊಡ್ಡ ಉತ್ಪಾದಕ ರಾಜ್ಯವಾಗಿದೆ. ಅದರಲ್ಲೂ ಮೂಡಿಗೆರೆಯಲ್ಲಿ ಒಳ್ಳೆಯ ಇಳುವರಿ ಇದೆ. ಸಕಲೇಶಪುರ, ಕೊಡಗು ಭಾಗದಲ್ಲಿಯೂ ಒಳ್ಳೆಯ ಬೆಳೆ ಇದೆ. ಸದ್ಯ ಕೊಡಗು, ಹಾಸನ ಮತ್ತು ಚಿಕ್ಕಮಗಳೂರಿನಲ್ಲಿ ವಿಶ್ವದರ್ಜೆಯ ಕಾಳುಮೆಣಸು ಉತ್ಪಾದಿಸಲಾಗುತ್ತಿದೆ.

ಪ್ರದೇಶವಾರು ಮತ್ತು ಉತ್ಪಾದನೆ ಪ್ರಮಾಣದಲ್ಲಿ ಕರ್ನಾಟಕದ ಪಾಲೇ ಶೇ 75ರಷ್ಟು. ಇದರ  ಜತೆಗೆ ಬೇರೆ ಜಿಲ್ಲೆಗಳಾದ ಉತ್ತರ ಕನ್ನಡ ಜಿಲ್ಲೆಯ ಶಿರಸಿ, ದಕ್ಷಿಣ ಕನ್ನಡದ ಪುತ್ತೂರು, ದಾವಣಗೆರೆ ಜಿಲ್ಲೆಯ ಚೆನ್ನಗಿರಿ, ಹೊಳಲ್ಕೆರೆ ಕೆಲವು ಭಾಗದಲ್ಲಿ ಸಣ್ಣ ಪ್ರಮಾಣದಲ್ಲಿ ಈಗ ಮೆಣಸು ಬೆಳೆಯಲಾಗುತ್ತಿದೆ. ಶಿವಮೊಗ್ಗ ಜಿಲ್ಲೆಯ ಭಾಗದಲ್ಲಿ ಅಡಿಕೆ ಜತೆ ಉಪಬೆಳೆಯಾಗಿ ಮೆಣಸು ಬೆಳೆಸುತ್ತಿದ್ದಾರೆ. ಹೀಗೆ ಎಲ್ಲೆಲ್ಲಿ ನೀರಿನ ಲಭ್ಯತೆ ಇದೆಯೊ ಅಲ್ಲಿ ಮೆಣಸು ಕಾಣುತ್ತಿದೆ.

ಹೊಸ ಹೊಸ ಜಾಗದಲ್ಲಿ ಬೆಳೆ

ಯಾವ ಬೆಳೆಗೆ ಹೆಚ್ಚು ಬೆಲೆ ಇದೆ ಆ ಬೆಳೆ ಕಡೆಗೆ ರೈತರು ಆಕರ್ಷಿತರಾಗುವುದು ಸರ್ವೇ ಸಾಮಾನ್ಯ. ಇದು ಮೆಣಸನ್ನೂ ಹೊರತುಪಡಿಸಿಲ್ಲ. ದಾವಣಗೆರೆ,ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ನೆರಳಿನ ಕುಮಟಾ, ಯೆಲ್ಲಾಪುರ, ಶಿರಸಿಗಳಲ್ಲಿ ಮರಗಳ ಆಸರೆ ಇರುವ ತೋಟಗಳಲ್ಲಿ ಕಾಳುಮೆಣಸು ಬೆಳೆಯಲಾಗುತ್ತಿದೆ. ಸಾಗರ, ತೀರ್ಥಹಳ್ಳಿ ತಾಲ್ಲೂಕುಗಳ ಕೆಲವು ಭಾಗಗಳಲ್ಲಿ ಏಕಬೆಳೆಯಾಗಿಯೂ ರೈತರು ಪ್ರಯೋಗಕ್ಕೆ ಮುಂದಾಗಿದ್ದಾರೆ.

ಸರ್ಕಾರದ ಕ್ರಮ

ಕೇಂದ್ರ ಸರ್ಕಾರದ ವಾಣಿಜ್ಯ ಸಚಿವಾಲಯ ಹಾಗೂ ಸಾಂಬಾರ ಮಂಡಳಿ ಈ ಬೆಳೆಯ ಉತ್ತೇಜನಕ್ಕೆ ಕೆಲಸ ಮಾಡುತ್ತಿದೆ. ಕರ್ನಾಟದಲ್ಲಿ ಸಾಂಬಾರ ಮಂಡಳಿಯಿಂದ ಇನ್ನಷ್ಟು ಕೆಲಸವಾಗಬೇಕಿದೆ. ಅಲ್ಲದೆ ಬೆಳೆ ಕುರಿತು ಸಂಶೋಧನೆಯೂ ಆಗಬೇಕಿದೆ. ವಿಧ ವಿಧ ತಳಿ ಬೆಳೆಸಬೇಕಾಗಿದೆ. ಹಳೆ ಕಾಲದಿಂದಲೂ ಪಣಿಯೂರು ತಳಿಯೊಂದನ್ನೇ ರೈತರು ನೆಚ್ಚಿಕೊಂಡಿದ್ದರು. ರಾಜ್ಯದ ಮೂರು ಜಿಲ್ಲೆಯಲ್ಲಿ ಶೇ 95 ರಷ್ಟು ಈ ಬೆಳೆ ಇದೆ. ಇತ್ತೀಚೆಗೆ ಇದಕ್ಕೆ ರೋಗದ ಹಾವಳಿ ಹೆಚ್ಚುತ್ತಿದೆ. ಇದರಿಂದ ರೋಗ ನಿರೋಧಕ ಶಕ್ತಿ ಇಲ್ಲವಾಗಿದೆ. ಆದ್ದರಿಂದ ಹವಾಗುಣ ಮತ್ತು ಭೌಗೋಳಿಕ ಮೇಲ್ಮೈ ಲಕ್ಷಣಕ್ಕೆ ಪೂರಕವಾದ ಬೆಳೆ ಹಾಕಬೇಕಾಗಿದೆ ಎನ್ನತ್ತಾರೆ ಕೃಷಿಕರೊಬ್ಬರು.

ಕರ್ನಾಟಕ ಸರ್ಕಾರವು ತೋಟಗಾರಿಕೆ ಇಲಾಖೆ ಮೂಲಕ  ಕಾಫಿ ತೋಟಗಳಲ್ಲಿ  ಮರಕ್ಕೆ ಮೆಣಸು ಹಬ್ಬಿಸಿದರೆ ಇದಕ್ಕೆ ಹನಿ ನೀರಾವರಿ ಅಳವಡಿಸಿದರೆ ಸಹಾಯಧನ ನೀಡುತ್ತದೆ. 10 ಹೆಕ್ಟೇರ್‌ವರೆಗೆ ಸಹಾಯಧನ ನೀಡಲಾಗು‌ತ್ತದೆ.  ಆದರೆ ಇದರಲ್ಲಿ ದೊಡ್ಡ ರೈತರಿಗೆ ಅವಕಾಶವಿಲ್ಲ.

ರೋಗ ನಿರ್ವಹಣೆ

‘ಕಾಳು ಮೆಣಸನ್ನು ಹಲವು ರೋಗಗಳು ಕಾಡುತ್ತವೆ. ಇದರಿಂದ ಸಾಕಷ್ಟು ಬೆಳೆ ಪ್ರತಿ ವರ್ಷ ನಾಶವಾಗುತ್ತಿದೆ. ಸಾಂಬಾರ ಮಂಡಳಿಯು ರೋಗ ತಡೆಗೆ ಸಾಕಷ್ಟು ಕ್ರಮ ಕೈಗೊಳ್ಳುತ್ತಿದೆ’ ಎನ್ನುತ್ತಾರೆ ಸೈಂಟಿಫಿಕ್‌ ಆಗ್ರೊ ಟೆಕ್ನಾಲಜೀಸ್‌ ಸಲಹೆಗಾರ ಸುನಿಲ್‌ ತಮಗಾಲೆ.

ದೇಶದಾದ್ಯಂತ ಬೆಲೆ ಏರಿಳಿತ‌

ಕಾಳು ಮೆಣಸಿನ ಬೆಲೆ ದೇಶದಾದ್ಯಂತ 2017 ರ ಜನವರಿಯಿಂದ ಸೆಪ್ಟೆಂಬರ್‌ವರೆಗೆ ಈ ಹಿಂದಿನ ವರ್ಷಕ್ಕೆ ಹೋಲಿಸಿದರೆ ಇಳಿಕೆಯಾಗ
ತೊಡಗಿತ್ತು. 2016 ರಲ್ಲಿ ಸರಾಸರಿ ಬೆಲೆ  ಕೆ.ಜಿಗೆ ₹597 ಇತ್ತು. ಆದರೆ 2017ರಲ್ಲಿ (ಜನವರಿಯಿಂದ ಸೆಪ್ಟೆಂಬರ್ ವರೆಗೆ) ಇದು ₹560ಕ್ಕೆ ಇಳಿದಿತ್ತು. ಈ ಬೆಲೆ ನವೆಂಬರ್‌ನಲ್ಲಿ ಮತ್ತಷ್ಟು ಕಡಿಮೆಯಾಗಿ ₹410
ಆಗಿತ್ತು. ಮಾರುಕಟ್ಟೆಯಲ್ಲಿ ಇಷ್ಟೆಲ್ಲ ಬೆಳವಣಿಗೆಗಳು ಆಗುತ್ತಿದ್ದರೂ ರೈತರು ಮಾತ್ರ ಇದರ ಬಗ್ಗೆ ತಲೆಕೆಡಿಸಿಕೊಳ್ಳದೆ ಕಾಳು ಮೆಣಸು ಕೃಷಿಯಲ್ಲಿ ತೊಡಗಿದ್ದರು. ಸದ್ಯ ₹370 ರಿಂದ ₹400 ರಷ್ಟಿದೆ.

***
ಪ್ರತಿ ಕಾಳಿನ ತೂಕ ಹೆಚ್ಚು

ರಾಜ್ಯದ ಪ್ರತಿಯೊಬ್ಬರ ರೈತರ ತೋಟದ ಮಣ್ಣಿನಲ್ಲಿ ಒಳ್ಳೆಯ ಸಾವಯವ ಅಂಶ ಇದೆ. ಬಹಳ ರೈತರು ಪಶುಸಂಗೋಪನೆ ಮಾಡುತ್ತಾರೆ. ಒಂದೆರಡಾದರೂ ಹಸುಗಳನ್ನು ಸಾಕುತ್ತಾರೆ. ಅವುಗಳಿಂದ ಸಗಣಿ ಉತ್ಪತ್ತಿಯಾಗುತ್ತಿದೆ. ಮೆಣಸು ಬಳ್ಳಿಗೆ ಸಾವಯವ ಗೊಬ್ಬರ ಬಳಸುವುದರಿಂದ ಕಾಳಿನ ಗುಣಮಟ್ಟ ಚೆನ್ನಾಗಿ ಬರುತ್ತಿದೆ. ಇಡೀ ವಿಶ್ವಕ್ಕೆ ಸ್ಪರ್ಧೆ ನೀಡುವ ಗುಣಮಟ್ಟ ಭಾರತದ್ದು. ಅಗತ್ಯ ಸಂದರ್ಭದಲ್ಲಿ ಮಾತ್ರವೇ ಔಷಧ ಸಿಂಪಡಿಸುವುದರಿಂದ ಗುಣಮಟ್ಟ ಕಾಪಾಡಬಹುದು. ಸಾಕಷ್ಟು ಕೃಷಿಕರು ನೀರಾವರಿ ಸೌಲಭ್ಯ ಮಾಡಿಕೊಂಡಿದ್ದಾರೆ.


ಸುನಿಲ್‌ ತಮಗಾಲೆ‌
(ಶ್ರೀಲಂಕಾದಲ್ಲಿ ಇತ್ತೀಚೆಗೆ ನಡೆದ ‘ಇಂಟರ್‌ ನ್ಯಾಷನಲ್‌ ಪೆಪ್ಪರ್‌ ಕಮ್ಯೂನಿಟಿ’ ವಿಚಾರಸಂಕಿರಣದಲ್ಲಿ ಭಾರತದ ಕಾಳುಮೆಣಸಿನ ಬಗ್ಗೆ ವಿಷಯ ಮಂಡಿಸಿದವರು)
***
ಉಪ ಬೆಳೆಯಾಗಿ ಒಳ್ಳೆಯ ಆದಾಯ

ಕಾಳುಮೆಣಸು ಕಳೆದ ವರ್ಷ (2016) ಬೆಳೆ ಕಡಿಮೆ ಇತ್ತು. ಈ ಬಾರಿ ಚೆನ್ನಾಗಿದೆ. ಉಪ ಬೆಳೆಯಾಗಿ ರೈತರಿಗೆ ಒಳ್ಳೆಯ ಆದಾಯ ತಂದುಕೊಟ್ಟಿದೆ. ಆಪದ್ಭಾಂದವನ ರೀತಿ ಬಡ ರೈತರಿಗೆ ನೆರವಾಗಿದೆ. ಆದರೆ ರೋಗ ಬರದಂತೆ ನೋಡಿಕೊಳ್ಳುವುದೇ ಸವಾಲು. ಇದರ ಬೆಲೆಯಲ್ಲಿ ಸಣ್ಣ ಏರಿಳಿತಗಳಾಗುತ್ತಲೇ ಇರುತ್ತವೆ. ಆದರೆ ಬೆಲೆ ಪಾತಾಳಕ್ಕೆ ಕುಸಿದಿಲ್ಲ. ಮೆಣಸಿಗೆ ಉತ್ತಮ ಬೆಲೆ ಸಿಗುವಲ್ಲಿ ಕೇಂದ್ರ ಸರ್ಕಾರ ಮತ್ತು ಕರ್ನಾಟಕ ಬೆಳೆಗಾರರ ಸಂಘದ ಪಾತ್ರವಿದೆ. ಮಲೆನಾಡಿನ ಹೊಸ ಹೊಸ ಪ್ರದೇಶಗಳಲ್ಲಿ ಈ ಬೆಳೆ ಕೃಷಿಕರು ಹಾಕುತ್ತಿದ್ದಾರೆ.

ಕೆ.ಟಿ.ವೆಂಟೇಶ್‌,
ಕಾಳು ಮೆಣಸು ಬೆಳೆಗಾರರು,
ಬಾಳೆಹೊನ್ನೂರು, ಚಿಕ್ಕಮಗಳೂರು ಜಿಲ್ಲೆ ‌
***
45%
ಮೆಣಸು ಉತ್ಪಾದನೆಯಲ್ಲಿ ಕರ್ನಾಟಕದ ಪಾಲು

25%
ಇಡೀ ದೇಶದಲ್ಲೇ ಕೊಡಗಿನಲ್ಲಿ ಬೆಳೆಯುವ ಮೆಣಸಿನ ಪ್ರಮಾಣ

100 ರಿಂದ 150 ಕೆ.ಜಿ
ಕೊಡಗಿನಲ್ಲಿ ಒಂದು ಎಕರೆಗೆ ಬೆಳೆಯುವ ಮೆಣಸಿನ ಪ್ರಮಾಣ

3.50 ಲಕ್ಷ  ಟನ್‌
ಜಾಗತಿಕ ಮಟ್ಟದಲ್ಲಿ ಕರಿಮೆಣಸಿಗೆ ಇರುವ ಬೇಡಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT