ಬಜೆಟ್‌: ಶ್ರೀಸಾಮಾನ್ಯನ ನಿರೀಕ್ಷೆಗಳೇನು?

7

ಬಜೆಟ್‌: ಶ್ರೀಸಾಮಾನ್ಯನ ನಿರೀಕ್ಷೆಗಳೇನು?

Published:
Updated:
ಬಜೆಟ್‌: ಶ್ರೀಸಾಮಾನ್ಯನ ನಿರೀಕ್ಷೆಗಳೇನು?

ತಪತಿ ಘೋಷ್‌/ವಿಜಯ್‌ ಭರೀಚ್‌

ಕೇಂದ್ರ ಸರ್ಕಾರ ಈ ಬಾರಿ ಮಂಡಿಸಲಿರುವ ಬಜೆಟ್‌, ಈ ಸರ್ಕಾದ ಕೊನೆಯ ಪೂರ್ಣಾವಧಿ ಬಜೆಟ್‌ ಆಗಲಿದೆ. ನೋಟು ರದ್ದತಿ ಹಾಗೂ ಜಿಎಸ್‌ಟಿ ಜಾರಿಯಿಂದಾಗಿ ಸ್ವಲ್ಪ ಕಾಲ ಹಿಂಜರಿಕೆ ಕಂಡಿದ್ದ ಅರ್ಥ ವ್ಯವಸ್ಥೆ ಈಗ ಮತ್ತೆ ಸುಧಾರಿಸುತ್ತಿರುವುದರಿಂದ, ಈ ಬಾರಿಯ ಬಜೆಟ್‌ನಲ್ಲಿ ಸರ್ಕಾರ ‘ಜನಪ್ರಿಯ’ ಯೋಜನೆಗಳನ್ನು ಘೋಷಿಸುವ ಸಾಧ್ಯತೆ ಕಡಿಮೆ. ಬದಲಿಗೆ, ಮಧ್ಯಮ ಮತ್ತು ಕೆಳವರ್ಗದವರನ್ನು ಗಮನದಲ್ಲಿಟ್ಟು, ಆರ್ಥಿಕ ಪ್ರಗತಿಗೆ ವೇಗ ನೀಡಬಲ್ಲ, ಮೂಲಸೌಲಭ್ಯ, ಆರೋಗ್ಯ, ಪ್ರವಾಸೋದ್ಯಮ ಮುಂತಾದ ಕ್ಷೇತ್ರಗಳಿಗೆ ಪ್ರೋತ್ಸಾಹಕ ಯೋಜನೆಗಳನ್ನು ಘೋಷಿಸುವ ಸಾಧ್ಯತೆ ಇದೆ. ಅದೇನೇ ಇದ್ದರೂ, ಆದಾಯ ತೆರಿಗೆ ಪಾವತಿಸುವವರು ಪ್ರತಿ ವರ್ಷದಂತೆ ಈ ವರ್ಷವೂ ಸರ್ಕಾರದಿಂದ ಒಂದಿಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ.

ಕಳೆದ ಬಾರಿಯ ಬಜೆಟ್‌ನಲ್ಲಿ ತೆರಿಗೆ ಹಂತಗಳಲ್ಲಿ ಬದಲಾವಣೆ ಮಾಡಿದ್ದ ಸರ್ಕಾರ, ಮೊದಲ ಹಂತದ (₹ 2.5 ಲಕ್ಷದಿಂದ ₹5 ಲಕ್ಷ) ತೆರಿಗೆಯನ್ನು ಶೇ 5ಕ್ಕೆ ಇಳಿಸಿತ್ತು. ತೆರಿಗೆದಾರರ ವ್ಯಾಪ್ತಿಯನ್ನು ವಿಸ್ತರಿಸುವುದು ಈ ಬದಲಾವಣೆಯ ಹಿಂದಿನ ಉದ್ದೇಶವಾಗಿತ್ತು. ಈ ಬಾರಿ ಈ ಹಂತವನ್ನು ಇನ್ನಷ್ಟು ಇಳಿಸುವ ಸಾಧ್ಯತೆಯಂತೂ ಇಲ್ಲ. ಮಧ್ಯಮ ಹಾಗೂ ಕೆಳವರ್ಗದವರ ನಿರೀಕ್ಷೆಗಳನ್ನು ಈಡೇರಿಸಲು ಈ ಬಾರಿ ತೆರಿಗೆ ಹಂತಗಳಲ್ಲಿ ಸರ್ಕಾರ ಯಾವ ರೀತಿಯ ಬದಲಾವಣೆ ಮಾಡಲಿದೆ ಎಂಬುದನ್ನು ಕಾಯ್ದು ನೋಡಬೇಕಾಗಿದೆ.

ಅವಧಿ ಠೇವಣಿ, ಪಿಪಿಎಫ್‌, ಆರೋಗ್ಯ ವೆಚ್ಚ, ಗೃಹಸಾಲ ಪಾವತಿ, ಶಾಲಾ ಶುಲ್ಕ ಮುಂತಾಗಿ ‘80ಸಿ’ ಅಡಿ ನೀಡುವ ತೆರಿಗೆ ವಿನಾಯಿತಿ ಪ್ರಮಾಣವನ್ನು (ಈಗಿರುವ ಗರಿಷ್ಠ ₹ 1.5ಲಕ್ಷದಿಂದ) ಹೆಚ್ಚಿಸುವುದು ಅಗತ್ಯ. ಇದನ್ನು ಕನಿಷ್ಠ

₹ 2.5ಲಕ್ಷಕ್ಕೆ ಹೆಚ್ಚಿಸಿದರೆ ಹೂಡಿಕೆಯ ಕ್ಷೇತ್ರವನ್ನು ವಿಸ್ತರಿಸಿದಂತಾಗುತ್ತದೆ. ವೆಚ್ಚಗಳಿಗೆ ಸಂಬಂಧಿಸಿದಂತೆ ನೀಡುವ ವಿನಾಯಿತಿಗಳಿಗೆ ಪ್ರತ್ಯೇಕವಾದ ಮಿತಿಯನ್ನು ನಿರ್ಧರಿಸಬೇಕು.

ಸ್ವ ಶಿಕ್ಷಣ

ಉದ್ಯೋಗದಲ್ಲಿರುವವರಿಗೆ ಕಾಲಕ್ಕೆ ತಕ್ಕಂತೆ ತಮ್ಮ ಕೌಶಲವನ್ನು ವೃದ್ಧಿಸಿಕೊಳ್ಳಲು ವಿಶೇಷ ಶಿಕ್ಷಣ ಅಥವಾ ತರಬೇತಿ ಪಡೆಯುವುದು ಅಗತ್ಯವೆನಿಸಬಹುದು. ಇಂಥ ತರಬೇತಿ ಅಥವಾ ಶಿಕ್ಷಣಕ್ಕೆ ಬರುವ ವೆಚ್ಚಗಳಿಗೆ ಸದ್ಯ ಯಾವುದೇ ತೆರಿಗೆ ವಿನಾಯಿತಿ ಇಲ್ಲ. ಆದ್ದರಿಂದ ಕೌಶಲ ವೃದ್ಧಿಗೆ ಮಾಡುವ ವೆಚ್ಚಕ್ಕೆ ಪ್ರತ್ಯೇಕ ವಿನಾಯಿತಿಯನ್ನು ನಿಗದಿಪಡಿಸುವುದು ಅಗತ್ಯ.

ಆರೋಗ್ಯಕ್ಕೆ

ಆರೋಗ್ಯ ವಿಮಾ ಕಂತು ಪಾವತಿಸುವವರಿಗೆ (ಹಿರಿಯ ನಾಗರಿಕರನ್ನು ಬಿಟ್ಟು) ಅಥವಾ ಸಮಗ್ರ ಆರೋಗ್ಯ ತಪಾಸಣೆ ಮಾಡಿಸುವವರಿಗೆ ಗರಿಷ್ಠ ₹ 25,000 ದವರೆಗೆ ತೆರಿಗೆ ವಿನಾಯಿತಿ ಇದೆ. ಆದರೆ ಈಚೆಗೆ ವೈದ್ಯಕೀಯ ವೆಚ್ಚಗಳು ದುಬಾರಿ ಆಗುತ್ತಿರುವುದರಿಂದ, ಈ ಪ್ರಮಾಣವನ್ನು ಕನಿಷ್ಠ ₹ 50,000ಕ್ಕೆ ಹೆಚ್ಚಿಸಬೇಕು ಎಂಬುದು ತೆರಿಗೆದಾರರ ನಿರೀಕ್ಷೆ.

ಪಿಂಚಣಿ ಯೋಜನೆಗೆ ಒತ್ತು

ಸರ್ಕಾರದ ಪಿಂಚಣಿ ಯೋಜನೆಯನ್ನು ಸರ್ಕಾರ ಭವಿಷ್ಯನಿಧಿಗೆ ಪರ್ಯಾಯ ಎಂದು ಹೇಳುತ್ತಿದೆ. ಇದು ಹೆಚ್ಚು ಹೆಚ್ಚು ಜನಪ್ರಿಯವಾಗಬೇಕಾದರೆ ಅದಕ್ಕೆ ಭವಿಷ್ಯನಿಧಿ ಅಥವಾ ಪಿಪಿಎಫ್‌ಗೆ ಸರಿಸಮನಾದ ಸ್ಥಾನ ನೀಡಬೇಕು. ಅಂದರೆ, ಈ ಯೋಜನೆಯಲ್ಲಿ ಹೂಡಿಕೆ, ಬಡ್ಡಿ ಮತ್ತು ಹಿಂಪಡೆಯುವಾಗ ಬರುವ ಆದಾಯ ಹೀಗೆ ಮೂರೂ ಕಡೆ ತೆರಿಗೆ ವಿನಾಯಿತಿ ಕೊಡಬೇಕು. ಪ್ರಸಕ್ತ ಈ ಯೋಜನೆಯಲ್ಲಿ ಮಾಡಿರುವ ಹೂಡಿಕೆಯನ್ನು ಹಿಂಪಡೆಯುವಾಗ ಬರುವ ಹಣಕ್ಕೆ ಬಡ್ಡಿ ವಿಧಿಸಲಾಗುತ್ತಿದೆ. ಆದರೆ ಭವಿಷ್ಯನಿಧಿ ಹಾಗೂ ಪಿಪಿಎಫ್‌ಗಳಿಗೆ ಮೂರೂ ಕಡೆ ತೆರಿಗೆ ವಿನಾಯಿತಿ ಇದೆ.

ಗೃಹ ನಿರ್ಮಾಣ ಕ್ಷೇತ್ರಕ್ಕೆ ಉತ್ತೇಜನ

₹ 50ಲಕ್ಷ ಸಾಲ ಪಡೆದು ಮನೆ ಖರೀದಿಸುವ ವ್ಯಕ್ತಿಯೊಬ್ಬ, ಆ ಸಾಲಕ್ಕೆ ಆರಂಭದ ಕೆಲವು ವರ್ಷಗಳಲ್ಲಿ ವಾರ್ಷಿಕ ₹ 3ಲಕ್ಷ ಬಡ್ಡಿ ಪಾವತಿಸಬೇಕಾಗುತ್ತದೆ (ಸಾಲ ಮರುಪಾವತಿ ಅವಧಿ 20ವರ್ಷ ಎಂದಿಟ್ಟುಕೊಂಡರೆ). ಹೀಗಿರುವಾಗ ಪ್ರಸಕ್ತ ಗೃಹಸಾಲ ಕಂತಿಗೆ ನೀಡಲಾಗುತ್ತಿರುವ ವಾರ್ಷಿಕ ಗರಿಷ್ಠ ₹ 2ಲಕ್ಷ ತೆರಿಗೆ ವಿನಾಯಿತಿ ಏನೇನೂ ಸಾಲದು. ಅದನ್ನು ಕನಿಷ್ಠ ₹ 3ಲಕ್ಷಕ್ಕೆ ಹೆಚ್ಚಿಸಬೇಕು.

ಬಾಂಡ್‌ ತೆರಿಗೆ ವಿನಾಯಿತಿ ಅಗತ್ಯ

ಕೇಂದ್ರ ಸರ್ಕಾರ ‘ಮೇಕ್‌ ಇನ್‌ ಇಂಡಿಯಾ’ ಘೋಷಣೆ ಮಾಡುವುದರ ಜೊತೆಗೆ ಮೂಲ ಸೌಲಭ್ಯಗಳ ಹೆಚ್ಚಳಕ್ಕೂ ಒತ್ತು ನೀಡುತ್ತಿದೆ. ಈ ಯೋಜನೆಗಳಿಗೆ ಇನ್ನಷ್ಟು ಉತ್ತೇಜನ ನೀಡಬೇಕಾದರೆ ಈ ಕ್ಷೇತ್ರಗಳಲ್ಲಿ ಹೂಡಿಕೆಗೆ ರೂಪಿಸಿರುವ ಬಾಂಡ್‌ಗಳಿಗೆ ತೆರಿಗೆ ವಿನಾಯಿತಿ ನೀಡುವುದು ಅಗತ್ಯ. ಇದಕ್ಕೆ ₹ 50,000 ಮಿತಿ ಇದ್ದರೆ ಅನುಕೂಲ.

ಸರ್ಕಾರ ಅರ್ಥವ್ಯವಸ್ಥೆಗೆ ಉತ್ತೇಜನ ನೀಡುವುದರ ಜೊತೆಗೆ ತೆರಿಗೆ ವಿನಾಯಿತಿಯ ಅನಿವಾರ್ಯತೆ ಇರುವವರ ಅನುಕೂಲಗಳತ್ತಲೂ ಗಮನ ಹರಿಸುವುದು ಅಗತ್ಯವಾಗಿದೆ. ಮುಂದಿನ ಬಜೆಟ್‌ನಿಂದ ತೆರಿಗೆದಾರರು ನಿರೀಕ್ಷಿಸುವುದು ಇಂಥ ಕ್ರಮಗಳನ್ನೇ.

(ಲೇಖಕರು ಡೆಲಾಯಿಟ್‌ ಇಂಡಿಯಾದ ಪಾಲುದಾರ - ವ್ಯವಸ್ಥಾಪಕ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry