ಹೆಣ್ಣೇ ಹೊನ್ನು ಎಂದವರು...

7

ಹೆಣ್ಣೇ ಹೊನ್ನು ಎಂದವರು...

Published:
Updated:
ಹೆಣ್ಣೇ ಹೊನ್ನು ಎಂದವರು...

ಹೆಣ್ಣು ಮಗುವೇ ಬೇಕು ಎಂದು ಹಂಬಲಿಸಿ ಮೊದಲ ಮಗು ಹಡೆದವರು, ಎರಡನೇ ಮಗುವೂ ಹೆಣ್ಣೇ ಆದಾಗಲೂ ಹಬ್ಬದಂತೆ ಆಚರಿಸುವುದಿದೆ. ಗಂಡಾದರೂ, ಹೆಣ್ಣಾದರೂ ಮಕ್ಕಳು ನಮ್ಮವೇ ಅಲ್ವೇ ಅದರಲ್ಲೇಕೆ ಭೇದ ಭಾವ ಎಂಬುದು ಅವರ ಪ್ರಶ್ನೆ. ಮೊದಲನೆಯವನು ಮಗ, ಅವನಿಗೆ ಬಾಂಧವ್ಯಗಳ ಬೆಲೆ ತ್ತಾಗಬೇಕಾದರೆ ತಂಗಿ ಬೇಕು ಹಾಗಾಗಿ ಎರಡನೆಯದು ಹೆಣ್ಣಾಗಲಪ್ಪಾ ಎಂದು ಹೆರಿಗೆಯ ಕ್ಷಣದವರೆಗೂ ಪ್ರಾರ್ಥಿಸಿದವರು ಅದೂ ಗಂಡಾದಾಗ ಕಣ್ಣೀರು ಹಾಕುವುದಿದೆ. ಅಂತಹ ಕೆಲವು ದಂಪತಿ ಇಲ್ಲಿ ಮಾತನಾಡಿದ್ದಾರೆ

ಇಬ್ಬರಿಗೂ ಹೆಣ್ಣೇ ಬೇಕಿತ್ತು... ಈಗ ಇಬ್ಬರಿದ್ದಾರೆ

ನನಗೆ ಅಕ್ಕ ತಂಗಿ ಇಲ್ಲ. ಅವರ ಬೆಲೆ ಏನು ಎಂಬುದು ನನ್ನಂಥವರಿಗೇ ಗೊತ್ತಾಗಬೇಕು. ಸಣ್ಣ ವಯಸ್ಸಿನಿಂದಲೂ ಸಹೋದರರ ಜತೆ ಬೆರೆಯುವುದಕ್ಕಿಂತ ಅಮ್ಮನೊಂದಿಗೇ ಬೆರೆತೆ. ದೊಡ್ಡವಳಾದ ಮೇಲೂ, ಮದುವೆಯಾದ ಮೇಲೂ ಅಮ್ಮನೇ ನನಗೆ ಆಪ್ತ ಸಂಗಾತಿ. ನನ್ನ ಅದೃಷ್ಟಕ್ಕೆ ನನಗೆ ಇಬ್ಬರೂ ಹೆಣ್ಣುಮಕ್ಕಳೇ. ನನಗಷ್ಟೇ ಅಲ್ಲ ನನ್ನ ಪತಿ ವೆಂಕಟೇಶ್‌ ಕೂಡಾ ಹೆಣ್ಣುಮಕ್ಕಳೇ ಆಗಲಿ ಎಂದು ಪ್ರಾರ್ಥಿಸುತ್ತಿದ್ದರು. ನನ್ನ ಅತ್ತೆ, ಇಬ್ಬರೂ ಹೆಣ್ಮಕ್ಕಳೇ ಆದರು ಎಂದು ಬೇಸರಿಸಿಕೊಳ್ಳಲಿಲ್ಲ. ಮಾವನಿಗೆ ಈಗಲೂ ‘ಒಂದು ಗಂಡು ಮಗು ಇದಿದ್ದರೆ...’ ಎಂದು ಅನಿಸುವುದುಂಟು. ಆದರೆ ನನಗಾಗಲಿ ನನ್ನ ಪತಿಗಾಗಲಿ ಒಂದು ಕ್ಷಣವೂ ಗಂಡು ಮಗು ಇಲ್ಲ ಎಂಬ ಕೊರತೆ ಕಾಡಲೇ ಇಲ್ಲ.

ಹೆಣ್ಣುಮಕ್ಕಳು ತಂದೆ ತಾಯಿಗೆ, ಸಂಬಂಧಗಳಿಗೆ ಕೊಡುವ ಮೌಲ್ಯ ಗಂಡು ಮಕ್ಕಳು ಕೊಡುವುದು ಕಡಿಮೆ ಅಥವಾ ಅವರ ಆಯ್ಕೆಗಳು ಬೇರೆಯೇ ಇರುತ್ತವೆ. ತಮಗೆ ಮದುವೆಯಾಗಿ ತಮ್ಮದೇ ಸಂಸಾರ ಇದ್ದರೂ ಹೆಣ್ಣು ಮಕ್ಕಳು ವಯಸ್ಸಾದ ತಮ್ಮ ತಂದೆ ತಾಯಿಗೆ ಕೊಡುವ ಆದ್ಯತೆ ಕಡಿಮೆಯಾಗುವುದಿಲ್ಲ. ಅವರ ವಂಶವಾಹಿಯಲ್ಲೇ ಈ ಕಾಳಜಿ ಬರುತ್ತದೆ ಎಂದು ನನಗೆ ಅನಿಸುವುದಿದೆ. ನನ್ನ ಮಕ್ಕಳಾದ ಪ್ರಕೃತಿ ಮತ್ತು ಪ್ರತೀಕ್ಷಾ ಅವರನ್ನು ಗಂಡು ಮಕ್ಕಳು ಎಂದುಕೊಂಡು ನಾವು ಬೆಳೆಸುವುದಿಲ್ಲ. ಹೆಣ್ಣು ಮಕ್ಕಳು ಎಂದುಕೊಂಡೇ ಬೆಳೆಸುತ್ತೇವೆ. ಅವರು ನಮ್ಮ ಪಾಲಿನ ಹೆಮ್ಮೆ.

–ವಿದ್ಯಾ, ಜೆ.ಪಿ.ನಗರ‌

***

ಬದುಕಿಗೆ ಪರಿಪೂರ್ಣತೆ ನೀಡಿದಳು ಶಾರದೆ

ನಾನು ಒಂದು ಹೆಣ್ಣು ಮಗುವಿನ ತಾಯಿ. ಸಿಸ್ಕೊ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ನನ್ನ ಪತಿಯೂ ಎಂಜಿನಿಯರ್‌. ನಾನು ಎರಡನೇ ಬಾರಿ ಗರ್ಭಿಣಿಯಾದಾಗ ಎಲ್ಲರೂ ನನ್ನ ಚರ್ಯೆಗಳನ್ನು ನೋಡಿ ‘ನಿನಗೆ ಈ ಬಾರಿಯೂ ಗಂಡು ಮಗುವೇ ಆಗುತ್ತದೆ’ ಎಂದು ಹೇಳುತ್ತಿದ್ದರು. ನನಗೆ ಅಳು ಬರುತ್ತಿತ್ತು. ಹೆಣ್ಣುಮಕ್ಕಳಿಲ್ಲದ ಮನೆ ಮನೆಯೇ ಅಲ್ಲ. ಎಷ್ಟೇ ಆಸ್ತಿ ಅಂತಸ್ತು ಇದ್ದರೂ ಯಾವುದೇ ಸಂಭ್ರಮ ಇದ್ದರೂ ಮಗಳಿದ್ದರೇ ಮನೆಗೆ ಶೋಭೆ.

ತಮ್ಮ ಭಾವನೆಗಳನ್ನು ಮುಕ್ತವಾಗಿ ವ್ಯಕ್ತಪಡಿಸುವಲ್ಲಿಯೂ, ಸಂಬಂಧಗಳನ್ನು ಗಟ್ಟಿಗೊಳಿಸಿ ಮುಂದುವರಿಸುವಲ್ಲಿಯೂ ಹೆಣ್ಣುಮಕ್ಕಳ ಪಾತ್ರ ಮಹತ್ವದ್ದು. ಈ ಭಾವನಾತ್ಮಕ ನಂಟನ್ನು ಗಂಡು ಮಕ್ಕಳಿಂದ ನಿರೀಕ್ಷಿಸಲು ಸಾಧ್ಯವಿಲ್ಲ. ಯಾಕೆಂದರೆ ಅವರಿಗೆ ಬೇಗನೆ ಪ್ರಬುದ್ಧತೆ ಬಂದುಬಿಡುತ್ತದೆ. ಸಂಬಂಧಗಳಿಂದ ಸ್ವಲ್ಪ ಕಳಚಿಕೊಂಡು ಬಿಡುತ್ತಾರೆ ಎಂದು ನನಗನಿಸುತ್ತದೆ. ನಾವು ಮದುವೆಯಾದ ಮೇಲೂ ಅಪ್ಪ ಅಮ್ಮನಿಗೆ ಪ್ರತಿದಿನ ಫೋನ್‌ ಮಾಡಿ ಆರೋಗ್ಯ, ಊಟ ಉಪಾಹಾರ ಅಂತ ವಿಚಾರಿಸಿ ಎಷ್ಟೇ ದೂರದಲ್ಲಿದ್ದರೂ ಉಪಚಾರ ಮಾಡುತ್ತೇವೆ. ನನಗಂತೂ ತವರಲ್ಲಿ ಆಚರಿಸುತ್ತಿದ್ದ ಪ್ರತಿ ಹಬ್ಬಗಳ ಆಚರಣೆ ಈಗಲೂ ನೆನಪಾಗುತ್ತದೆ. ಅವುಗಳನ್ನು, ಅಲ್ಲಿ ನನ್ನ ಉಪಸ್ಥಿತಿಯನ್ನು ನಾನು ಮಿಸ್‌ ಮಾಡ್ಕೊಳ್ಳೀನಿ. ಈಗ ಮಗಳು ಶಾರದೆ ಹುಟ್ಟಿದ ಮೇಲೆ ಎಷ್ಟೋ ಪರವಾಗಿಲ್ಲ. ಹಬ್ಬಗಳ ಸಂದರ್ಭದಲ್ಲಿ ಅವಳನ್ನು ಎಷ್ಟು ಸಿಂಗರಿಸಿದರೂ ನನಗೆ ಸಮಾಧಾನವಾಗುವುದಿಲ್ಲ. ಇದರಲ್ಲಿ ನನಗೂ ನನ್ನ ಗಂಡ ಶ್ರೇಯಸ್‌ಗೂ ಸ್ಪರ್ಧೆಯೇ ನಡೆಯುತ್ತದೆ. ಅವರಿಗೂ ಮಗಳು ಅಂದರೆ ಪಂಚಪ್ರಾಣ. ಅವಳಿಲ್ಲದೇ ಇದ್ದರೆ ನಮ್ಮ ಸಂಸಾರದಲ್ಲಿ ಈಗಿರುವ ಸಂಭ್ರಮ ಖಂಡಿತಾ ಇರುತ್ತಿರಲಿಲ್ಲ.

ಶ್ರುತಿ ಶ್ರೇಯಸ್‌ ಬಿ.ಟಿ, ಶ್ರೀನಿವಾಸನಗರ

***

ಗಂಡು ಮಕ್ಕಳೇ ಯಾಕಿರಬೇಕು?

ನಮಗೆ ಇಬ್ಬರು ಹೆಣ್ಣು ಮಕ್ಕಳು ಮಾತ್ರ ಇರೋದು. ಅರ್ಚನಾ ಮತ್ತು ರಚನಾ. ಇಬ್ಬರೂ ಸಾಫ್ಟ್‌ವೇರ್‌ ಎಂಜಿನಿಯರುಗಳು. ಅಳಿಯಂದಿರೂ ಅದೇ ವೃತ್ತಿಯವರು. ಈಗ ಅವರು ಬದುಕಿನಲ್ಲಿ ನೆಲೆ ನಿಂತಿದ್ದಾರೆ ಎಂದು ಈ ಮಾತು ಹೇಳುತ್ತಿಲ್ಲ. ಎರಡನೇ ಮಗಳು ರಚನಾ ಹುಟ್ಟಿದಾಗ ಕೂಡಾ ನಾವು ಇಬ್ಬರೂ ಕೊರಗಲಿಲ್ಲ. ಯಾಕೆಂದರೆ ಗಂಡು ಮಕ್ಕಳು ಬೇಕು ಎಂದು ನಾವು ಬಯಸಿರಲೇ ಇಲ್ಲ. ಮಕ್ಕಳು ಗಂಡೋ ಹೆಣ್ಣೋ ನಾವು ಕೊಡುವ ಸಂಸ್ಕಾರದಿಂದ ಅವರಲ್ಲಿ ಸನ್ನಡತೆ ರೂಪುಗೊಳ್ಳುತ್ತದೆ ಎಂಬುದು ನಮ್ಮಿಬ್ಬರ ಅಭಿಪ್ರಾಯವಾಗಿತ್ತು.

ಕೆಲವರು, ಹೆಣ್ಣು ಮಕ್ಕಳನ್ನು ಗಂಡು ಮಕ್ಕಳಂತೆ ಬೆಳೆಸಬೇಕು ಎಂದುಕೊಳ್ಳುತ್ತಾರೆ. ಆದರೆ ಗಂಡಿನಲ್ಲಿರುವ ಅಹಂಭಾವ ಹೆಣ್ಣಲ್ಲಿ ತುಂಬುವುದು ನಮಗೆ ಇಷ್ಟವಿಲ್ಲ. ಹಾಗಾಗಿ ಎಲ್ಲಾ ಸಂಸ್ಕಾರಗಳನ್ನು ಕಲಿಸಿ ಸಾಂಪ್ರದಾಯಿಕ ಮತ್ತು ಗ್ರಾಮೀಣ ರೀತಿರಿವಾಜುಗಳಂತೆಯೇ ನಾವು ಬೆಳೆಸಿದೆವು. ಅದು ಅವರ ವೈವಾಹಿಕ ಜೀವನಕ್ಕೂ ನೆರವಾಗಿದೆ. ಈಗಲೂ ಅವರಿಗೆ ನಮ್ಮ ಮೇಲಿರುವ ಪ್ರೀತಿ, ಕಾಳಜಿ, ಗೌರವ ಕಿಂಚಿತ್ತೂ ಕಡಿಮೆಯಾಗಿಲ್ಲ. ಗಂಡು ಮಕ್ಕಳ ಸ್ಥಾನವನ್ನು ಇಬ್ಬರೂ ಅಳಿಯಂದಿರು ತುಂಬಿದ್ದಾರೆ.

ಇನ್ನೊಂದು ಮಾತು– ತಂದೆ ತಾಯಂದಿರು ತಮ್ಮ ಮಕ್ಕಳನ್ನು ಪ್ರೀತಿಸಿದಷ್ಟು ಸೊಸೆಯಂದಿರನ್ನು ಪ್ರೀತಿಸುವುದಿಲ್ಲ. ಸೊಸೆ ಅಂದರೆ ಇನ್ನೊಂದು ಮನೆಯ ಮಗಳು. ತಮ್ಮ ಮಕ್ಕಳನ್ನು ಮದುವೆ ಮಾಡಿಕೊಟ್ಟ ಮೇಲೆ ಆ ಸ್ಥಾನವನ್ನು ತುಂಬುವವಳು ಸೊಸೆಯೇ ಎಂಬುದು ನಮಗೆ ನೆನಪಿರಬೇಕು. ತಮ್ಮ ಮಗಳನ್ನು ಅವಳ ಗಂಡನ ಮನೆಯಲ್ಲಿ ಹೊರಗಿನವಳು ಎಂದು ಕಂಡರೆ ಹೇಗಾದೀತು ಎಂದು ಯೋಚಿಸಿದರೆ ಸೊಸೆ ನಮ್ಮವಳು ಎಂಬ ಭಾವ ಬರುತ್ತದೆ. ಮಗಳೇ ಆಗಲಿ ಸೊಸೆಯೇ ಆಗಲಿ ಅವಳೂ ಹೆಣ್ಣೇ ಎಂಬುದು ನೆನಪಿರಬೇಕು.

–ಕೃಷ್ಣಯ್ಯ ಬರಗೋಡು ಮತ್ತು ರಮಾ, ಜೆ.ಪಿ.ನಗರ 8ನೇ ಹಂತ

***

ಹೆಣ್ಣಿಲ್ಲದಿದ್ದರೆ ಕಳೆ ಇಲ್ಲ

ನನ್ನ ಪತಿ ಶ್ರೀಕಾಂತ್‌ ಮತ್ತು ನಾನು ಎರಡನೇ ಮಗು ಹೆಣ್ಣೇ ಆಗಬೇಕು ಎಂದು ಆಶಿಸಿದ್ದೆವು. ಅತ್ತೆ ಮಾವನಿಗೂ ಅದೇ ಆಸೆಯಿತ್ತು. ಮಗ ಪರೀಕ್ಷಿತ್‌ನ ತುಂಟಾಟ, ಆಟ ಪಾಠ ಎಷ್ಟೇ ಸಂಭ್ರಮ ಕೊಟ್ಟಿದ್ದರೂ ಮಗಳ ಸ್ಥಾನವನ್ನು ಅವನು ತುಂಬಲಾಗದು. ನಮ್ಮ ದುರಾದೃಷ್ಟಕ್ಕೆ ಎರಡನೇ ಮಗುವೂ ಗಂಡೇ ಆಯಿತು. ಇಬ್ಬರೂ ಬಹಳ ಬೇಜಾರು ಮಾಡಿಕೊಂಡೆವು. ಕೊನೆಗೇ ಅತ್ತೆ ಮಾವನೇ ಸಮಾಧಾನಪಡಿಸಿದರು.

ಹೆಣ್ಣು ಮಕ್ಕಳಿರುವ ಮನೆಗೆ ವಿಶೇಷ ಕಳೆ ಇರುತ್ತದೆ. ಸಂಬಂಧಗಳು ಉಳಿಯುವುದು, ಬೆಳೆಯುವುದು ಅವರಿಂದಲೇ. ತಂದೆ ತಾಯಿಗೆ ಮಾತ್ರವಲ್ಲ, ಅತ್ತೆ ಮಾವನಿಗೆ, ಗಂಡನಿಗೆ ಅವರ ಕುಟುಂಬಕ್ಕೆ ಅವಳು ಪ್ರತಿ ಹಂತದಲ್ಲೂ ತ್ಯಾಗ ಮಾಡುತ್ತಾ ಹೋಗುತ್ತಾಳೆ. ಬದುಕಿನ ಮೌಲ್ಯ ಗೊತ್ತಾಗುವುದೂ ಅವರಿಂದಲೇ. ಅಣ್ಣ ತಮ್ಮಂದಿರಿಗೆ ಅಕ್ಕ ತಂಗಿಯಾಗಿ, ತಂದೆಗೆ ಮಗಳಾಗಿ ಹೇಳುವ ಬುದ್ಧಿಮಾತಿಗೆ ಬೇರೆಯೇ ತೂಕವಿದೆ, ಮಹತ್ವವಿದೆ. ಯಾವುದೇ ಹಬ್ಬದ ದಿನಗಳಲ್ಲೇ ನೋಡಿ ಬೇಕಿದ್ದರೆ, ಮಗಳು ಅಲಂಕಾರಮಾಡಿಕೊಂಡು ಚೆಂದನೆಯ ಉಡುಪು ಧರಿಸಿಕೊಂಡು ಎಲ್ಲರ ಮುಂದೆ ಬಂದು ನಿಂತರೆ ಆ ಕಳೆ ಹೇಗಿರುತ್ತದೆ, ಮಗ ಬಂದರೆ ಹೇಗಿರುತ್ತದೆ? ಪೂಜೆ, ಪುನಸ್ಕಾರಗಳನ್ನು ಮಗಳು ಮಾಡುವ ಚಂದವೇ ಬೇರೆ ಬಿಡಿ. ಭುವನ್‌ ಈಗ ಮಗು. ಅವನ ಬಾಲ್ಯದಾಟಗಳು ಖುಷಿ ಕೊಡುವುದು ಸಹಜ. ಆದರೆ ಮಗಳು ಇಲ್ಲ ಎಂಬ ಕೊರಗು ನಮ್ಮನ್ನು ಸದಾ ಕಾಡುತ್ತದೆ.

–ಅಕ್ಷತಾ ಮತ್ತು ಶ್ರೀಕಾಂತ್‌, ಚುಂಚಘಟ್ಟ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry