ನಮ್ಮ ಬಾಲ್ಯ ಹೀಗಿತ್ತು...

7

ನಮ್ಮ ಬಾಲ್ಯ ಹೀಗಿತ್ತು...

Published:
Updated:
ನಮ್ಮ ಬಾಲ್ಯ ಹೀಗಿತ್ತು...

ಆಗಿದ್ದು ಆಯ್ತು, ಇನ್ನು ಈ ಆಟ ಸಾಕು ಮಾಡು. ಅಚ್ಚುಕಟ್ಟಾಗಿ ಸಂಗೀತಕ್ಕೋ, ಡಾನ್ಸ್‌ಗೋ ಸೇರಿಕೋ...’

– ರಿಲೇ ಓಡುವಾಗ ಬಿದ್ದು ಗಾಯ ಮಾಡಿಕೊಂಡು ಬಂದಿದ್ದ ಮಗಳಿಗೆ ಅಪ್ಪ ಔಷಧಿ ಹಚ್ಚುತ್ತಾ ಹೇಳಿದ ಮಾತುಗಳಿವು. ‘ಅಲ್ಲ ಕಣಪ್ಪ, ಹಿಂದಿನ ವರ್ಷ ಅಣ್ಣನೂ ಫುಟ್‌ಬಾಲ್ ಆಡುವಾಗ ಬಿದ್ದು ಗಾಯ ಮಾಡಿಕೊಂಡಿದ್ದ. ನೀನು ಅವನಿಗೆ ಹೀಗೆ ಹೇಳಿರಲೇ ಇಲ್ಲ’. ಮಗಳು ಹೀಗೆ ಕೇಳಬಹುದು ಎಂದು ಅಪ್ಪ ಊಹಿಸಿರಲಿಲ್ಲ.

‘ಈ ನಡುವೆ ಜಾಸ್ತಿ ಹೆಚ್ಚಿಕೊಂಡುಬಿಟ್ಟಿದ್ದೀ. ಹೇಳಿದಷ್ಟು ಕೇಳು. ದೊಡ್ಡೋಳಾಗಿದಿಯಾ, ಮೆರೆಯೋದು ನಿಲ್ಲಿಸು’ ಎಂದು ಎದ್ದು ಹೋದರು ಅಪ್ಪ. ಮಗಳಿಗೆ ತಾನೇನು ತಪ್ಪು ಮಾಡಿದೆ ಎಂದು ಅರ್ಥವೇ ಆಗಲಿಲ್ಲ, ಕಣ್ಣಿನಲ್ಲಿ ಗಂಗೆಗೌರಿ. ಕ್ರಮೇಣ ಆ ಮಗು ಖಿನ್ನತೆಗೆ ಜಾರಿ, ಮಾತು ಸಂಪೂರ್ಣ ಕಡಿಮೆ ಮಾಡಿತು.

ಇದು ನನ್ನ ಗೆಳತಿಯ ಮನೆಯಲ್ಲಿ ನಡೆದ ಸತ್ಯ ಘಟನೆ. ಕ್ರೀಡೆಯಲ್ಲಿ ಮಹತ್ತರ ಸಾಧನೆ ಮಾಡಿದ ಮಹಿಳೆಯರನ್ನು ನೋಡಿದಾಗಲೆಲ್ಲಾ ನನಗೆ ಅವರ ಬಾಲ್ಯ ಹೇಗಿತ್ತು ಎಂಬ ಕುತೂಹಲ. ಹೀಗಾಗಿಯೇ ವಿಶ್ವ ಹೆಣ್ಣುಮಗು ದಿನವನ್ನು ನೆಪವಾಗಿರಿಸಿಕೊಂಡು ಈ ಪ್ರಶ್ನೆಗೆ ಉತ್ತರ ಹುಡುಕಲು ಹೊರಟೆ.

ಭೇದ ಇಲ್ಲದೇ ಬೆಳೆಸಿದರು

ರಾಜೇಶ್ವರಿ ಗಾಯಕವಾಡ ಅವರ ಹೆಸರನ್ನು ನೀವು ಕೇಳಿರಬಹುದು. ಭಾರತ ಮಹಿಳಾ ಕ್ರಿಕೆಟ್ ತಂಡದಲ್ಲಿ ಸಾಧನೆ ಮೆರೆದ ಸಾಧಕಿ ಅವರು. ‘ನಿಮ್ಮ ಬಾಲ್ಯ ಹೇಗಿತ್ತು?’ ಎಂಬ ಪ್ರಶ್ನೆಗೆ ಅವರು ಕೊಟ್ಟ ಉತ್ತರ ಹೆಣ್ಣು ಹೆತ್ತ ಪೋಷಕರಿಗೆ ಮಾದರಿ ಎನಿಸುವಂತಿತ್ತು.

‘ನಮ್ಮನೆಯಲ್ಲಿ ಹೆಣ್ಣು, ಗಂಡೆಂಬ ಭೇದ ಇರಲಿಲ್ಲ. ಅಪ್ಪ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ಮನೆಯಲ್ಲಿ ಬಡತನವಿದ್ದರೂ, ಹೆಣ್ಣು ಮಗುವಾಯಿತು ಎಂಬ ಬೇಸರವಿಲ್ಲದೇ ನನ್ನನ್ನು ಬೆಳೆಸಿದರು. ನಾವು ಮೂವರು ಹೆಣ್ಣುಮಕ್ಕಳು. ಎಲ್ಲರಿಗೂ ಸಮಾನ ಪ್ರೋತ್ಸಾಹ ಇತ್ತು. ಅಪ್ಪ ಅವರ ಸಾಮರ್ಥ್ಯ ಮೀರಿ ನಮಗೆ ಕ್ರೀಡೆಗೆ ಅಗತ್ಯವಾದ ಪರಿಕರಗಳನ್ನು ಕೊಡಿಸುತ್ತಿದ್ದರು. ಕ್ರೀಡೆ ಮಾತ್ರವಲ್ಲದೇ ನನಗೆ ಆಸಕ್ತಿಯಿರುವ ಎಲ್ಲಾ ವಿಷಯದಲ್ಲಿ ಪ್ರೋತ್ಸಾಹ ನೀಡುತ್ತಿದ್ದರು’ ಎಂದು ಅಪ್ಪನನ್ನು ನೆನೆದು ಭಾವುಕರಾದರು.

‘ನಾನು ಶಾಲೆಯಲ್ಲಿದ್ದಾಗ ಹಲವು ಕ್ರೀಡೆಗಳಲ್ಲಿ ತೊಡಗಿಸಿಕೊಂಡಿದ್ದೆ. ವಿಜಯಪುರದಲ್ಲಿ ಮಹಿಳಾ ಕ್ರಿಕೆಟ್‌ ಕ್ಲಬ್‌ ಆರಂಭಗೊಂಡಾಗ ಕುತೂಹಲಕ್ಕಾಗಿ ಕ್ರಿಕೆಟ್‌ ತರಬೇತಿಗೆ ಸೇರಿದೆ. ಸಂಬಂಧಿಗಳು ‘ಹೆಣ್ಣುಮಕ್ಕಳನ್ನು ಹುಷಾರಾಗಿ ಬೆಳೆಸು, ಈ ಆಟವೆಲ್ಲ ಯಾಕೆ’ ಎಂದು ಹೇಳಿದಾಗಲೂ ಅಪ್ಪ ತಲೆಕೆಡಿಸಿಕೊಳ್ಳಲಿಲ್ಲ. ಇಂತಹ ಕುಚೇಷ್ಟೆಯ ಮಾತುಗಳು ನಮಗೆ ಕೇಳಿಸಲೂ ಬಿಡುತ್ತಿರಲಿಲ್ಲ. ಅವರು ನನ್ನನ್ನು ಬೆಳೆಸಿಸಿದ ರೀತಿ, ನೀಡಿದ ಪ್ರೋತ್ಸಾಹದಿಂದ ಈ ಸಾಧನೆ ಸಾಧ್ಯವಾಯಿತು’ ಎಂದು ಮಾತು ಮುಗಿಸಿದರು.

***

ಹೆಣ್ಣುಮಕ್ಕಳು ಅಂತಲ್ಲ, ಯಾವುದೇ ಮಕ್ಕಳಿಗೆ ಪೋಷಕರೇ ಮಾರ್ಗದರ್ಶಕರು. ಮಕ್ಕಳು ತಪ್ಪುಹಾದಿಯಲ್ಲಿ ನಡೆಯುತ್ತಿದ್ದಾರೆ ಎನಿಸಿದಾಗ ಪೋಷಕರು ತಿದ್ದಬೇಕು. ಹೀಗೆಂದು ಮಕ್ಕಳ ಸ್ವಾತಂತ್ರ್ಯವನ್ನು ಒತ್ತಾಯದಿಂದ ಹತ್ತಿಕ್ಕಿದರೆ ಅವರು ಸುಳ್ಳು ಹೇಳುವುದನ್ನು, ಮರೆಮಾಚಿ ಬದುಕುವುದನ್ನು ಕಲಿಯುವ ಅಪಾಯ ಇರುತ್ತದೆ. ಮಕ್ಕಳನ್ನು ಬೆಳೆಸುವಾಗ ಈ ಎಲ್ಲ ಅಂಶಗಳನ್ನು ಗಮನದಲ್ಲಿರಿಸಿಕೊಳ್ಳಬೇಕು

– ಸುನೀತಾ ರಾವ್, ಆಪ್ತ ಸಮಾಲೋಚಕಿ

***

ಗಂಡನಿಂದಲೂ ಪ್ರೋತ್ಸಾಹ ಸಿಕ್ಕಿತು

ಮದುವೆಯಾಗುವವರೆಗೆ ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡುವ ಅನೇಕರು ನಂತರ ಒಮ್ಮೆಲೆ ತೆರೆಮರೆಗೆ ಸರಿಯುತ್ತಾರೆ. ಕಬಡ್ಡಿ ಅಂಪೈರ್ ಜಮುನಾ ಇಂಥವರ ಪೈಕಿ ಭಿನ್ನರಾಗಿ ನಿಲ್ಲುತ್ತಾರೆ.

‘ನನಗೆ ಬಾಲ್ಯದಿಂದಲೂ ಕ್ರೀಡೆಯಲ್ಲಿ ತುಂಬಾ ಆಸಕ್ತಿ. ನನ್ನ ಅಪ್ಪ, ಅಣ್ಣ ನನಗೆ ಬೆಂಬಲವಾಗಿ ನಿಂತರು. ಇಷ್ಟೇ ಹೊತ್ತಿಗೆ ಮನೆಗೆ ಬರಬೇಕು, ಹೀಗೆ ಇರಬೇಕು ಎಂಬ ನಿರ್ಬಂಧಗಳೇ ಇಲ್ಲದ ಮುಕ್ತ ವಾತಾವರಣ ಮನೆಯಲ್ಲಿತ್ತು. ಹತ್ತೊಂಬತ್ತನೇ ವಯಸ್ಸಿನಲ್ಲಿ ಮದುವೆಯಾದೆ. ಕ್ರೀಡೆಯಲ್ಲಿ ಮುಂದುವರೆಯಲು ಅಪ್ಪನ ಮನೆಯಲ್ಲಿ ಎಷ್ಟು ಬೆಂಬಲವಿತ್ತೋ ಅದರ ಎರಡು ಪಟ್ಟು ಬೆಂಬಲ ಗಂಡನ ಮನೆಯಲ್ಲಿ ಸಿಕ್ಕಿತು. ನನ್ನ ಮಾವ ‘ನಾನು ಮಗು ನೋಡಿಕೊಳ್ಳುತ್ತೇನೆ ನೀನು ಆಟವಾಡಲು ಹೋಗು’ ಎನ್ನುತ್ತಿದ್ದರು. ಕ್ರೀಡೆಯಲ್ಲಿ ಮುಂದಿದ್ದ ನನ್ನ ಎಷ್ಟೋ ಗೆಳತಿಯರು ಮದುವೆ ನಂತರ ಪ್ರೋತ್ಸಾಹ ಸಿಗದೆ ಮರೆಗೆ ಸರಿದರು. ಆದರೆ ನನ್ನ ವಿಷಯದಲ್ಲಿ ಹಾಗಾಗಲಿಲ್ಲ. ನನಗೆ ಒಬ್ಬಳೇ ಮಗಳು. ಅವಳಿಗೂ ಸಂಪೂರ್ಣ ಸ್ವಾತಂತ್ರ್ಯ ಕೊಟ್ಟಿದ್ದೇನೆ. ಅವಳೂ ವಾಲಿಬಾಲ್‌ ಆಟಗಾರ್ತಿ. ಪ್ರೋತ್ಸಾಹ, ಪ್ರೇರಣೆ ಸಿಕ್ಕರೆ ಮಹಿಳೆಯರು ಸಾಧನೆ ಮಾಡಬಲ್ಲರು’ ಎಂದು ತಮ್ಮ ಕಥೆ ಹೇಳಿಕೊಂಡರು ಜಮುನಾ.

***

ಪುಟ್ಟಿಯನ್ನು ಬೆಳೆಸಲು ಟಿಪ್ಸು

* ಮಾತನಾಡುವುದನ್ನು ಪ್ರೋತ್ಸಾಹಿಸಿ: ಮಗು ಸಣ್ಣದಿರುವಾಗಿನಿಂದಲೂ ಮುಕ್ತವಾಗಿ ಮಾತನಾಡುವುದನ್ನು ಪ್ರೋತ್ಸಾಹಿಸಿ. ಇಷ್ಟವಿಲ್ಲದ ಸಂಗತಿ, ವರ್ತನೆಯನ್ನು ಸಂಬಂಧಿಸಿದವರ ಎದುರು ನಿರ್ಭಾವುಕವಾಗಿ ಹೇಳುವುದನ್ನು ಕಲಿಸಿಕೊಡಿ

* ಹೊಗಳುವ ಮೊದಲು: ಮಗು ಸಣ್ಣಪುಟ್ಟ ಚಟುವಟಿಕೆಗಳನ್ನು ಗುರುತಿಸಿ, ಹೊಗಳಿ. ನೀವು ಏಕೆ ಹೊಗಳಿದಿರಿ ಎಂಬುದು ಅದಕ್ಕೆ ಅರ್ಥವಾಗುವಂತಿರಬೇಕು. ಉದಾ: ನೀನೇ ಹಾಕಿಕೊಂಡ ಜುಟ್ಟು ಚೆನ್ನಾಗಿದೆ, ಇಂದು ನೀನೇ ಗಿಡಗಳಿಗೆ ನೀರು ಹಾಕಿದೆ ಇತ್ಯಾದಿ...

* ಎಲ್ಲರಿಗೂ ನೀನು ಇಷ್ಟವಾಗುವುದಿಲ್ಲ ಎಂಬುದನ್ನು ಅರ್ಥಮಾಡಿಸಿ: ಗಂಡು ಮಕ್ಕಳಿಗೆ ಹೋಲಿಸಿದರೆ, ಎಲ್ಲರೂ ತನ್ನನ್ನು ಮೆಚ್ಚಿಕೊಳ್ಳಬೇಕೆಂಬ ಆಸೆ ಹೆಣ್ಣು ಮಕ್ಕಳಿಗೆ ತುಸು ಹೆಚ್ಚು. ಯಾರಾದರೂ ತನ್ನನ್ನು ಇಷ್ಟಪಟ್ಟಿಲ್ಲ ಎಂದು ಅದು ದೂರು ಹೇಳಿದಾಗ ‘ಹೌದು, ನೀನು ಎಲ್ಲರಿಗೂ ಇಷ್ಟವಾಗಬೇಕಿಲ್ಲ’ ಎಂಬುದನ್ನು ತಾಳ್ಮೆಯಿಂದ ಅರ್ಥ ಮಾಡಿಸಲು ಯತ್ನಿಸಿ. ನಿಮ್ಮ ಇಂಥ ಪ್ರಯತ್ನ ಮುಂದೆ ಮಗು ಬೆಳೆದು ದೊಡ್ಡವಳಾದಾಗ ಸಾಕಷ್ಟು ಉಪಯೋಗಕ್ಕೆ ಬರುತ್ತದೆ.

* ತಪ್ಪು ಮಾಡಲು ಬಿಡಿ: ಮಗು ತಪ್ಪು ಮಾಡುತ್ತೆ ಎಂದು ಎಲ್ಲವನ್ನೂ ನೀವೇ ಮಾಡಲು ಹೋಗಬೇಡಿ. ತಪ್ಪು ಮಾಡಲು ಅದಕ್ಕೆ ಸ್ವಾತಂತ್ರ್ಯ ಕೊಡಿ. ನಂತರ ಹತ್ತಿರ ಕೂಡಿಸಿಕೊಂಡು ತಿದ್ದಿ.

* ಆಡಿ, ಆಡಿಸಿ: ಚಿಕ್ಕ ಮಗುವಿದ್ದಾಗಿನಿಂದ ಅದನ್ನು ಹೊರಗೆ ಕರೆದೊಯ್ದು ಆಟಗಳನ್ನು ಆಡಿಸಿ. ಟಿವಿಗಳಲ್ಲಿಯೂ ಆಟಗಳನ್ನು ತೋರಿಸಿ ಕ್ರೀಡೆಯಲ್ಲಿ ಆಸಕ್ತಿ ಬೆಳೆಯುವಂತೆ ಮಾಡಿ. ಹೆಣ್ಣಾಗಿ ಹುಟ್ಟಿದ ಒಂದೇ ಕಾರಣಕ್ಕೆ ಅದು ಆಡುವ ಸ್ವಾತಂತ್ರ್ಯ ಕಳೆದುಕೊಳ್ಳಬಾರದು.

* ಸಾಮರ್ಥ್ಯ, ದೌರ್ಬಲ್ಯಗಳನ್ನು ಹೇರಬೇಡಿ: ಮಗುವಿನ ಸಾಮರ್ಥ್ಯ ಗುರುತಿಸಬೇಕು ನಿಜ. ಹಾಗೆಂದು ನೀವೇ ಅದನ್ನು ನಿರ್ಧರಿಸಬಾರದು. ಮಗುವಿಗೆ ವಿವಿಧ ಆಯ್ಕೆಗಳನ್ನು ಕೊಟ್ಟು ತನ್ನ ಸಾಮರ್ಥ್ಯ– ದೌರ್ಬಲ್ಯ ಕಂಡುಕೊಳ್ಳಲು ಅವಕಾಶಕೊಡಿ. ಉದಾ: ಮಗುವಿಗೆ ಸಂಗೀತದಲ್ಲಿ ಆಸಕ್ತಿ ಇದೆ ಎಂದು ನೀವೇ ಅಂದುಕೊಂಡು ಅದಕ್ಕೆ ಆಡುವ ಅವಕಾಶವನ್ನೇ ಕೊಡದಿರುವುದು

* ದೇಹದ ಬಗ್ಗೆ ಗೌರವ ಇರಲಿ: ‘ಇದು ನನ್ನ ದೇಹ’ ಎಂಬ ಅಭಿಮಾನವನ್ನು ಸಣ್ಣ ವಯಸ್ಸಿನಿಂದಲೂ ಮೂಡಿಸಬೇಕು. ಮಗುವಿನ ಎದುರು ಯಾರ ದೇಹದ ಆಕಾರ, ಬಣ್ಣದ ಬಗ್ಗೆ ಕೀಳಾಗಿ ಮಾತನಾಡಬೇಡಿ. ಗುಡ್‌ ಟಚ್– ಬ್ಯಾಡ್‌ ಟಚ್ ಬಗ್ಗೆಯೂ ಸೂಕ್ಷ್ಮವಾಗಿ ತಿಳಿಸಿಕೊಡಿ

* ಲಿಂಗ ತಾರತಮ್ಯದ ಎಚ್ಚರ: ‘ನೀನು ಹೆಣ್ಣುಮಗು ನಿನಗೆ ಜಂಪ್ ಮಾಡಲು ಆಗಲ್ಲ’, ‘ನೀನು ಹೆಣ್ಣುಮಗು ಜೋರಾಗಿ ಓಡಲಾರೆ’ ಇಂಥ ಮಾತುಗಳನ್ನು ಮಗುವಿನ ಎದುರು ಅಪ್ಪಿತಪ್ಪಿಯೂ ಆಡಬಾರದು. ‘ನಾನು ಗಂಡಾಗಿದ್ದರೆ ಚೆನ್ನಾಗಿರುತ್ತಿತ್ತು’ ಎಂಬ ಭಾವನೆ ಬಾರದಂತೆ ಮಗುವನ್ನು ಬೆಳೆಸಿ

* ಆದರ್ಶ ಮಹಿಳೆಯರನ್ನು ಪರಿಚಯಿಸಿ: ಹೆಣ್ಣು ಅಂದರೆ ಕೇವಲ ಸೌಂದರ್ಯದ (ಫ್ಯಾಷನ್) ಸರಕಲ್ಲ ಎಂಬುದನ್ನು ಚಿಕ್ಕಂದಿನಿಂದಲೇ ಮನಗಾಣಿಸಿ. ಸಾಧಕಿಯರು, ಮಹಿಳಾ ವಿಜ್ಞಾನಿಗಳು, ಕ್ರೀಡಾಳುಗಳು ರಾಜಕಾರಣಿಗಳ ಕಥೆ ಹೇಳಿ. ಪತ್ರಿಕೆಗಳಲ್ಲಿ ಬರುವ ಇಂಥ ಸುದ್ದಿಗಳನ್ನು ಮಗುವಿಗೆ ಅರ್ಥವಾಗುವಂತೆ ವಿವರಿಸಿ

(ಮಾಹಿತಿ: babycenter.com)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry