ಚುನಾವಣಾ ಆಯೋಗವನ್ನು ‘ಖಾಪ್‌ ಪಂಚಾಯತ್‌’ ಎಂದ ಎಎಪಿ

7
ರಾವತ್‌–ಬಿಜೆಪಿ ಸಂಬಂಧದ ಬಗ್ಗೆ ಪ್ರಶ್ನೆ

ಚುನಾವಣಾ ಆಯೋಗವನ್ನು ‘ಖಾಪ್‌ ಪಂಚಾಯತ್‌’ ಎಂದ ಎಎಪಿ

Published:
Updated:
ಚುನಾವಣಾ ಆಯೋಗವನ್ನು ‘ಖಾಪ್‌ ಪಂಚಾಯತ್‌’ ಎಂದ ಎಎಪಿ

ನವದೆಹಲಿ: ಚುನಾವಣಾ ಆಯೋಗವನ್ನು ಖಾಪ್‌ ಪಂಚಾಯತ್‌ ಎಂದು ಕರೆದಿರುವ ಆಮ್‌ ಆದ್ಮಿ ಪಕ್ಷ(ಎಎಪಿ) ಆಯೋಗದ ನೂತನ ಆಯುಕ್ತ ಓಂ ಪ್ರಕಾಶ್‌ ರಾವತ್‌ ಹಾಗೂ ಬಿಜೆಪಿ ನಡುವಣ ಸಂಬಂಧ ಕುರಿತು ಪ್ರಶ್ನಿಸಿದೆ.

ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಸೇರಿದಂತೆ ಹಲವು ಬಿಜೆಪಿ ನಾಯಕರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು ಎಂಬ ಆರೋಪವನ್ನು ಸ್ವತಃ ಎದುರಿಸಿದ್ದ ರಾವತ್‌ ಇದೀಗ ‘ಲಾಭದಾಯಕ ಹುದ್ದೆ’ ಪ್ರಕರಣದಲ್ಲಿ ಎಎಪಿಯ 20 ಶಾಸಕರ ವಿಚಾರಣೆ ನಡೆಸುತ್ತಿದ್ದಾರೆ ಎಂದು ಎಎಪಿ ವಕ್ತಾರ ರಾಘವ್‌ ಚದ್ಧಾ ಹೇಳಿದ್ದಾರೆ.

‘ಆರು ತಿಂಗಳ ಹಿಂದೆ ರಾವತ್‌ ಇಂತಹದೇ ಪ್ರಕರಣದ ಭಾಗವಾಗಿದ್ದರು. ಸ್ವತಃ ಆರೋಪ ಹೊಂದಿದ್ದ ನ್ಯಾಯಾಧೀಶರು ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂಬಾಗಿಲ ಮೂಲಕ ಮರುನೇಮಕವಾಗಿರುವುದು ದೇಶದ ಇತಿಹಾಸದಲ್ಲಿ ಇದೇ ಮೊದಲು’ ಎಂದು ಚದ್ಧಾ ದೂರಿದ್ದಾರೆ.

‘ಚುನಾವಣಾ ಆಯೋಗ ಖಾಪ್‌ ಪಂಚಾಯತ್‌ ಮಾದರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ವಿವರಣೆ ನೀಡಲು ಅವಕಾಶ ನೀಡದೆ ತೀರ್ಪು ನೀಡಿದೆ’ ಎಂದು ಹೇಳಿದ್ದಾರೆ.

ಲಾಭದಾಯಕ ಹುದ್ದೆ ಹೊಂದಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಎಪಿಯ 20 ಶಾಸಕರನ್ನು ಅನರ್ಹಗೊಳಿಸುವಂತೆ ಚುನಾವಣಾ ಆಯೋಗ ಶುಕ್ರವಾರ ಶಿಫಾರಸು ಮಾಡಿತ್ತು. ಇದಕ್ಕೆ ರಾಷ್ಟ್ರಪತಿಗಳ ಅಂಕಿತವೂ ದೊರಕಿತ್ತು.

ಎಎಪಿಯ ರಾಜ್ಯಸಭಾ ಸದಸ್ಯ ಸಂಜಯ್‌ ಸಿಂಗ್‌ ಅವರು, ‘ಅನರ್ಹಗೊಂಡಿರುವ 20 ಶಾಸಕರಿಗೆ ಜೂನ್‌ 23,2017ರ ನಂತರ ವಿವರಣೆ ನೀಡಲು ಅವಕಾಶ ನೀಡಿಲ್ಲ’ ಎಂದು ಆರೋಪಿಸಿದ್ದಾರೆ.

ಹರಿಯಾಣ, ಪಂಜಾಬ್‌ ಹಾಗೂ ಇನ್ನೂ ಕೆಲವು ರಾಜ್ಯಗಳಲ್ಲಿ ಶಾಸಕರನ್ನು ಸಂಸದೀಯ ಕಾರ್ಯದರ್ಶಿಗಳನ್ನಾಗಿ ನೇಮಕ ಮಾಡಿರುವ ಕುರಿತಂತೆ ಹೈಕೋರ್ಟ್‌ಗೆ ಸಲ್ಲಿಸಲಾಗಿದ್ದ ಅರ್ಜಿಗಳನ್ನು ತಿರಸ್ಕರಿಸಲಾಗಿದೆ ಎಂದೂ ಹೇಳಿರುವ ಸಿಂಗ್‌, ಚುನಾವಣಾ ಆಯೋಗದ ಹಿಂದಿನ ಮುಖ್ಯಸ್ಥ ಅಚಲ್‌ಕುಮಾರ್ ಜ್ಯೋತಿ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಜ್ಞಾಪನೆಯ ಮೇರೆಗೆ ಎಎಪಿ ಶಾಸಕರ ವಿರುದ್ಧ ಕ್ರಮಕೈಗೊಂಡಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry