4

ರಜಪೂತರ ‘ಸಾಂಸ್ಕೃತಿಕ ಆತ್ಮಹತ್ಯೆ’

Published:
Updated:
ರಜಪೂತರ ‘ಸಾಂಸ್ಕೃತಿಕ ಆತ್ಮಹತ್ಯೆ’

‘ಜೌಹರ್‌ಗಾಗಿ ಈವರೆಗೆ 1826 ಮಹಿಳೆಯರ ಮನವೊಲಿಸಲಾಗಿದೆ. ಜನವರಿ 24ರಂದು ಚಿತ್ತೋರ್‌ಗಡದಲ್ಲಿ ಇವರು ಸಾಮೂಹಿಕ ಜೌಹರ್‌ಗೆ ಸಿದ್ಧತೆ ನಡೆಸುತ್ತಿದ್ದಾರೆ’. ಹೀಗೊಂದು ಹೇಳಿಕೆಯನ್ನು ಕೊಟ್ಟಿದ್ದು ಶ್ರೀ ರಜಪೂತ್ ಕರ್ಣಿ ಸೇನಾದ ಮುಖ್ಯಸ್ಥ ಮನಿಪಾಲ್ ಮಕ್ರಾನಾ. ರಾಜಸ್ಥಾನದಲ್ಲಿ ‘ಪದ್ಮಾವತ್’ ಚಲನಚಿತ್ರ ಪ್ರದರ್ಶನವನ್ನು ವಿರೋಧಿಸಿ ನಡೆಸುತ್ತಿರುವ ಸರಣಿ ಪ್ರತಿಭಟನೆಗಳ ಭಾಗವಾಗಿ ಸಾಮೂಹಿಕ ಜೌಹರ್ ನಡೆಸುವುದಾಗಿ ಕರ್ಣಿ ಸೇನಾ ಹೇಳಿಕೊಂಡಿತ್ತು.

ಜೌಹರ್ ಅಂದರೆ ಅಗ್ನಿಕುಂಡಕ್ಕೆ ಧುಮುಕುವ ಮೂಲಕ ಸಜೀವದಹನಕ್ಕೆ ಒಡ್ಡಿಕೊಳ್ಳುವುದು. ಇದು ಆತ್ಮಹತ್ಯೆಯದೇ ಮತ್ತೊಂದು ರೂಪ. ಐತಿಹಾಸಿಕ ಕಾರಣದ ಹಿನ್ನೆಲೆಯಲ್ಲಿ ಇದನ್ನು ಬೇಕಿದ್ದರೆ ‘ಮರ್ಯಾದಾ ಆತ್ಮಹತ್ಯೆ’ ಅನ್ನಬಹುದು. ಯುದ್ಧದಲ್ಲಿ ಗಂಡ ಹುತಾತ್ಮನಾದರೆ ಹೆಂಡತಿ ಆತನ ಚಿತೆಗೆ ಹಾರುವುದು ಸಹಗಮನ. ಹತ್ತಾರು-ನೂರಾರು ಪತ್ನಿಯರು, ಉಪಪತ್ನಿಯರನ್ನು ಹೊಂದಿರುತ್ತಿದ್ದ ರಾಜರು ಯುದ್ಧದಲ್ಲಿ ಸತ್ತರೆ, ಅಂತಃಪುರದ ಆ ಎಲ್ಲ ಹೆಣ್ಣುಗಳು ಬಾವಿಯಂತೆ ಬೆಂಕಿಕುಂಡ ರಚಿಸಿಕೊಂಡು ಒಟ್ಟಿಗೇ ಹಾರಿಕೊಳ್ಳುವುದು ಸಾಮೂಹಿಕ ಜೌಹರ್.

ಇಂಥದೊಂದು ಮರ್ಯಾದಾ ಆತ್ಮಹತ್ಯೆಯ ಕಾರಣ, ಹುನ್ನಾರಗಳ ಚರ್ಚೆ ಬೇರೆಯದೇ ಇದೆ. ಆದರೆ, ಈ ಆಚರಣೆಯನ್ನು ಈಗ ರಜಪೂತ ಹೆಣ್ಣುಮಕ್ಕಳ ಮೇಲೆ ಹೇರುವ ಮೂಲಕ ಕರ್ಣಿ ಸೇನಾ ಏನನ್ನು ಹೇಳಲು ಹೊರಟಿದೆ? ಜೌಹರ್ ಮೂಲಕ- ಅದನ್ನು ನಡೆಸುತ್ತಾರೋ ಬಿಡುತ್ತಾರೋ ಬೇರೆ ವಿಷಯ– ಈ ಬಗೆಯ ಮರ್ಯಾದಾ ಆತ್ಮಹತ್ಯೆ ಮಾಡಿಕೊಂಡಾದರೂ ಸರಿ, ‘ಪದ್ಮಾವತ್’ ಪ್ರದರ್ಶನವನ್ನು ನಿಲ್ಲಿಸಬೇಕು ಅನ್ನುವುದು ಮಹಿಳೆಯರ ನಡುವಿನಿಂದಲೇ ಹುಟ್ಟಿಕೊಂಡ ಚಿಂತನೆಯೇ? ರಜಪೂತ ಗಂಡಸರ ಈವರೆಗಿನ ಹೇಳಿಕೆಗಳು ಮತ್ತು ಗೂಂಘಟ್‌ ಒಳಗಿನ ರಜಪೂತ ಮಹಿಳೆಯರ ಗೊಂದಲದ ಮುಖಚರ್ಯೆಯನ್ನು ನೋಡಿದರೆ ಹಾಗನ್ನಿಸುವುದಿಲ್ಲ. ಕರ್ಣಿ ಸೇನಾ ತನ್ನ ಪೌರುಷ– ದಬ್ಬಾಳಿಕೆಯನ್ನು, ಯಜಮಾನಿಕೆಯ ಧೋರಣೆಯನ್ನು ಈ ಕಾಲಕ್ಕೂ ಮುಂದುವರೆಸಿರುವುದುಇಲ್ಲಿ ಸ್ಪಷ್ಟವಾಗಿ ತೋರುತ್ತಿದೆ. ಜೌಹರ್‌ಗೆ ಮುಂದಾಗಿರುವ ಮಹಿಳೆಯರು ‘ಸಿನಿಮಾ ಪ್ರದರ್ಶನಕ್ಕೆ ತಡೆ ನೀಡಿ, ಇಲ್ಲವೇ ನಮಗೆ ದಯಾಮರಣಕ್ಕೆ ಅನುಮತಿ ಕೊಡಿ’ ಎಂದೂ ರಾಷ್ಟ್ರಪತಿಗೆ ಪತ್ರ ಬರೆದಿದ್ದಾರೆ.

ಇದು ತೀರಾ ನಾಚಿಕೆಗೇಡಿನ ವಿಷಯ. ಭಾರತೀಯ ಇತಿಹಾಸದಲ್ಲಿ ವೀರಾಗ್ರಣಿಗಳೆಂದೇ ಖ್ಯಾತವಾಗಿರುವ ರಜಪೂತ ಸಮುದಾಯ ತನ್ನ ಒಣಪ್ರತಿಷ್ಠೆಗಾಗಿ ಹೆಣ್ಣುಮಕ್ಕಳನ್ನು ಮುಂದೆ ಮಾಡುತ್ತಿದೆ. ಇಲ್ಲಿ ‘ಹೆಣ್ಣುಮಕ್ಕಳನ್ನು’ ಎಂದು ಹೇಳುತ್ತಿರುವುದು ದುರ್ಬಲರು ಅನ್ನುವ ಅರ್ಥದಲ್ಲಿ ಅಲ್ಲ. ಅದೊಂದು ಸಾಂಸ್ಕೃತಿಕ

ಹುನ್ನಾರ ಅನ್ನುವ ಅರ್ಥದಲ್ಲಿ. ಧರ್ಮ, ಕರ್ಮ, ಕೊನೆಗೆ ಸಿನಿಮಾದ ವಿಷಯಕ್ಕೂ ಹೆಣ್ಣುಮಕ್ಕಳ ಬಲಿಯೇ ಯಾಕೆ ಬೇಕು? ಇದಕ್ಕೆ ಮಕ್ರಾನಾ ಮಾತಿನದೇ ಪುರಾವೆಯಿದೆ. ಈವರೆಗೆ ಇಂತಿಷ್ಟು ಹೆಣ್ಣುಮಕ್ಕಳ ಮನವೊಲಿಸಲಾಗಿದೆ ಎಂದು ಅವರು ಹೇಳುವಾಗ ಅಲ್ಲಿ ಒಬ್ಬ ಮನುಷ್ಯನ ಬದಲಿಗೆ ಕಾಣುವುದು ಒಬ್ಬ ಗಂಡಸು ಮಾತ್ರ. ಯಾವ ರಜಪೂತ ಹೆಣ್ಣುಮಕ್ಕಳು ಸ್ವಾಭಿಮಾನಕ್ಕೆ, ಶೌರ್ಯಕ್ಕೆ ಹೆಸರಾಗಿದ್ದರೋ ಅದೇ ಕುಲದ ಹೆಣ್ಣುಗಳೀಗ ಅವೇ ವೀರ ಖಡ್ಗಗಳನ್ನು ಗಂಡಸರ ಇಶಾರೆಗೆ ತಕ್ಕಂತೆ ಝಳಪಿಸುತ್ತಿದ್ದಾರೆ ಅಂದರೆ, ಅವರು ಸಾಗುತ್ತಿರುವ ದಿಕ್ಕಿನ ಬಗ್ಗೆ ಆತಂಕವಾಗುತ್ತದೆ.

ಇಷ್ಟಕ್ಕೂ ಜೌಹರ್ ಆಚರಿಸುವುದು ಗಂಡ ಸತ್ತಾಗ ಅಥವಾ ತನ್ನನ್ನು ಕಾಯುವ ಗಂಡಸು ಸತ್ತಾಗ. ಸ್ವಲ್ಪ ಕಟುವಾಗಿ ಕೇಳಬಹುದಾದರೆ, ಈಗ ಯಾರು ಸತ್ತರೆಂದು ಕರ್ಣಿ ಸೇನಾ ತನ್ನ ಸಮುದಾಯದ ಹೆಣ್ಣುಗಳಿಂದ ಜೌಹರ್ ಮಾಡಿಸಲು ಹೊರಟಿದೆ? ಒಂದು ಯಃಕಶ್ಚಿತ್ಸಿನಿಮಾದ ಮೂಲಕ ಹರಾಜಾಗಲಿರುವ ತಥಾಕಥಿತ ಸ್ವಾಭಿಮಾನದರಕ್ಷಣೆಗಾಗಿ ಅವರು ಹೋರಾಡಿ ಜೀವ ಬಿಡಲಿದ್ದಾರೆಯೇ? ಇಂಥದೊಂದು ಅಸಂಬದ್ಧಕ್ಕೆ ಸರ್ಕಾರಗಳು ಅವಕಾಶ ಕೊಡುವುದಿಲ್ಲ, ಇದು ನಡೆಯುವುದಿಲ್ಲ ಅನ್ನುವುದು ಬೇರೆ ಮಾತು. ಆದರೆ ಇಂಥದ್ದೊಂದು ಚಿಂತನೆ ಹುಟ್ಟುತ್ತದೆ ಅನ್ನುವುದೇ ತೀರ ಅಸಹ್ಯದ ಸಂಗತಿ.

ಇಷ್ಟಕ್ಕೂ, ಯಾವ ಕಾವ್ಯ ಕೃತಿಯನ್ನಾಧರಿಸಿ ‘ಪದ್ಮಾವತಿ’ ಅಥವಾ ‘ಪದ್ಮಾವತ್’ ತಯಾರಾಗಿದೆಯೋ ಆಕೃತಿ ರಾಜಸ್ಥಾನ ಮಾತ್ರವಲ್ಲ, ಇಡೀ ದೇಶದಲ್ಲಿ ಮನ್ನಣೆಯನ್ನು ಪಡೆದಿದೆ. 16ನೇ ಶತಮಾನದಲ್ಲಿ ಜೀವಿಸಿದ್ದ ಸೂಫಿ ಕವಿ ಮಲಿಕ್ ಮುಹಮ್ಮದ್ ಜಾಯಿಸಿ ರಚಿಸಿದ ಈ ಕೃತಿ ಕನ್ನಡಕ್ಕೂ ಬಂದಿದೆ. ಇದರ ಗದ್ಯ ಸಂಗ್ರಹವನ್ನು ಮ.ಸು.ಕೃಷ್ಣಮೂರ್ತಿಯವರು ಅನುವಾದ ಮಾಡಿದ್ದು, ಅವರ ‘ಸೂಫಿ ಪ್ರೇಮಕಾವ್ಯ’ ಪುಸ್ತಕದಲ್ಲಿ ಪ್ರಕಟಗೊಂಡಿದೆ. ಈ ಕೃತಿಯ ಉಪಸಂಹಾರದಲ್ಲಿ ಕೃಷ್ಣಮೂರ್ತಿಯವರು ಬರೆದಿರುವ ಕೆಲವು ಮಾತುಗಳು ಹೀಗಿವೆ:

‘ನಾನು ಈ ಕಥೆಯ ಆಧ್ಯಾತ್ಮಿಕ ಅರ್ಥವನ್ನು ಪಂಡಿತರಿಂದ ತಿಳಿಯಲು ಯತ್ನಿಸಿದೆ. ಅವರ ಪ್ರಕಾರ ಶರೀರವೇ ಚಿತ್ತೂರುದುರ್ಗ. ಮನ ಅದರ ರಾಜ ರತ್ನಸೇನ. ಹೃದಯ ಸಿಂಹಳ ದ್ವೀಪ. ಬುದ್ಧಿ ಪದ್ಮಾವತಿ. ಪ್ರೇಮ ಮಾರ್ಗ ತೋರಿಸುವ ಹೀರಾರಾಮನೇ ಗುರು. ನಾಗಮತಿ ಭವದ ಜಂಜಡ. ರಾಘವ ಚೇತನನೇ ಸೈತಾನ. ಸುಲ್ತಾನ ಅಲ್ಲಾವುದ್ದೀನ ಮಾಯೆ. ಈ ರೀತಿ ಪದ್ಮಾವತದ ಪ್ರೇಮಕಥೆಯ ರೂಪಕದ ಬಗೆಗೆ ವಿಚಾರ ಮಾಡಬೇಕು. ಈ ರೂಪಕ ಇಲ್ಲವೇ ಅನ್ಯೋಕ್ತಿ ಹೃದ್ಗತವಾದರೆ ಈ ಜ್ಞಾನವನ್ನು ಮನಸ್ಸಿನಲ್ಲಿ ಧರಿಸಬೇಕು’.

ಬಹುತೇಕವಾಗಿ ಭಾರತೀಯ ತತ್ತ್ವಚಿಂತನೆಯು ರೂಪಕಗಳ ಮೂಲಕವೇ ಅಭಿವ್ಯಕ್ತಗೊಳ್ಳುತ್ತದೆ. ತೀರಾ ನೇರ ಮತ್ತು ವಾಚ್ಯವಾದ ಸಂಗತಿಗಳಿಗೂ ಒಳಾರ್ಥ ಹಚ್ಚಿ ಅವುಗಳನ್ನು ಚರ್ಚಿಸುವುದು ಈ ದೇಶದ ಪಾರಂಪರಿಕ ಚರ್ಯೆ. ಹೀಗಿರುವಾಗ ಸಿನಿಮಾವೊಂದಕ್ಕೆ ಕಥೆಯನ್ನು ಅಳವಡಿಸಿಕೊಂಡು ಪ್ರಸ್ತುತಪಡಿಸುವಾಗ ಅದರಲ್ಲೂ ಮಾನಾವಮಾನಗಳನ್ನು ಆರೋಪಿಸಿ ವಿರೋಧಕ್ಕೆ ಇಳಿಯುವುದು ಏನನ್ನು ಸೂಚಿಸುತ್ತದೆ? ಇದು ಪ್ರತಿಷ್ಠೆಯ ರಚ್ಚೆಯಷ್ಟೇ ಅಲ್ಲದೆ ಮತ್ತೇನು ಇದ್ದೀತು?

ಇಂದಿನ ಭಾರತ, ಸಾಂಸ್ಕೃತಿಕವಾಗಿ ಹಿಮ್ಮುಖ ಚಲನೆಯನ್ನು ಆರಂಭಿಸಿದೆ ಎನ್ನುವವರು ಇದ್ದಾರೆ. ಅದು ಬಹುಶಃ ನಿಜವಲ್ಲ. ಏಕೆಂದರೆ, ನೂರಾರು ವರ್ಷಗಳ ಹಿಂದೆಯೇ ಮುಸ್ಲಿಂ ಕವಿಯೊಬ್ಬ ಮುಸ್ಲಿಂ ಅರಸ ಹಿಂದೂ ರಾಣಿಯನ್ನು ಮೋಹಿಸುವ ಕಾವ್ಯ ಬರೆದಾಗ ಯಾರೂ ವಿರೋಧಿಸಿರಲಿಲ್ಲ. ಅಷ್ಟೇ ಯಾಕೆ, ಈ ಹಿಂದೆ ಎರಡು ಬಾರಿ ‘ಪದ್ಮಾವತ್’ ಆಧಾರಿತ ಸಿನಿಮಾಗಳು ಬಂದುಹೋಗಿವೆ. ಆಗಲೂ ಗಲಭೆ ನಡೆದಿರಲಿಲ್ಲ. ‘ಜೋಧಾ ಅಕ್ಬರ್’ ಚಲನಚಿತ್ರ ಬಿಡುಗಡೆಯಾದಾಗಲೂ ಹೀಗೆಯೇ ಆಗಿತ್ತು. 70ರ ದಶಕದಲ್ಲಿ ಅಕ್ಬರ್– ಜೋಧಾ ಕಥೆಯ ಸಿನಿಮಾ ಬಂದಾಗ ನಡೆಯದ ಗಲಭೆ 2007– 08ರಲ್ಲಿ ನಡೆಯಿತು. ಈಗ ‘ಪದ್ಮಾವತ್’ ವಿಷಯದಲ್ಲೂ ಹಾಗೇ ಆಗುತ್ತಿದೆ. ಜನಸಮುದಾಯಗಳಲ್ಲಿ ಮೂಲಭೂತವಾದದ ಬೇರುಗಳು ಇಳಿಯುತ್ತಿರುವುದೇ ಇದಕ್ಕೆ ಕಾರಣವೆಂದು ಪ್ರತ್ಯೇಕ ಹೇಳಬೇಕಿಲ್ಲ.

ಈ ಒಟ್ಟು ಅವನತ ಮುಖದ ಬೆಳವಣಿಗೆಗಳನ್ನು ನೋಡಿದಾಗ ಆತಂಕವಾಗುವುದು ಮತ್ತೆ ಮತ್ತೆ ಹೆಣ್ಣುಗಳ ಕಾರಣಕ್ಕೇ. ಮೂಲಭೂತವಾದ ಮೊದಲು ಬೇಡುವುದು ಸ್ತ್ರೀ ಅಸ್ಮಿತೆಯ ಬಲಿಯನ್ನೇ. ಈಗ ರಜಪೂತ ಮಹಿಳೆಯರ ಪಾಡನ್ನೇ ನೋಡಿ. ಸಂಘಟನೆಯೊಂದು ಕರೆ ನೀಡಿದ್ದಕ್ಕೆ 1826 ಹೆಣ್ಣುಮಕ್ಕಳು ಜೌಹರ್‌ಗೆ ತಯಾರಾಗಿಬಿಡುತ್ತಾರೆ ಅಂದರೆ, ಅವರನ್ನು ಇನ್ನೂ ಯಾವ ಸ್ಥಿತಿಯಲ್ಲಿ ಇಡಲಾಗಿದೆ ಊಹಿಸಿ. ಇಂಥದೊಂದು ಆಚರಣೆಗೆ ಅವರು ಸಜ್ಜಾಗಿದ್ದಾರೆ ಮತ್ತು ಅವರನ್ನು ಅದಕ್ಕೆ ಸಜ್ಜುಗೊಳಿಸಲಾಗಿದೆ ಅನ್ನುವ ಅಂಶವೇ ಆ ಸಮುದಾಯ ಸಾಂಸ್ಕೃತಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದನ್ನು ಸೂಚಿಸುತ್ತದೆ. ಇನ್ನು ಜೌಹರ್ ನಡೆದರೂ ಅಷ್ಟೇ, ಬಿಟ್ಟರೂ ಅಷ್ಟೇ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry