ಇಸ್ರೇಲ್‌ ಪ್ರಧಾನಿ ಭೇಟಿ: ಹೊಸ ಎತ್ತರಕ್ಕೆ ಬಾಂಧವ್ಯ

7

ಇಸ್ರೇಲ್‌ ಪ್ರಧಾನಿ ಭೇಟಿ: ಹೊಸ ಎತ್ತರಕ್ಕೆ ಬಾಂಧವ್ಯ

Published:
Updated:
ಇಸ್ರೇಲ್‌ ಪ್ರಧಾನಿ ಭೇಟಿ: ಹೊಸ ಎತ್ತರಕ್ಕೆ ಬಾಂಧವ್ಯ

ಭಾರತ– ಇಸ್ರೇಲ್‌ ನಡುವೆ ಸಂಬಂಧ ದಿನೇ ದಿನೇ ಗಟ್ಟಿಯಾಗುತ್ತಲೇ ನಡೆದಿದೆ; ಅದನ್ನು ದುರ್ಬಲಗೊಳಿಸಲು ಸಾಧ್ಯವೇ ಇಲ್ಲ ಎನ್ನಲು ಇಸ್ರೇಲ್‌ ಪ್ರಧಾನಿ ಬೆಂಜಾಮಿನ್‌ ನೆತನ್ಯಾಹು ಅವರ ಇತ್ತೀಚಿನ ಭಾರತ ಭೇಟಿಯೇ ಒಂದು ತಾಜಾ ನಿದರ್ಶನ. 2003ರಲ್ಲಿ ಇಸ್ರೇಲ್‌ನ ಆಗಿನ ಪ್ರಧಾನಿ ಶಿಮೋನ್‌ ಪೆರೆಸ್‌ ಭಾರತಕ್ಕೆ ಬಂದಿದ್ದರು. ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಇಸ್ರೇಲ್‌ಗೆ ಭೇಟಿ ಕೊಟ್ಟಿದ್ದರು. ಇದು ಸ್ವಾತಂತ್ರ್ಯಾ ನಂತರ ಭಾರತದ ಪ್ರಧಾನಿಯೊಬ್ಬರು ಆ ದೇಶಕ್ಕೆ ನೀಡಿದ ಮೊದಲ ಭೇಟಿ. ಅಂದರೆ ಅನೇಕ ದಶಕಗಳ ಕಾಲ ಇಸ್ರೇಲ್‌ ನಮ್ಮ ವಿದೇಶಾಂಗ ನೀತಿಯಲ್ಲಿ ಲೆಕ್ಕಕ್ಕೇ ಇರಲಿಲ್ಲ. 1992ರಲ್ಲಿ ಪ್ರಧಾನಿಯಾಗಿದ್ದ ಪಿ.ವಿ. ನರಸಿಂಹರಾವ್‌ ಅವರು ಎರಡೂ ದೇಶಗಳ ಮಧ್ಯೆ ಪೂರ್ಣ ಪ್ರಮಾಣದ ರಾಜತಾಂತ್ರಿಕ ಸಂಬಂಧಕ್ಕೆ ಅಡಿಪಾಯ ಹಾಕಿದರೂ ನಮ್ಮ ಪ್ರಧಾನಿಯೊಬ್ಬರು ಆ ನೆಲದಲ್ಲಿ ಕಾಲಿಡಲು ಅದರ ನಂತರ 25 ವರ್ಷಗಳೇ ಬೇಕಾದವು. ಇದಕ್ಕೂ ಮುನ್ನ ಇಸ್ರೇಲ್‌ ಬಗ್ಗೆ ಸರ್ಕಾರಿ ಮಟ್ಟದಲ್ಲಿ ಇದ್ದ ಪೂರ್ವಗ್ರಹಗಳನ್ನು ಪಕ್ಕಕ್ಕಿಟ್ಟು ಸಮಕಾಲೀನ ಅವಶ್ಯಕತೆಗೆ ತಕ್ಕಂತೆ ಬಾಂಧವ್ಯ ಗಟ್ಟಿ ಮಾಡುವ ನಿರ್ಧಾರ ತೆಗೆದುಕೊಂಡು ವಿದೇಶಾಂಗ ನೀತಿಯಲ್ಲಿ ದೊಡ್ಡ ಬದಲಾವಣೆ ತಂದದ್ದು ಮೋದಿ ನೇತೃತ್ವದ ಸರ್ಕಾರದ ಪ್ರಮುಖ ತೀರ್ಮಾನ ಎನ್ನಬಹುದು.

ನೆತನ್ಯಾಹು ಬಂದ ವೇಳೆ ಕೂಡ ತುಂಬ ನಿರ್ಣಾಯಕ. ಏಕೆಂದರೆ ಅವರು ಭಾರತಕ್ಕೆ ಬಂದಿಳಿಯುವ ಕೆಲವೇ ದಿನಗಳ ಮುಂಚೆ ಜೆರುಸಲೇಂಗೆ ಇಸ್ರೇಲ್‌ನ ರಾಜಧಾನಿಯ ಸ್ಥಾನಮಾನ ನೀಡುವ ಅಮೆರಿಕದ ನಿರ್ಣಯದ ವಿರುದ್ಧ ವಿಶ್ವಸಂಸ್ಥೆಯಲ್ಲಿ ಭಾರತ ಮತ ಚಲಾಯಿಸಿತ್ತು. ಭಾರತದ ನಿಲುವಿನ ಬಗ್ಗೆ ನೆತನ್ಯಾಹು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೂ ಇಂತಹ ಒಂದು ವಿಷಯ ಅಥವಾ ಒಂದು ಮತ ಎರಡೂ ದೇಶಗಳ ಗಟ್ಟಿ ಬಾಂಧವ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದೇ ಹೇಳಿದ್ದರು. ‘ಭಾರತ– ಇಸ್ರೇಲ್‌ ನಡುವಿನದು ಸ್ವರ್ಗದಲ್ಲಿ ಬೆಸೆದ ಸಂಬಂಧ’ ಎಂಬ ಮಾತನ್ನೇ ಪುನರುಚ್ಚರಿಸಿದ್ದರು. ಟ್ಯಾಂಕ್‌ ನಿರೋಧಕ ಅತ್ಯಂತ ಸುಧಾರಿತ ರಫೈಲ್‌ ಕ್ಷಿಪಣಿ ವ್ಯವಸ್ಥೆಯನ್ನು ಇಸ್ರೇಲ್‌ನಿಂದ ಖರೀದಿಸುವ ಸುಮಾರು ₹ 3300 ಕೋಟಿಯ ಒಪ್ಪಂದ ಕೂಡ ನನೆಗುದಿಗೆ ಬಿದ್ದಿದೆ. ಆದರೂ ಭೇಟಿ ಮುಂದುವರಿಸಲು ಅದೊಂದು ಅಡ್ಡಿ ಎಂದು ಇಸ್ರೇಲ್‌ ಪರಿಗಣಿಸಲಿಲ್ಲ. ಇವೇ ಸಾಕು; ಈ ಬಾಂಧವ್ಯ ಸಣ್ಣಪುಟ್ಟ ಅಡಚಣೆಗಳಿಗೆ ವಿಚಲಿತಗೊಳ್ಳದೇ ಅದನ್ನು ಮೀರಿ ಬೆಳೆದಿದೆ ಎನ್ನಲು.

ಈ ಬೆಸುಗೆ ಎರಡೂ ದೇಶಗಳಿಗೆ ಅನಿವಾರ್ಯವೂ ಹೌದು. ಶಸ್ತ್ರಾಸ್ತ್ರಗಳೂ ಸೇರಿದಂತೆ ರಕ್ಷಣಾ ಸಾಮಗ್ರಿಗಳ ಸರಬರಾಜು ವಿಷಯದಲ್ಲಿ ಇಸ್ರೇಲ್‌ ನಮ್ಮ ಅಗತ್ಯಗಳನ್ನು ಪೂರೈಸುವ ವಿಶ್ವಾಸಾರ್ಹ ದೇಶ. ಅದು ಅನೇಕ ಸಲ ಸಾಬೀತಾಗಿದೆ. ಸೈಬರ್‌ ಭದ್ರತೆ, ಭಯೋತ್ಪಾದನೆ ನಿರ್ಮೂಲನೆ, ಅತ್ಯಂತ ಕಡಿಮೆ ನೀರು ಬಳಸಿ ಹೆಚ್ಚು ಇಳುವರಿ ಪಡೆಯುವ ಕೃಷಿ ತಂತ್ರಜ್ಞಾನ, ಕಸ ನಿರ್ವಹಣೆಯಂತಹ ಕ್ಷೇತ್ರದಲ್ಲಿ ಅದು ದೊಡ್ಡ ಸಾಧನೆ ಮಾಡಿದೆ. ಅವು ನಮಗೂ ಬೇಕು. ಸಾಫ್ಟ್‌ವೇರ್‌ ಅಭಿವೃದ್ಧಿ ಕ್ಷೇತ್ರದಲ್ಲಿನ ನಮ್ಮ ಪರಿಣತಿಯಿಂದ ಇಸ್ರೇಲ್‌ಗೆ ಅನುಕೂಲವಿದೆ. ವ್ಯಾಪಾರ– ವಾಣಿಜ್ಯ ಏರುಮುಖದಲ್ಲಿದೆ. ಈಗ 400 ಕೋಟಿ ಡಾಲರ್‌ (ಸುಮಾರು ₹ 26 ಸಾವಿರ ಕೋಟಿ) ಇರುವ ವಹಿವಾಟನ್ನು 2 ಸಾವಿರ ಕೋಟಿ ಡಾಲರ್‌ಗೆ (ಸುಮಾರು ₹ 1.3 ಲಕ್ಷ ಕೋಟಿ) ಹೆಚ್ಚಿಸುವ ಮಹತ್ವಾಕಾಂಕ್ಷೆ ಎರಡೂ ದೇಶಗಳದ್ದು. ಪ್ರವಾಸೋದ್ಯಮ, ಸಿನಿಮಾ ಕ್ಷೇತ್ರದಲ್ಲಿಯೂ ಎರಡೂ ದೇಶಗಳ ಕೊಡುಕೊಳ್ಳುವಿಕೆಗೆ ಬಹಳಷ್ಟು ಅವಕಾಶಗಳಿವೆ. ಇವನ್ನೆಲ್ಲ ಬಳಸಿಕೊಳ್ಳಬೇಕು ಎನ್ನುವುದು ಮೋದಿ ಅವರ ಆಶಯ. ನೆತನ್ಯಾಹು ಜತೆ ಅವರು ವೈಯಕ್ತಿಕ ಮಟ್ಟದಲ್ಲಿಯೂ ಮಧುರ ಬಾಂಧವ್ಯ ಇಟ್ಟುಕೊಂಡಿದ್ದಾರೆ. ಉಭಯ ದೇಶಗಳನ್ನು ಮತ್ತಷ್ಟು ಹತ್ತಿರ ತರುವಲ್ಲಿ ಇದು ಮಹತ್ವದ ಪಾತ್ರ ವಹಿಸುತ್ತಿದೆ. ಹೀಗಾಗಿಯೇ, ಪ್ಯಾಲೆಸ್ಟೀನ್‌ ಬಗ್ಗೆ ನಮಗಿರುವ ಸಾಂಪ್ರದಾಯಿಕ ಒಲವು ಇಸ್ರೇಲ್‌ ಜತೆಗಿನ ಬಾಂಧವ್ಯಕ್ಕೆ ಅಡ್ಡಗಾಲು ಆಗಲಿಲ್ಲ. ಮುಂದೆಯೂ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ಎರಡೂ ದೇಶಗಳ ಮೇಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry