ಅದಾನಿ, ರೆಡ್ಡಿಗೆ ಮತ್ತೆ ಸಂಕಷ್ಟ

7

ಅದಾನಿ, ರೆಡ್ಡಿಗೆ ಮತ್ತೆ ಸಂಕಷ್ಟ

Published:
Updated:
ಅದಾನಿ, ರೆಡ್ಡಿಗೆ ಮತ್ತೆ ಸಂಕಷ್ಟ

ಬೆಂಗಳೂರು: ಅಕ್ರಮ ಅದಿರು ಸಾಗಣೆ ಪ್ರಕರಣಗಳ ತನಿಖೆಯನ್ನು ಲೋಕಾಯುಕ್ತ ವಿಶೇಷ ತನಿಖಾ ತಂಡ ಮತ್ತೆ ಆರಂಭಿಸುವುದರಿಂದ ಪ್ರಭಾವಿ ರಾಜಕೀಯ ನಾಯಕರಿಗೆ ನಿಕಟವಾಗಿರುವ ಅದಾನಿ ಮತ್ತು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಸೇರಿದಂತೆ ಕೆಲವು ಪ್ರತಿಷ್ಠಿತ ಉದ್ಯಮಿಗಳು ಮತ್ತು ರಾಜಕಾರಣಿಗಳಿಗೆ ಸಂಕಷ್ಟ ಎದುರಾಗಲಿದೆ.

ರಾಜ್ಯದ ನವಮಂಗಳೂರು, ಕಾರವಾರ, ಬೇಲಿಕೇರಿ, ಗೋವಾದ ಪಣಜಿ, ಮರ್ಮಗೋವಾ, ಆಂಧ್ರದ ಕೃಷ್ಣಪಟ್ಟಣಂ, ಕಾಕಿನಾಡ, ವಿಶಾಖ ಪಟ್ಟಣಂ ಹಾಗೂ ಚೆನ್ನೈ ಬಂದರುಗಳ ಮೂಲಕ ಅಕ್ರಮವಾಗಿ ಅದಿರು ಸಾಗಣೆ ಮಾಡಿರುವ ಕೆಲವು ಪ್ರಕರಣಗಳನ್ನು ಕುರಿತು ಎಸ್‌ಐಟಿ ತನಿಖೆ ಕೈಗೆತ್ತಿಕೊಳ್ಳಲಿದೆ.

ಕೇಂದ್ರ ತನಿಖಾ ದಳ (ಸಿಬಿಐ) ಅಕ್ರಮ ಅದಿರು ಸಾಗಣೆ ಪ್ರಕರಣಗಳ ತನಿಖೆ ನಡೆಸಿತ್ತು. ಸೂಕ್ತ ಸಾಕ್ಷ್ಯಾಧಾರಗಳಿಲ್ಲ ಎಂಬ ಕಾರಣಕ್ಕೆ ಕೆಲವು ಪ್ರಕರಣಗಳನ್ನು ಪ್ರಾಥಮಿಕ ಹಂತದಲ್ಲೇ ಕೈಬಿಟ್ಟಿತ್ತು. ಇನ್ನೂ ಕೆಲವು ಪ್ರಕರಣಗಳಲ್ಲಿ ರಾಜ್ಯ ಸರ್ಕಾರವೇ ಎಂಎಂಡಿಆರ್‌ ಕಾಯ್ದೆಯಡಿ ಕ್ರಮ ಕೈಗೊಳ್ಳಬಹುದು ಎಂದು ಹೇಳಿತ್ತು.

ಅಕ್ರಮ ಗಣಿಗಾರಿಕೆ ಕುರಿತು ಅಧ್ಯಯನ ನಡೆಸಿದ ಸಚಿವ ಎಚ್‌.ಕೆ. ಪಾಟೀಲ ನೇತೃತ್ವದ ಸಂಪುಟ ಉಪ ಸಮಿತಿಯು ಸಿಬಿಐ ಕೈಬಿಟ್ಟಿರುವ ಪ್ರಕರಣಗಳನ್ನು ಎಸ್‌ಐಟಿ ತನಿಖೆಗೆ ಒಪ್ಪಿಸುವಂತೆ ಶಿಫಾರಸು ಮಾಡಿತ್ತು. ಈ ತಿಂಗಳ 16ರಂದು ಸೇರಿದ್ದ ಸಂಪುಟ ಸಭೆ ಇದಕ್ಕೆ ಒಪ್ಪಿಗೆ ನೀಡಿದೆ. ಈ ಪ್ರಕರಣಗಳಿಗೆ ಸಂಬಂಧಿಸಿದ ಕಡತ ಎಸ್‌ಐಟಿಗೆ ತಲುಪಬೇಕಾಗಿದೆ.

ಗೋವಾ ಬಂದರುಗಳಿಂದ 2006ರಿಂದ 10ರವರೆಗೆ 1.67 ಕೋಟಿ ಟನ್‌ ಅದಿರು ರಫ್ತು ಮಾಡಿರುವುದಾಗಿ ಸಿಬಿಐ 2016ರ ಡಿಸೆಂಬರ್‌ ತಿಂಗಳಲ್ಲಿ ಸರ್ಕಾರಕ್ಕೆ ಪತ್ರ ಬರೆದಿದೆ. ಕರ್ನಾಟಕದ ಅದಿರನ್ನು ಗೋವಾ ಅದಿರಿನ ಜೊತೆ ಬೆರೆಸಲಾಗಿದೆ. ಇದರಿಂದಾಗಿ ರಾಜ್ಯದ ಅದಿರಿನ ಪ್ರಮಾಣವನ್ನು ನಿಖರವಾಗಿ ಲೆಕ್ಕ ಹಾಕಲು ಸಾಧ್ಯವಿಲ್ಲ ಎಂದು ಪತ್ರದಲ್ಲಿ ವಿವರಿಸಿದೆ.

ಅದಿರಿನ ಗುಣಮಟ್ಟ ಹೆಚ್ಚಿಸಲು ಉದ್ಯಮಿಗಳು ಕರ್ನಾಟಕದ ಅದಿರನ್ನು ಗೋವಾ ಅದಿರಿನ ಜೊತೆ ಮಿಶ್ರಣ ಮಾಡಿದ್ದಾರೆ. ಆದರೆ, ಗೋವಾ ಬಂದರಿನಿಂದ ರಫ್ತಾದ ಅದಿರು ಗಣಿ ಮತ್ತು ಭೂವಿಜ್ಞಾನ ಇಲಾಖೆ ಪರವಾನಗಿ ನೀಡಿರುವ ಪ್ರಮಾಣಕ್ಕಿಂತಲೂ ಕಡಿಮೆ ಎಂದು ವಿವರಿಸಿದೆ.

ಅಲ್ಲದೆ, ನವಮಂಗಳೂರು ಹಾಗೂ ಕಾರವಾರ ಬಂದರಿನಿಂದಲೂ ರುಜುವಾತುಪಡಿಸಲಾಗದ ಪ್ರಮಾಣದಲ್ಲಿ ಅದಿರು ರಫ್ತು ಮಾಡಿರುವುದಾಗಿ ಸಿಬಿಐ ಹೇಳಿದೆ. 2006ರಿಂದ 2010 ರ ಡಿಸೆಂಬರ್‌ ಅವಧಿವರೆಗೆ 76ಕಂಪೆನಿಗಳು ಸುಮಾರು 2.86ಕೋಟಿ ಟನ್‌ ರಫ್ತು ಮಾಡಿವೆ. ಈ ಪೈಕಿ 53. 53 ಲಕ್ಷ ಟನ್‌ 40 ಕಂಪೆನಿಗಳಿಗೆ ಸೇರಿದ ರುಜುವಾತುಪಡಿಸಲಾಗದ ಅದಿರು ಎಂದು ಸಿಬಿಐ ಪತ್ರದಲ್ಲಿ ವಿವರಿಸಿದೆ.

ಕಾರವಾರ ಬಂದರಿನಿಂದ 37 ಕಂಪೆನಿಗಳು 79ಲಕ್ಷ ಟನ್‌ ಅದಿರು ರಫ್ತು ಮಾಡಿವೆ. ಇದರಲ್ಲಿ 20ಲಕ್ಷ ಟನ್‌ ರುಜುವಾತುಪಡಿಸಲಾಗದ ಅದಿರು ಎಂದು ಸಿಬಿಐ ಸ್ಪಷ್ಟಪಡಿಸಿದೆ.

ಪೂರ್ಣಗೊಳ್ಳದ ತನಿಖೆ

ಅಕ್ರಮ ಅದಿರು ರಫ್ತು ಪ್ರಕರಣಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ 2013ರಲ್ಲಿ ಸಿಬಿಐ ತನಿಖೆಗೆ ಆದೇಶಿಸಿದ್ದರೂ ಆಂಧ್ರದ ಕಾಕಿನಾಡ, ವಿಶಾಖಪಟ್ಟಣಂ ಮತ್ತು ಕೃಷ್ಣಪಟ್ಟಣಂ ಬಂದರಿನಿಂದ ರಫ್ತಾದ ಅದಿರು ಪ್ರಕರಣ ಕುರಿತ ಪ್ರಾಥಮಿಕ ತನಿಖೆ ಇನ್ನೂ ಪೂರ್ಣಗೊಂಡಿಲ್ಲ.

ತಮಿಳುನಾಡಿನ ಎಣ್ಣೋರ್‌ ಹಾಗೂ ಚೆನ್ನೈ ಬಂದರಿನಿಂದ ರಫ್ತು ಮಾಡಲಾದ ಅದಿರು ಕುರಿತ ತನಿಖೆಗೆ ಅಲ್ಲಿನ ಸರ್ಕಾರ ಒಪ್ಪಿಗೆ ನೀಡಿದ್ದರೂ, ದೆಹಲಿ ಪೊಲೀಸ್‌ ಎಸ್ಟಾಬ್ಲಿಷ್‌ಮೆಂಟ್‌ ಕಾಯ್ದೆ ಅಡಿ ಕೇಂದ್ರ ಸರ್ಕಾರದ ಆಡಳಿತ ಸಿಬ್ಬಂದಿ ತರಬೇತಿ ಇನ್ನೂ ಅನುಮತಿ ನೀಡಿಲ್ಲ. ಇದರಿಂದ ಇನ್ನೂ ತನಿಖೆ ಆರಂಭವಾಗಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry