ಸೆಮಿಗೆ ಮೈಸೂರು ವಿ.ವಿ

7

ಸೆಮಿಗೆ ಮೈಸೂರು ವಿ.ವಿ

Published:
Updated:
ಸೆಮಿಗೆ ಮೈಸೂರು ವಿ.ವಿ

ಮೈಸೂರು: ಚೇತೋಹಾರಿ ಪ್ರದರ್ಶನ ನೀಡಿದ ಆತಿಥೇಯ ಮೈಸೂರು ವಿಶ್ವವಿದ್ಯಾನಿಲಯ ಮತ್ತು ಮಂಗಳೂರು ವಿಶ್ವವಿದ್ಯಾಲಯ ತಂಡಗಳು ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಪುರುಷರ ಕೊಕ್ಕೊ ಟೂರ್ನಿಯ ಸೆಮಿಫೈನಲ್ ಪ್ರವೇಶಿಸಿದವು.

ಸ್ಪೋರ್ಟ್ಸ್‌ ಪೆವಿಲಿಯನ್‌ನಲ್ಲಿ ಮಂಗಳವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮೈಸೂರು ವಿ.ವಿ ತಂಡ 17–15 ರಲ್ಲಿ ಕಳೆದ ಬಾರಿಯ ‘ರನ್ನರ್ ಅಪ್’ ಮುಂಬೈ ವಿ.ವಿ ವಿರುದ್ಧ ರೋಚಕ ಜಯ ಸಾಧಿಸಿತು. ಮೂರು ನಿಮಿಷ ಆಡಿದ್ದಲ್ಲದೆ, ನಾಲ್ಕು ಪಾಯಿಂಟ್ ಕಲೆಹಾಕಿದ ಎಚ್.ಆರ್.ಮನು ಮತ್ತು ಮೂರು ಪಾಯಿಂಟ್ ಸಂಗ್ರಹಿಸಿದ ಕೃಷ್ಣ ಅವರು ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು.

ಬುಧವಾರ ನಡೆಯಲಿರುವ ಸೆಮಿಫೈನಲ್‌ ಪಂದ್ಯದಲ್ಲಿ ಆತಿಥೇಯರು ಮಂಗಳೂರು ವಿ.ವಿ ವಿರುದ್ಧ ಪೈಪೋಟಿ ನಡೆಸಲಿದ್ದಾರೆ. ದಿನದ ಮತ್ತೊಂದು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮಂಗಳೂರು ವಿ.ವಿ ತಂಡ 14–12ರಲ್ಲಿ ಕೇರಳದ ಕಲ್ಲಿಕೋಟೆ ವಿ.ವಿ ತಂಡವನ್ನು ಸೋಲಿಸಿತು. ಚುರುಕಿನ ಆಟವಾಡಿದ ಧನುಷ್ ಮತ್ತು ವಿಜಯ್ ಅವರು ತಂಡದ ಗೆಲುವಿಗೆ ನೆರವಾದರು.

ಎಸ್‌ಆರ್‌ಟಿಎನ್‌ಗೆ ಆಘಾತ: ಕಳೆದ ಬಾರಿಯ ಚಾಂಪಿಯನ್ ಮಹಾರಾಷ್ಟ್ರದ ನಾಂದೇಡ್‌ನ ಎಸ್‌ಆರ್‌ಟಿಎನ್ ವಿ.ವಿ ತಂಡ ಕ್ವಾರ್ಟರ್‌ ಫೈನಲ್‌ನಲ್ಲಿ ಸೋತು ಹೊರಬಿದ್ದಿತು.

ಕೊಲ್ಲಾಪುರದ ಶಿವಾಜಿ ವಿ.ವಿ ತಂಡ 14–13 ರಲ್ಲಿ ಎಸ್‌ಆರ್‌ಟಿಎಂ ವಿ.ವಿ ವಿರುದ್ಧ ಅಚ್ಚರಿಯ ಗೆಲುವು ಗಳಿಸಿತು. ಮೂರು ನಿಮಿಷ 40 ಸೆಕೆಂಡ್‌ ಆಡಿತು. ಶಿವಾಜಿ ತಂಡ ನಾಲ್ಕರ ಘಟ್ಟದ ಪಂದ್ಯದಲ್ಲಿ ಪುಣೆಯ ಸಾವಿತ್ರಿಬಾಯಿ ಫುಲೆ ವಿ.ವಿ ತಂಡದ ಸವಾಲನ್ನು ಎದುರಿಸಲಿದೆ. ಸಾವಿತ್ರಿಬಾಯಿ ಫುಲೆ ತಂಡ 19–14 ರಲ್ಲಿ ದಾವಣಗೆರೆ ವಿ.ವಿ ವಿರುದ್ಧ ಜಯಿಸಿತು.

ಸಯೇಶ್ ಮತ್ತು ಆಕಾಶ್ ಅವರು ವಿಜಯಿ ತಂಡದ ಪರ  ಉತ್ತಮ ಆಟವಾಡಿದರು.

ಬುಧವಾರ ಬೆಳಿಗ್ಗೆ ಸೆಮಿಫೈನಲ್‌ ಪಂದ್ಯಗಳು  ಹಾಗೂ ಮಧ್ಯಾಹ್ನ ಫೈನಲ್‌ ಪಂದ್ಯ ನಡೆಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry