ರಾಷ್ಟ್ರೀಯ ಬಾಕ್ಸಿಂಗ್‌ಗೆ ಬೆಂಗಳೂರು ಸಜ್ಜು

7

ರಾಷ್ಟ್ರೀಯ ಬಾಕ್ಸಿಂಗ್‌ಗೆ ಬೆಂಗಳೂರು ಸಜ್ಜು

Published:
Updated:

ಬೆಂಗಳೂರು: ಮಲ್ಲೇಶ್ವರಂ ಸ್ಪೋರ್ಟ್ಸ್ ಫೌಂಡೇಶನ್ ಸಹಕಾರದಲ್ಲಿ ರಾಜ್ಯ ಬಾಕ್ಸಿಂಗ್ ಸಂಸ್ಥೆ ಆಯೋಜಿಸಿರುವ ರಾಷ್ಟ್ರೀಯ ಸೀನಿಯರ್‌ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ಗೆ ನಗರದ ಸಜ್ಜುಗೊಂಡಿದೆ. ಬುಧವಾರ ಸಂಜೆ ಸ್ಪರ್ಧೆಗಳು ಆರಂಭಗೊಳ್ಳಲಿವೆ. 75ಕ್ಕೂ ಹೆಚ್ಚು ಮಹಿಳೆಯರು ಒಳಗೊಂಡಂತೆ 450ಕ್ಕೂ ಹೆಚ್ಚು ಸ್ಪರ್ಧಿಗಳು ಚಾಂಪಿಯನ್‌ಷಿಪ್‌ನಲ್ಲಿ ಸಾಮರ್ಥ್ಯ ಮೆರೆಯಲಿದ್ದು 30 ರಾಜ್ಯಗಳು ಮತ್ತು ಸರ್ವಿಸಸ್‌ ತಂಡಗಳು ರಾಜ್‌ಕುಮಾರ್ ಕಪ್‌ ಮುಡಿಗೇರಿಸಿಕೊಳ್ಳಲು ಸೆಣಸಲಿವೆ. 28ರಂದು ಸ್ಪರ್ಧೆಗಳು ಮುಕ್ತಾಯಗೊಳ್ಳಲಿವೆ.

45 ಕೆಜಿ ಒಳಗಿನವರ ಲೈಟ್ ಫ್ಲೈವೇಟ್‌ ವಿಭಾಗದಿಂದ ಹಿಡಿದು 91 ಕೆಜಿ ಮೇಲಿನವರ ಸೂಪರ್ ಹೆವಿವೇಟ್‌ ವಿಭಾಗದ ವರೆಗೆ ಒಟ್ಟು 10 ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ.ಪ್ರತಿ ವಿಭಾಗದಲ್ಲಿ ಚಿನ್ನ, ಬೆಳ್ಳಿ ಮತ್ತು ಎರಡು ಕಂಚಿನ ಪದಕಗಳನ್ನು ನೀಡಲಾಗುವುದು. 250ಕ್ಕೂ ಅಧಿಕ ಪಂದ್ಯಗಳಿಗೆ ಮಲ್ಲೇಶ್ವರಂನ ಕೋದಂಡರಾಮಪುರ ಕಬಡ್ಡಿ ಕ್ರೀಡಾಂಗಣದಲ್ಲಿ ನಿರ್ಮಿಸಿರುವ ರಿಂಗ್ ಸಾಕ್ಷಿಯಾಗಲಿದೆ. ಈ ಹಿಂದೆ ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳಲ್ಲಿ ಮಿಂಚಿದ ಹತ್ತಕ್ಕೂ ಹೆಚ್ಚು ಬಾಕ್ಸರ್‌ಗಳು ಗಮನ ಸೆಳೆಯಲಿದ್ದಾರೆ.

ಮೆರವಣಿಗೆ

ಕಬಡ್ಡಿ ಕ್ರೀಡಾಂಗಣದ ಸಮೀಪ ಇರುವ ಕಾಡುಮಲ್ಲೇಶ್ವರ ದೇವಸ್ಥಾನದ ಆವರಣದಿಂದ ಬುಧವಾರ ಸಂಜೆ 4 ಗಂಟೆಗೆ ಭವ್ಯ ಮೆರವಣಿಗೆ ಆರಂಭವಾಗಲಿದೆ. ಸ್ಪರ್ಧಾಳುಗಳ ಜೊತೆಯಲ್ಲಿ ಹಿರಿಯ ಬಾಕ್ಸರ್‌ಗಳು ಹೆಜ್ಜೆ ಹಾಕಲಿದ್ದಾರೆ. ಆರು ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಚಿತ್ರ ನಟರಾದ ಪುನೀತ್ ರಾಜ್‌ಕುಮಾರ್, ಜಗ್ಗೇಶ್, ನಿವೃತ್ತ ಎಸಿಪಿ ಬಿ.ಕೆ ಶಿವರಾಂ ಮುಂತಾದವರು ಭಾಗವಹಿಸುವರು. ಏಳು ಗಂಟೆಯಿಂದ ಬೌಟ್‌ಗಳು ಆರಂಭವಾಗಲಿವೆ.

ಮಲ್ಲೇಶ್ವರಂ ಕ್ಲಬ್‌ನಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ಚಾಂಪಿಯನ್‌ಷಿಪ್‌ನ ಕಪ್‌ಗಳನ್ನು ಶಾಸಕ ಸಿ.ಎಸ್‌.ಅಶ್ವತ್ಥನಾರಾಯಣ ಮತ್ತು ಹಿರಿಯ ಬಾಕ್ಸರ್ ವೇಣು ಅನಾವರಣಗೊಳಿಸಿದರು. ತಂಡಗಳ ಜೆರ್ಸಿಯನ್ನು ಕರ್ನಾಟಕದ ದೀಪಿಕಾ ರಾಜು ಮತ್ತು ಆದಿತ್ಯ ಬಿಡುಗಡೆಗೊಳಿಸಿದರು. ರಾಜ್ಯ ಬಾಕ್ಸಿಂಗ್ ಸಂಸ್ಥೆಯ ಅಧ್ಯಕ್ಷ ಎ.ರಾಜು ಹಾಗೂ ಕಾರ್ಯದರ್ಶಿ ಜಯಕುಮಾರ್‌ ಇದ್ದರು.    

ಹೊಸ ರಿಂಗ್ ನಿರ್ಮಾಣ

ಚಾಂಪಿಯನ್‌ಷಿಪ್‌ಗಾಗಿ ಹೊಸ ಬಾಕ್ಸಿಂಗ್ ರಿಂಗ್ ನಿರ್ಮಿಸಿದ್ದು ಇದು ರಾಜ್ಯದ ಮೊದಲ ಅಂತರರಾಷ್ಟ್ರೀಯ ಮಟ್ಟದ ರಿಂಗ್‌. ಅತ್ಯಾಧುನಿ ತಂತ್ರಜ್ಞಾನ ಹೊಂದಿರುವ ರಿಂಗ್‌ಗಾಗಿ ₹ 14 ಲಕ್ಷ ವೆಚ್ಚ ಮಾಡಲಾಗಿದೆ ಎಂದು ಎಂದು ಬಾಕ್ಸಿಂಗ್ ಸಂಸ್ಥೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry