4

ವೈಟ್‌ವಾಷ್‌ ತಪ್ಪಿಸಿಕೊಳ್ಳುವ ಭರವಸೆ

Published:
Updated:
ವೈಟ್‌ವಾಷ್‌ ತಪ್ಪಿಸಿಕೊಳ್ಳುವ ಭರವಸೆ

ಜೊಹಾನ್ಸ್‌ಬರ್ಗ್‌: ಭಾರತ ತಂಡವು ಬುಧವಾರ ಇಲ್ಲಿ ಆರಂಭವಾಗಲಿರುವ ಮೂರನೇ ಹಾಗೂ ಅಂತಿಮ ಟೆಸ್ಟ್‌ ಪಂದ್ಯದಲ್ಲಿ ಗೆದ್ದು ಗೌರವ ಉಳಿಸಿಕೊಳ್ಳುವತ್ತ ಚಿತ್ತ ನೆಟ್ಟಿದೆ.

ಸರಣಿಯಲ್ಲಿ 0–2ರ ಹಿನ್ನಡೆ ಅನುಭವಿಸಿರುವ ಭಾರತ ಸಮಾ ಧಾನಕರ ಗೆಲುವಿಗೆ ಪ್ರಯತ್ನಿಸುತ್ತಿದೆ. ವಾಂಡರರ್ಸ್ ಕ್ರೀಡಾಂಗಣದಲ್ಲಿ ಭಾರತ ತಂಡವು ಇಲ್ಲಿಯವರೆಗೆ ಸೋತಿಲ್ಲ. ಆದ್ದರಿಂದ ಕೊಹ್ಲಿ ಬಳಗದ  ಆತ್ಮವಿಶ್ವಾಸ ಹೆಚ್ಚಿದೆ.

ಸೆಂಚೂರಿಯನ್‌ನಲ್ಲಿ ನಡೆದ ಎರ ಡನೇ ಪಂದ್ಯಕ್ಕೆ ಹುಲ್ಲುಹಾಸು ಇಲ್ಲದ ಪಿಚ್‌ ಸಿದ್ಧಪಡಿಸಿದ್ದಕ್ಕೆ ಆತಿಥೇಯ ತಂಡದ ನಾಯಕ ಫಾಫ್‌ ಡುಪ್ಲೆಸಿ ಅಸಮಾಧಾನ ವ್ಯಕ್ತಪಡಿಸಿದ್ದರು. ಹೀಗಾಗಿ ಜೊಹಾನ್ಸ್‌ಬರ್ಗ್‌ನಲ್ಲಿ ವೇಗಿಗಳಿಗೆ ಅನುಕೂಲ ಆಗುವ ಪಿಚ್‌ ಸಿದ್ಧವಾಗಿದೆ. ಎರಡು ‍ಪಂದ್ಯಗಳಲ್ಲಿ ಎದುರಾಳಿ ತಂಡದ ವೇಗಿಗಳನ್ನು ಎದುರಿಸಲು ಪರದಾಡಿದ ಭಾರತದ ಬ್ಯಾಟ್ಸ್‌ಮನ್‌ಗಳು ಇಲ್ಲಿ ಯಾವ ತಂತ್ರಗಳೊಂದಿಗೆ ಕಣಕ್ಕೆ ಇಳಿಯುವರು ಎಂಬುದು ಕುತೂಹಲ ಕೆರಳಿಸಿದೆ.

ವೇಗಿಗಳ ಅಬ್ಬರದ ನಡುವೆಯೂ ವಾಂಡರರ್ಸ್‌ನಲ್ಲಿ 2006ರಲ್ಲಿ ನಡೆದ ಪಂದ್ಯದಲ್ಲಿ ಭಾರತ ಜಯ ಸಾಧಿಸಿತ್ತು. ಎಸ್‌.ಶ್ರೀಶಾಂತ್ ಆ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 30 ರನ್‌ಗಳಿಗೆ ಐದು ವಿಕೆಟ್ ಕಬಳಿಸಿ ಮಿಂಚಿದ್ದರು. ಮೊದಲ ಇನಿಂಗ್ಸ್‌ನಲ್ಲಿ 80 ರನ್‌ಗಳಿಗೆ ಆಲೌಟಾಗಿದ್ದ ದಕ್ಷಿಣ ಆಫ್ರಿಕಾ 123 ರನ್‌ಗಳಿಂದ ಪಂದ್ಯ ಸೋತಿತ್ತು. ದಕ್ಷಿಣ ಆಫ್ರಿಕಾದಲ್ಲಿ ಭಾರತ ಗಳಿಸಿದ ಕೇವಲ ಎರಡು ಜಯಗಳಲ್ಲಿ ಇದು ಕೂಡ ಒಂದು.

ಸರಣಿಯ ಮೊದಲ ಎರಡು ಟೆಸ್ಟ್‌ಗಳಲ್ಲಿ ಬ್ಯಾಟ್ಸ್‌ಮನ್‌ಗಳು ವಿಫಲ ರಾದರೂ ಬೌಲರ್‌ಗಳು ಉತ್ತಮವಾಗಿ ಆಡಿದ್ದರು. ಎರಡೂ ಟೆಸ್ಟ್‌ಗಳ ಎರಡೂ ಇನಿಂಗ್ಸ್‌ಗಳಲ್ಲೂ ಆತಿಥೇಯರನ್ನು ಆಲೌಟ್ ಮಾಡುವಲ್ಲಿ ಯಶಸ್ವಿಯಾಗಿದ್ದರು.

ವಿರಾಟ್ ಕೊಹ್ಲಿಗೆ ಸವಿ ನೆನಪು

ವಾಂಡರರ್ಸ್‌ನಲ್ಲಿ ವಿರಾಟ್ ಕೊಹ್ಲಿ ಉತ್ತಮ ಸಾಧನೆ ಮಾಡಿದ್ದಾರೆ. 2013ರಲ್ಲಿ ನಡೆದ ಪಂದ್ಯದಲ್ಲಿ ಅವರು ಮೊದಲ ಇನಿಂಗ್ಸ್‌ನಲ್ಲಿ 119 ಮತ್ತು ಎರಡನೇ ಇನಿಂಗ್ಸ್‌ನಲ್ಲಿ 96 ರನ್‌ ಸಿಡಿಸಿದ್ದರು.

ಪಂದ್ಯದಲ್ಲಿ ಆತಿಥೇಯರಿಗೆ 458 ರನ್‌ಗಳ ಗುರಿ ನೀಡಲಾಗಿತ್ತು. ದಕ್ಷಿಣ ಆಫ್ರಿಕಾ 450 ರನ್‌ ಗಳಿಸಿ ಪಂದ್ಯವನ್ನು ಡ್ರಾ ಮಾಡಿಕೊಂಡಿತ್ತು.

ಈ ಕ್ರೀಡಾಂಗಣದಲ್ಲಿ ಬ್ಯಾಟ್ಸ್‌ ಮನ್‌ಗಳು ಕೂಡ ಮಿಂಚಬಲ್ಲರು ಎಂಬುದನ್ನು ಆ ಪಂದ್ಯ ಸಾಬೀತು ಮಾಡಿತ್ತು.

ಮೊದಲ ಎರಡು ಪಂದ್ಯಗಳಲ್ಲಿ ಆಡಲು ಅವಕಾಶ ಲಭಿಸದ ಅಜಿಂಕ್ಯ ರಹಾನೆ ಮೂರನೇ ಪಂದ್ಯದಲ್ಲಿ ಕಣಕ್ಕೆ ಇಳಿಯುವ ಸಾಧ್ಯತೆಗಳು ನಿಚ್ಚಳವಾಗಿವೆ. ಕಳೆದ ವಾರದ ಕೊನೆಯಲ್ಲಿ ಅವರು ನೆಟ್ಸ್‌ನಲ್ಲಿ ಬಹಳಷ್ಟು ಅಭ್ಯಾಸ ಮಾಡಿದ್ದರು. ವೃದ್ಧಿಮಾನ್ ಸಹಾ ಬದಲಿಗೆ ದಿನೇಶ್‌ ಕಾರ್ತಿಕ್ ಅವರನ್ನು ಕರೆಸಿಕೊಳ್ಳಲಾಗಿದ್ದು  ಅವರನ್ನು ಕಣಕ್ಕೆ ಇಳಿಸುವ ಸಾಧ್ಯತೆ ಇದೆ.

ಬೌಲಿಂಗ್‌ನಲ್ಲಿ ಮಿಂಚು ಹರಿಸಬಲ್ಲ ವೇಗಿಗಳ ಜೊತೆ ಬ್ಯಾಟಿಂಗ್‌ನಲ್ಲೂ ದಕ್ಷಿಣ ಆಫ್ರಿಕಾ ಅಮೋಘ ಸಾಮರ್ಥ್ಯ ಹೊಂದಿದೆ.

ಫೀಲ್ಡಿಂಗ್‌ನಲ್ಲೂ ಉತ್ತಮ ಸಾಧನೆ ಮಾಡಿರುವ ಈ ತಂಡ ಎರಡು ಪಂದ್ಯಗಳಲ್ಲಿ ಮೇಲುಗೈ ಸಾಧಿಸಿದೆ. ಹೀಗಾಗಿ ಇಲ್ಲೂ ಭರವಸೆಯಲ್ಲೇ ಆಡಲು ಇಳಿಯಲಿದೆ.

ಕೊಹ್ಲಿ ಹೆಚ್ಚು ಕಾಲ ನಾಯಕನಾಗಿ ಇರಲಾರರು: ಸ್ಮಿತ್‌

ಜೊಹಾನ್ಸ್‌ಬರ್ಗ್‌:
ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಹೆಚ್ಚು ಕಾಲ ಆ ಸ್ಥಾನದಲ್ಲಿ ಉಳಿಯಲಾರರು ಎಂದು ದಕ್ಷಿಣ ಆಫ್ರಿಕಾದ ಹಿರಿಯ ಆಟಗಾರ ಗ್ರೇಮ್ ಸ್ಮಿತ್ ಅಭಿಪ್ರಾಯಪಟ್ಟರು.

ದಕ್ಷಿಣ ಆಫ್ರಿಕಾದ ಟಿವಿ ವಾಹಿನಿ ‘ಸೂಪರ್‌ ಸ್ಪೋರ್ಟ್‌’ ಮಂಗಳವಾರ ಆಯೋಜಿಸಿದ್ದ ಚಹಾ ಕೂಟದಲ್ಲಿ ಮಾತನಾಡಿದ ಅವರು ‘ಭಾರತ ತಂಡದ ಆಡಳಿತ ಕೊಹ್ಲಿ ಅವರ ನಾಯಕತ್ವ ಗುಣವನ್ನು ಈ ವರೆಗೆ ಪರೀಕ್ಷೆಗೆ ಒಡ್ಡಲೇ ಇಲ್ಲ’ ಎಂದರು.

‘ಕೊಹ್ಲಿ ಭಾರತದಲ್ಲಿ ಮಾತ್ರ ಯಶಸ್ಸು ಕಂಡಿದ್ದಾರೆ. ವಿದೇಶಿ ನೆಲದಲ್ಲಿ ಪರಿಣಾಮಕಾರಿಯಾಗಿ ತಂಡವನ್ನು ಮುನ್ನಡೆಸಲು ಅವರಿಗೆ ಸಾಧ್ಯವಾಗಲಿಲ್ಲ. ಈ ವರ್ಷ ಅವರಿಗೆ ಸವಾಲಿನದ್ದಾಗಲಿದ್ದು ವರ್ಷಾಂತ್ಯದಲ್ಲಿ ಬದಲಾವಣೆ ಕಂಡುಬರುವ ಸಾಧ್ಯತೆ ಇದೆ’ ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry