ಬಿಜೆಪಿ ಬಿಟ್ಟು ಸೇನಾ ಏಕಾಂಗಿ ಸ್ಪರ್ಧೆ

7

ಬಿಜೆಪಿ ಬಿಟ್ಟು ಸೇನಾ ಏಕಾಂಗಿ ಸ್ಪರ್ಧೆ

Published:
Updated:
ಬಿಜೆಪಿ ಬಿಟ್ಟು ಸೇನಾ ಏಕಾಂಗಿ ಸ್ಪರ್ಧೆ

ಮುಂಬೈ: 2019ರಲ್ಲಿ ನಡೆಯಲಿರುವ ಲೋಕಸಭೆ ಮತ್ತು ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿಯೇ ಸ್ಪರ್ಧಿಸಲು ಶಿವಸೇನಾ ನಿರ್ಧರಿಸಿದೆ. ಅಷ್ಟಲ್ಲದೆ, ಬೇರೆರಾಜ್ಯಗಳಲ್ಲಿಯೂ ಸ್ಪರ್ಧಿಸುವಮೂಲಕ ರಾಷ್ಟ್ರವ್ಯಾಪಿ ಅಸ್ತಿತ್ವ ಕಂಡುಕೊಳ್ಳಲು ಮುಂದಾಗಿದೆ.

ಮುಂಬೈಯಲ್ಲಿ ಮಂಗಳವಾರ ನಡೆದ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಈ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಉದ್ಧವ್‌ ಠಾಕ್ರೆ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ‍ಪುನರಾಯ್ಕೆ ಮಾಡಲಾಗಿದೆ. ಅವರ ಮಗ ಆದಿತ್ಯ ಠಾಕ್ರೆಯವರನ್ನು ಪಕ್ಷದ ‘ನಾಯಕ’ ಸ್ಥಾನಕ್ಕೆ ಏರಿಸುವುದರೊಂದಿಗೆ ರಾಷ್ಟ್ರೀಯ ಕಾರ್ಯಕಾರಿಣಿಯ ಸದಸ್ಯರನ್ನಾಗಿಯೂ ಮಾಡಲಾಗಿದೆ.

ಬಿಜೆಪಿಯ ಅತ್ಯಂತ ಹಳೆಯಮಿತ್ರಪಕ್ಷವಾಗಿರುವ ಸೇನಾ ಈಗ ಮಹಾರಾಷ್ಟ್ರ ಸರ್ಕಾರ ಮತ್ತು ಕೇಂದ್ರದ ಎನ್‌ಡಿಎ ಸರ್ಕಾರದ ಭಾಗವಾಗಿದೆ. 2014ರ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಗಳಲ್ಲಿಯೂ ಈ ಎರಡೂ ಪಕ್ಷಗಳು ಪ್ರತ್ಯೇಕವಾಗಿ ಸ್ಪರ್ಧಿಸಿದ್ದವು. ಆದರೆ, ಚುನಾವಣೆ ಬಳಿಕ ಒಂದಾಗಿದ್ದವು.

ಪ್ರಧಾನಿ ಮೋದಿ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಅವರು ವಿಶ್ವ ಆರ್ಥಿಕ ವೇದಿಕೆಯ ಸಮಾವೇಶದಲ್ಲಿ ಭಾಗವಹಿಸಲು ದಾವೋಸ್‌ಗೆ ಹೋಗಿರುವ ಸಂದರ್ಭದಲ್ಲಿಯೇ ಸೇನಾ ಈ ನಿರ್ಧಾರ ಕೈಗೊಂಡಿದೆ.

ರಾಜ್ಯಸಭಾ ಸದಸ್ಯ, ಠಾಕ್ರೆ ಕುಟುಂಬದ ಆಪ್ತ ಸಂಜಯ ರಾವತ್‌ ಅವರು ಏಕಾಂಗಿಯಾಗಿ ಸ್ಪರ್ಧಿಸುವ ನಿರ್ಣಯ ಮಂಡಿಸಿದರು.

ಏಕಾಂಗಿಯಾಗಿ ಸ್ಪರ್ಧಿಸಿ 25 ಲೋಕಸಭಾ ಕ್ಷೇತ್ರಗಳು ಮತ್ತು 125 ವಿಧಾನಸಭಾ ಕ್ಷೇತ್ರಗಳಲ್ಲಿ ಸೇನಾ ಗೆಲ್ಲಲಿದೆ ಎಂದು ರಾವತ್‌ ವಿಶ್ವಾಸ

ವ್ಯಕ್ತಪಡಿಸಿದ್ದಾರೆ. ಮಹಾರಾಷ್ಟ್ರದಲ್ಲಿ 48 ಲೋಕಸಭಾ ಕ್ಷೇತ್ರಗಳು ಮತ್ತು 288 ವಿಧಾನಸಭಾ ಕ್ಷೇತ್ರಗಳಿವೆ.

ರಾಷ್ಟ್ರೀಯ ಕಾರ್ಯಕಾರಿಣಿಯನ್ನು ಉದ್ದೇಶಿಸಿ ಮಾತನಾಡಿದ ಉದ್ಧವ್‌ ಠಾಕ್ರೆ, ಮೋದಿ ಮತ್ತು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಗುಜರಾತ್‌ನಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯನ್ನು ಪ್ರಸ್ತಾಪಿಸಿದ ಅವರು, ‘ಗುಜರಾತ್‌ನಲ್ಲಿ ಕಾಂಗ್ರೆಸ್‌ ಬಲ ಹೆಚ್ಚಾಗಿದೆ, ಬಿಜೆಪಿ ಶಕ್ತಿ ಕುಗ್ಗಿದೆ. ನಮಗೆ ಕಾಂಗ್ರೆಸ್‌ ಬಗ್ಗೆ ಖುಷಿಯೂ ಇಲ್ಲ, ಬಿಜೆಪಿಯ ಸ್ಥಿತಿ ಬಗ್ಗೆ ಬೇಸರವೂ ಇಲ್ಲ. ಅಲ್ಲಿ ಪ್ರಾದೇಶಿಕ ಪಕ್ಷವೊಂದು ಇದ್ದಿದ್ದರೆ ಆ ಪಕ್ಷವೇ ಚುನಾವಣೆ ಗೆಲ್ಲುತ್ತಿತ್ತು’ ಎಂದು ಹೇಳಿದ್ದಾರೆ.

ವಿವಿಧ ದೇಶಗಳ ಮುಖ್ಯಸ್ಥರನ್ನು ಮೋದಿ ಅವರು ಅಹಮದಾಬಾದ್‌ ಮತ್ತು ಗುಜರಾತ್‌ಗೆ ಕರೆದೊಯ್ದಿರುವುದನ್ನು ಉದ್ಧವ್‌ ಟೀಕಿಸಿದರು.

**

ಪ್ರತಿ ರಾಜ್ಯದಲ್ಲಿಯೂ ನಾವು ಹಿಂದುತ್ವದ ಹೆಸರಿನಲ್ಲಿ ಚುನಾವಣೆ ಎದುರಿಸುತ್ತೇವೆ. ಈ ಬಗ್ಗೆ ಇಂದೇ ಪ್ರತಿಜ್ಞೆ ಮಾಡೋಣ.

– ಉದ್ಧವ್ ಠಾಕ್ರೆ, ಶಿವಸೇನಾ ಅಧ್ಯಕ್ಷ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry