‘ಬಿಜೆಪಿಯ ಪ್ರಚೋದನೆಗೆ ಬಲಿಯಾಗಬೇಡಿ’

7

‘ಬಿಜೆಪಿಯ ಪ್ರಚೋದನೆಗೆ ಬಲಿಯಾಗಬೇಡಿ’

Published:
Updated:
‘ಬಿಜೆಪಿಯ ಪ್ರಚೋದನೆಗೆ ಬಲಿಯಾಗಬೇಡಿ’

ನವದೆಹಲಿ: ಕೋಮು ಭಾವನೆ ಕೆರಳಿಸುವಲ್ಲಿ ಬಿಜೆಪಿಯ ಪ್ರಚೋದನೆಗೆ ಒಳಗಾಗದಂತೆ ಪಕ್ಷದ ಸಾಮಾಜಿಕ ಜಾಲತಾಣ ವಿಭಾಗದ ರಾಜ್ಯ ಮುಖ್ಯಸ್ಥರಿಗೆ ಸೂಚಿಸಿರುವ ಕಾಂಗ್ರೆಸ್‌ ಹೈಕಮಾಂಡ್‌, ಕೋಮುವಾದ ಬೆಂಬಲಿಸುತ್ತಲೇ ಬಲೆಗೆ ಕೆಡವುವ ಬಿಜೆಪಿಯ ಹುನ್ನಾರದ ಬಗ್ಗೆ ನಿಗಾ ವಹಿಸುವಂತೆ ಎಚ್ಚರಿಸಿದೆ.

ಹೋಟೆಲ್‌ ಒಂದರಲ್ಲಿ ದನದ ಮಾಂಸದಿಂದ ಅಡುಗೆ ಸಿದ್ಧಪಡಿಸುತ್ತಿರುವ ಬಾಣಸಿಗನಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೂ, ಕಾಂಗ್ರೆಸ್‌ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರನ್ನು ಅಡುಗೆ ಸಹಾಯಕನಂತೆಯೂ ಬಿಂಬಿಸಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಅದಕ್ಕೆ ಉತ್ತರ ನೀಡುವ ಭರದಲ್ಲಿ ಬಿಜೆಪಿಯನ್ನು ‘ಬೀಫ್‌ ಜನತಾ ಪಕ್ಷ’ ಎಂದು ಬಿಂಬಿಸಿ ವಿಡಿಯೊ ಹರಿಬಿಟ್ಟಿರುವ ಕುರಿತು ಪಕ್ಷದ ವರಿಷ್ಠರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯ ವಿಧಾನಸಭೆ ಚುನಾವಣೆಗೆ ಸನ್ನದ್ಧಗೊಳ್ಳುತ್ತಿರುವ ಕಾಂಗ್ರೆಸ್‌ ಪಕ್ಷ ಐದು ವರ್ಷಗಳ ಅವಧಿಯ ಜನಪರ ಆಡಳಿತ ಹಾಗೂ ಅಭಿವೃದ್ಧಿಯ ಮಂತ್ರ ಪಠಿಸುವ ಮೂಲಕ ಜನರನ್ನು ಸೆಳೆಯಬೇಕು ಎಂದೂ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಸೂಚಿಸಿದ್ದಾರೆ. ಬಿಜೆಪಿಯ ಪ್ರಚೋದನೆಗೆ ಒಳಗಾಗಿ, ಯಾವುದೇ ರೀತಿಯ ವಿವಾದಕ್ಕೆ ಆಸ್ಪದ ನೀಡದಂತೆ ಸಾಮಾಜಿಕ ಜಾಲತಾಣದ ವಿಭಾಗದವರನ್ನು ಎಚ್ಚರಿಸಲಾಗಿದೆ ಎಂದು ಪಕ್ಷದ ರಾಜ್ಯ ಉಸ್ತುವಾರಿ ಕಾರ್ಯದರ್ಶಿ ಮಧು ಯಕ್ಷಿಗೌಡ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಬಿಜೆಪಿಯ ಯಾವುದೇ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸದೆ, ಚುನಾವಣೆ ಪ್ರಚಾರ ಸಭೆಗಳಲ್ಲಿ ಕೇವಲ ಅಭಿವೃದ್ಧಿ ವಿಷಯಕ್ಕೆ ಮಾತ್ರ ಒತ್ತು ನೀಡಬೇಕು ಎಂದೂ ರಾಹುಲ್‌ ಕಟ್ಟಪ್ಪಣೆ ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ.

‘ಗುಂಡೂರಾವ್‌ ಮಿಲಿಟರಿ ಹೋಟೆಲ್‌’ ಹೆಸರಿನಲ್ಲಿ ಬಿಜೆಪಿ ಹರಿಬಿಟ್ಟಿರುವ ವಿಡಿಯೊಗೆ ಉತ್ತರವಾಗಿ, ಕಾಂಗ್ರೆಸ್‌ನ ಸಾಮಾಜಿಕ ಜಾಲತಾಣ ವಿಭಾಗವು ದನದ ಮಾಂಸಕ್ಕೆ ಸಂಬಂಧಿಸಿದಂತೆ ಬಿಜೆಪಿ ಹೊಂದಿರುವ ವಿಭಿನ್ನ ನಿಲುವುಗಳನ್ನು ಬಿಂಬಿಸುವ ವಿಡಿಯೊ ಸಿದ್ಧಪಡಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry