ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಗತಿಕ ಲಿಂಗಾಯತ ಮಹಾಸಭಾ ಅಸ್ತಿತ್ವಕ್ಕೆ

Last Updated 23 ಜನವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಲಿಂಗಾಯತ ಸ್ವತಂತ್ರ ಧರ್ಮ ಬೇಡಿಕೆಗೆ ಸಂಬಂಧಿಸಿದಂತೆ ವೀರಶೈವ–ಲಿಂಗಾಯತ ಪಂಗಡಗಳ ನಡುವೆ ಒಮ್ಮತ ಮೂಡದ ಕಾರಣ ಅಖಿಲ ಭಾರತ ವೀರಶೈವ ಮಹಾಸಭಾ ಇಬ್ಭಾಗವಾಗಿದ್ದು, ‘ಜಾಗತಿಕ ಲಿಂಗಾಯತ ಮಹಾಸಭಾ’ ಅಸ್ತಿತ್ವಕ್ಕೆ ಬಂದಿದೆ.

ಇಲ್ಲಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ‘ಲಿಂಗಾಯತ ಧರ್ಮ ವೇದಿಕೆ’ ಮಂಗಳವಾರ ನಡೆಸಿದ ಮಹತ್ವದ ಸಭೆಯಲ್ಲಿ ಈ ಘೋಷಣೆ ಮಾಡ
ಲಾಯಿತು. ಲಿಂಗಾಯತ ಪಂಗಡದ ಪ್ರಮುಖ ರಾಜಕಾರಣಿಗಳು ಹಾಗೂ ವಿರಕ್ತ ಮಠಾಧೀಶರ ನೇತೃತ್ವದಲ್ಲಿ ಹೊಸ ವೇದಿಕೆ ಕಾರ್ಯನಿರ್ವಹಿಸಲಿದೆ.

‘ಜಾಗತಿಕ ಲಿಂಗಾಯತ ಮಹಾಸಭಾ’ದ ಪ್ರಥಮ ಅಧ್ಯಕ್ಷರಾಗಿ ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಹಾಗೂ ಪ್ರಧಾನ ಕಾರ್ಯದರ್ಶಿಯನ್ನಾಗಿ ನಿವೃತ್ತ ಐಎಎಸ್‌ ಅಧಿಕಾರಿ ಎಸ್.ಎಂ.ಜಾಮದಾರ ಅವರನ್ನು ನೇಮಕ ಮಾಡಲಾಗಿದೆ. ‘ನನಗೆ ಯಾವುದೇ ಹುದ್ದೆ ಬೇಡ. ಸಾಮಾನ್ಯ ಸದಸ್ಯನಾಗಿ ಕೆಲಸ ಮಾಡುತ್ತೇನೆ' ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಪ್ರಕಟಿಸಿದರು.

‘ಈ ಮಹಾಸಭಾ ಅಸ್ತಿತ್ವಕ್ಕೆ ಬರುತ್ತಿರುವುದರಲ್ಲಿ ಯಾವುದೇ ರಾಜಕಾರಣ ಇಲ್ಲ. ಬಸವಣ್ಣನ ತತ್ವಗಳ ಉಳಿವಿಗಾಗಿ ಹಾಗೂ ಲಿಂಗಾಯತ ಸಮಾಜದ ಉದ್ಧಾರಕ್ಕಾಗಿ ನಾವು ಯಾವುದೇ ತ್ಯಾಗಕ್ಕೂ ಸಿದ್ಧ. ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಇವತ್ತಲ್ಲ ನಾಳೆ ಮಾನ್ಯತೆ ಒದಗಿಸಿಯೇ ತೀರುತ್ತೇವೆ. ಇದು ನಮ್ಮೆಲ್ಲರ ಶಪಥ’ ಎಂದು ಪಾಟೀಲ ಗುಡುಗಿದರು.

ನಾನು ಉದಾಹರಣೆಯಾಗಿರಬೇಕು...

’ಸಂಸ್ಥೆಯನ್ನು ಮಾದರಿಯಾಗಿ ಬೆಳೆಸುವ ದೊಡ್ಡ ಜವಾಬ್ದಾರಿ ನನ್ನ ಮೇಲಿದೆ. ಹಾಗಾಗಿ ಪ್ರಕಾಶ ಹುಕ್ಕೇರಿಯವರು ನನಗೆ ಕಾರ್ಯಾಧ್ಯಕ್ಷ ಸ್ಥಾನ ಒಪ್ಪಿಕೊಳ್ಳುವಂತೆ ಕೋರಿದ್ದನ್ನು ನಿರಾಕರಿಸಿದ್ದೇನೆ. ನಾನು ಬೇರೆಯವರಿಗೆ ಉದಾಹರಣೆಯಾಗಿ ಉಳಿಯಬೇಕೆನ್ನುವ ಕಾರಣದಿಂದ ಈ ತೀರ್ಮಾನ ಕೈಗೊಂಡಿದ್ದೇನೆ ಎಂದು ಎಂ.ಬಿ.ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.

ಸಭೆಯಲ್ಲಿ ಮಾತನಾಡಿದ ಬಸವರಾಜ ಹೊರಟ್ಟಿ, ‘ನಾವು ಹಿಂದೂಗಳ ವಿರೋಧಿಗಳಲ್ಲ. ಇದು ಯಾರ ವಿರುದ್ಧವೂ ಹುಟ್ಟುಹಾಕಿರುವ ಸಂಘಟನೆಯಲ್ಲ. ನಮಗೆ ನಮ್ಮ ಅಸ್ತಿತ್ವ ಮುಖ್ಯವಾಗಿದೆ. ಲಿಂಗಾಯತ ಸಮುದಾಯದ ಬಡವರ್ಗದ ಜನರ ಭವಿಷ್ಯಕ್ಕಾಗಿ ಇದು ಜನ್ಮತಾಳಿದೆ’ ಎಂದರು.

‘ಪಂಚಪೀಠಾಧೀಶರು ಬಾಹ್ಯವಾಗಿ ಬಸವಣ್ಣನ ಹೆಸರು ಹೇಳುತ್ತಾರೆ. ಆಂತರಿಕವಾಗಿ ಬಸವಣ್ಣನ ವಿರೋಧಿಗಳಾಗಿದ್ದಾರೆ. ಅವರೊಂದಿಗೆ ನಮ್ಮ ಎಲ್ಲ ಚರ್ಚೆ, ಮನವೊಲಿಸುವ ಸಭೆಗಳು ವಿಫಲವಾದ ಕಾರಣ ಅನಿವಾರ್ಯವಾಗಿ ಜಾಗತಿಕ ಲಿಂಗಾಯತ ಮಹಾಸಭಾ ಅಸ್ತಿತ್ವಕ್ಕೆ ಬಂದಿದೆ. ಯಾವುದಕ್ಕೂ ಜಗ್ಗದೆ, ಬಗ್ಗದೆ ನಾವು ಮುನ್ನಡೆಯುತ್ತೇವೆ’ ಎಂದು ಘೋಷಿಸಿದರು.

ಸಭೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಸಚಿವ ವಿನಯ ಕುಲಕರ್ಣಿ, ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ ಪಾಟಿಲ, ಸಂಸದ ಪ್ರಕಾಶ್ ಹುಕ್ಕೇರಿ ಹಾಗೂ ಸಂಯುಕ್ತ ಜನತಾದಳ ರಾಜ್ಯ ಘಟಕದ ಅಧ್ಯಕ್ಷ ಎಂ.ಪಿ.ನಾಡಗೌಡ, ಲಿಂಗಾಯತ ಸ್ವತಂತ್ರ ಧರ್ಮ ವೇದಿಕೆ ಮುಖಂಡರಾದ ಸಿ.ಜಯಣ್ಣ, ಜಿ.ಬಿ.ಪಾಟೀಲ, ಮಾಜಿ ಸಚಿವ ಎ.ಬಿ.ಪಾಟೀಲ ಇದ್ದರು.

ಗದಗ ತೋಂಟದಾರ್ಯ ಮಠದ ಸಿದ್ದಲಿಂಗ ಸ್ವಾಮೀಜಿ, ಭಾಲ್ಕಿಯ ಹಿರೇಮಠದ ಪಟ್ಟದ್ದೇವರು, ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ, ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ, ಹುಲಸೂರು ಗುರುಬಸವ ಸ್ವಾಮೀಜಿ, ಅಥಣಿಯ ಶಿವಬಸವ ಸ್ವಾಮೀಜಿ ಇದ್ದರು.

ಲಿಂಗಾಯತ ಸಮುದಾಯದ 99 ಒಳಪಂಗಡಗಳ ಎಲ್ಲ ಪ್ರಮುಖ ಜನಪ್ರತಿನಿಧಿಗಳು ಹಾಗೂ ಮುಖಂಡರಿಗೆ ಉಪಾಧ್ಯಕ್ಷ ಸೇರಿದಂತೆ ವಿವಿಧ ಹುದ್ದೆಗಳನ್ನು ನೀಡಲಾಗಿದೆ.

ಉಪಾಧ್ಯಕ್ಷರು: ಬಿ.ಮಾಲಕ ರಡ್ಡಿ, ಶಂಕರ್‌ ಬಿದರಿ, ಅರವಿಂದ ಜತ್ತಿ, ಬಸವರಾಜ ರಾಯರಡ್ಡಿ,ಎ.ಬಿ.ಪಾಟೀಲ ಹಾಗೂ ಅಶೋಕ್‌ ಖೇಣಿ.

ರಾಜ್ಯ ಸಮಿತಿಗೆ ಶರಣ ಪ್ರಕಾಶ್ ಪಾಟೀಲ ಅಧ್ಯಕ್ಷರಾಗಿದ್ದು ಡಾ.ಸಿ.ಜಯ್ಯಣ್ಣ ಮಹಾ ಪ್ರಧಾನ ಕಾರ್ಯದರ್ಶಿ. ಉಪಾಧ್ಯಕ್ಷರಾಗಿ ಎಸ್‌.ರಾಜಶೇಖರ ಪಾಟೀಲ, ಅಲ್ಲಂ ಪ್ರಭು ಪಾಟೀಲ, ನಂಜಪ್ಪ, ಎನ್‌.ಎಸ್‌.ಖೇಡ, ಶಿವಾನಂದ ಬೆಲ್ಲದ, ಎಸ್.ಎಂ.ನಾಗರಾಜ, ಎಚ್‌.ಎಂ.ಚಂದ್ರಶೇಖರ, ನಂದ್ಯಾಲ ಹಾಲಪ್ಪ.

ಮಹಾಸಭಾಕ್ಕೆ ರಾಜೀನಾಮೆ

ದಾವಣಗೆರೆ, ಮಂಡ್ಯ, ಮೈಸೂರು, ಶಿವಮೊಗ್ಗ, ಜೇವರ್ಗಿ, ಬೀದರ, ಕಲಬುರ್ಗಿ, ಮಾನ್ವಿ, ತುಮಕೂರು, ನವಲಗುಂದ, ರಾಮದುರ್ಗ, ಚಾಮರಾಜನಗರ, ಧಾರವಾಡ ಸೇರಿದಂತೆ 30 ಜಿಲ್ಲೆಗಳ ಅಖಿಲ ಭಾರತ ವೀರಶೈವ ಮಹಾಸಭಾದ 400ಕ್ಕೂ ಹೆಚ್ಚು ಪದಾಧಿಕಾರಿಗಳು ರಾಜೀನಾಮೆ ಸಲ್ಲಿಸಿ ಜಾಗತಿಕ ಲಿಂಗಾಯತ ಮಹಾಸಭಾಕ್ಕೆ ಸೇರ್ಪಡೆ ಆದರು.

ಎಂ.ಬಿ.ಪಾಟೀಲರನ್ನು ಶ್ಲಾಘಿಸಿದ ಚಂಪಾ

‘ನನ್ನ ಜೀವನದಲ್ಲೇ ಇಂತಹ ದೃಶ್ಯವನ್ನು ನೋಡಿರಲಿಲ್ಲ. ಜಾಗತಿಕ ಲಿಂಗಾಯತ ಮಹಾಸಭಾದ ಹುಟ್ಟು 21 ಶತಮಾನದ ಪರಿವರ್ತನಾ ವಿದ್ಯಮಾನ' ಎಂದು ಸಭೆಯಲ್ಲಿ ಭಾಗವಹಿಸಿದ್ದ ಪ್ರೊ.ಚಂದ್ರಶೇಖರ ಪಾಟೀಲ ಬಣ್ಣಿಸಿದರು.

‘ನಾನು ಜಾತಿಯಲ್ಲಿ ಜಂಗಮ. ರಂಭಾಪುರಿ ಪೀಠಕ್ಕೆ ಸೇರಿದವರು ನಾವು. ಆದರೆ, ಇವತ್ತು ಎಂ.ಬಿ.ಪಾಟೀಲ ನನಗೆ ಲಿಂಗಾಯತ ಎಂದರೇನು ಎಂಬುದನ್ನು ತೋರಿಸಿದ್ದಾರೆ. ಸತ್ಯವನ್ನು ಒಪ್ಪಿಕೊಂಡವನು ಬದುಕುವ ನೈತಿಕ ಹಕ್ಕು ಹೊಂದಿರುತ್ತಾನೆ. ಹಾಗಾಗಿಯೇ ನಾನು ಜಾತಿ ಜಂಗಮರ ಪರವಾಗಿ ಎಲ್ಲ ವೀರಶೈವರೂ ಈ ಮಹಾಪ್ರವಾಹದಲ್ಲಿ ಒಂದಾಗಿ ಸೇರಬೇಕು ಎಂದು ಒತ್ತಾಯಿಸುತ್ತಿದ್ದೇನೆ’ ಎಂದರು.

‘ಇನ್ನು ಕಲವೇ ದಿನಗಳಲ್ಲಿ ಅಖಿಲ ವೀರಶೈವ ಮಹಾಸಭಾ, ಅಲ್ಪಸಭಾ ಆಗುತ್ತದೆ’ ಎಂದು ಲೇವಡಿ ಮಾಡಿದ ಚಂಪಾ, ‘ವೀರಶೈವರನ್ನು ಬ್ರಾಹ್ಮಣರೂ ದೂರ ತಳ್ಳುತ್ತಾರೆ. ಹಾಗಾಗಿ ಅವರು ಹಿಂದೂಗಳಾಗಲು ಸಾಧ್ಯವಿಲ್ಲ. ಎಡಬಿಡಂಗಿಗಳಾಗುತ್ತಾರೆ’ ಎಂದು ಕಟಕಿದರು.

ಗೊ.ರು.ಚನ್ನಬಸಪ್ಪ ಮಾತನಾಡಿ, ‘ಜಾಗತಿಕ ಲಿಂಗಾಯತ ಮಹಾಸಭಾ ಹುಟ್ಟುಹಾಕಿರುವ ನಾಯಕರು ಎಂದಿಗೂ ತಮ್ಮ ಸಂಕಲ್ಪದಿಂದ ಹಿಂದೆ ಸರಿಯಬಾರದು’ ಎಂದು ಕಿವಿಮಾತು ಹೇಳಿದರು.

ಅವರಸದ ನಿರ್ಣಯ: ಬಿ.ಆರ್.ಪಾಟೀಲ

ಏತನ್ಮಧ್ಯೆ ‘ಜಾಗತಿಕ ಲಿಂಗಾಯತ ಮಹಾಸಭಾ’ ರಚನೆಗೆ ಪ್ರತಿಕ್ರಿಯಿಸಿರುವ ಮತ್ತು ಮಹಾಸಭಾದ ಉಪಾಧ್ಯಕ್ಷರೂ ಆಗಿ ನೇಮಕಗೊಂಡಿರುವ ಆಳಂದ ಶಾಸಕ ಬಿ.ಆರ್‌.ಪಾಟೀಲ, ‘ಇದೊಂದು ಅವಸರದ ನಿರ್ಣಯ’ ಎಂದು ಟೀಕಿಸಿದ್ದಾರೆ.

‘ನಾನು ಈ ಮಹಾಸಭಾದಿಂದ ದೂರವಿರುತ್ತೇನೆ’ ಎಂದು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

* ಆಂದೋಲಾ ಕರುಣೇಶ್ವರ ಮಠದ ಸಿದ್ದಲಿಂಗ ಸ್ವಾಮಿಯೇ ಒಬ್ಬ ಈಡಿಯೆಟ್‌.

–ಗದಗ ತೋಂಟದಾರ್ಯ ಸ್ವಾಮೀಜಿ

ಮುಖ್ಯಾಂಶಗಳು

* ಮುಂದಿನ ತಿಂಗಳು ದಾವಣಗೆರೆಯಲ್ಲಿ ಸಭೆ

* ಬಸವ ಕಲ್ಯಾಣದಲ್ಲಿ ವಿರಕ್ತ ವಟುಗಳ ಕೇಂದ್ರ

* ಯಾವುದೇ ಜವಾಬ್ದಾರಿ ಬೇಡ–ಬಿ.ಆರ್.ಪಾಟೀಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT