‘ಎಲ್ಲ ಕೆರೆಗಳನ್ನು ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ತರಲು ಶೀಘ್ರದಲ್ಲೇ ಕಾನೂನು’

7

‘ಎಲ್ಲ ಕೆರೆಗಳನ್ನು ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ತರಲು ಶೀಘ್ರದಲ್ಲೇ ಕಾನೂನು’

Published:
Updated:

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ), ಬೃಹತ್‌ ಬೆಂಗಳೂರು ಮಹಾನಗರಪಾಲಿಕೆ (ಬಿಬಿಎಂಪಿ) ಹಾಗೂ ಅರಣ್ಯ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ ವ್ಯಾಪ್ತಿಯಲ್ಲಿರುವ ಎಲ್ಲ ಕೆರೆಗಳನ್ನು ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ತಂದು ಸಂರಕ್ಷಿಸಲು ಸಮಗ್ರ ಕಾನೂನು ರೂಪಿಸಲು ತೀರ್ಮಾನಿಸಲಾಗಿದೆ ಎಂದು ಸಣ್ಣ ನೀರಾವರಿ ಸಚಿವ ಟಿ.ಬಿ. ಜಯಚಂದ್ರ ತಿಳಿಸಿದರು.

‘ಬೇರೆ ಇಲಾಖೆ ವ್ಯಾಪ್ತಿಯಲ್ಲಿರುವ ಕೆರೆಗಳನ್ನು ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ತರಲು ಕಾನೂನು ತೊಡಕಿದೆ’ ಎಂದು ಅವರು ಹೇಳಿದರು.

ಕೆರೆ ಸಂಜೀವಿನಿ ಮತ್ತು ಜಲ ಸಂವರ್ಧನಾ ಸಂಘಗಳನ್ನು ಕೆರೆ ಅಭಿವೃದ್ಧಿ ಪ್ರಾಧಿಕಾರದೊಂದಿಗೆ ವಿಲೀನಗೊಳಿಸಿ ₹ 60 ಕೋಟಿ ವೆಚ್ಚದಲ್ಲಿ ರಾಜ್ಯದ 36 ಸಾವಿರ ಕೆರೆಗಳಲ್ಲಿ ಹೂಳು ತೆಗೆಯುವ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಕೆರೆಗಳಲ್ಲಿ ಶೇ 20ರಿಂದ 30ರಷ್ಟು ಹೂಳು ತುಂಬಿದೆ ಎಂದರು.

ಕಾವೇರಿ, ಗೋದಾವರಿ, ಕೃಷ್ಣಾ ಜಲಾಶಯಗಳಿಂದ 189 ಟಿ.ಎಂ.ಸಿ ಅಡಿ ನೀರು ಹಂಚಿಕೆ ಮಾಡಬೇಕಿದೆ. ಸುಮಾರು 10 ಹೆಕ್ಟೇರ್ ಪ್ರದೇಶಗಳಿಗೆ ನೀರು ಪೂರೈಸಬೇಕಿದ್ದು, ಸದ್ಯಕ್ಕೆ 8 ಲಕ್ಷ ಹೆಕ್ಟೇರ್ ಪ್ರದೇಶಗಳಿಗೆ ನೀರು ಹಂಚಿಕೆ ಮಾಡಲಾಗಿದೆ. 2017ರ ಸಮೀಕ್ಷೆ ಪ್ರಕಾರ 43 ತಾಲ್ಲೂಕುಗಳಲ್ಲಿ ಅಂತರ್ಜಲ ಮಟ್ಟ ಕುಸಿದಿದೆ. ಬೋರ್‍ವೆಲ್ ಕೊರೆಸಿದರೂ ನೀರು ಸಿಗುತ್ತಿಲ್ಲ ಎಂದರು.

ಸರ್ಕಾರಿ ಪ್ರಾಯೋಜಿತ ಅಲ್ಲ: ‘ಮಹದಾಯಿ ವಿಚಾರದಲ್ಲಿ ಕರೆ ನೀಡಿರುವ ಬಂದ್ ಸರ್ಕಾರಿ ಪ್ರಾಯೋಜಿತವಲ್ಲ. ಕನ್ನಡಪರ ಸಂಘಟನೆಗಳು ಸ್ವಯಂ ನಿರ್ಧಾರ ತೆಗೆದುಕೊಂಡಿವೆ. ಇದರಲ್ಲಿ ಸರ್ಕಾರದ ಪಾತ್ರ ಇಲ್ಲ’ ಎಂದೂ ಜಯಚಂದ್ರ ಸ್ಪಷ್ಟಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry