ಲಿಂಗಾಯತ ಪ್ರತ್ಯೇಕ ಧರ್ಮ ಹೇಗಾಗುತ್ತದೆ?

7

ಲಿಂಗಾಯತ ಪ್ರತ್ಯೇಕ ಧರ್ಮ ಹೇಗಾಗುತ್ತದೆ?

Published:
Updated:
ಲಿಂಗಾಯತ ಪ್ರತ್ಯೇಕ ಧರ್ಮ ಹೇಗಾಗುತ್ತದೆ?

ಇತಿಹಾಸದಲ್ಲಿ ಅನೇಕ ಧರ್ಮಗಳು ಹುಟ್ಟಿ ಬೆಳೆದಿರುವುದನ್ನು ನಾವು ಕಾಣುತ್ತೇವೆ. ಆದರೆ, ಎಂದೋ ಹುಟ್ಟಿದೆ ಎನ್ನುವ ಒಂದು ಧರ್ಮಕ್ಕೆ ಇಂದು ಮಾನ್ಯತೆ ದೊರೆಯಬೇಕು ಎನ್ನುವ ಬೇಡಿಕೆ ಬಂದಿರುವುದು ಅತ್ಯಂತ ವಿಶಿಷ್ಟ ಸನ್ನಿವೇಶವೇ ಸರಿ. ಲಿಂಗಾಯತ ಒಂದು ಪ್ರತ್ಯೇಕ ಧರ್ಮವೇ ಆಗಿದ್ದರೆ ಅಂದೇ ಆ ಧರ್ಮಕ್ಕೆ ಮಾನ್ಯತೆ ದೊರಕಿರುತ್ತಿತ್ತು. ಇಷ್ಟು ವರ್ಷಗಳ ಕಾಲ ಕಾಯುವ ಅವಶ್ಯಕತೆಯೇ ಇರಲಿಲ್ಲ.

ಹಿಂದೂ ಧರ್ಮದಲ್ಲಿ ಒಂದೇ ವಿಚಾರ, ನಿರ್ದಿಷ್ಟ ಆಚರಣೆಗಳಿಲ್ಲ:

ಹಿಂದೂ ಧರ್ಮ ಅನೇಕ ಜಾತಿಗಳ ಸಮೂಹ. ಹಿಂದೂಗಳಲ್ಲಿ ಜಾತಿಗಳು ಹುಟ್ಟಿದ್ದು ಕರ್ಮ ಮತ್ತು ಸಿದ್ಧಾಂತಗಳಿಂದ. ಒಂದು ಸಿದ್ಧಾಂತವನ್ನು ನಂಬುವವರು ಪ್ರತ್ಯೇಕ ಧರ್ಮವೆನ್ನುವದಾದರೆ ಲಿಂಗಾಯತರ ಜತೆಗೆ ಇನ್ನೂ ಅನೇಕ ಜಾತಿಗಳನ್ನು ಪ್ರತ್ಯೇಕ ಧರ್ಮವೆಂದೇ ಪರಿಗಣಿಸಬೇಕಾಗುತ್ತದೆ. ಸ್ಮಾರ್ಥರು, ಮಾಧ್ವರು, ವೈಷ್ಣವರು, ಶಾಕ್ತರು, ಶೈವರು, ವೀರಶೈವರು, ಅಘೋರಿಗಳು ಇತ್ಯಾದಿ ಪಂಥಗಳನ್ನೆಲ್ಲ ಪ್ರತ್ಯೇಕ ಧರ್ಮಗಳೆಂದೇ ಪರಿಗಣಿಸಬೇಕಾಗುತ್ತದೆ.

ಧರ್ಮ ಸುಧಾರಕ ಬಸವಣ್ಣ: ಬಸವಣ್ಣನವರು ಧರ್ಮ ಸುಧಾರಕರೇ ಹೊರತು ಧರ್ಮ ಸಂಸ್ಥಾಪಕರಲ್ಲ. ಡಾ.ಅರ್ಥರ್ ಮೈಲಸ್ ಅವರು ಬಸವಣ್ಣರನ್ನು ಕರ್ನಾಟಕದ ಮಾರ್ಟಿನ್ ಲೂಥರ್‌ ಎಂದು ಕರೆದಿದ್ದಾರೆ. ಕ್ರೈಸ್ತ ಧರ್ಮದಲ್ಲಿನ (ಕ್ಯಾಥೋಲಿಕ್‌) ಆಚರಣೆಗಳನ್ನು ವಿರೋಧಿಸಿ ಪ್ರೊಟೆಸ್ಟೆಂಟ್‌ ಪಂಗಡವನ್ನು ಮಾರ್ಟಿನ್‌ ಲೂಥರ್‌  ಸ್ಥಾಪಿಸಿದರು. ಇಂದು ಪ್ರೊಟೆಸ್ಟೆಂಟರು ಕ್ರೈಸ್ತರೇ ಹೊರತು ಪ್ರತ್ಯೇಕ ಧರ್ಮದ ಅನುಯಾಯಿಗಳೆನಿಸಿಕೊಂಡಿಲ್ಲ. ಪ್ರವಾದಿ ಮಹಮ್ಮದರು ಇಸ್ಲಾಂ ಧರ್ಮ ಸ್ಥಾಪನೆಯ ನಂತರ ಅವರ ನಿಜವಾದ ಪ್ರತಿನಿಧಿ ಯಾರೆಂದು ವಿವಾದ ಉಂಟಾಗಿ ಅಬೂಬಕರ ಬೆಂಬಲಿಗರು ಸುನ್ನಿ ಮುಸ್ಲಿಮರು ಹಾಗೂ ಅಲಿ ಬೆಂಬಲಿಗರು ಶಿಯಾ ಮುಸ್ಲಿಮರು ಎನಿಸಿಕೊಂಡರು. ಆದರೆ, ಅವರೆಲ್ಲ ಮುಸ್ಲಿಮರೇ ತಾನೆ? ವೇದಗಳ ಪ್ರಕಾರ ಕರ್ಮದಿಂದ ಜಾತಿಯೇ ಹೊರತು ಜಾತಿಯಿಂದ ಕರ್ಮವಲ್ಲ. ಇದರ ಆಧಾರದಲ್ಲಿಯೇ ಬಸವಣ್ಣನವರು ಎಲ್ಲರಿಗೂ ಲಿಂಗಪೂಜೆಯ ಸಂಸ್ಕಾರವನ್ನು ಹೇಳಿಕೊಟ್ಟರು. ಬಸವಣ್ಣನವರು ಸಮಾನತೆಯ ತತ್ವವನ್ನು ಪ್ರತಿಪಾದಿಸಿ, ಬ್ರಾಹ್ಮಣರಿಗೆ ಮಾತ್ರ ಮೀಸಲಾದ ಲಿಂಗಪೂಜೆಯನ್ನು ಹಾಗೂ ಇತರ ಹಿಂದೂ ಸಂಸ್ಕಾರಗಳನ್ನು ಎಲ್ಲ ಹಿಂದೂಗಳಿಗೂ ಹೇಳಿಕೊಟ್ಟಿದ್ದರು. ಆ ಮೂಲಕ ಹಿಂದೂಗಳಲ್ಲಿರುವ ಜಾತಿ ಭೇದವನ್ನು ಹೋಗಲಾಡಿಸಲು ಪ್ರಯತ್ನಿಸಿದರು. ಎಲ್ಲ ಹಿಂದೂಗಳು ಬಸವಣ್ಣ ಅವರನ್ನು ಅನುಕರಿಸಿದ್ದೇ ಆದರೆ ಇಂದು ಹಿಂದೂಗಳಲ್ಲಿ ಒಂದೇ ಜಾತಿ ಇರುತ್ತಿತ್ತು. ಆದರೆ, ಬಸವಣ್ಣ ಅವರನ್ನು ಅನುಕರಿಸಿದವರು ಮಾತ್ರ

ಲಿಂಗಾಯತರೆನಿಸಿಕೊಂಡು ಹಿಂದೂಗಳಲ್ಲಿಯೇ ಇನ್ನೊಂದು ಜಾತಿ ಎನಿಸಿಕೊಂಡರು.

ಹಿಂದೂಗಳಲ್ಲಿಯೇ ಬ್ರಾಹ್ಮಣರು ಮೇಲ್ವರ್ಗಕ್ಕೆ ಸೇರಿದ್ದು, ಪರಿಪೂರ್ಣ ಹಿಂದೂಗಳು ಎನಿಸಿಕೊಳ್ಳುತ್ತಾರೆ. ಬ್ರಾಹ್ಮಣರಿಗಿಂತ ಹೆಚ್ಚಾಗಿ ಹಿಂದೂ ಸಂಸ್ಕಾರಗಳನ್ನು ಲಿಂಗಾಯತರು ಪಾಲಿಸಿಕೊಂಡು ಬಂದಿರುವುದರಿಂದ ಅವರು ಬ್ರಾಹ್ಮಣರಿಗಿಂತ ಮೇಲ್ವರ್ಗದಲ್ಲಿರುವ ಹಿಂದೂಗಳೆನಿಸುತ್ತಾರೆಯೇ ಹೊರತು ಪ್ರತ್ಯೇಕ ಧರ್ಮೀಯರು ಎನಿಸುವದಿಲ್ಲ.

ಲಿಂಗಾಯತ ಪಂಗಡ ಬೌದ್ಧ, ಜೈನ ಹಾಗೂ ಸಿಖ್‌ ಧರ್ಮಗಳಿಂದ ಭಿನ್ನ: ಭಾರತದಲ್ಲಿಯೇ ಜನಿಸಿದ ಬೌದ್ಧ, ಜೈನ ಹಾಗೂ ಸಿಖ್‌ ಧರ್ಮಗಳು ಈಗಾಗಲೇ ಪ್ರತ್ಯೇಕ ಧರ್ಮದ ಮಾನ್ಯತೆಯನ್ನು ಪಡೆದುಕೊಂಡಿವೆ. ಇವುಗಳ ಜತೆಗೆ ಲಿಂಗಾಯತವೂ ಸಹ ಪ್ರತ್ಯೇಕ ಧರ್ಮ ಏಕಾಗಬಾರದು? ಈ ಪ್ರಶ್ನೆಯನ್ನು ಅವಲೋಕಿಸಿದಾಗ ಲಿಂಗಾಯತ ಮತ್ತು ಬೌದ್ಧ, ಜೈನ ಹಾಗೂ ಸಿಖ್‌ ಧರ್ಮಗಳಲ್ಲಿ ಸ್ಪಷ್ಟವಾಗಿ ವ್ಯತ್ಯಾಸವಿರುವುದು ಗೋಚರಿಸುತ್ತದೆ. ಬೌದ್ಧರು ಗೌತಮಬುದ್ಧನನ್ನೇ ಪೂಜಿಸುತ್ತಾರೆ. ಜೈನರು ತಮ್ಮ ತೀರ್ಥಂಕರರನ್ನೇ ಪೂಜಿಸುತ್ತಾರೆ. ಸಿಖ್ಖರು ತಮ್ಮ ಧರ್ಮಗ್ರಂಥವನ್ನು ಪೂಜಿಸುತ್ತಾರೆ. ಬೌದ್ಧ, ಜೈನ ಹಾಗೂ ಸಿಖ್‌ ಧರ್ಮೀಯರು ಹಿಂದೂ ದೇವರುಗಳನ್ನು ಪೂಜಿಸುವುದಿಲ್ಲ. ಹಿಂದೂ ಹಬ್ಬಗಳನ್ನು ಆಚರಿಸುವುದಿಲ್ಲ. ಆದರೆ, ಲಿಂಗಾಯತರು ಹಿಂದೂಗಳ ದೇವಾದಿದೇವನಾದ ಪರಶಿವನನ್ನು, ಆತ್ಮಲಿಂಗವನ್ನುಆರಾಧಿಸುತ್ತಾರೆ. ಪರಶಿವನನ್ನು ಹಾಗೂ ಆತ್ಮಲಿಂಗವನ್ನು ಹಿಂದೂಗಳು ಅನಾದಿಕಾಲದಿಂದಲೂ ಪೂಜಿಸುತ್ತಲೇ ಬಂದಿದ್ದಾರೆ. ಅದನ್ನು ಲಿಂಗಾಯತರು ಸೃಷ್ಟಿಸಿದ್ದಲ್ಲ. ಹಿಂದೂ ಹಬ್ಬಗಳನ್ನೇ ಲಿಂಗಾಯತರೂ ಸಹ ಆಚರಿಸುತ್ತಾರೆ. ಲಿಂಗಾಯತರಿಗೆ ಪ್ರತ್ಯೇಕ ಹಬ್ಬಗಳಿವೆಯೇ?

ಲಿಂಗಾಯತ-ಇತರ ಹಿಂದೂಗಳ ಸಂಬಂಧ: ಲಿಂಗಾಯತರ ಒಡೆತನದಲ್ಲಿರುವ ದೇವಸ್ಥಾನಗಳಿಗೆ ಇತರ ಹಿಂದೂಗಳೂ ಭೇಟಿ ನೀಡಿ ಪೂಜೆ ಸಲ್ಲಿಸುತ್ತಾರೆ. ಅದೇ ರೀತಿ ಇತರ ಹಿಂದೂಗಳ ಒಡೆತನದಲ್ಲಿರುವ ದೇವಸ್ಥಾನಗಳಿಗೆ ಲಿಂಗಾಯತರು ಭೇಟಿ ನೀಡಿ ಪೂಜೆ ಸಲ್ಲಿಸುತ್ತಾರೆ. ಹೀಗಿರುವಾಗ, ಇಬ್ಬರೂ ಪ್ರತ್ಯೇಕ ಧರ್ಮೀಯರು ಹೇಗಾಗುತ್ತಾರೆ? ಬ್ರಾಹ್ಮಣರು ಮಾತ್ರ ಹಿಂದೂಗಳು ಎಂದು ವಾದಿಸುವ ವಿಚಾರವಾದಿಗಳಿಗೆ ಲಿಂಗಾಯತರು ಪ್ರತ್ಯೇಕ ಧರ್ಮ ಎನಿಸಲೂಬಹುದು. ಆದರೆ, ಇಲ್ಲಿಯೂ ಸಹ ಲಿಂಗಾಯತರು ಸಂಪೂರ್ಣವಾಗಿ ಪ್ರತ್ಯೇಕ ಎನಿಸುವುದಿಲ್ಲ. ಏಕೆಂದರೆ ಲಿಂಗಾಯತ ಎನ್ನುವುದು ಎಲ್ಲ ಹಿಂದೂಗಳೂ (ಆ ಕಾಲದ ಮಾನವಸಮಾಜ) ಸರಿಸಮಾನರು ಎನ್ನುವ ತತ್ವದ ಅಡಿಯಲ್ಲಿ ಹುಟ್ಟಿದ ಪಂಗಡವಿದು. ಬ್ರಾಹ್ಮಣರಂತೆ ಲಿಂಗಾಯತರೂ ಪೂಜಾ ಕಾರ್ಯದಲ್ಲಿ ತೊಡಗಿದ್ದಾರೆ. ಇವರೂ ಸಹ ವಿಭೂತಿಯನ್ನು ಬಳಿದುಕೊಳ್ಳುತ್ತಾರೆ. ಇವರಲ್ಲಿಯೂ ಮಠಗಳಿವೆ. ಇವರ ಮಠಾಧಿಪತಿಗಳೂ ಸಹ ಕಾವಿಯನ್ನೇ ಧರಿಸುತ್ತಾರೆ. ಬ್ರಾಹ್ಮಣರಂತೆ ಲಿಂಗಾಯತರೂ ಸಹ ಮಾಂಸಾಹಾರವನ್ನು ಸ್ವೀಕರಿಸುವುದಿಲ್ಲ. ಬ್ರಾಹ್ಮಣರಲ್ಲಿ ಗುರುಗಳು, ಮಠಾಧಿಪತಿಗಳನ್ನು ಮಾತ್ರ ಸಮಾಧಿ ಮಾಡಲಾಗುತ್ತದೆ. ಆದರೆ, ಲಿಂಗಾಯತರಲ್ಲಿ ಎಲ್ಲರನ್ನೂ ಸಮಾಧಿ ಮಾಡಲಾಗುತ್ತದೆ. ಏಕೆಂದರೆ, ಆತ್ಮ ಪರಮಾತ್ಮನಲ್ಲಿ ಲೀನ ಅನ್ನುವ ಅದ್ವೈತ ತತ್ವ (ಲಿಂಗೈಕ್ಯ) ಜೊತೆಗೆ ಪರಶಿವನಿಗೆ ಎಲ್ಲರೂ ಸಮಾನರು ಎನ್ನುವ ಕಲ್ಪನೆ. ಮರಣದ ನಂತರ ಸಮಾಧಿ ಮಾಡುವುದೂ ಸಹ ಹಿಂದೂ ಸಂಪ್ರದಾಯವೇ ಹೊರತು ಪ್ರತ್ಯೇಕವಲ್ಲ.

ಅಲ್ಪಸಂಖ್ಯಾತ ಧರ್ಮೀಯರಿಗೆ ಸಿಗುವ ಸೌಲಭ್ಯಗಳು:ಲಿಂಗಾಯತರು ಪ್ರತ್ಯೇಕ ಧರ್ಮ ಎನಿಸಿಕೊಳ್ಳುವ ಅವಶ್ಯಕತೆ ಇದೆಯೇ ಎನ್ನುವ ಪ್ರಶ್ನೆಯನ್ನು ಅವಲೋಕಿಸಿದರೆ ಕಂಡುಬರುವ ಸತ್ಯ ಒಂದೇ ಅಂದರೆ, ‘ಅಲ್ಪಸಂಖ್ಯಾತ ಧರ್ಮೀಯರಿಗೆ ಸಿಗುವ ಸೌಲಭ್ಯಗಳು’. ಒಂದು ವೇಳೆ ಲಿಂಗಾಯತ ಪಂಗಡಕ್ಕೆ ಪ್ರತ್ಯೇಕ ಧರ್ಮದ ಸ್ಥಾನ ದೊರೆತರೆ ಕರ್ನಾಟಕದಾದ್ಯಂತ ಇರುವ ಲಿಂಗಾಯತ ಶಿಕ್ಷಣ ಸಂಸ್ಥೆಗಳಲ್ಲಿ ದಲಿತರಿಗೆ, ಹಿಂದುಳಿದವರಿಗೆ ಇರುವ ಮೀಸಲಾತಿಯು ರದ್ದಾಗಲಿದೆ. ಏಕೆಂದರೆ ಅಲ್ಪಸಂಖ್ಯಾತ ಶಿಕ್ಷಣಸಂಸ್ಥೆಗಳಿಗೆ ಮೀಸಲಾತಿಯಾಗಲಿ, ಆರ್‌ಟಿಐ ಆಗಲಿ ಅನ್ವಯವಾಗುವುದಿಲ್ಲ. ಕಾವಿಯನ್ನು ಧರಿಸಿರುವ ಮಠಾಧಿಪತಿಗಳು, ವಿಭೂತಿಯನ್ನು ಬಳಿದಿರುವ ಅವರ ಅನುಯಾಯಿಗಳನ್ನು ನೋಡಿದರೆ ಇವರದು ಹಿಂದೂ ಹೊರತಾದ ಪ್ರತ್ಯೇಕ ಧರ್ಮವೆಂದು ಯಾರಿಗಾದರೂ ಅನಿಸಲು ಸಾಧ್ಯವೇ?

ಕೂಡಲಸಂಗಮ ದೇವ ಹಿಂದೂಗಳ ದೇವರಲ್ಲವೇ? ಬಸವಣ್ಣನ ವಚನಗಳಲ್ಲಿರುವ ಕೂಡಲಸಂಗಮ ದೇವ ಹಿಂದೂಗಳ ದೇವರೋ ಅಥವಾ ಲಿಂಗಾಯತರ ದೇವರೋ? ಕೂಡಲಸಂಗಮ ದೇವಸ್ಥಾನವನ್ನು ಸ್ಥಾಪಿಸಿದ ಚಾಲುಕ್ಯರು ಯಾವ ಧರ್ಮೀಯರು? ಬಸವಣ್ಣ ಮೂಲತಃ ವೀರಶೈವ ಪಂಥದ ಅನುಯಾಯಿಯಾಗಿದ್ದು ಜನಸಾಮಾನ್ಯರಿಗೆ ಲಿಂಗ ದೀಕ್ಷೆಯನ್ನು ನೀಡಿರುವುದರಿಂದ ಅವರ ಅನುಯಾಯಿಗಳು ವೀರಶೈವ ಲಿಂಗಾಯತರು ಎನಿಸಿಕೊಂಡರು. ಈಗ ವೀರಶೈವ ಮತ್ತು ಲಿಂಗಾಯತ ಒಂದೇ ಪಂಗಡವೋ ಅಥವಾ ಬೇರೆ ಬೇರೆಯೋ ಎನ್ನುವುದು ಮೊದಲು ನಿರ್ಧಾರವಾಗಬೇಕು. ಒಂದು ವೇಳೆ ಲಿಂಗಾಯತ ಪ್ರತ್ಯೇಕವೆಂದು ನಿರ್ಧಾರವಾದರೆ ಅದು ಪ್ರತ್ಯೇಕ ಧರ್ಮವೆನಿಸುವ ಅರ್ಹತೆಯನ್ನು ಪಡೆದಿದೆಯೋ ಎನ್ನುವುದು ನಿರ್ಧಾರವಾಗಬೇಕು. ಹಿಂದೂ ಸಾಮ್ರಾಜ್ಯವಾದ ವಿಜಯನಗರ ಸಾಮ್ರಾಜ್ಯದ ಅನೇಕ ಮಾಂಡಲಿಕ ರಾಜರು (ಕೆಳದಿ, ಚಿತ್ರದುರ್ಗ, ಸೋಂದೆ ಇತ್ಯಾದಿ) ವೀರಶೈವ-ಲಿಂಗಾಯತರೇ ಆಗಿದ್ದರು.

ಲಿಂಗಾಯತರ ಮತ್ತು ಹಿಂದೂಗಳ ಪರಶಿವ ಹೇಗೆ ಭಿನ್ನ? ಹಿಂದೂಗಳು ಪೂಜಿಸುವ ಪರಶಿವನು ಬೇರೆ ಹಾಗೂ ಲಿಂಗಾಯತರು ಪೂಜಿಸುವ ಪರಶಿವನು ಬೇರೆ ಎಂದು ಹೇಗೆ ತಾನೇ ಸಾಬೀತು ಪಡಿಸಲು ಸಾಧ್ಯ? ಹಿಂದೂಗಳಿಗೆ ಪರಶಿವ ತ್ರಿಮೂರ್ತಿಗಳಲ್ಲಿ ಒಬ್ಬ. ಆದರೆ, ಲಿಂಗಾಯತರಿಗೆ ಪರಶಿವನೇ ಸೃಷ್ಟಿ

ಕರ್ತ. ಆದರೆ, ವಾಸ್ತವವಾಗಿ ಹಿಂದೂಗಳ ಎಲ್ಲ ಶೈವಪಂಥೀಯರಿಗೂ ಪರಶಿವನೇ ಸೃಷ್ಟಿಕರ್ತ, ತ್ರಿಮೂರ್ತಿಗಳಲ್ಲಿ ಒಬ್ಬನಲ್ಲ. ಎಲ್ಲ ಶೈವ ಪುರಾಣಗಳೂ ಪರಶಿವನೊಬ್ಬನೇ ಸೃಷ್ಟಿಕರ್ತನೆಂದು ಒತ್ತಿ ಹೇಳುತ್ತಿವೆ. ವೈಷ್ಣವರಿಗೆ ವಿಷ್ಣುವೇ ಶ್ರೇಷ್ಠ. ಆದರೆ, ಅವರು ಶಿವನಪೂಜೆಯನ್ನೂ ಮಾಡುತ್ತಾರೆ. ಶಾಕ್ತಸಂಪ್ರದಾಯ ಪಾಲಿಸುವವರಿಗೆ ಆದಿಶಕ್ತಿ ಅಥವಾ ದುರ್ಗೆಯೇ ಶ್ರೇಷ್ಠ. ಆಕೆಯೇ ಸೃಷ್ಟಿಕರ್ತಳು. ಸ್ಮಾರ್ಥರು ಒಂದೇ ದೇವರನ್ನು ಶ್ರೇಷ್ಠ ಎನ್ನದೇ ಎಲ್ಲರನ್ನೂ ಸಮಾನವಾಗಿ ಕಾಣುತ್ತಾರೆ.

ಲಿಂಗಾಯತರ ಶಿವನಿಗೆ ಹೆಂಡತಿ ಮಕ್ಕಳಿಲ್ಲ ಎಂದು ವಾದಿಸುತ್ತಾರೆ. ಈ ವಿಚಾರವೂ ಸಹ ಲಿಂಗಾಯತರಿಂದ ಹುಟ್ಟಿದ ಹೊಸ ವಿಚಾರವೇನೂ ಅಲ್ಲ. ಹೆಂಡತಿ ಮಕ್ಕಳಿಲ್ಲದ ಭೈರಾಗಿ ಶಿವನನ್ನು ಪೂಜಿಸುವ ಅನೇಕ ಶೈವಪಂಗಡಗಳು ಉತ್ತರ ಭಾರತದಲ್ಲಿವೆ. ಶೈವಪುರಾಣಗಳ ಅನುಸಾರವೂ ಸಹ ಶಿವನು ಮೊದಲು ಭೈರಾಗಿಯಾಗಿರುತ್ತಾನೆ, ನಂತರ ಆದಿಶಕ್ತಿಯು ಮೊದಲು ಸತಿಯಾಗಿ ನಂತರ ಪಾರ್ವತಿಯಾಗಿ ಶಿವನನ್ನು ವರಿಸುತ್ತಾಳೆ. ಲಿಂಗಾಯತರು ದುರ್ಗೆಯನ್ನಾ ಗಲಿ, ಗಣೇಶನನ್ನಾಗಲಿ ಪೂಜಿಸುವುದಿಲ್ಲವೇ?

ಲೇಖಕ: ಸಹಾಯಕ ಪ್ರಾಧ್ಯಾಪಕ, ಅಂಜುಮನ್‌ ಪದವಿ ಕಾಲೇಜು, ಭಟ್ಕಳ

ಓದುಗರು ತಮ್ಮ ಅಭಿಪ್ರಾಯಗಳನ್ನು ಯೂನಿಕೋಡ್‌ ಅಥವಾ ನುಡಿ ತಂತ್ರಾಂಶದಲ್ಲಿ ಈ ವಿಳಾಸಕ್ಕೆ ಕಳುಹಿಸಬಹುದು: samvada@prajavani.co.in

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry