ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮರಳು ಆಮದು ಹೆಸರಲ್ಲಿ ₹ 5,800 ಕೋಟಿ ಅಕ್ರಮ’

Last Updated 23 ಜನವರಿ 2018, 19:35 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಮಲೇಷ್ಯಾದಿಂದ ಮರಳು ಆಮದು ಮಾಡಿಕೊಳ್ಳುವ ವ್ಯವಹಾರದಲ್ಲಿ ₹5,800 ಕೋಟಿ ಅಕ್ರಮ ನಡೆದಿದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌ ಮಂಗಳವಾರ ಇಲ್ಲಿ ಆರೋಪ ಮಾಡಿದರು.‌

‘ಟೆಂಡರ್‌ ಕರೆದು ಮೂರು ವಾರಗಳ ಬಳಿಕ ನೋಂದಣಿಯಾದ, ಸೂಕ್ತ ವಿಳಾಸವಿಲ್ಲದ ‘ಪೋಸೀಡಾನ್‌ ಎಫ್‌ಜೆಡ್‌ಇ’ ಎನ್ನುವ ಕಂಪನಿಗೆ ಮರಳು ಆಮದು ಗುತ್ತಿಗೆಯನ್ನು ನೀಡಲಾಗಿದೆ. ಇದಕ್ಕೆ ಸಚಿವ ಸಂಪುಟದ ಒಪ್ಪಿಗೆ ಕೂಡ ಪಡೆದಿಲ್ಲ’ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ದೂರಿದರು.

‘ಈ ಹಣದಿಂದಲೇ ಮುಂದಿನ ಚುನಾವಣೆಯನ್ನು ನಿರ್ವಹಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ಧರಿಸಿದ್ದಾರೆ. ಅಕ್ರಮ ನಡೆದ ಬಗ್ಗೆ ಮಾಹಿತಿ ಇದ್ದರೂ ಅವರು ಸುಮ್ಮನೆ ಇರುವುದನ್ನು ನೋಡಿದರೆ ಹೈಕಮಾಂಡ್‌ಗೆ ಕಪ್ಪ ಕೊಡುವುದಕ್ಕೂ ಇದರಿಂದಲೇ ಬರುವ ಹಣವನ್ನು ಬಳಸುತ್ತಿದ್ದಾರೆ ಎಂಬ ಸಂಶಯ ವ್ಯಕ್ತವಾಗುತ್ತದೆ’ ಎಂದರು.

‘ನಕಲಿ ಕಂಪನಿಗೆ ಟೆಂಡರ್‌ ನೀಡಿರುವುದರ ಕುರಿತು ತನಿಖೆ ನಡೆಸಲು ಸಿಬಿಐ ಅಥವಾ ಜಾರಿ ನಿರ್ದೇಶನಾಲಯಕ್ಕೆ ವಹಿಸಬೇಕು. ನಾನು ಕೂಡ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು, ಮರಳು ಆಮದಿಗೆ ಅನುಮತಿ ಪಡೆಯಲಾಗಿದೆಯೇ ಎಂಬುದರ ಮಾಹಿತಿ ಸಂಗ್ರಹಿಸುತ್ತೇನೆ’ ಎಂದು ಹೇಳಿದರು.

‘ವರ್ಷಕ್ಕೆ 36 ಲಕ್ಷ ಟನ್‌ನಂತೆ ಐದು ವರ್ಷಗಳ ಅವಧಿಗೆ 180 ಲಕ್ಷ ಟನ್‌ ಮರಳು ಆಮದು ಮಾಡಿಕೊಳ್ಳಲು ಪೋಸೀಡಾನ್‌ ಕಂಪನಿ ಜತೆ, ಸರ್ಕಾರಿ ಸ್ವಾಮ್ಯದ ಎಂಎಸ್ಐಎಲ್‌ ಒಪ್ಪಂದ ಮಾಡಿಕೊಂಡಿದೆ. ಎಂಎಸ್‌ಐಎಲ್‌ ವ್ಯವಸ್ಥಾಪಕ ನಿರ್ದೇಶಕ ಜಿ.ಸಿ.ಪ್ರಕಾಶ್, ಮಾನವ ಸಂಪನ್ಮೂಲ ವಿಭಾಗದ ಪ್ರಧಾನ ವ್ಯವಸ್ಥಾಪಕ ಮಹಾವೀರ– ಈ ಇಬ್ಬರು ಅಧಿಕಾರಿಗಳೇ ಇಡೀ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದಾರೆ. ರಫ್ತು–ಆಮದಿನ ಅನುಭವ ಇವರಿಗೆ ಇಲ್ಲ’ ಎಂದು ಅವರು ಹೇಳಿದರು.

‘ನಿರ್ದಿಷ್ಟ ಕಂಪನಿಗೇ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಟೆಂಡರ್‌ ನಿಯಮಗಳನ್ನು ಸರ್ಕಾರದ ಅನುಮತಿ ಇಲ್ಲದೆಯೇ ನಾಲ್ಕೈದು ಬಾರಿ ತಿದ್ದುಪಡಿ ಮಾಡಲಾಗಿದೆ’ ಎಂದು ಅವರು ದೂರಿದರು.

‘ಮರಳು ಆಮದು ಸಂಬಂಧ ಎಂಎಸ್‌ಐಎಲ್‌, 2017ರ ಮೇ 24ರಂದು ಜಾಗತಿಕ ಟೆಂಡರ್‌ ಕರೆಯಿತು. ಟೆಂಡರ್‌ನಲ್ಲಿ ಭಾಗವಹಿಸಿದ್ದ ಏಕೈಕ ಸಂಸ್ಥೆ ಪೋಸೀಡಾನ್‌ ಸಂಸ್ಥೆಗೆ ಸೆಪ್ಟೆಂಬರ್‌ ತಿಂಗಳಲ್ಲಿ ಗುತ್ತಿಗೆ ನೀಡಲಾಗಿದೆ. ಈ ಕ್ಷೇತ್ರದಲ್ಲಿ ಅನುಭವ ಇಲ್ಲದ ಕಂಪನಿಗೆ ಗುತ್ತಿಗೆ ಕೊಟ್ಟಿದ್ದು ಏಕೆ’ ಎಂದು ಶೆಟ್ಟರ್‌ ಪ್ರಶ್ನಿಸಿದರು.

‘ಕಂಪನಿಯ ಲೆಟರ್‌ ಹೆಡ್‌ನಲ್ಲಿರುವ ವಿಳಾಸ, ವಾಸ್ತವ ವಿಳಾಸ ಬೇರೆ, ಬೇರೆಯಾಗಿದೆ. ಕಂಪನಿ ನೀಡಿರುವ, ಯುನೈಟೆಡ್‌ ಅರಬ್‌ ಎಮಿರೇಟ್ಸ್‌ (ಯುಎಇ) ವಿಳಾಸದಲ್ಲಿ ಅದರ ಕಚೇರಿಯೇ ಇಲ್ಲ. ಸಿಂಗಪುರದ ಅಕ್ಸಿಯೊಸ್‌ ಕ್ರೆಡಿಟ್‌ ಬ್ಯಾಂಕ್‌ನ ಗ್ಯಾರಂಟಿ ಹಾಗೂ ಇಎಂಡಿ ದಾಖಲೆಗಳೂ ನಕಲಿಯಾಗಿವೆ. ಸಿಂಗಪುರದಲ್ಲಿ ಈ ಬ್ಯಾಂಕ್ ಶಾಖೆಯೇ ಇಲ್ಲ’ ಎಂದರು.

ಅಧಿಕ ದರ: ‘ಪ್ರತಿ ಟನ್‌ ಮರಳಿಗೆ ಸರಾಸರಿ ₹ 3,900 ದರ ನಿಗದಿ ಮಾಡಿದ್ದು, 180 ಲಕ್ಷ ಟನ್‌ಗೆ ₹ 7,020 ಕೋಟಿ ಆಗುತ್ತದೆ. ಪ್ರತಿ ಟನ್‌ಗೆ ₹ 650ಕ್ಕೆ ಸ್ಥಳೀಯವಾಗಿ ದೊರೆಯುವ ಎಂ–ಸ್ಯಾಂಡ್ ಮರಳು ಉತ್ಪಾದಿಸಿದರೆ ಕೇವಲ ₹1,170 ಕೋಟಿ ವೆಚ್ಚ ತಗಲುತ್ತದೆ. ಆಮದು ಮಾಡಿಕೊಳ್ಳುವುದರಿಂದ ₹5,800 ಕೋಟಿ ಹೆಚ್ಚುವರಿ ಹೊರೆ ಸರ್ಕಾರದ ಮೇಲೆ ಬೀಳಲಿದೆ. ಈ ಹಣವನ್ನು ಲೂಟಿ ಹೊಡೆಯಲು ಸರ್ಕಾರ ತಂತ್ರ ರೂಪಿಸಿದೆ. ಇದರಲ್ಲಿ ಎಂಎಸ್‌ಐಎಲ್‌ನ ಅಧಿಕಾರಿಗಳಷ್ಟೇ ಅಲ್ಲದೇ, ಮುಖ್ಯಮಂತ್ರಿ ಕಚೇರಿಯ ಐಎಎಸ್‌ ಅಧಿಕಾರಿಗಳೂ ಶಾಮೀಲಾಗಿದ್ದಾರೆ’ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT