ಶರಣರ ಪ್ರಾರ್ಥನೆ

7

ಶರಣರ ಪ್ರಾರ್ಥನೆ

Published:
Updated:
ಶರಣರ ಪ್ರಾರ್ಥನೆ

ಪ್ರಾರ್ಥನೆ ಮಾನವ ಜೀವನದ ಅವಿಭಾಜ್ಯ ಅಂಗ. ಜಗತ್ತಿನ ಎಲ್ಲ ಧರ್ಮಗಳೂ ಒಂದಿಲ್ಲ ಒಂದು ರೀತಿಯಲ್ಲಿ ಪ್ರಾರ್ಥನೆಯನ್ನು ಧಾರ್ಮಿಕ ವಿಧಿಯಾಗಿ ಸ್ವೀಕರಿಸಿವೆ. ಪ್ರಾರ್ಥನೆಯು ಸಾಧಕನ ಆಧ್ಯಾತ್ಮಿಕ ವಿಕಾಸಕ್ಕೆ ಕಾರಣವಾಗಿರುವುದನ್ನು ದಾರ್ಶನಿಕರು ಅನುಭಾವಿಗಳು ಕಂಡುಕೊಂಡಿದ್ದಾರೆ. ಚಾರ್ವಾಕರಂತಹ ಕೆಲವು ನಾಸ್ತಿಕರನ್ನು ಹೊರತು ಪಡಿಸಿ ಬಹುತೇಕ ದಾರ್ಶನಿಕರು ಸರ್ವಶಕ್ತ, ಸರ್ವವ್ಯಾಪಿ, ಸರ್ವಜ್ಞನಾಗಿರುವ ಪರಮಾತ್ಮನೆಂಬ ಅಗೋಚರ ದೈವೀಶಕ್ತಿಯನ್ನು ಒಪ್ಪಿಕೊಂಡಿದ್ದಾರೆ. ಆ ಶಕ್ತಿಯ ವಿಕಾಸದ ಹಂತವೇ ಈ ಪ್ರಕೃತಿ. ಅನ್ನ ನೀರು ಗಾಳಿಗಳಲ್ಲದೆ ಜೀವಿಗಳ ಬದುಕಿಗೆ ಬೇಕಾದುದೆಲ್ಲವನ್ನೂ ಕರುಣಿಸಿದ ಪರಮಾತ್ಮನನ್ನು ಕೃತಜ್ಞತೆಯ ರೂಪದಲ್ಲಿ ನಾವು ಸ್ಮರಿಸುವುದು, ಸ್ತುತಿಸುವುದು ಪ್ರಾರ್ಥನೆ ಎನಿಸಿಕೊಳ್ಳುತ್ತದೆ.

ಪ್ರಾರ್ಥನೆ ಎಂದಾಕ್ಷಣ ಸರ್ವಶಕ್ತನೂ, ದಯಾಮಯನೂ ಆಗಿರುವ ಭಗವಂತನೆದುರು ಬೇಡಿಕೆಗಳ ಪಟ್ಟಿಯನ್ನು ಸಲ್ಲಿಸುವುದಲ್ಲ. ಲೌಕಿಕರು ಕ್ಷಣಿಕ ಸುಖಕ್ಕಾಗಿ ಆಶೆ ಆಮಿಷಗಳಿಂದ ಪ್ರೇರಿತರಾಗಿ ಭಗವಂತನಲ್ಲಿ ಏನೇನೋ ಕೇಳಿಕೊಳ್ಳುತ್ತಾರೆ. ಸಕಾಮದಿಂದ ಕೂಡಿದ ಆ ಪ್ರಾರ್ಥನೆ ನಿಷ್ಪ್ರಯೋಜಕವೆನಿಸುತ್ತದೆ. ಬೇಡುವುದಾದರೂ ‘ಜನರು ನನ್ನನ್ನು ದುವ್ರ್ಯಸನಿ-ದುರಾಚಾರಿ ಎನ್ನದಂತೆ ಮಾಡು, ಲಿಂಗರೂಪಿಯಾದ ನಿನ್ನಲ್ಲಿ ಭಕ್ತಿಯುಳ್ಳವನನ್ನಾಗಿಸು, ಜಂಗಮ ಪ್ರೇಮಿಯಾಗಿ ಬದುಕುವಂತೆ ಮಾಡು, ನಾನಾವ ಕಾಲಕ್ಕೂ ಕರ್ಮದ ಕಟ್ಟಳೆಗೆ ಸಿಲುಕದಂತೆ ಮಾಡು, ನನಗೆ ಸದಾ ಭಕ್ತಿಯ ಜೀವನವನ್ನು ಕರುಣಿಸು’ ಎಂಬ ಬಸವವಾಣಿಯಂತೆ ಬೇಡಿಕೊಳ್ಳಬೇಕು. ಪ್ರಾರ್ಥನೆಯಲ್ಲಿ ಆಶೆ-ಆಮಿಷಗಳಿಗೆ ಸ್ಥಾನವಿಲ್ಲ. ಹೊನ್ನಿನಲ್ಲಿ ಒಂದು ಕಣ, ಬಟ್ಟೆಯಲ್ಲಿ ಒಂದು ಎಳೆ, ಅನ್ನದಲ್ಲಿ ಒಂದು ಅಗುಳು ಇಂದಿಗೆ ನಾಳೆಗೆ ಬೇಕೆಂದೆನಾದಡೆ ನಿಮ್ಮಾಣೆ, ನಿಮ್ಮ ಪುರಾತನರಾಣೆ, ಕದ್ದು ತಂದಡೆ ಕೈ ಹಿಡಿದೊಮ್ಮೆ ಬಡಿದು ತುಡುಗುಣಿತನವ ಬಿಡಿಸಯ್ಯಾ ಎಂಬ ಗಟ್ಟಿ ನಿಲವು ಬಸವಣ್ಣನವರದು. ಕ್ಷಣಿಕ ಸುಖಕ್ಕಾಗಿ ದೈನ್ಯದಿಂದ ಅನ್ಯರಿಗೆ ಕೈಯೊಡ್ಡದಂತೆ, ಅನ್ಯರನ್ನು ಹೊಗಳದಂತೆ, ಪರಧನ-ಪರಸತಿಯರಿಗಾಶಿಸದಂತೆ, ದುರ್ಜನರ ಸಂಗವನ್ನು ಮಾಡದಂತೆ ಭಗವಂತನಲ್ಲಿ ಬಸವಣ್ಣನವರು ಪ್ರಾರ್ಥಿಸಿರುವುದು ನಮಗೆ ಮಾದರಿಯಾಗಿದೆ.

ಅನುಭಾವಿ ಸರ್ಪಭೂಷಣರು ಪ್ರಾಣ ಹೋದರೂ ಚಿಂತೆಯಿಲ್ಲ, ಇನ್ನೊಬ್ಬರನ್ನು ಕೈಯೊಡ್ಡಿ ಬೇಡದಂತಹ ಛಲವನ್ನು ಕರುಣಿಸು ಎಂದು ಭಗವಂತನಲ್ಲಿ ಪ್ರಾರ್ಥಿಸಿರುವುದಲ್ಲದೆ ಆತ್ಮಿಕ ವಿಕಾಸಕ್ಕಾಗಿ ಸದ್ಗುಣಗಳನ್ನು ಕರುಣಿಸು ಎನ್ನುತ್ತಾರೆ. ಅವುಗಳಲ್ಲಿ ಧೈರ್ಯ, ವಿನಯ, ಸತ್ಯ, ಕೋಪರಹಿತವಾದ ತಪ, ಕರಣವಿಜಯ, ಭಕ್ತಿ ಮುಂತಾದವುಗಳು ಪ್ರಮುಖವಾಗಿವೆ. ಬಸವಣ್ಣನವರಂತೂ ‘ನಿಮ್ಮ ಸದ್ಭಕ್ತರ, ಶರಣರ ಪಾದಗಳನ್ನರಿಯುವ ಮಹಾಪದವಿಯನ್ನು ಕರುಣಿಸು, ನಿಮ್ಮ ಶರಣರ ಪಾದಕ್ಕೆ ಚಮ್ಮಾವುಗೆಯ ಮಾಡಯ್ಯ ತಂದೆ, ನಿಮ್ಮ ಸೆರಗೊಡ್ಡಿ ಬೇಡುವೆ’ ಎಂದು ಪ್ರಾರ್ಥಿಸಿರುವುದು ವೈಶಿಷ್ಟ್ಯಪೂರ್ಣವಾಗಿದೆ. ಪಾದರಕ್ಷೆಯಾದರೆ ಶರಣರ ಚರಣ ಸ್ಪರ್ಶವಾಗಿ ಬದುಕಿಗೆ ಧನ್ಯತೆ ಲಭಿಸುತ್ತದೆ ಎಂಬ ಭಾವ ಅವರದು.

ನಾವು ದೈನಂದಿನ ಬದುಕಿನಲ್ಲಿ ಅನೇಕ ತಪ್ಪುಗಳನ್ನು ಮಾಡುತ್ತೇವೆ. ಆ ತಪ್ಪುಗಳಿಗಾಗಿ ಭಗವಂತನಲ್ಲಿ ಕ್ಷಮೆಯನ್ನು ಕೋರುವುದೂ ಕೂಡ ಪ್ರಾರ್ಥನೆಯ ಉದ್ದೇಶಗಳಲ್ಲೊಂದು. ‘ಎನ್ನ ತಪ್ಪು ಅನಂತಕೋಟಿ, ನಿಮ್ಮ ಸೈರಣೆಗೆ ಲೆಕ್ಕವಿಲ್ಲ’ ಎಂದು ಭಗವಂತನಲ್ಲಿ ಪ್ರಾರ್ಥಿಸುವ ಬಸವಣ್ಣನವರು ಕ್ಷಮೆ ಕೋರುವ ಮೂಲಕ ಲೌಕಿಕರು ತಮ್ಮ ದೋಷಗಳನ್ನು ನಿವಾರಿಸಿಕೊಳ್ಳುವ ಮಾರ್ಗೋಪಾಯ ಸೂಚಿಸಿದ್ದಾರೆ. ಆತ್ಮಶಕ್ತಿ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳುವುದಕ್ಕಾಗಿ, ವ್ಯಕ್ತಿತ್ವದ ಪರಿಪೂರ್ಣ ವಿಕಾಸಕ್ಕಾಗಿ ನಮ್ಮಲ್ಲಿರುವ ದೋಷಗಳನ್ನು ನಿವಾರಿಸಿಕೊಳ್ಳುವುದು ಅತ್ಯವಶ್ಯ. ಈ ದಿಶೆಯಲ್ಲಿ ಶರಣರು ಸಂತರು ಪ್ರಸ್ತುತಪಡಿಸಿದ ಪ್ರಾರ್ಥನೆಯಂತಹ ಸಾಧನವು ನಮಗೆ ಸಹಕಾರಿಯಾಗುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry