12,200 ಆಕ್ಷೇಪಣೆ: ಗಡುವು ಮುಕ್ತಾಯ

7

12,200 ಆಕ್ಷೇಪಣೆ: ಗಡುವು ಮುಕ್ತಾಯ

Published:
Updated:

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಸಿದ್ಧಪಡಿಸಿರುವ ಪರಿಷ್ಕೃತ ನಗರ ಮಹಾಯೋಜನೆ 2031ರ ಕರಡಿಗೆ ಆಕ್ಷೇಪಣೆ ಸಲ್ಲಿಸುವ ಗಡುವು ಮಂಗಳವಾರ ಕೊನೆಗೊಂಡಿದೆ. ಸಲಹೆ ಹಾಗೂ ಆಕ್ಷೇಪಣೆಗಳು ಸೇರಿಒಟ್ಟು 12,200 ಪ್ರತಿಕ್ರಿಯೆಗಳು ಸಲ್ಲಿಕೆ ಆಗಿವೆ.

ಕೊನೆಯ ದಿನ ಅರ್ಜಿಗಳ ಮಹಾಪೂರವೇ ಹರಿದುಬಂದಿದೆ. ಸೋಮವಾರದವರೆಗೆ ಒಟ್ಟು 8,869 ಪ್ರತಿಕ್ರಿಯೆಗಳು ಸಲ್ಲಿಕೆ ಆಗಿದ್ದವು. ಮಂಗಳವಾರ 3,300ಕ್ಕೂ ಹೆಚ್ಚು ಮಂದಿ ಪ್ರತಿಕ್ರಿಯೆ ಸಲ್ಲಿಸಿದ್ದಾರೆ. ಈ ಪೈಕಿ ಇ–ಮೇಲ್‌ ಮೂಲಕ 1400ಕ್ಕೂ ಅಧಿಕ ಪ್ರತಿಕ್ರಿಯೆಗಳು ಬಂದಿವೆ ಎಂದು ಬಿಡಿಎ ನಗರ ಯೋಜನಾ ಸದಸ್ಯ ತಿಪ್ಪೇಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

ಸಲ್ಲಿಕೆ ಆಗಿರುವ ಸಲಹೆಗಳು ಹಾಗೂ ಆಕ್ಷೇಪಣೆಗಳ ಪೈಕಿ ಪರಿಗಣನೆಗೆ ಯೋಗ್ಯವಾದುವುಗಳನ್ನು ಮೊದಲು ವಿಂಗಡಿಸುತ್ತೇವೆ. ಆಯ್ದ ಪ್ರತಿಕ್ರಿಯೆಗಳನ್ನು ಪರಿಗಣಿಸಿ ನಗರ ಮಹಾಯೋಜನೆಯ ಕರಡಿನಲ್ಲಿ ತಿದ್ದುಪಡಿ ಮಾಡಲಾಗುತ್ತದೆ. ಮಾಡಬೇಕಾದ ತಿದ್ದುಪಡಿಗಳ ಕುರಿತು ಬಿಬಿಎಂಪಿ ವಿಶೇಷ ಆಯುಕ್ತ ವಿಜಯಶಂಕರ್‌ ನೇತೃತ್ವದ ಸಮಿತಿ ತೀರ್ಮಾನ ಕೈಗೊಳ್ಳಲಿದೆ. ಬಿಡಿಎ ಆಡಳಿತ ಮಂಡಳಿಯಲ್ಲಿ ಅನುಮೋದನೆ ಪಡೆದ ಬಳಿಕ ಅದನ್ನು ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರಕ್ಕೆ (ಬಿಎಂಆರ್‌ಡಿಎ) ಕಳುಹಿಸುತ್ತೇವೆ ಎಂದರು.

ಅಂತಿಮ ಯೋಜನೆಯನ್ನು ಬಿಎಂಆರ್‌ಡಿಎ ಪರಿಶೀಲಿಸಲಿದೆ. ಬಳಿಕ ಅಂಗೀಕಾರಕ್ಕಾಗಿ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರಿಗೆ ಸಲ್ಲಿಸಲಾಗುತ್ತದೆ. ನಗರಾಭಿವೃದ್ಧಿ ಸಚಿವರಿಂದ ಅನುಮೋದನೆ ಪಡೆದ ಬಳಿಕ ಅಂತಿಮ ಯೋಜನೆಯನ್ನು ಪ್ರಕಟಿಸಲಾಗುತ್ತದೆ ಎಂದು ಅವರು ವಿವರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry