7

‘ಯೂಟ್ಯೂಬ್‌’ ನೋಡಿ ಸರಗಳ್ಳತನ!

Published:
Updated:

ಬೆಂಗಳೂರು: ಐಷಾರಾಮಿ ಜೀವನಕ್ಕೆ ಹಣ ಸಂಪಾದಿಸಲು ‘ಯೂಟ್ಯೂಬ್’ನ ವಿಡಿಯೊಗಳನ್ನು ನೋಡಿ ಸರಗಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿರುವ ಗಿರಿನಗರ ಪೊಲೀಸರು, ₹ 18.2 ಲಕ್ಷ ಮೌಲ್ಯದ ಸರಗಳನ್ನು ಜಪ್ತಿ ಮಾಡಿದ್ದಾರೆ.

‘ಕ್ಯಾಬ್ ಚಾಲಕ ಇಮ್ರಾನ್ ಪಾಷಾ (31), ಆತನ ಭಾವ ಅಫ್ಜಲ್ ಶರೀಫ್ (34) ಹಾಗೂ ಸ್ನೇಹಿತ ಅಬ್ದುಲ್ ಶಫಾಕತ್ (22) ಎಂಬುವರನ್ನು ಬಂಧಿಸಿ

ದ್ದೇವೆ. ಆರೋಪಿಗಳ ಬಂಧನದಿಂದ 19 ಸರಗಳವು ಪ್ರಕರಣಗಳು ಬೆಳಕಿಗೆ ಬಂದಿವೆ’ ಎಂದು ನಗರ ಪೊಲೀಸ್ ಕಮಿಷನರ್ ಟಿ.ಸುನೀಲ್ ಕುಮಾರ್ ತಿಳಿಸಿದರು.

‘ಎರಡು ವರ್ಷಗಳ ಹಿಂದೆ ಬ್ಯಾಂಕ್‌ನಲ್ಲಿ ₹ 1.5 ಲಕ್ಷ ಸಾಲ ಮಾಡಿದ್ದೆ. ಸಕಾಲಕ್ಕೆ ಸಾಲ ತೀರಿಸಲು ಆಗಲಿಲ್ಲ. ಬ್ಯಾಂಕ್‌ನವರು ಮನೆ ಹತ್ತಿರ ಬಂದು ಗಲಾಟೆ ಮಾಡಲು ಶುರು ಮಾಡಿದ್ದರು. ಆಗ ಸರಗಳ್ಳತನ ಮಾಡುವ ಯೋಚನೆ ಬಂತು. ಪೊಲೀಸರಿಗೆ ಸುಳಿವು ಸಿಗದಂತೆ ಯಾವ ರೀತಿ ಸರ ದೋಚಬಹುದು ಎಂಬುದನ್ನು ಯೂಟ್ಯೂಬ್‌ನಲ್ಲಿ ನೋಡಿ ಕಲಿತೆ’ ಎಂದು ಇಮ್ರಾನ್ ಹೇಳಿಕೆ ಕೊಟ್ಟಿದ್ದಾಗಿ ಪೊಲೀಸರು ತಿಳಿಸಿದರು.

‘ಒಬ್ಬನಿಂದಲೇ ಈ ಕೆಲಸ ಸಾಧ್ಯವಿಲ್ಲವೆಂಬುದು ಗೊತ್ತಾಯಿತು. ಆಗ ಕೊಳಾಯಿ ರಿಪೇರಿ ಕೆಲಸ ಮಾಡುತ್ತಿದ್ದ ನನ್ನ ಭಾವ ಅಫ್ಜಲ್ ಹಾಗೂ ಮೆಕ್ಯಾನಿಕ್ ಆಗಿದ್ದ ಆತನ ಸ್ನೇಹಿತ ಅಬ್ದುಲ್‌ಗೂ ಸಂಚಿನ ಬಗ್ಗೆ ವಿವರಿಸಿದೆ. ಅವರು ಒಪ್ಪಿಕೊಂಡ ಬಳಿಕ ಮೂವರೂ ಚಿಕ್ಕಮಗಳೂರಿನ ದರ್ಗಾಕ್ಕೆ ತೆರಳಿ, ‘ಯಾರೇ ಪೊಲೀಸರಿಗೆ ಸಿಕ್ಕಿಬಿದ್ದರೂ, ಮತ್ತೊಬ್ಬರ ಹೆಸರನ್ನು ಬಾಯ್ಬಿಡುವಂತಿಲ್ಲ’ ಎಂದು ಪ್ರಮಾಣ ಮಾಡಿದ್ದೆವು. ಆನಂತರ ನಗರದ ಪ್ರತಿಷ್ಠಿತ ರಸ್ತೆಗಳಲ್ಲಿ ನಮ್ಮ ಕಾರ್ಯಾಚರಣೆ ಶುರುಮಾಡಿದ್ದೆವು.’

‘ಮೊದಲು ಬೈಕ್ ಕಳ್ಳತನ ಮಾಡಿ, ಅದರ ನೋಂದಣಿ ಸಂಖ್ಯೆ ಬದಲಾಯಿಸಿದ್ದೆವು. ಬೆಳಿಗ್ಗೆ ಹಾಗೂ ಸಂಜೆ ವೇಳೆ ಆ ಬೈಕ್‌ನಲ್ಲಿ ಪಾರ್ಕ್‌ಗಳ ಬಳಿ ಹೋಗುತ್ತಿದ್ದೆವು. ವಾಯುವಿಹಾರಕ್ಕೆ ಬರುವ ವೃದ್ಧೆಯರನ್ನೇ ಗುರಿಯಾಗಿಸಿಕೊಂಡು, ವಿಳಾಸ ಕೇಳುವ ನೆಪದಲ್ಲಿ ಹತ್ತಿರ ಹೋಗಿ ಸರ ಎಗರಿಸುತ್ತಿದ್ದೆವು’ ಎಂದು ಆತ ಹೇಳಿಕೆ ನೀಡಿದ್ದಾನೆ.

ಕದ್ದ ಸರಗಳನ್ನು ರಾಮನಗರ ಹಾಗೂ ಬೆಂಗಳೂರಿನ ನಗರ್ತಪೇಟೆಯ ಆಭರಣ ವ್ಯಾಪಾರಿಗಳಿಗೆ ಮಾರಾಟ ಮಾಡುತ್ತಿದ್ದ ಆರೋಪಿಗಳು, ಸಮನಾಗಿ ಹಣ ಹಂಚಿಕೊಳ್ಳುತ್ತಿದ್ದರು. ಹೀಗೆ ಗಳಿಸಿದ ಹಣದಲ್ಲಿ ಇಮ್ರಾನ್ ತನ್ನ ನಿವೇಶನದಲ್ಲಿ ಮನೆ ಕಟ್ಟಲು ಪ್ರಾರಂಭಿಸಿದ್ದರೆ, ಅಫ್ಜಲ್ ಫ್ಲ್ಯಾಟ್ ಖರೀದಿಗೆ ಮುಂಗಡ ಪಾವತಿಸಿದ್ದ. ಅಬ್ದುಲ್ ಕೂಡ ಸ್ನೇಹಿತನ ಬಳಿ ₹ 4 ಲಕ್ಷಕ್ಕೆ ಕಾರನ್ನು ಖರೀದಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಆರೋಪಿಗಳು ಇತ್ತೀಚೆಗೆ ಮುಖಕ್ಕೆ ಬಟ್ಟೆ ಸುತ್ತಿಕೊಂಡು ಬೈಕ್‌ನಲ್ಲಿ ಬರುತ್ತಿದ್ದರು. ಸಿಬ್ಬಂದಿ ವಾಹನ ತಪಾಸಣೆ ಮಾಡುತ್ತಿರುವುದನ್ನು ನೋಡುತ್ತಿದ್ದಂತೆಯೇ ಅವರು ‘ಯು’ ತಿರುವು ಪಡೆದುಕೊಂಡು ವಾಪಸ್ ಹೋದರು. ಕೂಡಲೇ ಜೀಪಿನಲ್ಲಿ ಹಿಂಬಾಲಿಸಿ ವಶಕ್ಕೆ ಪಡೆದೆವು. ಠಾಣೆಗೆ ಕರೆದೊಯ್ದು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ತಪ್ಪೊಪ್ಪಿಕೊಂಡರು. ಕದ್ದ ಮಾಲು ಖರೀದಿಸಿದ್ದ ಆಭರಣ ವ್ಯಾಪಾರಿಗಳನ್ನೂ ಬಂಧಿಸುತ್ತೇವೆ ಎಂದು ಪೊಲೀಸರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry