ರಾಜಸ್ಥಾನ, ಬಿಹಾರದಲ್ಲಿ ಪ್ರದರ್ಶನ ಇಲ್ಲ

7

ರಾಜಸ್ಥಾನ, ಬಿಹಾರದಲ್ಲಿ ಪ್ರದರ್ಶನ ಇಲ್ಲ

Published:
Updated:
ರಾಜಸ್ಥಾನ, ಬಿಹಾರದಲ್ಲಿ ಪ್ರದರ್ಶನ ಇಲ್ಲ

ಜೈಪುರ: ಬಿಗಿ ಭದ್ರತೆ ನೀಡುವ ಭರವಸೆಯನ್ನು ರಾಜಸ್ಥಾನ ಸರ್ಕಾರ ನೀಡಿದ್ದರೂ ಗುರುವಾರ ಬಿಡುಗಡೆಗೊಳ್ಳಲಿರುವ ‘ಪದ್ಮಾವತ್‌’ ಚಿತ್ರವನ್ನು ಪ್ರದರ್ಶಿಸದಿರಲು ಚಿತ್ರ ಮಂದಿರಗಳ ಮಾಲೀಕರು ನಿರ್ಧರಿಸಿದ್ದಾರೆ.

ರಾಜಸ್ಥಾನದ ಚಲನಚಿತ್ರ ವಿತರಕರು ‘ಪದ್ಮಾವತ್‌’ ಪ್ರದರ್ಶನದಿಂದ ಹಿಂದೆ ಸರಿದಿರುವುದರಿಂದ ರಾಜ್ಯದಲ್ಲಿ ಚಿತ್ರ ಬಿಡುಗಡೆಯಾಗುವುದಿಲ್ಲ.

ಚಿತ್ರ ಪ್ರದರ್ಶಿಸಿದರೆ ಚಿತ್ರಮಂದಿರಗಳಿಗೆ ಬೆಂಕಿ ಹಚ್ಚುವುದಾಗಿ ವಿವಿಧ ಮೂಲಭೂತವಾದಿ ಸಂಘಟನೆಗಳು ಬೆದರಿಕೆ ಒಡ್ಡಿರುವುದರಿಂದ ಸಿನಿಮಾ ವಿತರಕರ ಒಕ್ಕೂಟ ಈ ನಿರ್ಧಾರಕ್ಕೆ ಬಂದಿದೆ. ಇದಕ್ಕೂ ಮೊದಲು, ಚಿತ್ರದ ಟ್ರೇಲರ್‌ ಪ್ರದರ್ಶಿಸಿದ ಕೋಟಾದ ಚಿತ್ರಮಂದಿರವೊಂದರಲ್ಲಿ ಪ್ರತಿಭಟನಕಾರರು ದಾಂದಲೆ ನಡೆಸಿದ್ದರು.

‘ಸರ್ಕಾರ ಪ್ರದರ್ಶನಕ್ಕೆ ಅವಕಾಶ ನೀಡಿದರೂ ಚಿತ್ರಮಂದಿರಗಳಲ್ಲಿ ಪ್ರದರ್ಶಿಸಿದರೆ ಸುಮ್ಮನಿರುವುದಿಲ್ಲ ಎಂದು ಕರ್ಣಿ ಸೇನಾ ಬೆದರಿಕೆ ಒಡ್ಡಿದೆ. ಚಿತ್ರ ಪ್ರದರ್ಶಿಸಿದರೆ ಪ್ರತಿಭಟನಕಾರರು ಚಿತ್ರಮಂದಿರಗಳಿಗೆ ಹಾನಿ ಮಾಡುತ್ತಾರೆ; ಇದರಿಂದ ಜನರ ಸುರಕ್ಷತೆಗೂ ಸಂಚಕಾರ ಬರುತ್ತದೆ’ ಎಂದು ಸಿನಿಮಾ ವಿತರಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಚಿತ್ರಮಂದಿರಗಳ ಮಾಲೀಕರ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿದ ಜೈಪುರ ಪೊಲೀಸ್‌ ಕಮಿಷನರ್‌ ಸಂಜಯ್‌ ಅಗರ್‌ವಾಲ್‌, ‘ರಾಜಸ್ಥಾನದಲ್ಲಿ ಚಿತ್ರ ಪ್ರದರ್ಶನ ಮಾಡಿದರೆ ಚಿತ್ರಮಂದಿರಗಳಿಗೆ ನಾವು ಭದ್ರತೆ ಒದಗಿಸುತ್ತೇವೆ. ಚಿತ್ರ ವಿತರಕರು ಮತ್ತು ಕೆಲವು ಚಿತ್ರಮಂದಿರಗಳ ಮಾಲೀಕರೊಂದಿಗೂ ಈ ಕುರಿತು ಮಾತನಾಡಿದ್ದೇವೆ’ ಎಂದು ಹೇಳಿದರು.

ಭದ್ರತೆಗೆ ಸಜ್ಜು: ಈ ಮಧ್ಯೆ, ರಾಜ್ಯದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಜಾ ಮಾಡುತ್ತಿದ್ದಂತೆಯೇ ಚಿತ್ರದ ಬಿಡುಗಡೆಯಿಂದ ರಾಜ್ಯದಲ್ಲಿ ಉಂಟಾಗುವ ಕಾನೂನು ಸುವ್ಯವಸ್ಥೆಯ ಸವಾಲನ್ನು ಎದುರಿಸಲು ರಾಜಸ್ಥಾನ ಪೊಲೀಸರು ಸಿದ್ಧತೆ ಆರಂಭಿಸಿದ್ದಾರೆ.

‘ನಮ್ಮ ಮನವಿಯನ್ನು ಸುಪ್ರೀಂ ಕೋರ್ಟ್‌ ತಿರಸ್ಕರಿಸಿರುವುದರಿಂದ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದನ್ನು ಬಿಟ್ಟು ನಮಗೆ ಬೇರೆ ದಾರಿಯೇ ಇಲ್ಲ. ಇದು ನಮ್ಮ ಆದ್ಯತೆಯಾಗಲಿದೆ’ ಎಂದು ಗೃಹ ಸಚಿವ ಗುಲಾಬ್‌ ಚಂದ್‌ ಕಠಾರಿಯಾ ಹೇಳಿದ್ದಾರೆ.

ಬಿಹಾರದಲ್ಲೂ ಇಲ್ಲ: (ಪಟ್ನಾ ವರದಿ): ಬಿಹಾರದ ಚಿತ್ರಮಂದಿರಗಳ ಮಾಲೀಕರು ಕೂಡ ‘ಪದ್ಮಾವತ್‌’ ಚಿತ್ರವನ್ನು ಪ್ರದರ್ಶಿಸದೇ ಇರಲು ನಿರ್ಧರಿಸಿದ್ದಾರೆ.

ಚಿತ್ರ ಪ್ರದರ್ಶಿಸಲು ಯತ್ನಿಸಿದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಕರ್ಣಿ ಸೇನಾ ಬೆದರಿಕೆ ಒಡ್ಡಿರುವುದರಿಂದ ಮಾಲೀಕರು ಈ ನಿರ್ಧಾರಕ್ಕೆ ಬಂದಿದ್ದಾರೆ. ಕೆಲವು ಮಲ್ಪಿಪ್ಲೆಕ್ಸ್‌ಗಳು ಕಾಯ್ದಿರಿಸಿದ ಎಲ್ಲ ಟಿಕೆಟ್‌ಗಳನ್ನು ರದ್ದುಪಡಿಸಿವೆ.

ರಜಪೂತರ ಭಾವನೆ ಗಮನಲ್ಲಿರಿಸಿಕೊಂಡು ಚಿತ್ರಮಂದಿರ ಮಾಲೀಕರು ಸ್ವಯಂಪ್ರೇರಿತರಾಗಿ ಚಿತ್ರ ಪ್ರದರ್ಶಿಸದೇ ಇರಲು ನಿರ್ಧರಿಸುವುದು ಒಳ್ಳೆಯದು’ ಎಂದು ಕರ್ಣಿ ಸೇನಾದ ರಾಜ್ಯ ಅಧ್ಯಕ್ಷ ಧಿರೇಂದ್ರ ಸಿಂಗ್‌ ಹೇಳಿದ್ದಾರೆ.

ಚಿತ್ರದ ಮೇಲೆ ನಿಷೇಧ: ಸುಗ್ರೀವಾಜ್ಞೆ ಜಾರಿಗೆ ಒತ್ತಾಯ

ಆದೇಶವನ್ನು ಮಾರ್ಪಾಡು ಮಾಡಲು ಸುಪ್ರೀಂ ಕೋರ್ಟ್‌ ನಿರಾಕರಿಸಿದರೂ ರಜಪೂತ ಸಂಘಟನೆಗಳು ಚಿತ್ರದ ಮೇಲೆ ನಿಷೇಧ ಹೇರಬೇಕು ಎಂಬ ಆಗ್ರಹವನ್ನು ಮುಂದು ವರಿಸಿವೆ.

ಕೇಂದ್ರ ಸರ್ಕಾರ ಚಿತ್ರದ ಮೇಲೆ ನಿಷೇಧ ಹೇರಿ ಸುಗ್ರೀವಾಜ್ಞೆ ಹೊರಡಿಸಬೇಕು ಎಂದು ಅವು ಒತ್ತಾಯಿಸಿವೆ.

ಜೈಪುರದಲ್ಲಿ ಮಾತನಾಡಿದ ಶ್ರೀ ರಜಪೂತ ಸಭಾದ ಅಧ್ಯಕ್ಷ ಗಿರಿರಾಜ್‌ ಲೊತ್ವಾರಾ, ‘ಸುಪ್ರಿಂ ಕೋರ್ಟ್‌ ತೀರ್ಮಾನದಿಂದ ತೀವ್ರ ನೋವಾಗಿದೆ. ಬಿಜೆಪಿ ಸರ್ಕಾರ 24 ಗಂಟೆಗಳಲ್ಲಿ ಸುಗ್ರೀವಾಜ್ಞೆ ಹೊರಡಿಸಬೇಕು. ಇಲ್ಲದಿದ್ದರೆ ಪ್ರತಿಭಟನೆ ಕೈಮೀರಿ ಹೋಗಬಹುದು’ ಎಂದು ಹೇಳಿದ್ದಾರೆ.

ರಾಜ್‌ಕೋಟ್‌ನಲ್ಲಿ ಮಾತನಾಡಿರುವ ರಜಪೂತ ಕರ್ಣಿ ಸೇನಾ ಮುಖ್ಯಸ್ಥ ಲೋಕೇಂದ್ರ ಸಿಂಗ್ ಕಾಲವಿ,‘ಚಿತ್ರ ಬಿಡುಗಡೆಗೆ ಸಂಬಂಧಿಸಿದಂತೆ ಎಂಟು ರಾಜ್ಯಗಳ ಮುಖ್ಯಮಂತ್ರಿಗಳು ಭದ್ರತಾ ವಿಷಯವನ್ನು ಮುಂದಿಟ್ಟಿದ್ದಾರೆ. ಸುಪ್ರೀಂ ಕೋರ್ಟ್‌ ಈ ಎಲ್ಲ ಅಂಶಗಳನ್ನು ಪರಿಗಣಿಸಬೇಕಿತ್ತು. ಚಿತ್ರದ ಬಿಡುಗಡೆಗೆ ನಮ್ಮ ವಿರೋಧ ಮುಂದುವರಿಯಲಿದೆ’ ಎಂದು ಹೇಳಿದ್ದಾರೆ.

‘ರಾಜ್ಯದ ಚಿತ್ರಮಂದಿರಗಳ ಮಾಲೀಕರು ಕರ್ಫ್ಯೂ ಘೋಷಿಸಿ, ಚಿತ್ರ ಪ್ರದರ್ಶನ ಮಾಡಬಾರದು ಎಂದುಮನವಿ ಮಾಡುತ್ತೇನೆ. ಜನರು ಸಹಕಾರ ನೀಡಬೇಕು ಎಂದು ಕೋರುತ್ತೇನೆ. ಚಿತ್ರ ನೋಡಲೇಬೇಕು ಎಂದಿದ್ದರೆ, ಅದು ಇಂಟರ್‌ನಲ್ಲಿ ಲಭ್ಯವಿರುತ್ತದೆ. ಅಲ್ಲೇ ನೋಡಿ’ ಎಂದು ಅವರು ಹೇಳಿದ್ದಾರೆ.

ವಿನಾಯಕನ ದರ್ಶನ ಪಡೆದ ದೀಪಿಕಾ

ಮುಂಬೈ: ‘ಪದ್ಮಾವತ್‌’ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟಿ ದೀಪಿಕಾ ಪಡುಕೋಣೆ ಮಂಗಳವಾರ ಇಲ್ಲಿನ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಅವರಿಗೆ ಬಿಗಿ ಭದ್ರತೆ ಒದಗಿಸಲಾಗಿತ್ತು.

ಬಹಿಷ್ಕರಿಸಲು ಕರೆ

ಅಹಮದಾಬಾದ್: ಸುಪ್ರೀಂ ಕೋರ್ಟ್‌ ಆದೇಶದಂತೆ ರಾಜ್ಯ ಸರ್ಕಾರ ಸಾಕಷ್ಟು ಭದ್ರತೆ ನೀಡಲಿದೆಯಾದರೂ, ಜನರು ಸ್ವಯಂ ಪ್ರೇರಿತರಾಗಿ ಚಿತ್ರವನ್ನು ಬಹಿಷ್ಕರಿಸಬೇಕು ಎಂದು ಎಂದು ಗುಜರಾತ್‌ ಉಪ ಮುಖ್ಯಮಂತ್ರಿ ನಿತಿನ್‌ ಪಟೇಲ್‌ ಕರೆ ನೀಡಿದ್ದಾರೆ.

ಈ ಮಧ್ಯೆ, ಪಟೇಲ್‌ ಮೀಸಲಾತಿ ಹೋರಾಟದ ನಾಯಕ ಹಾರ್ದಿಕ್‌ ಪಟೇಲ್‌ ಕೂಡ ಚಿತ್ರ ವಿರೋಧಿಸುತ್ತಿರುವವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡಬಾರದು ಎಂದು ಮನವಿ ಮಾಡಿ ಮುಖ್ಯಮಂತ್ರಿ ಅವರಿಗೆ ಪತ್ರ ಬರೆದಿದ್ದಾರೆ.

ಸ್ವಯಂ ಪ್ರೇರಿತರಾಗಿ ಬಹಿಷ್ಕರಿಸಲು ಕರೆ

ಅಹಮದಾಬಾದ್: ಸುಪ್ರೀಂ ಕೋರ್ಟ್‌ ಆದೇಶದಂತೆ ರಾಜ್ಯ ಸರ್ಕಾರ ಸಾಕಷ್ಟು ಭದ್ರತೆ ನೀಡಲಿದೆಯಾದರೂ, ಜನರು ಸ್ವಯಂ ಪ್ರೇರಿತರಾಗಿ ಚಿತ್ರವನ್ನು ಬಹಿಷ್ಕರಿಸಬೇಕು ಎಂದು ಎಂದು ಗುಜರಾತ್‌ ಉಪ ಮುಖ್ಯಮಂತ್ರಿ ನಿತಿನ್‌ ಪಟೇಲ್‌ ಕರೆ ನೀಡಿದ್ದಾರೆ.

‘ಚಿತ್ರವನ್ನು ನೋಡಬಾರದು ಎಂದು ತುಂಬಾ ಜನರು ನಿರ್ಧರಿಸಿದ್ದಾರೆ. ಚಿತ್ರ ಪ್ರದರ್ಶಿಸದೇ ಇರಲು ಹಲವು ಚಿತ್ರಮಂದಿರಗಳ ಮಾಲೀಕರೂ ನಿರ್ಧರಿಸಿದ್ದಾರೆ. ಜನರು ಸ್ವಯಂ ಆಗಿ ಚಿತ್ರ ಬಹಿಷ್ಕರಿಸಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಪಾಲಿಸಲು ನೆರವಾಗಬೇಕು ಎಂಬುದು ನಮ್ಮ ನಿಲುವು’ ಎಂದು ಅವರು ಹೇಳಿದ್ದಾರೆ.

ಈ ಮಧ್ಯೆ, ಪಟೇಲ್‌ ಮೀಸಲಾತಿ ಹೋರಾಟದ ನಾಯಕ ಹಾರ್ದಿಕ್‌ ಪಟೇಲ್‌ ಕೂಡ ಚಿತ್ರ ವಿರೋಧಿಸುತ್ತಿರುವವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡಬಾರದು ಎಂದು ಮನವಿ ಮಾಡಿ ಮುಖ್ಯಮಂತ್ರಿ ಅವರಿಗೆ ಪತ್ರ ಬರೆದಿದ್ದಾರೆ.

ಜೈಪುರ ಸಾಹಿತ್ಯ ಉತ್ಸವಕ್ಕೆ ಬಿಗಿ ಭದ್ರತೆ

ಜೈಪುರ ಸಾಹಿತ್ಯ ಉತ್ಸವದ 11ನೇ ಆವೃತ್ತಿಯು ಗುರುವಾರ ಆರಂಭವಾಗಲಿದ್ದು, ರಜಪೂತ ಕರ್ಣಿ ಸೇನಾದ ಬೆದರಿಕೆಯನ್ನು ಗಮನದಲ್ಲಿಟ್ಟುಕೊಂಡು ಉತ್ಸವಕ್ಕೆ ಬಿಗಿ ಭದ್ರತೆ ಕಲ್ಪಿಸಲಾಗಿದೆ.

ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ ಅಧ್ಯಕ್ಷ ಪ್ರಸೂನ್‌ ಜೋಷಿ ಅವರು ಉತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸಂಘಟಕ ಸಂಜಯ್‌ ರಾಯ್‌ ಹೇಳಿದ್ದಾರೆ.

ಸಾಹಿತ್ಯ ಉತ್ಸವ ನಡೆಯಲಿರುವ ಡಿಗ್ಗಿ ಪ್ಯಾಲೇಸ್‌ಗೆ ಮಂಗಳವಾರ ಹಿರಿಯ ಪೊಲೀಸ್‌ ಅಧಿಕಾರಿಗಳ ತಂಡ ಭೇಟಿ ನೀಡಿ ಭದ್ರತಾ ಪರಿಶೀಲನೆ ನಡೆಸಿದೆ.

500ಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ ಎಂದು ಜೈಪುರ ಪೊಲೀಸ್‌ ಕಮಿಷನರ್‌ ಸಂಜಯ್‌ ಅಗರ್‌ವಾಲ್‌ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry