ಆರ್ಥಿಕ ಅಭಿವೃದ್ಧಿಯಲ್ಲಿ ಮಹಿಳೆಯರನ್ನೂ ಸೇರಿಸಿ

7

ಆರ್ಥಿಕ ಅಭಿವೃದ್ಧಿಯಲ್ಲಿ ಮಹಿಳೆಯರನ್ನೂ ಸೇರಿಸಿ

Published:
Updated:
ಆರ್ಥಿಕ ಅಭಿವೃದ್ಧಿಯಲ್ಲಿ ಮಹಿಳೆಯರನ್ನೂ ಸೇರಿಸಿ

ದಾವೋಸ್‌: ಮಹಿಳೆಯರನ್ನು ಒಳಗೊಂಡ ಆರ್ಥಿಕ ಅಭಿವೃದ್ಧಿಗೆ ಗಮನ ಹರಿಸುವಂತೆ ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) ಮುಖ್ಯಸ್ಥೆ ಕ್ರಿಸ್ಟಿನ್‌ ಲಗಾರ್ಡ್‌ ಮಂಗಳವಾರ ಭಾರತಕ್ಕೆ ಕಿವಿಮಾತು ಹೇಳಿದ್ದಾರೆ.

ಮಹಿಳೆಯರನ್ನು ಒಳಗೊಂಡಂತೆ ವಿಶಾಲ ತಳಹದಿಯ ಮೇಲೆ ಹಣಕಾಸು ಸೇವಾ ವಲಯದ ಸುಧಾರಣೆಗಳನ್ನು ಭಾರತ ಕೈಗೊಳ್ಳಬೇಕಿದೆ ಎಂದು ಅವರು ಸಲಹೆ ನೀಡಿದ್ದಾರೆ.

ವಿಶ್ವ ಆರ್ಥಿಕ ವೇದಿಕೆ ವಾರ್ಷಿಕ ಸಮಾವೇಶದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪುರುಷರಿಗೆ ಸರಿ ಸಮನಾಗಿ ಮಹಿಳೆಯರಿಗೂ ಉದ್ಯೋಗಾವಕಾಶ ಕಲ್ಪಿಸಿದರೆ ಭಾರತದ ಆರ್ಥಿಕತೆ ಶೇ 27ರಷ್ಟು ಏರಿಕೆ ಕಾಣಲಿದೆ. ಐಎಂಎಫ್‌ ಸಂಶೋಧನೆ ಈ ವಿಷಯದ ಮೇಲೆ ಬೆಳಕು ಚೆಲ್ಲಿದೆ ಎಂದು ಅವರು ತಿಳಿಸಿದರು.

ಗ್ರಾಮೀಣ ಪ್ರದೇಶಗಳ ಮಹಿಳೆಯರು ಎದುರಿಸುತ್ತಿರುವ ತಾರತಮ್ಯ ಮತ್ತು ಇತರ ಗಂಭೀರ ಸವಾಲುಗಳಿಗೆ ಭಾರತ ಪರಿಹಾರ ಕಂಡುಕೊಳ್ಳಬೇಕಿದೆ. ಲಿಂಗ ಸಮಾನತೆಯನ್ನು ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ಅವರು ಕಿವಿಮಾತು ಹೇಳಿದ್ದಾರೆ.

ಪಾಶ್ಚಾತ್ಯ ರಾಷ್ಟ್ರಗಳಿಗೆ ರಾಜನ್‌ ಸಲಹೆ: ಹೊಸ ಆರ್ಥಿಕ ಶಕ್ತಿಗಳಾಗಿ ಹೊರಹೊಮ್ಮುತ್ತಿರುವ ರಾಷ್ಟ್ರಗಳ ನೆರವಿಲ್ಲದೆ ಪಾಶ್ಚಾತ್ಯ ರಾಷ್ಟ್ರಗಳು ಸ್ವತಂತ್ರವಾಗಿ ಅಭಿವೃದ್ಧಿ ಸಾಧಿಸಲು ಸಾಧ್ಯವಿಲ್ಲ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ಮಾಜಿ ಗವರ್ನರ್‌ ರಘುರಾಂ ರಾಜನ್‌ ಅಭಿಪ್ರಾಯಪಟ್ಟಿದ್ದಾರೆ.

ಪಾಶ್ಚಾತ್ಯ ರಾಷ್ಟ್ರಗಳು ಅಭಿವೃದ್ಧಿ ಮತ್ತು ಅದರ ಲಾಭಗಳನ್ನು ಆರ್ಥಿಕವಾಗಿ ಬಲಗೊಳ್ಳುತ್ತಿರುವ ರಾಷ್ಟ್ರಗಳೊಂದಿಗೆ ಹಂಚಿಕೊಳ್ಳಬೇಕು. ಇಲ್ಲದಿದ್ದರೆ ಮುಂದುವರೆದ ರಾಷ್ಟ್ರಗಳಿಗೆ ಭವಿಷ್ಯವಿಲ್ಲ ಎಂದರು. ಪಾಶ್ಚಾತ್ಯ ರಾಷ್ಟ್ರಗಳ ಉತ್ಪನ್ನಗಳಿಗೆ ತೃತೀಯ ರಾಷ್ಟ್ರಗಳೇ ದೊಡ್ಡ ಮಾರುಕಟ್ಟೆಗಳಾಗಿವೆ. ಈ ಸೂಕ್ಷ್ಮತೆಯ ಅರಿವು ಪಾಶ್ಚಾತ್ಯ ರಾಷ್ಟ್ರಗಳಿಗಿರಬೇಕು ಎಂದು  ಹೇಳಿದ್ದಾರೆ.

ಭಾರತಕ್ಕೆಮಾರಕವಾಗಲಿರುವ ತಂತ್ರಜ್ಞಾನ: ಕೃತಕ ಬುದ್ಧಿಮತ್ತೆ ಮತ್ತು ಇನ್ನಿತರ ಅತ್ಯಾಧುನಿಕ ತಂತ್ರಜ್ಞಾನಗಳ ಮಿತಿಮೀರಿದ ಬಳಕೆ ಭವಿಷ್ಯದಲ್ಲಿ ಭಾರತ ಮತ್ತು ಚೀನಾಕ್ಕೆ ಮಾರಕವಾಗಲಿದೆ ಎಂದು ವರದಿಯೊಂದು ಹೇಳಿದೆ.

ಇದರಿಂದ ಭವಿಷ್ಯದಲ್ಲಿ ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಸಾಮಾಜಿಕ ಕ್ರಾಂತಿ ಮತ್ತು ಆದಾಯ ಅಸಮಾನತೆ ಅಪಾಯ ಎದುರಾಗಲಿದೆ ಎಂದು ಡಿಲಾಯಿಟ್‌ ಗ್ಲೋಬಲ್‌ ಸಂಸ್ಥೆಯ ಸಮೀಕ್ಷಾ ವರದಿ ಆತಂಕ ವ್ಯಕ್ತಪಡಿಸಿದೆ.

ಹೂಡಿಕೆಗೆ ಅವಕಾಶ: ವಿಶ್ವದ ಬೇರೆ ಯಾವ ರಾಷ್ಟ್ರಗಳಲ್ಲೂ ವಿದೇಶಿ ಹೂಡಿಕೆಗೆ ಇಲ್ಲದಷ್ಟು ಅಗಾಧ ಅವಕಾಶಗಳು ಭಾರತದಲ್ಲಿವೆ ಎಂದು ಕೇಂದ್ರ ಸಚಿವ ಪೀಯೂಷ್‌ ಗೋಯಲ್‌ ಹೇಳಿದ್ದಾರೆ.

ಹೂಡಿಕೆಗೆ ಪ್ರಶಸ್ತ ತಾಣ ಎಂದು ಮನಗಂಡ ಹಲವು ವಿದೇಶಿ ಕಂಪನಿಗಳು ಭಾರತದತ್ತ ಮುಖಮಾಡಿವೆ. ಆರ್ಥಿಕತೆಯಲ್ಲಿ ಮಾತ್ರವಲ್ಲ ಎಲ್ಲ ಕ್ಷೇತ್ರಗಳಲ್ಲೂ ಭಾರತ ಪ್ರಮುಖ ಪಾತ್ರ ನಿರ್ವಹಿಸಲಿದೆ ಎಂದು ಗೋಯಲ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry