ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈಕೋರ್ಟ್‌ಗೆ ಬಿಬಿಎಂಪಿ ಪ್ರಮಾಣಪತ್ರ

Last Updated 23 ಜನವರಿ 2018, 20:15 IST
ಅಕ್ಷರ ಗಾತ್ರ

ಬೆಂಗಳೂರು: ‘ನಗರದಲ್ಲಿನ ರಾಜಕಾಲುವೆ ಒತ್ತುವರಿ ತೆರವು ಕಾರ್ಯ ಈ ತಿಂಗಳ ಅಂತ್ಯಕ್ಕೆ ಶೇ 60ರಷ್ಟು ಪೂರ್ಣಗೊಳ್ಳಲಿದೆ’ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹೈಕೋರ್ಟ್‌ಗೆ ತಿಳಿಸಿದೆ. ಈ ಕುರಿತಂತೆ ಸಿಜಿಟನ್ ಆ್ಯಕ್ಷನ್ ಫೋರಂ ಮತ್ತು ಸಮರ್ಪಣಾ ಸ್ವಯಂ ಸೇವಾ ಸಂಘ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಚ್.ಜಿ.ರಮೇಶ್ ಹಾಗೂ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಬಿಬಿಎಂಪಿ ಪರ ವಕೀಲ ವಿ. ಶ್ರೀನಿಧಿ ಈ ಕುರಿತಂತೆ ಪ್ರಮಾಣಪತ್ರ ಸಲ್ಲಿಸಿದರು. ‘ಜನವರಿ ನಂತರ ಉಳಿದ ಶೇ 40ರಷ್ಟು ಒತ್ತುವರಿ ತೆರವು ಕಾರ್ಯ ಪೂರ್ಣಗೊಳಿಸಲಾಗುವುದು’ ಎಂದು ತಿಳಿಸಿದರು.

‘ಎಲ್ಲೆಲ್ಲಿ ಒತ್ತುವರಿಯಾಗಿದೆ ಎಂಬುದರ ಕುರಿತು ದಾಖಲೆಗಳ ಆಧಾರದೊಂದಿಗೆ ಸರ್ವೆ ನಡೆಸಲು ಸರ್ವೆ ಇಲಾಖೆಗೆ ಸೂಚಿಸಲಾಗಿದೆ. ಸರ್ವೆ ಬಳಿಕ ಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ಅವರು ವಿವರಿಸಿದರು.

ರಾಜ್ಯ ಸರ್ಕಾರದ ನೆರವು: ‘239 ಕಿಲೊ ಮೀಟರ್‌ನಷ್ಟು ಉದ್ದದ ರಾಜಕಾಲುವೆಗಳ ಹೂಳೆತ್ತುವ ಮತ್ತು ಮರುನಿರ್ಮಾಣ ಕಾಮಗಾರಿಗೆ ರಾಜ್ಯ ಸರ್ಕಾರದ ನೆರವು ಪಡೆಯಲಾಗಿದೆ. ಅನುದಾನ ಬಂದ ನಂತರ ಹಂತ ಹಂತವಾಗಿ ಈ ಕಾರ್ಯ ಕೈಗೆತ್ತಿಕೊಳ್ಳಲಾಗುವುದು’ ಎಂದು ಪ್ರಮಾಣಪತ್ರದಲ್ಲಿ ತಿಳಿಸಲಾಗಿದೆ.

ರಾಜಕಾಲುವೆ ಒತ್ತುವರಿ ತೆರವಿಗೆ ಸಂಬಂಧಿಸಿದಂತೆ ಅಧೀನ ನ್ಯಾಯಾಲಯ ಹಾಗೂ ಹೈಕೋರ್ಟ್‌ನಲ್ಲಿ 28 ಪ್ರಕರಣ ವಿಚಾರಣಾ ಹಂತದಲ್ಲಿವೆ. ಅವು ವಿಲೇವಾರಿ ಆದ ಕೂಡಲೇ ಒತ್ತುವರಿ ತೆರವು ನಡೆಸಲಾಗುವುದು. ತೆರವು ಮಾಡಿರುವ ಪ್ರದೇಶ
ಗಳಲ್ಲಿ ಬೇಲಿ ಹಾಕಲಾಗುತ್ತಿದೆ’ ಎಂದೂ ತಿಳಿಸಲಾಗಿದೆ.

‘ಕಾಲುವೆಗಳಿಗೆ ತ್ಯಾಜ್ಯ ಸುರಿಯಲಾಗುತ್ತಿರುವ 102 ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಲಾಗಿದೆ. ಅಲ್ಲೆಲ್ಲಾ ತಂತಿಬೇಲಿ ಅಳವಡಿಸುವ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ’ ಎಂದು ಪ್ರಮಾಣಪತ್ರದಲ್ಲಿ ವಿವರಿಸಲಾಗಿದೆ.

ರೋಬೊಟ್‌ ಬಳಕೆ: ‘ಕಿರಿದಾದ ಕಾಲುವೆಗಳ 20 ಕಿ.ಮೀ ಉದ್ದದ ಹೂಳೆತ್ತಲು ರೋಬೊಟ್‌ ಬಳಸಲು ನಿರ್ಧರಿಸಲಾ
ಗಿದೆ. ಅದಕ್ಕಾಗಿ ಜಪಾನ್‌ನಿಂದ 3 ರೋಬೊಟ್‌ಗಳನ್ನು ಆಮದು ಮಾಡಿಕೊಳ್ಳಲಾಗುವುದು’ ಎಂದು ಬಿಬಿಎಂಪಿ
ತಿಳಿಸಿದೆ.

‘ಬಿಬಿಎಂಪಿ ವ್ಯಾಪ್ತಿಯಲ್ಲಿರುವ ರಾಜಕಾಲುವೆ ಉದ್ದ 842 ಕಿ.ಮೀ. ಈ ಪೈಕಿ 177 ಕಿ.ಮೀ.ನಷ್ಟು ಕಾಲುವೆಯನ್ನು ₹ 1,367 ಕೋಟಿ ವೆಚ್ಚದಲ್ಲಿ ಮರು ನಿರ್ಮಾಣ ಮಾಡಲಾಗಿದೆ. 192 ಕಿ.ಮೀ ಕಾಲುವೆಯ ₹ 1,100 ಕೋಟಿ ವೆಚ್ಚದ ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿದೆ’ ಎಂದೂ ಪ್ರಮಾಣಪತ್ರದಲ್ಲಿ ತಿಳಿಸಲಾಗಿದೆ.

ಕಾರ್ಖಾನೆ ಸ್ಥಳಾಂತರಕ್ಕೆ ನಿರ್ದೇಶನ: ನೋಟಿಸ್ ಜಾರಿ
ಬೆಂಗಳೂರು:
ನಗರದ ಮಹದೇವಪುರ ಕೈಗಾರಿಕಾ ಪ್ರದೇಶದಲ್ಲಿರುವ ಐಜೆಎಂ ಕಾಂಕ್ರೀಟ್ ಕಾರ್ಖಾನೆಯನ್ನು ಕೂಡಲೇ ಸ್ಥಳಾಂತರಿಸಬೇಕು ಎಂದು ನಿರ್ದೇಶಿಸಿದ್ದ ಪ್ರಕರಣದಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ (ಕೆಎಸ್‌ಪಿಸಿಬಿ) ತುರ್ತು ನೋಟಿಸ್ ಜಾರಿ ಮಾಡಲು ಹೈಕೋರ್ಟ್‌ ಆದೇಶಿಸಿದೆ.

ಈ ಕುರಿತಂತೆ ಕಾರ್ಖಾನೆ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಚ್.ಜಿ. ರಮೇಶ್ ಮತ್ತು ನ್ಯಾಯಮೂರ್ತಿ ಪಿ.ಎಸ್. ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ಅರ್ಜಿದಾರರ ಆಕ್ಷೇಪಕ್ಕೆ ಉತ್ತರಿಸುವಂತೆ ಕೆಎಸ್‌ಪಿಸಿಬಿ ಹಾಗೂ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ನೋಟಿಸ್ ಜಾರಿ ಮಾಡಲು ಆದೇಶಿಸಲಾಗಿದೆ.

‘ಮಹದೇವಪುರ ಕೈಗಾರಿಕಾ ಪ್ರದೇಶದಲ್ಲಿರುವ ರೆಡಿ ಮಿಕ್ಸ್ ಕಾಂಕ್ರೀಟ್ ಉತ್ಪಾದನೆಯ ಐಜೆಎಂ ಕಾಂಕ್ರೀಟ್ ಪ್ರಾಡಕ್ಟ್ ಖಾಸಗಿ ಕಾರ್ಖಾನೆ 2006ರಿಂದ ಕಾರ್ಯ ನಿರ್ವಹಿಸುತ್ತಿದೆ. ಇದರಿಂದ ಶಬ್ದ ಹಾಗೂ ವಾಯು ಮಾಲಿನ್ಯ ಉಂಟಾಗುತ್ತಿದೆ’ ಎಂದು ಸುತ್ತಮುತ್ತಲಿನ ನಿವಾಸಿಗಳು ಮಾಲಿನ್ಯ ನಿಯಂತ್ರಣ ಮಂಡಳಿಗೆ ದೂರು ಸಲ್ಲಿಸಿದ್ದರು.

ಈ ಆರೋಪಕ್ಕೆ ಸಂಬಂಧಿಸಿದಂತೆ ಕ್ರಮಕ್ಕೆ ಮುಂದಾಗಿದ್ದ ಮಂಡಳಿ, ‘ಕೂಡಲೇ ಕಾರ್ಖಾನೆಯನ್ನು ಸ್ಥಳಾಂತರ ಮಾಡಬೇಕು’ ಎಂದು ಸೂಚಿಸಿ ಜ.18ರಂದು ನೋಟಿಸ್ ಜಾರಿ ಮಾಡಿತ್ತು. ಜೂನ್‌ 30ರೊಳಗೆ ಕಾರ್ಖಾನೆ ಮುಚ್ಚಬೇಕು’ ಎಂದೂ ನಿರ್ದೇಶಿಸಿತ್ತು.

ಈ ನೋಟಿಸ್‌ ಅನ್ನು ಈಗ ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ. ಅರ್ಜಿದಾರರ ಪರ ಎ.ವಿ.ಅಮರನಾಥನ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT