ಆಟೊಗಳ ಗುಜರಿ; ಸಲ್ಲಿಕೆಯಾಗದ ಅರ್ಜಿಗಳು

7

ಆಟೊಗಳ ಗುಜರಿ; ಸಲ್ಲಿಕೆಯಾಗದ ಅರ್ಜಿಗಳು

Published:
Updated:

ಬೆಂಗಳೂರು: ಕಳೆದ ವರ್ಷ ಬಜೆಟ್‌ನಲ್ಲಿ ಘೋಷಿಸಿದಂತೆ 2018ರ ಏಪ್ರಿಲ್‌ 1ರಿಂದ ನಗರದಲ್ಲಿ 2 ಸ್ಟ್ರೋಕ್‌ ಆಟೊಗಳನ್ನು ನಿಷೇಧಿಸಲು ತಯಾರಿ ನಡೆಸಿರುವ ಸಾರಿಗೆ ಇಲಾಖೆ, ಅಂಥ ಆಟೊಗಳ ಗುಜರಿಗೆ ಕ್ರಮ ಕೈಗೊಂಡಿದೆ. ಇದಕ್ಕೆ ಆಟೊ ಚಾಲಕರು ನಿರಾಸಕ್ತಿ ತೋರುತ್ತಿದ್ದು, ಅವರಿಂದ ಒಂದು ಅರ್ಜಿಯೂ ಸಲ್ಲಿಕೆಯಾಗಿಲ್ಲ.

ಆಟೊಗಳನ್ನು ಗುಜರಿಗೆ ಹಾಕುವ ಚಾಲಕರಿಗೆ ಹೊಸ ಆಟೊ ಖರೀದಿಸಲು ₹30,000 ಸಹಾಯಧನ ನೀಡಲು ಸಾರಿಗೆ ಇಲಾಖೆ ತೀರ್ಮಾನಿಸಿದೆ. ಹಣ ಮಂಜೂರು ಮಾಡಲು ಇಲಾಖೆಯು ಕೆಲ ನಿಯಮಗಳನ್ನು ರೂಪಿಸಿದೆ. ಅವುಗಳಿಗೆ ಆಟೊ ಚಾಲಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

’ನೆಲಮಂಗಲ, ರಾಜಾಜಿನಗರ, ಪೀಣ್ಯದಲ್ಲಿ ಗುಜರಿ ಕೇಂದ್ರಗಳ ಸ್ಥಾಪನೆಗಾಗಿ ಖಾಸಗಿ ಕಂಪನಿಗಳಿಗೆ ಅನುಮತಿ ನೀಡಿದ್ದೇವೆ. ಚಾಲಕರು ಮೊದಲು ಆಟೊ ನೋಂದಣಿ ರದ್ದುಪಡಿಸಿಕೊಳ್ಳಬೇಕು. ಅದಕ್ಕೆ ಪ್ರತಿಯಾಗಿ ಆರ್‌ಟಿಒ ನೀಡುವ ಪ್ರಮಾಣಪತ್ರವನ್ನು  ಕೇಂದ್ರಕ್ಕೆ ಕೊಟ್ಟು ಆಟೊವನ್ನು ಗುಜರಿಗೆ ಹಾಕಬೇಕು. ಬಳಿಕ ಕೇಂದ್ರದವರು ನೀಡುವ ಪ್ರಮಾಣಪತ್ರದ ಸಮೇತ ಸಹಾಯಧನಕ್ಕೆ ಅರ್ಜಿ ಸಲ್ಲಿಸಬೇಕು. ಆದರೆ, ನೋಂದಣಿ ರದ್ದತಿಗಾಗಿ ಇದುವರೆಗೂ ಒಂದು ಅರ್ಜಿಯೂ ಸಲ್ಲಿಕೆಯಾಗಿಲ್ಲ’ ಎಂದು ಸಾರಿಗೆ ಇಲಾಖೆಯ, ಹೆಸರು ಬಹಿರಂಗ ಪಡಿಸಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದರು.

ಆಟೊ ಸಂಘಟನೆಯೊಂದರ ಮುಖಂಡರು, ‘ಸಹಾಯಧನದಲ್ಲಿ ಹೊಸ ಆಟೊ ಖರೀದಿಸಲು ಸಾಧ್ಯವಿಲ್ಲ. ನಮ್ಮ ಕೆಲ ಬೇಡಿಕೆಗಳನ್ನು ಈಡೇರಿಸುವವರೆಗೂ ಆಟೊಗಳನ್ನು ಗುಜರಿಗೆ ಹಾಕಲ್ಲ. ಅರ್ಜಿಯನ್ನೂ ಸಲ್ಲಿಸಿಲ್ಲ’ ಎಂದರು.

ಶೇ 15ರಷ್ಟು ಅಪಘಾತ ತಡೆಗೆ ಕ್ರಮ

‘2017ರಲ್ಲಿ ಶೇ 10ರಷ್ಟು ಅಪಘಾತ ಸಂಖ್ಯೆ ಕಡಿಮೆ ಮಾಡಿದ್ದೇವೆ. 2018ರಲ್ಲಿ ಶೇ 15ರಷ್ಟು ಅಪಘಾತ ಕಡಿಮೆ ಮಾಡುವ ಗುರಿ ಇಟ್ಟುಕೊಂಡಿದ್ದೇವೆ. 300ಕ್ಕೂ ಹೆಚ್ಚು ಬ್ಲಾಕ್‌ ಸ್ಪಾಟ್‌ (ಅಪಘಾತ ವಲಯ) ಗುರುತು ಮಾಡಿದ್ದು, ಅಲ್ಲೆಲ್ಲ ಕಾಮಗಾರಿ ಕೈಗೊಳ್ಳಲಿದ್ದೇವೆ’ ಎಂದು ಸಾರಿಗೆ ಆಯುಕ್ತ ಬಿ.ದಯಾನಂದ್ ಹೇಳಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಅಧ್ಯಕ್ಷತೆಯಲ್ಲಿ ಜ. 17ರಂದು ನಡೆದ ರಾಜ್ಯ ರಸ್ತೆ ಸುರಕ್ಷತಾ ಕೋಶದ ಸಭೆಯಲ್ಲಿ ಕೆಲ ತೀರ್ಮಾನ ಕೈಗೊಳ್ಳಲಾಗಿದೆ’ ಎಂದರು.

‘ಐಎಸ್‌ಐ ಗುರುತಿನ ಹೆಲ್ಮೆಟ್‌ ಬಗ್ಗೆ ದ್ವಿಚಕ್ರ ವಾಹನಗಳ ಸವಾರರಿಗೆ ಜಾಗೃತಿ ಮೂಡಿಸಲು, ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿಗಳಿಗೆ ವಿಶೇಷ ಅನುದಾನ ನೀಡಲು, ರಸ್ತೆ ಸುರಕ್ಷತೆ ಬಗ್ಗೆ ಕಿರುಹೊತ್ತಿಗೆಯನ್ನು ಉಚಿತವಾಗಿ ವಿತರಿಸಲು, ಪ್ರಥಮ ಚಿಕಿತ್ಸೆ ಬಗ್ಗೆ ಪೊಲೀಸರು, ಗೃಹ ರಕ್ಷಕರು ಹಾಗೂ ಶಿಕ್ಷಕರಿಗೆ ತರಬೇತಿ ನೀಡಲು ತೀರ್ಮಾನ ಕೈಗೊಂಡಿದ್ದೇವೆ’ ಎಂದರು.

ತರಬೇತಿ ಸಂಸ್ಥೆಗಳ ಸ್ಥಾಪನೆ

‘ಬೆಂಗಳೂರಿನ ಸಿಂಗನಾಯಕನಹಳ್ಳಿ ಹಾಗೂ ಧಾರವಾಡದ ಗಾಮನಗಟ್ಟಿಯಲ್ಲಿ ಭಾರಿ ವಾಹನ ಚಾಲಕರ ತರಬೇತಿ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ಅದೇ ಮಾದರಿಯಲ್ಲೇ ಮಂಗಳೂರು ಹಾಗೂ ಕಲಬುರ್ಗಿಯಲ್ಲೂ ಕೇಂದ್ರ ಸ್ಥಾಪಿಸಲಿದ್ದೇವೆ. ನಿರುದ್ಯೋಗ ಯುವಕರಿಗೆ ಅಲ್ಲಿ ಚಾಲನಾ ತರಬೇತಿ ನೀಡಲಿದ್ದೇವೆ’ ಎಂದರು.

ನೆಲಮಂಗಲ ದಾಸನಪುರದ ಗೌಡಹಳ್ಳಿ ಹಾಗೂ ಚೊಕ್ಕನಹಳ್ಳಿಯಲ್ಲಿ ವಾಯು ಮಾಲಿನ್ಯ ತಪಾಸಣೆ ಕೇಂದ್ರಗಳಿವೆ. ಮೈಸೂರು ಹಾಗೂ ಧಾರವಾಡದಲ್ಲೂ ಅಂಥ ಕೇಂದ್ರ ಸ್ಥಾಪಿಸಲಾಗುವುದು ಎಂದರು.

569 ಪ್ರಕರಣ ದಾಖಲು:  ‘ಜ. 17ರಿಂದ 22ರವರೆಗೆ ವಿಶೇಷ ಕಾರ್ಯಾಚರಣೆ ನಡೆಸಿದ್ದೆವು. 3,087 ವಾಹನ ತಪಾಸಣೆ ನಡೆಸಿ 569 ಪ್ರಕರಣ ದಾಖಲಿಸಿಕೊಂಡಿದ್ದೇವೆ. 18 ವಾಹನ ಜಪ್ತಿ ಮಾಡಿದ್ದೇವೆ’ ಎಂದರು.

ಓಲಾ, ಉಬರ್‌ ಪ್ರತಿನಿಧಿಗಳ ಸಭೆ: ‘ಮೊಬೈಲ್‌ ಆ್ಯಪ್‌ ಆಧರಿತ ಟ್ಯಾಕ್ಸಿಗಳಿಗೆ ಕನಿಷ್ಠ ಹಾಗೂ ಗರಿಷ್ಠ ದರ ನಿಗದಿ ಮಾಡಿ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಅದನ್ನು ಪಾಲಿಸಲು ಓಲಾ, ಉಬರ್‌ ಕಂಪನಿಯವರು ಕಾಲಾವಕಾಶ ಕೇಳಿದ್ದಾರೆ. ಸದ್ಯದಲ್ಲೇ ಆ ಕಂಪನಿಯ ಪ್ರತಿನಿಧಿಗಳ ಸಭೆ ನಡೆಸಲಿದ್ದೇವೆ’ ಎಂದು ದಯಾನಂದ್ ವಿವರಿಸಿದರು.

‘ಪರವಾನಗಿ ಇಲ್ಲದೆ ಟ್ಯಾಕ್ಸಿ ಓಡಿಸುತ್ತಿದ್ದ ನಮ್ಮ ಟೈಗರ್‌ ಸಂಸ್ಥೆಯ ಕೆಲ ಟ್ಯಾಕ್ಸಿಗಳನ್ನು ಜಪ್ತಿ ಮಾಡಿದ್ದೇವೆ. ಕಾನೂನು ಪ್ರಕಾರ ನೋಟಿಸ್‌ ಕೊಟ್ಟಿದ್ದೇವೆ. ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲು ಅವರಿಗೆ ಅವಕಾಶವಿದೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry