ಫೆ. 10ರಿಂದ ಬಸ್‌ನಲ್ಲಿ ರಾಹುಲ್‌ ರೋಡ್‌ ಶೋ

7

ಫೆ. 10ರಿಂದ ಬಸ್‌ನಲ್ಲಿ ರಾಹುಲ್‌ ರೋಡ್‌ ಶೋ

Published:
Updated:

ಬೆಂಗಳೂರು: ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಫೆ. 10ರಿಂದ ಮೂರು ದಿನ ಹೈದರಾಬಾದ್‌– ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಬಸ್ಸಿನಲ್ಲಿ ರೋಡ್‌ ಶೋ ನಡೆಸಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ ತಿಳಿಸಿದರು.

ಕಲಬುರ್ಗಿ ವಿಭಾಗದ ಐದು ಜಿಲ್ಲೆಗಳ ಉಸ್ತುವಾರಿ ಸಚಿವರು ಮತ್ತು ಮುಖಂಡರೊಂದಿಗೆ ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ‘ಪ್ರವಾಸ ಪೂರ್ವಸಿದ್ಧತೆಯ ಪರಿಶೀಲನೆಗೆ ಇದೇ 25ರಂದು ನಾನು ಹೊಸಪೇಟೆಗೆ ಹೋಗಲಿದ್ದೇನೆ’ ಎಂದರು.

ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್, ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕಾರ್ಯಾಧ್ಯಕ್ಷರಾದ ದಿನೇಶ್‌ ಗುಂಡೂರಾವ್‌ ಮತ್ತು ಎಸ್‌.ಆರ್‌. ಪಾಟೀಲ ಸಭೆಯಲ್ಲಿದ್ದರು.

‘10ರಂದು ಬಳ್ಳಾರಿಗೆ ಬರಲಿರುವ ರಾಹುಲ್‌, ಬಸ್‌ನಲ್ಲಿ ಪ್ರವಾಸ ಮಾಡುವರು. ನಂತರ ಹೊಸಪೇಟೆಯಲ್ಲಿ ಪಕ್ಷದ ಸಮಾವೇಶದಲ್ಲಿ ಭಾಗವಹಿಸಿ, ಅಲ್ಲಿಯೇ ವಾಸ್ತವ್ಯ ಹೂಡುವರು. 11ರಂದು ಬಸ್‌ನಲ್ಲೇ ಪಕ್ಷದ ನಾಯಕರ ಜೊತೆ ರೋಡ್ ಶೋ ನಡೆಸಲಿದ್ದಾರೆ. ಅಲ್ಲದೆ, ರೈತರು, ಯುವಜನರು ಮತ್ತು ಸಾರ್ವಜನಿಕರ ಜೊತೆ ವಿವಿಧ ಕಡೆ ಸಂವಾದ ನಡೆಸಲಿದ್ದಾರೆ. ಎರಡನೇ ದಿನ ಕಲಬುರ್ಗಿಯಲ್ಲಿ ವಾಸ್ತವ್ಯ ಹೂಡಲಿದ್ದು, ವಿವಿಧ ಸಭೆಗಳಲ್ಲಿ ಭಾಗವಹಿಸುವರು. ಮೂರನೇ ದಿನ ಬೀದರ್‌ಗೆ ತೆರಳಿ ಅಲ್ಲಿಂದ ಹೈದರಾಬಾದ್‌ ಮೂಲಕ ದೆಹಲಿಗೆ ತೆರಳುವರು’ ಎಂದು ವಿವರಿಸಿದರು.

‘ರಾಹುಲ್‌ ಪ್ರವಾಸದ ತಾತ್ಕಾಲಿಕ ಪಟ್ಟಿ ಸಿದ್ಧಪಡಿಸಲಾಗಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಕಚೇರಿಯಿಂದ ಅಂತಿಮ ಒಪ್ಪಿಗೆ ಪಡೆಯಬೇಕಿದೆ’ ಎಂದೂ ಹೇಳಿದರು.

ಪಕ್ಷಕ್ಕೆ ರಾಜೀನಾಮೆ ಬೆದರಿಕೆ

ಕೆ.ಸಿ. ವೇಣುಗೋಪಾಲ್ ಅವರನ್ನು ಮಂಗಳವಾರ ಭೇಟಿಯಾದ ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯಿತಿಯ 14 ಕಾಂಗ್ರೆಸ್‌ ಸದಸ್ಯರು, ‘ಅಧ್ಯಕ್ಷ ಪಿ.ಎನ್. ಕೇಶವ ರೆಡ್ಡಿಯನ್ನು ಸ್ಥಾನದಿಂದ ವಜಾಗೊಳಿಸಬೇಕು. ಇಲ್ಲದಿದ್ದರೆ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತೇವೆ’ ಎಂದು ಬೆದರಿಕೆ ಒಡ್ಡಿದರು.

ಸದಸ್ಯರ ಮನವಿಗೆ ಸ್ಪಂದಿಸಿದ ವೇಣುಗೋಪಾಲ್, ‘ತಕ್ಷಣ ರಾಜೀನಾಮೆ ನೀಡುವಂತೆ ರೆಡ್ಡಿಗೆ ಸೂಚಿಸುತ್ತೇನೆ’ ಎಂದು ಭರವಸೆ ನೀಡಿದರು. ರಾಜೀನಾಮೆ ನೀಡದಿದ್ದರೆ ಪಕ್ಷದಿಂದ ಉಚ್ಚಾಟಿಸುವ ಎಚ್ಚರಿಕೆಯನ್ನೂ ನೀಡಿದರು.

ಡಿಸೆಂಬರ್‌ ಕೊನೆ ಒಳಗೆ ರಾಜೀನಾಮೆ ನೀಡುವಂತೆ ಈ ಹಿಂದೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿ. ಪರಮೇಶ್ವರ ಮತ್ತು ವೇಣುಗೋಪಾಲ್‌ ಸೂಚಿಸಿದ್ದರು. ಆದರೆ, ರೆಡ್ಡಿ ರಾಜೀನಾಮೆ ನೀಡಿರಲಿಲ್ಲ. ಸಂಸದ ಎಂ. ವೀರಪ್ಪ ಮೊಯಿಲಿ ಕೂಡ ಈ ಬಗ್ಗೆ ಪಕ್ಷದ ಹಿರಿಯರ ಗಮನಕ್ಕೆ ತಂದಿದ್ದರು ಎಂದು ಪಕ್ಷದ ಮೂಲಗಳು ತಿಳಿಸಿವೆ.

ವೇಣುಗೋಪಾಲ್‌ಗೆ ದೂರು

ಬೆಂಗಳೂರು: ಲೋಕೋಪಯೋಗಿ ಸಚಿವ ಎಚ್‌.ಸಿ. ಮಹದೇವಪ್ಪ ಅವರನ್ನು ಸಿ.ವಿ. ರಾಮನ್‌ ನಗರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಬಿಂಬಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆಯ ವಿರುದ್ಧ ಅಲ್ಲಿನ ಟಿಕೆಟ್‌ ಆಕಾಂಕ್ಷಿ ಪಿ. ರಮೇಶ್‌ ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಬಳಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವೇಣುಗೋಪಾಲ್‌ ಅವರನ್ನು ಮಂಗಳವಾರ ಭೇಟಿ ಮಾಡಿದ ರಮೇಶ್‌, ‘ಕ್ಷೇತ್ರದಲ್ಲಿ ಕಾಂಗ್ರೆಸ್‌ ಕಟ್ಟಿ ಬೆಳೆಸಲು ಸಾಕಷ್ಟು ಪ್ರಯತ್ನಿಸಿದ್ದೇನೆ. ಕಳೆದ ಚುನಾವಣೆಯಲ್ಲಿ ಅಲ್ಪಮತಗಳಿಂದ ಸೋಲು ಕಂಡಿದ್ದೆ. ಹೀಗಾಗಿ ಮತ್ತೊಮ್ಮೆ ಸ್ಪರ್ಧಿಸಲು ಅವಕಾಶ ನೀಡಬೇಕು’ ಎಂದು ಅಹವಾಲು ಸಲ್ಲಿಸಿದ್ದಾರೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry