ಮಾಲೀಕರ ಬದಲು ಚಾಲಕರಿಗೆ ದಂಡ

7

ಮಾಲೀಕರ ಬದಲು ಚಾಲಕರಿಗೆ ದಂಡ

Published:
Updated:

ಬೆಂಗಳೂರು: ಸಂಚಾರ ನಿಯಮ ಉಲ್ಲಂಘಿಸುವ ವಾಹನಗಳ ಮಾಲೀಕರ ವಿರುದ್ಧ ಕ್ರಮ ಜರುಗಿಸುತ್ತಿದ್ದ ಸಾರಿಗೆ ಇಲಾಖೆಯ ಅಧಿಕಾರಿಗಳು, ಇನ್ನು ಮುಂದೆ ಚಾಲಕರಿಗಷ್ಟೇ ದಂಡ ವಿಧಿಸಲಿದ್ದಾರೆ.

ಮಂಗಳವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಸಾರಿಗೆ ಇಲಾಖೆ ಆಯುಕ್ತ ಬಿ.ದಯಾನಂದ್, ‘ವಾಹನಗಳ ನೋಂದಣಿ ಸಂಖ್ಯೆ ಆಧರಿಸಿ ದಂಡ ವಿಧಿಸುವ ನಿಯಮ ಜಾರಿಯಲ್ಲಿತ್ತು. ಇನ್ನು ಮುಂದೆ, ಚಾಲನಾ ಪರವಾನಗಿ ಪತ್ರ (ಡಿ.ಎಲ್‌) ಆಧರಿಸಿ ಚಾಲಕರಿಗೆ ಮಾತ್ರ ದಂಡ ವಿಧಿಸಲಿದ್ದೇವೆ. ಇದಕ್ಕೆ ರಾಜ್ಯ ರಸ್ತೆ ಸುರಕ್ಷತಾ ಕೋಶ ಒಪ್ಪಿಗೆ ನೀಡಿದೆ’ ಎಂದರು.

‘ಕೆಲವರು ಬೇರೆಯವರ ವಾಹನಗಳನ್ನು ಬಳಕೆ ಮಾಡುತ್ತಿದ್ದಾರೆ. ಅಂಥ ಚಾಲಕರು ನಿಯಮ ಉಲ್ಲಂಘಿಸಿದರೆ, ಮಾಲೀಕರು ದಂಡ ತೆರಬೇಕಾದ ಸ್ಥಿತಿ ಇದೆ. ಇದರಿಂದ ಮಾಲೀಕರಿಗೆ ತೊಂದರೆ ಆಗುತ್ತಿದೆ. ಹೀಗಾಗಿ ಚಾಲಕರಿಗೆ ದಂಡ ವಿಧಿಸಲು ತೀರ್ಮಾನಿಸಿದ್ದೇವೆ. ಅತಿ ಹೆಚ್ಚು ನಿಯಮ ಉಲ್ಲಂಘಿಸಿದವರ ಚಾಲನಾ ಪರವಾನಗಿ ಪತ್ರವನ್ನು ರದ್ದುಪಡಿಸಲು ಈ ನಿಯಮ ಅನುಕೂಲವಾಗಲಿದೆ’ ಎಂದರು.

ತಪಾಸಣೆ ವೇಳೆಯಲ್ಲಷ್ಟೇ ದಂಡ: ‘ವಾಹನಗಳನ್ನು ತಡೆದು ತಪಾಸಣೆ ನಡೆಸುವ ವೇಳೆಯಲ್ಲಷ್ಟೇ ಈ ರೀತಿಯಾಗಿ ಚಾಲಕರಿಗೆ ದಂಡ ವಿಧಿಸಲಿದ್ದೇವೆ. ಕ್ಯಾಮೆರಾ ಮೂಲಕ ನಿಯಮ ಉಲ್ಲಂಘನೆ ಪತ್ತೆ ಹಚ್ಚಿದಾಗ, ಡಿ.ಎಲ್‌ ಗುರುತಿಸುವುದು ಕಷ್ಟ. ಆ ಬಗ್ಗೆ ಸದ್ಯಕ್ಕೆ ತೀರ್ಮಾನ ಕೈಗೊಂಡಿಲ್ಲ’ ಎಂದು ದಯಾನಂದ್‌ ಹೇಳಿದರು.

‘ಈ ಹೊಸ ನಿಯಮದಂತೆ ದಂಡ ಸಂಗ್ರಹ ಮಾಡುವಂತೆ ಪೊಲೀಸರಿಗೆ ಸೂಚನೆ ನೀಡಿದ್ದೇವೆ. ನಮ್ಮ ಇಲಾಖೆಯಿಂದ ಚಾಲನಾ ಪರವಾನಗಿ ಪತ್ರದ ದತ್ತಾಂಶವನ್ನು ಅವರಿಗೆ ನೀಡಿದ್ದೇವೆ. ಹೆಚ್ಚು ನಿಯಮ ಉಲ್ಲಂಘಿಸಿದ ಚಾಲಕರ ಪರವಾನಗಿ ಪತ್ರವನ್ನು ಅಮಾನತು ಮಾಡಲು ಪ್ರಸ್ತಾವ ಸಲ್ಲಿಸುವಂತೆಯೂ ತಿಳಿಸಿದ್ದೇವೆ’ ಎಂದರು.

ಈ ನಿಯಮ ಉಲ್ಲಂಘಿಸಿದರೆ ಚಾಲಕರಿಗೆ ದಂಡ

ನಿರ್ಲಕ್ಷ್ಯದ ಚಾಲನೆ, ಪಥಶಿಸ್ತು ಪಾಲಿಸದಿರುವುದು, ನೋ ಎಂಟ್ರಿ, ತಪ್ಪು ನಿಲುಗಡೆ, ಸಿಗ್ನಲ್ ಜಂಪ್, ಅತಿ ವೇಗದ ಚಾಲನೆ, ವ್ಹೀಲಿಂಗ್, ಚಾಲನೆ ವೇಳೆ ಮೊಬೈಲ್ ಬಳಕೆ, ಮದ್ಯ ಕುಡಿದು ಚಾಲನೆ, ಹೆಲ್ಮೆಟ್‌ ಧರಿಸದಿರುವುದು, ಸಮವಸ್ತ್ರ ಹಾಕದಿರುವುದು.

ಈ ನಿಯಮ ಉಲ್ಲಂಘಿಸಿದರೆ ಮಾಲೀಕರಿಗೆ ದಂಡ

ವಾಹನಗಳ ನೋಂದಣಿ ಪ್ರಮಾಣಪತ್ರ, ವಾಹನಗಳ ಸಾಮರ್ಥ್ಯ, ಮಾಲಿನ್ಯ ತಪಾಸಣಾ ಪ್ರಮಾಣಪತ್ರ ಹಾಗೂ ವಿಮೆ ಪತ್ರ ಹಾಜರುಪಡಿಸದಿದ್ದರೆ, ಟಿಂಟ್‌ ಗಾಜು ಅಳವಡಿಸಿದ್ದರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry