ಬೆಳ್ಳಂದೂರು ಕೆರೆ ಅಭಿವೃದ್ಧಿಗೆ ಮತ್ತೆ ಗಡುವು

6

ಬೆಳ್ಳಂದೂರು ಕೆರೆ ಅಭಿವೃದ್ಧಿಗೆ ಮತ್ತೆ ಗಡುವು

Published:
Updated:
ಬೆಳ್ಳಂದೂರು ಕೆರೆ ಅಭಿವೃದ್ಧಿಗೆ ಮತ್ತೆ ಗಡುವು

ಬೆಂಗಳೂರು: ಇತ್ತೀಚೆಗೆ ಮತ್ತೆ ಬೆಂಕಿ ಹೊತ್ತಿಕೊಂಡು ಸ್ಥಳೀಯರ ಆತಂಕಕ್ಕೆ ಕಾರಣವಾಗಿದ್ದ ಬೆಳ್ಳಂದೂರು ಕೆರೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ಒಂದು ವಾರದೊಳಗೆ ಕಾಮಗಾರಿ ಆರಂಭಿಸುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ಕೆರೆ ಸಂರಕ್ಷಣೆ ಕುರಿತು ಮಂಗಳವಾರ ವಿಧಾನಸೌಧದಲ್ಲಿ ಬಿಡಿಎ, ಬಿಬಿಎಂಪಿ, ಜಲಮಂಡಳಿ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ರಾಜ್ಯ ಸರೋವರ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ಕೆರೆಯ ಸುತ್ತಲೂ ತಂತಿ ಬೇಲಿ ಅಳವಡಿಸಲು, ಅದರಲ್ಲಿರುವ ತ್ಯಾಜ್ಯ ಮತ್ತು ಕಳೆ ತೆರವುಗೊಳಿಸಲು ಕಾಮಗಾರಿ ತಕ್ಷಣ ಕೈಗೆತ್ತಿಕೊಳ್ಳಬೇಕು. ಕೆರೆ ಒತ್ತುವರಿಯಾಗಿದ್ದರೆ ಸರ್ವೆ ನಡೆಸಿ, ಒತ್ತುವರಿ ತೆರವು ಮಾಡಬೇಕು. ಕೆರೆ ನೀರಿನಲ್ಲಿ ಆಮ್ಲಜನಕದ ಪ್ರಮಾಣ ಹೆಚ್ಚಿಸಲು ಏರೇಟರ್‌ಗಳನ್ನು ಅಳವಡಿಸಬೇಕು ಎಂದು ಬಿಬಿಎಂಪಿ, ಬಿಡಿಎ ಆಯುಕ್ತರಿಗೆ ಸೂಚನೆ ನೀಡಿದರು.

ಕೆರೆಯಲ್ಲಿ ಕಾಣಿಸಿಕೊಂಡ ಬೆಂಕಿಗೆ ನಿಖರ ಕಾರಣ ಪತ್ತೆ ಹಚ್ಚಬೇಕು. ಕಾಲಕಾಲಕ್ಕೆ ಜಲಮೂಲದ ನೀರಿನ ಗುಣಮಟ್ಟ ಪರೀಕ್ಷಿಸಿ ವರದಿ ಸಲ್ಲಿಸಬೇಕು. ಅದರ ಮಾಲಿನ್ಯ ತಡೆಗಟ್ಟಲು ತೀವ್ರ ನಿಗಾ ವಹಿಸಬೇಕು ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಿಗೆ ಆದೇಶ ನೀಡಿದರು.

ಕೆರೆಯಲ್ಲಿ ಮೀಥೇನ್‌ ಪ್ರಮಾಣ ಹೆಚ್ಚಾಗಿ ಬೆಂಕಿ ಹತ್ತಿಕೊಂಡಿದೆಯೋ ಅಥವಾ ಕಿಡಿಗೇಡಿಗಳು ಕೆರೆಯಂಗಳದ ಜೊಂಡಿಗೆ ಬೆಂಕಿ ಹಚ್ಚಿದ್ದರೇ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ತ್ಯಾಜ್ಯದ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. 2–3 ದಿನಗಳಲ್ಲಿ ವರದಿ ಬರಲಿದೆ. ಜಲಮೂಲಕ್ಕೆ ಈಗಲೂ ಸುತ್ತಲಿನ ಕೈಗಾರಿಕೆಗಳ ತ್ಯಾಜ್ಯ ಮತ್ತು ಹತ್ತಿರದ ಅಪಾರ್ಟ್‌ಮೆಂಟ್‌ಗಳಿಂದ ಕೊಳಚೆ ನೀರು ಹರಿದುಬರುತ್ತಿದೆ. ಕೆರೆಯಲ್ಲಿ ಮಾಲಿನ್ಯ ನಿಯಂತ್ರಣಕ್ಕೆ ಬಂದಿಲ್ಲವೆಂದು ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಲಕ್ಷ್ಮಣ್‌ ಗಮನಕ್ಕೆ ತಂದರು.

ಜಲಮೂಲಕ್ಕೆ ಕೊಳಚೆ ನೀರು ಸೇರದಂತೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಕೊಳಚೆ ನೀರು ಸಂಸ್ಕರಣ ಘಟಕಗಳನ್ನು (ಎಸ್‌ಟಿಪಿ) ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು ಎಂದು ಜಲಮಂಡಳಿ ಅಧ್ಯಕ್ಷ ತುಷಾರ್‌ ಗಿರಿನಾಥ್‌ ಅವರಿಗೂ ರತ್ನಪ್ರಭಾ ಸೂಚನೆ ನೀಡಿದರು.

ಕೆರೆ ರಕ್ಷಣೆಗೆ ಸೇನೆ ನೆರವು ಕೇಳಿದ ಸಿ.ಎಸ್‌!

ಬೆಳ್ಳಂದೂರು ಕೆರೆಗೆ ಸೇನೆಯಿಂದ ರಕ್ಷಣೆ ನೀಡುವಂತೆ ಮುಖ್ಯ ಕಾರ್ಯದರ್ಶಿ, ಭಾರತೀಯ ಸೇನೆಯ ಅಧಿಕಾರಿಗಳಿಗೆ ಕೋರಿಕೆ ಇಟ್ಟರು.

ರಾಜ್ಯ ಸರ್ಕಾರವೇ ಬಿಡಿಎ ಕಡೆಯಿಂದ ಕೆರೆ ಸುತ್ತಲೂ ತಂತಿ ಬೇಲಿ ಅಳವಡಿಸಿ, ಅಭಿವೃದ್ಧಿ ಕೆಲಸಗಳನ್ನು ಮಾಡಿಸಲಿದೆ. ಅದರ ಹತ್ತಿರದಲ್ಲಿ ಸೇನೆಗೆ ಸೇರಿದ ಜಾಗ ಇರುವುದರಿಂದ, ಖಾಸಗಿ ವ್ಯಕ್ತಿಗಳ ಅತಿಕ್ರಮ ಪ್ರವೇಶ, ತ್ಯಾಜ್ಯ ಸುರಿಯುವುದು, ಬೆಂಕಿ ಹಚ್ಚುವುದು, ಮಲಿನಗೊಳಿಸುವುದು ಹಾಗೂ ಒತ್ತುವರಿ ತಡೆಯಲು ಸೇನೆಯಿಂದ ರಕ್ಷಣೆ ಕೊಡಲು ಸಾಧ್ಯವೇ ಎಂಬುದಾಗಿ ಪರಿಶೀಲಿಸುವಂತೆ ಸಭೆಗೆ ಬಂದಿದ್ದ ಸೇನೆಯ ಇಬ್ಬರು ಅಧಿಕಾರಿಗಳಿಗೂ ಕೋರಿಕೆ ಸಲ್ಲಿಸಿದರು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಜಲಮಂಡಳಿಯಿಂದಲೇ ಕೆರೆಗೆ ಕೊಳಚೆ ನೀರು

ಜಲಮಂಡಳಿಯು ಬಿ.ನಾಗಸಂದ್ರ ಎಸ್‌ಟಿಪಿಯಿಂದ ಕೊಳಚೆ ನೀರನ್ನು ಸಂಸ್ಕರಿಸದೆ ನೇರವಾಗಿ ಬೆಳ್ಳಂದೂರು ಕೆರೆಗೆ ಹರಿಯಬಿಡುತ್ತಿದೆ ಎಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ.

ಬೆಳ್ಳಂದೂರು ಕೆರೆ ಬಳಿ ಬಿ.ನಾಗಸಂದ್ರದಲ್ಲಿ ಕೊಳಚೆ ನೀರು ಸಂಸ್ಕರಿಸಲು ಈ ಹಿಂದೆಯೇ ಎಸ್‌ಟಿಪಿ ಅಳವಡಿಸಲಾಗಿತ್ತು. ಆದರೆ, ಈ ಜಾಗದಲ್ಲಿ ಹೊಸ ಎಸ್‌ಟಿಪಿ ಅಳವಡಿಸಲು ಕೊಳಚೆ ನೀರಿನ ಸಂಗ್ರಹಾಗಾರವನ್ನೂ ತೆರವುಗೊಳಿಸಲಾಗಿದೆ. ಹೀಗಾಗಿ ಈ ಘಟಕದಿಂದ ತ್ಯಾಜ್ಯ ನೀರು ಸಂಸ್ಕರಣೆಯಾಗದೆ, ಜಲಮೂಲದ ಒಡಲು ಸೇರುತ್ತಿದೆ.

ಇದನ್ನು ಮರೆಮಾಚಲು ಹಗಲು ಹೊತ್ತಿನಲ್ಲಿ ಕೊಳಚೆ ನೀರು ಕೆರೆ ಸೇರುವ ಜಾಗದಲ್ಲಿ ಮಣ್ಣು ಸುರಿದು, ಮೇಲ್ನೋಟಕ್ಕೆ ಕಾಣಿಸದಂತೆ ಮಾಡುತ್ತಾರೆ. ರಾತ್ರಿ ವೇಳೆ ಈ ಮಣ್ಣನ್ನು ಬದಿಗೆ ಸರಿಸಿ, ಕೊಳಚೆ ನೀರನ್ನು ಕೆರೆಗೆ ಸರಾಗವಾಗಿ ಹರಿಸುತ್ತಿದ್ದಾರೆ. ಕೆರೆಯಲ್ಲಿ ಬೆಂಕಿ ಹೊತ್ತಿ ಉರಿದರೂ ಜಲಮಂಡಳಿ ಮಾತ್ರ ‘ಕಳ್ಳಾಟ’ ನಿಲ್ಲಿಸಿಲ್ಲ ಎಂದು ‘ಪ್ರಜಾವಾಣಿ’ಯ ಓದುಗರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಳ್ಳಂದೂರು ಕೆರೆಯಲ್ಲಿ ಬೆಂಕಿ: ಸರ್ಕಾರದ ವಿರುದ್ಧ ಎಎಪಿ ಕಿಡಿ

‘ಬೆಳ್ಳಂದೂರು ಕೆರೆಯ ಕಳಪೆ ನಿರ್ವಹಣೆಯಿಂದ ಬೆಂಗಳೂರು ಜಾಗತಿಕ ಮಟ್ಟದಲ್ಲಿ ತಲೆ ತಗ್ಗಿಸುವಂತಾಗಿದೆ. ಆದರೆ, ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್‌ ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ’ ಎಂದು ಆಮ್‌ ಆದ್ಮಿ ಪಕ್ಷದ ರಾಜ್ಯ ಘಟಕದ ಸಂಚಾಲಕ ಶಿವಕುಮಾರ ಚೆಂಗಲರಾಯ ಆರೋಪಿಸಿದರು.

ಮಂಗಳವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೆರೆಯಲ್ಲಿ ಬೆಂಕಿ ಹೊತ್ತಿರುವುದು ಕಣ್ಣಿಗೆ ಕಾಣುತ್ತಿರುವ ಸಮಸ್ಯೆಯಾಗಿದೆ. ಆದರೆ, ಕೆರೆ ಒತ್ತುವರಿ, ಭೂ ಮಾಫಿಯಾದಂತಹ ಹಲವು ಸಮಸ್ಯೆಗಳಿವೆ. ರಾಜಕಾಲುವೆಯನ್ನು ಒತ್ತುವರಿ ಮಾಡಿ ನಿರ್ಮಿಸಿರುವ ಮಾಲ್‌ಗಳು ಹಾಗೂ ಇನ್ನಿತರ ಕಟ್ಟಡಗಳನ್ನು ತೆರವುಗೊಳಿಸಬೇಕು’ ಎಂದು ಆಗ್ರಹಿಸಿದರು.

‘ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಆತುರಾತುರವಾಗಿ ನಗರ ಪರಿಷ್ಕೃತ ಮಹಾ ಯೋಜನೆ 2031ರ ಕರಡನ್ನು ಪ್ರಕಟಿಸಿದೆ. ಈ ಕರಡಿಗೆ ಆಕ್ಷೇಪಣೆ ಸಲ್ಲಿಸಲು ನಗರದ ಜನತೆಗೆ ಸಮಯಾವಕಾಶ ನೀಡಬೇಕು. ಸಂಸದರು, ಶಾಸಕರು, ಬಿಬಿಎಂಪಿ ಸದಸ್ಯರ ಉಪಸ್ಥಿತಿಯಲ್ಲಿ ನಾಗರಿಕರೊಂದಿಗೆ ಚರ್ಚಿಸಿ ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry