ಪದ್ಮಾವತ್ ವಿವಾದ: ಮಾಲ್‍ಗಳಿಗೆ ನುಗ್ಗಿ ಕರ್ಣಿ ಸೇನೆ ಕಾರ್ಯಕರ್ತರ ದಾಂಧಲೆ, ವಾಹನಗಳಿಗೆ ಬೆಂಕಿ

7

ಪದ್ಮಾವತ್ ವಿವಾದ: ಮಾಲ್‍ಗಳಿಗೆ ನುಗ್ಗಿ ಕರ್ಣಿ ಸೇನೆ ಕಾರ್ಯಕರ್ತರ ದಾಂಧಲೆ, ವಾಹನಗಳಿಗೆ ಬೆಂಕಿ

Published:
Updated:
ಪದ್ಮಾವತ್ ವಿವಾದ: ಮಾಲ್‍ಗಳಿಗೆ ನುಗ್ಗಿ ಕರ್ಣಿ ಸೇನೆ ಕಾರ್ಯಕರ್ತರ ದಾಂಧಲೆ, ವಾಹನಗಳಿಗೆ ಬೆಂಕಿ

ಅಹಮದಾಬಾದ್ : ಸಂಜಯ್ ಲೀಲಾ ಬನ್ಸಾಲಿ ನಿರ್ಮಾಣದ ಪದ್ಮಾವತ್ ಚಿತ್ರ ನಾಳೆ ತೆರೆ ಕಾಣಲಿದೆ. ಚಿತ್ರ ಬಿಡುಗಡೆಯಾಗುವುದನ್ನು ವಿರೋಧಿಸಿರುವ ಕರ್ಣಿ ಸೇನೆಯ ಕಾರ್ಯಕರ್ತರು ಮಂಗಳವಾರ ರಾತ್ರಿ ಅಹಮದಾಬಾದ್‍ನಲ್ಲಿರುವ ಮಾಲ್‍ಗಳಿಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ.

ಮಂಗಳವಾರ ರಾತ್ರಿ ಪದ್ಮಾವತ್ ಬಿಡುಗಡೆ ವಿರೋಧಿ ಮೋಂಬತ್ತಿ ಮಾರ್ಚ್ ನಡೆಸಿದ ಕಾರ್ಯಕರ್ತರು ರಾತ್ರಿ 8 ಗಂಟೆಯ ನಂತರ ಅಹಮದಾಬಾದ್‍ನ ಪಶ್ಚಿಮ ಭಾಗದಲ್ಲಿರುವ ಮಲ್ಟಿಪ್ಲೆಕ್ಸ್ ಮತ್ತು ಥಿಯೇಟರ್‍‍ಗಳಿಗೆ ನುಗ್ಗಿ ಗಲಾಟೆ ಮಾಡಿದ್ದಾರೆ. ಈ ಗಲಾಟೆಯಲ್ಲಿ 150ಕ್ಕಿಂತಲೂ ಹೆಚ್ಚು ನಾಲ್ಕು ಚಕ್ರದ ವಾಹನಗಳು ಮತ್ತು ಎರಡು ದ್ವಿಚಕ್ರ ವಾಹನಗಳಿಗೆ ಹಾನಿಯಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಗುಜರಾತ್‍ನ ಕರ್ಣಿ ಸೇನೆ ಘಟಕದ ಮುಖ್ಯಸ್ಥ ರಾಜ್ ಶೆಖಾವತ್, ತಮ್ಮ ಕಾರ್ಯಕರ್ತರು ದಾಂಧಲೆ ನಡೆಸಿಲ್ಲ. ಈ ರೀತಿಯ ಹಿಂಸಾಚಾರ ಖಂಡನೀಯ. ಈ ಕೃತ್ಯಗಳಲ್ಲಿ ಕರ್ಣಿ ಸೇನೆ ಭಾಗಿಯಾಗಿಲ್ಲ ಎಂದಿದ್ದಾರೆ.

ಪದ್ಮಾವತ್ ಚಿತ್ರ ಪ್ರದರ್ಶಿಸುವುದಿಲ್ಲ ಎಂದು ಥಿಯೇಟರ್ ಮಾಲೀಕರು ಹೇಳಿದ್ದರೂ  ನಗರದಲ್ಲಿರುವ ಅಕ್ರೊಪೊಲಿಸ್, ಅಹಮದಾಬಾದ್ ಒನ್, ಹಿಮಾಲಯಾ ಮಾಲ್ ಮತ್ತು ಸಿನೆಮೆಕ್ಸ್ ಮೇಲೆ ದಾಳಿ ನಡೆದಿದೆ.

ಮಾಲ್‍ಗಳ ಹೊರಗೆ ನಿಲ್ಲಿಸಿದ ನಾಲ್ಕು ಚಕ್ರ ವಾಹನಗಳ ಕಿಟಿಕಿಗಳನ್ನು ಧ್ವಂಸ ಮಾಡಿದ ದುಷ್ಕರ್ಮಿಗಳು ದ್ವಿಚತ್ರ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ರಾತ್ರಿ 10 ಗಂಟೆ ವೇಳೆ ಅಕ್ರೊಪೊಲಿಸ್ ಮತ್ತು ಹಿಮಾಲಯ ಮಾಲ್ ಮುಂದೆ ಬೆಂಕಿ ಹಚ್ಚಲಾಗಿತ್ತು.

ಮಾಲ್ ಮತ್ತು ಥಿಯೇಟರ್  ಒಳಗಿದ್ದ ಜನರನ್ನು  ಸುರಕ್ಷಿತವಾಗಿ ಬೇರೆಡೆಗೆ ಕರೆದೊಯ್ಯಲಾಗಿದೆ. ಇಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಹೆಸರು ಹೇಳಲಿಚ್ಛಿಸದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಈ ಸಂದರ್ಭದಲ್ಲಿ  ಪರಿಸ್ಥಿತಿ ನಿಯಂತ್ರಿಸುವುದಕ್ಕೆ ನಾವು ಆದ್ಯತೆ ನೀಡಿದ್ದೇವೆ. ಇನ್ನು ಈ ಬಗ್ಗೆ ತನಿಖೆ ನಡೆಸಿ ದುಷ್ಕರ್ಮಿಗಳ ವಿರುದ್ಧ ಪ್ರಕರಣ ದಾಖಲಿಸುತ್ತೇವೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಘಟನೆ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಗುಜರಾತ್ ಉಪ ಮುಖ್ಯಮಂತ್ರಿ ನಿತಿನ್ ಪಟೇಲ್, ಶಾಂತಿ ಕಾಪಾಡಲು ಸರ್ಕಾರ ಆಗ್ರಹಿಸಿದೆ, ಕಾನೂನಿನ ವಿರುದ್ಧ ನಡೆದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಈ ಚಿತ್ರವನ್ನು ಗುಜರಾತ್ ಸರ್ಕಾರ ನಿಷೇಧಿಸಿತ್ತು. ಆದರೆ ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ನಾವು ಚಿತ್ರ ಪ್ರದರ್ಶನವನ್ನು ತಡೆಯಲು ಸಾಧ್ಯವಿಲ್ಲ. ಆದಾಗ್ಯೂ,  ಥಿಯೇಟರ್ ಮಾಲೀಕರು ಚಿತ್ರ ಪ್ರದರ್ಶಿಸುವುದಿಲ್ಲ ಎಂದಿದ್ದಾರೆ.

ಉದ್ವಿಗ್ನ ಪರಿಸ್ಥಿತಿ ನಿಯಂತ್ರಿಸುವುದಕ್ಕಾಗಿ ಮತ್ತು ಕಾನೂನು ಪಾಲನೆಗಾಗಿ ಜಿಲ್ಲಾಡಳಿತವು ಜನವರಿ 25ರ ವರೆಗೆ ಗುರುಗ್ರಾಮದಲ್ಲಿ ನಿಯಮ ಅಪರಾಧ ದಂಡ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಸೆಕ್ಷನ್ 144 ಜಾರಿ ಮಾಡಿದೆ.

ಜನವರಿ 23ರಿಂದ ಜನವರಿ 28ರವರೆಗೆ ಸಿನಿಮಾ ಹಾಲ್ ಮತ್ತು ಮಲ್ಟಿಪ್ಲೆಕ್ಸ್ ಗಳ ಸುತ್ತುಮುತ್ತ ಅಂದರೆ 200 ಮೀಟರ್ ಪರಿಧಿಯಲ್ಲಿ ಜನರು ಆಯುಧಗಳನ್ನು ಇಟ್ಟುಕೊಳ್ಳುವುದು ಅಥವಾ ಗಾಯವನ್ನುಂಟು ಮಾಡುವ ಯಾವುದೇ ವಸ್ತುಗಳನ್ನು ಕೊಂಡೊಯ್ಯುವುದಕ್ಕೆ ನಿರ್ಬಂಧ ಹೇರಲಾಗಿದೆ ಎಂದು ಗುರುಗ್ರಾಮದ ಡೆಪ್ಯುಟಿ ಕಮಿಷನರ್ ವಿನಯ್ ಪ್ರತಾಪ್ ಸಿಂಗ್ ಹೇಳಿದ್ದಾರೆ.

16 ಮಂದಿ ಬಂಧನ

ಪದ್ಮಾವತ್  ಚಿತ್ರ ಪ್ರದರ್ಶನ ವಿರೋಧಿಸಿ ಹಿಮಾಲಯನ್ ಮಾಲ್ ಹೊರಗೆ ಹಿಂಸಾಚಾರ ನಡೆಸಿದ ಪ್ರಕರಣದಲ್ಲಿ ಕನಿಷ್ಠ 16 ಮಂದಿಯನ್ನು ಬಂಧಿಸಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ನಂತರ ಇನ್ನಷ್ಟು ಮಂದಿಯನ್ನು ಬಂಧಿಸಲಾಗುವುದು ಎಂದು  ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry