ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮುಂದಿನ ಚುನಾವಣೆಯಲ್ಲಿ ನೋಟಾ ಅಭಿಯಾನ’

Last Updated 24 ಜನವರಿ 2018, 6:51 IST
ಅಕ್ಷರ ಗಾತ್ರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪರಿಸರ ಹಾಗೂ ಜೀವಸಂಕುಲವನ್ನು ನಾಶ ಮಾಡಲು ಹೊರಟಿರುವ ರಾಜ ಕಾರಣಿಗಳಿಗೆ ತಕ್ಕ ಪಾಠ ಕಲಿಸುವ ಉದ್ದೇ ಶದಿಂದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನೋಟಾ ಅಭಿಯಾನ ನಡೆಸಲಾಗುವುದು ಎಂದು ಸಹ್ಯಾದ್ರಿ ಸಂಚಯ ಸಂಚಾಲಕ ದಿನೇಶ್‌ ಹೊಳ್ಳ ಅವರು ತಿಳಿಸಿದ್ದಾರೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯ ರಾಜಕಾರಣಿಗಳು ತಮ್ಮ ಜಿಲ್ಲೆಯ ಹಿತ ಕಾಯುವುದನ್ನು ಬಿಟ್ಟು, ತಮ್ಮ ಪಕ್ಷದ ಹಿತ ಕಾಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂಬರುವ ವಿಧಾ ನಸಭಾ ಚುನಾವಣೆಯಲ್ಲಿ ಜಿಲ್ಲೆಯ ಹಾಗೂ ರಾಜ್ಯದ ಜನಪ್ರತಿನಿಧಿಗಳಿಗೆ ಬಿಸಿ ಮುಟ್ಟಿಸುವ ಉದ್ದೇಶದಿಂದ ನೋಟಾ ಚಿಹ್ನೆ ಬಳಸುವ ಮೂಲಕ ಅಭಿಯಾನ ನಡೆಸಲಾಗುವುದು. ರಾಜಕಾರಣಿಗಳಿಗೆ ತಕ್ಕ ಪಾಠ ಕಲಿಸುವ ಸಮಯ. ಈ ಹೋರಾಟದ ಹಿನ್ನೆಲೆಯಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ 7800 ನೋಟಾ ಮತಗಳು ಚಲಾವಣೆಯಾಗಿವೆ. ಇಲ್ಲದಿದ್ದರೆ ಮುಂದಿನ 5 ವರ್ಷ ಅವರು ನಮ್ಮ ಬೇಡಿಕೆಗಳಿಗೆ ಬಗ್ಗುವುದಿಲ್ಲ ಎಂದು ಹೇಳಿದರು.

ಕಳೆದ ಹಲವಾರು ವರ್ಷಗಳಿಂದ ಪಶ್ಚಿಮ ಘಟದ ತಪ್ಪಲಲ್ಲಿ ಸಾಮಾನ್ಯ ವಾಗಿ ಏಪ್ರಿಲ್‌ ಅಥವಾ ಮೇ ತಿಂಗ ಳಲ್ಲಿ ಕಾಡ್ಗಿಚ್ಚು ಬೀಳುತ್ತಿದೆ. ಆದರೆ ಈ ಬಾರಿ ಮಳೆ ಕಡಿಮೆಯಾದ ಕಾರಣ ಹುಲ್ಲು ಒಣಗಿ, ಡಿಸೆಂಬರ್‌ ತಿಂಗ ಳಲ್ಲೇ ಮೊದಲ ಬಾರಿಗೆ ಕಾಡ್ಗಿಚ್ಚು ಹತ್ತಿ ಕೊಂಡಿದೆ. ಇದಕ್ಕೆ ಮುಖ್ಯ ಕಾರಣ ಅರಣ್ಯ ಸಂಪತ್ತು ಹಾಗೂ ಜೀವಜಲದ ನಾಶ. ಈ ಬಗ್ಗೆ ಜಿಲ್ಲೆಯ ಉಸ್ತುವಾರಿ ಸಚಿವ ಹಾಗೂ ಅರಣ್ಯ ಮಂತ್ರಿಗಳಲ್ಲಿ ಶೀಘ್ರವಾಗಿ ಕಾಡ್ಗಿಚ್ಚು ನಂದಿಸಲು ಹೆಲಿಕಾಪ್ಟರ್‌ ಬಳಕೆ ಬಗ್ಗೆ ಬೇಡಿಕೆ ಮುಂದಿಟ್ಟಾಗ ‘ಅದನ್ನು ಶ್ರೀಮಂತ ದೇಶಗಳಲ್ಲಿ ಬಳಸುತ್ತಾರೆ ವಿನಃ ನಮ್ಮ ದೇಶ ಅಷ್ಟೊಂದು ಪ್ರಗತಿ ಹೊಂದಿಲ್ಲ’ ಎಂದು ಹಾಸ್ಯ ಮಾಡುತ್ತಾರೆ ಎಂದರು. ಈ ವೇಳೆ ಶಶಿಧರ್‌ ಶೆಟ್ಟಿ, ರಾಜೇಶ್‌ ದೇವಾಡಿಗ, ಪವನ್‌, ಹರೀಶ್‌ ಅಡ್ಯಾರ್‌, ಜಗದೀಶ್‌ ಸಾಲ್ಯಾನ್‌, ಪವನ್‌, ಯತೀಶ್‌ ರಾಜ್‌ ಉಪಸ್ಥಿತರಿದ್ದರು.

26ರಂದು ಕಾನನ ರೋದನ ಪ್ರತಿಭಟನೆ ಪಶ್ಚಿಮ ಘಟ್ಟ ಉರಿಯುತ್ತಿದೆ, ನದಿ ಮೂಲಗಳು ಬರಡಾಗುತ್ತಿವೆ, ನೇತ್ರಾವತಿ ಬರಿದಾಗುತ್ತಿದೆ. ಆದರೆ ನಮ್ಮ ಸರಕಾರ ಕಾಡನ್ನು ರಕ್ಷಿಸುವುದು ಬಿಟ್ಟು ಇದ್ದ ಅಲ್ಪಸ್ವಲ್ಪ ಕಾಡನ್ನೂ ಅಳಿಸುತ್ತಿದೆ ಎಂಬ ವಿಭಿನ್ನ ಪ್ರತಿಭಟನೆಯನ್ನು ಜ.26ರಂದು ಬೆಳಿಗ್ಗೆ 10.15ಕ್ಕೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಹಮ್ಮಿಕೊಂಡಿದೆ. ಸಾರ್ವ ಜನಿಕರು ಇದರಲ್ಲಿ ಸ್ವಇಚ್ಛೆಯಿಂದ ಭಾಗವಹಿಸಬಹುದು ಎಂದರು.

ನಕ್ಸಲರು ಬಂದಿದ್ದು ಸುಳ್ಳು ಶಿರಾಡಿ ಪ್ರದೇಶದಲ್ಲಿ ನಕ್ಸಲರು ಬಂದಿ ದ್ದಾರೆ ಎಂಬುವುದು ಸುಳ್ಳುಸುದ್ದಿ. ಇದರ ಹಿಂದೆ ಗಾಂಜಾ, ರೆಸಾರ್ಟ್, ಹಂಟಿಂಗ್‌ ಮಾಫಿಯಾಗಳ ಕೈವಾಡ ಇದೆ. ಈ ಮಾಫಿಯಾಗಳು ಕಾಡಿನಲ್ಲಿ ಸುಲಲಿ ತವಾಗಿ ತಮ್ಮ ಕೆಲಸಗಳನ್ನು ಮಾಡುವ ಸಲುವಾಗಿ ಇಂತಹ ಸುಳ್ಳು ಸುದ್ದಿಯನ್ನು ಹರಡುತ್ತಿವೆ ಎಂದು ದಿನೇಶ್‌ ಹೊಳ್ಳ ಅವರು ಹೇಳಿದ್ದಾರೆ.

ಓಟು ಕೇಳಲು ಮನೆಗೆ ಬರಬೇಡಿ
ಎತ್ತಿನಹೊಳೆ ಯೋಜನೆ ಜಾರಿ ವಿರುದ್ಧ ಚುನಾವಣೆಯಲ್ಲಿ ನೋಟಾ ಮತ ಚಲಾವಣೆ ಅಭಿಯಾನದ ಭಾಗವಾಗಿ ಮತ್ತೊಂದು ವಿನೂತನ ಪ್ರತಿಭಟನೆಗೆ ಮುಂದಾಗಿದೆ. ಜಿಲ್ಲೆಯ ಮನೆಗಳ ಗೇಟ್‌ಗೆ ‘ನೇತ್ರಾವತಿಯನ್ನು ರಕ್ಷಿಸಲಾಗದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷದ ಯಾವುದೇ ರಾಜಕಾರಣಿಗಳು ಮತ ಕೇಳಲು ಬರಬೇಡಿ, ನಿಮಗೆ ನಮ್ಮ ಮತ ಬಹಿಷ್ಕಾರ ಮತ್ತು ಧಿಕ್ಕಾರ’ ಎಂಬ ಬರಹವುಳ್ಳ ಬೋರ್ಡ್ ಅಳವಡಿಸಲಾಗುವುದು. ಸಾರ್ವಜನಿಕರಿಗೆ ಇದನ್ನು ಉಚಿತವಾಗಿ ನೀಡಲಾಗುವುದು ಎಂದು ದಿನೇಶ್ ಹೊಳ್ಳ ತಿಳಿಸಿದರು.

ಪಕ್ಷೇತರರಾಗಿ ಸ್ಪರ್ಧೆ
ಎತ್ತಿನಹೊಳೆ ಯೋಜನೆ ವಿರುದ್ಧ ಹೋರಾಟದ ಮತ್ತೊಂದು ಭಾಗವಾಗಿ ಸೂಕ್ತ ಅಭ್ಯರ್ಥಿಗಳು ಸಿಕ್ಕಿದಲ್ಲಿ ಚುನಾವಣೆಗೆ ಸ್ಪರ್ಧಿಸುತ್ತೇವೆ. ಆದರೆ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕಿಳಿಯಲು ಚಿಂತನೆ ನಡೆಸಲಾಗಿದೆ. ಇದು ಕೇವಲ ಚುನಾವಣಾ ಸ್ಪರ್ಧೆ ಅಲ್ಲ, ಬದಲಾಗಿ ನಮ್ಮ ಹೋರಾಟದ ಒಂದು ಭಾಗ. ಈ ಹಿನ್ನೆಲೆಯಲ್ಲಿ ಜಿಲ್ಲೆಯ 2 ರಿಂದ 3 ವಿಧಾನಸಭಾ ಕ್ಷೇತ್ರಗಳ ಚುನಾವಣೆಯಲ್ಲಿ ನಮ್ಮ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುವ ಸೂಕ್ತ ಅಭ್ಯರ್ಥಿ ಸಿಕ್ಕಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು. ಫೆಬ್ರುವರಿ 2ನೇ ವಾರದಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. ಇಲ್ಲದೇ ಹೋದರೆ ನೋಟಾ ಅಭಿಯಾನ ನಡೆಸಲಾಗುವುದು ಎಂದು ದಿನೇಶ್‌ ಹೊಳ್ಳ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT