ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲೆಲ್ಲಿ ಏನೇನು ಮಾಡಿದ್ದಾರೊ?

Last Updated 24 ಜನವರಿ 2018, 6:58 IST
ಅಕ್ಷರ ಗಾತ್ರ

ಕೆ.ಆರ್.ನಗರ: ‘ಕೃಷ್ಣರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಆಯ್ಕೆ ಮಾಡಿದ್ದೇ ಆದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ತಿಂಗಳ ಒಳಗೆ ಚುಂಚನಕಟ್ಟೆಯ ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆಗೆ ಅನುದಾನ ನೀಡಿ ಪುನರಾರಂಭ ಮಾಡುತ್ತೇನೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದರು. ಪಟ್ಟಣದಲ್ಲಿ ಬಿಜೆಪಿ ಮಂಗಳವಾರ ಏರ್ಪಡಿಸಿದ್ದ ‘ನವ ಕರ್ನಾಟಕ ನಿರ್ಮಾಣಕ್ಕಾಗಿ ಪರಿವರ್ತನಾ ಯಾತ್ರೆ’ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದು ತಿಂಗಳ ಹಿಂದೆ ರಾಷ್ಟ್ರೀಕೃತ ಬ್ಯಾಂಕಗಳಲ್ಲಿ ಬೆಂಗಳೂರಿನಲ್ಲಿರುವ ಮೂಲೆ ನಿವೇಶನಗಳನ್ನು ಒತ್ತೆ ಇಟ್ಟು ₹ 975 ಕೋಟಿ ಸಾಲ ಪಡೆದಿದ್ದಾರೆ. ಮೈಸೂರಿನ ಮಿನರಲ್ ಲಿಮಿಟೆಡ್‌ನಲ್ಲಿ ಇಡಲಾಗಿದ್ದ ₹ 1,400 ಕೋಟಿ ಠೇವಣಿ ಕೂಡ ಪಡೆದಿದ್ದಾರೆ. ಇನ್ನೂ ಎಲ್ಲೆಲ್ಲಿ ಏನೇನು ಮಾಡಿದ್ದಾರೊ ಗೊತ್ತಿಲ್ಲ. ವಿಧಾನಸೌಧ ಬಿಟ್ಟು ಉಳಿದೆಲ್ಲವನ್ನೂ ಒತ್ತೆ ಇಟ್ಟು ಸಾಲ ಪಡೆದರೂ ಆಶ್ಚರ್ಯವಿಲ್ಲ’ ಎಂದರು.

‘ಸಿದ್ದರಾಮಯ್ಯ ಅವರು ₹ 70 ಲಕ್ಷಕ್ಕೂ ಹೆಚ್ಚು ಬೆಲೆ ಬಾಳುವ ವಾಚ್ ಉಡುಗೊರೆ ಕೊಟ್ಟಿದ್ದು ಯಾರು ಎಂದು ಹೇಳಿಲ್ಲ, ಅದರ ಹಿನ್ನೆಲೆ ಬಹಿರಂಗ ಪಡಿಸಬೇಕು’ ಎಂದು ಒತ್ತಾಯಿಸಿದ ಅವರು, ‘ಅಧಿಕಾರಕ್ಕೆ ಬರುತ್ತಿ ದ್ದಂತೆ ತನಿಖೆಗೆ ಒಳಪಡಿಸುತ್ತೇವೆ’ ಎಂದರು.

ಶಾಸಕ ಸಿ.ಪಿ.ಯೋಗೇಶ್ವರ್, ‘224 ಕ್ಷೇತ್ರದ ಎಲ್ಲೂ ಬಿಜೆಪಿ ಅಭ್ಯರ್ಥಿ ಘೋಷಣೆ ಮಾಡಿಲ್ಲ. ಆದರೆ, ಈ ಕ್ಷೇತ್ರ ದಲ್ಲಿ ಪಕ್ಷಕ್ಕೆ ನೆಲೆ ಇಲ್ಲದ ಸಂದರ್ಭದಲ್ಲಿ ಹೊಸಹಳ್ಳಿ ವೆಂಕಟೇಶ್ ಸಂಘಟನೆಯಲ್ಲಿ ತೊಡಗಿದ್ದಾರೆ’ ಎಂದರು.

‘ಪಕ್ಷಕ್ಕೆ ಆಹ್ವಾನಿಸುವಾಗ ನಾನು ಮಾತು ಕೊಟ್ಟಿದ್ದೇನೆ’ ಎಂದು ಹೇಳುವ ಮೂಲಕ ಕೃಷ್ಣರಾಜನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹೊಸಹಳ್ಳಿ ವೆಂಕಟೇಶ್ ಎಂಬ ಸೂಚನೆ ರವಾನಿಸಿದರು.

‘ತಾಲ್ಲೂಕಿನಲ್ಲಿ ಬಿಜೆಪಿಯೊಂದಿಗೆ ಅಡ್ಜೆಷ್ಟ್ ಮಾಡಿಕೊಳ್ಳುತ್ತೇನೆ ಎಂದು ಶಾಸಕ ಸಾ.ರಾ.ಮಹೇಶ್ ಅಲ್ಲಲ್ಲಿ ಹೇಳು ತ್ತಾರಂತೆ. ಅಂತಹ ಅಡ್ಜೆಷ್ಟ್ ಮೆಂಟ್ ಈ ಬಾರಿ ನಡೆಯುವುದಿಲ್ಲ’ ಎಂದರು.

ಕೇಂದ್ರ ಸಚಿವ ಸದಾನಂದಗೌಡ, ವಿಧಾನ ಪರಿಷತ್ ಸದಸ್ಯ ಬಿ.ಜೆ.ಪುಟ್ಟಸ್ವಾಮಿ, ವಿಧಾನ ಪರಿಷತ್ ಮಾಜಿ ಸದಸ್ಯ ತೋಂಟದಾರ್ಯ, ಮುಖಂಡ ರಾದ ರಾಮಕೃಷ್ಣಪ್ಪ, ರಘು, ಹೊಸಹಳ್ಳಿ ವೆಂಕಟೇಶ್ ಮಾತನಾಡಿದರು.

ಶಾಸಕ ಸುರೇಶ್ ಕುಮಾರ್, ರಾಜ್ಯ ಘಟಕದ ಕಾರ್ಯದರ್ಶಿ ತೇಜಶ್ವಿನಿ ರಮೇಶ್, ಜಿಲ್ಲಾ ಗ್ರಾಮಾಂತರ ಘಟಕದ ಅಧ್ಯಕ್ಷ ಶಿವಣ್ಣ, ಉಪಾಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ, ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಸಿ.ಶಿವಕುಮಾರ್, ವಕ್ತಾರ ಎಚ್.ಪಿ.ಗೋಪಾಲ್, ಮುಖಂಡರಾದ ಸಿ.ವಿ.ಗುಡಿ ಜಗದೀಶ್, ಅರ್ಜುನಹಳ್ಳಿ ಸಂಪತ್ ಕುಮಾರ್, ಮಲ್ಲಿಕಾರ್ಜುನಪ್ಪ, ಬಸ್ ಕುಮಾರ್, ಕಗ್ಗುಂಡಿ ಕುಮಾರ್, ಬೇಕರಿ ಉಮೇಶ್, ಉಮಾಶಂಕರ್, ಸಾ.ರಾ.ರಮೇಶ್, ಪ್ರವೀಣ್, ಕುಪ್ಪೆ ಪ್ರಕಾಶ್, ಪ್ರಭಾಕರ್ ಜೈನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT