ಮೇಯರ್‌ ಚುನಾವಣೆ ಇಂದು

7

ಮೇಯರ್‌ ಚುನಾವಣೆ ಇಂದು

Published:
Updated:
ಮೇಯರ್‌ ಚುನಾವಣೆ ಇಂದು

ಮೈಸೂರು: ಮಹಾನಗರ ಪಾಲಿಕೆಯ ಮುಂದಿನ ಮೇಯರ್‌ ಮತ್ತು ಉಪಮೇಯರ್‌ ಆಯ್ಕೆಗೆ ಬುಧವಾರ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್‌ನ ಕಮಲಾ ಉದಯ್‌ ಅಥವಾ ಭಾಗ್ಯವತಿ ಅವರು ಮೇಯರ್‌ ಸ್ಥಾನ ಅಲಂಕರಿಸು ವುದು ಬಹುತೇಕ ಖಚಿತವಾಗಿದೆ. ಉಪಮೇಯರ್‌ ಸ್ಥಾನ ಜೆಡಿಎಸ್‌ನ ಇಂದಿರಾ ಮಹೇಶ್‌ಗೆ ಒಲಿಯಲಿದೆ.

ಪ್ರಸ್ತುತ ಕೌನ್ಸಿಲ್‌ನ ಕೊನೆಯ ಅವಧಿಗೆ ಮೇಯರ್‌ ಸ್ಥಾನ ಪರಿಶಿಷ್ಟ ಜಾತಿ (ಎಸ್‌.ಸಿ) ಮತ್ತು ಉಪಮೇಯರ್‌ ಸ್ಥಾನ ಪರಿಶಿಷ್ಟ ಪಂಗಡದ (ಎಸ್‌.ಟಿ) ಮಹಿಳೆಯರಿಗೆ ಮೀಸಲಾಗಿದೆ.

ಕಾಂಗ್ರೆಸ್‌ನಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಇಬ್ಬರು ಮಹಿಳಾ ಸದಸ್ಯರಿದ್ದಾರೆ. 50ನೇ ವಾರ್ಡ್ ಪ್ರತಿನಿಧಿಸುತ್ತಿರುವ ಕಮಲಾ ಮತ್ತು 23ನೇ ವಾರ್ಡ್‌ ಸದಸ್ಯರಾದ ಎಸ್‌.ಭಾಗ್ಯವತಿ ನಡುವೆ ಮೇಯರ್‌ ಸ್ಥಾನಕ್ಕೆ ಪೈಪೋಟಿ ಏರ್ಪಟ್ಟಿದೆ. ಇವರಲ್ಲಿ ಮೇಯರ್ ಗದ್ದುಗೆ ಯಾರಿಗೆ ಒಲಿಯಲಿದೆ ಎಂಬ ಕುತೂಹಲಕ್ಕೆ ಬುಧವಾರ ತೆರೆ ಬೀಳಲಿದೆ.

ಪಾಲಿಕೆಯಲ್ಲಿ ಪ್ರಸ್ತುತ ಪರಿಶಿಷ್ಟ ಪಂಗಡಕ್ಕೆ ಸೇರಿದ ಮಹಿಳಾ ಸದಸ್ಯರು ಒಬ್ಬರು ಮಾತ್ರ ಇದ್ದಾರೆ. ಆದ್ದರಿಂದ ಇಂದಿರಾ ಮಹೇಶ್ ಉಪಮೇಯರ್‌ ಸ್ಥಾನ ಅಲಂಕರಿಸಲಿದ್ದಾರೆ.

ತಡರಾತ್ರಿಯವರೆಗೆ ಸಭೆ: ಕಾಂಗ್ರೆಸ್‌ನ ಇಬ್ಬರಲ್ಲಿ ಯಾರನ್ನು ಆಯ್ಕೆ ಮಾಡಬೇಕು ಎಂಬ ಬಗ್ಗೆ ಲೋಕೋಪಯೋಗಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಅವರ ನೇತೃತ್ವದಲ್ಲಿ ಮಂಗಳವಾರ ರಾತ್ರಿ ಸಭೆ ನಡೆಯಿತು.

ಮೇಯರ್‌ ಆಯ್ಕೆಗೆ ಸಂಬಂಧಿಸಿದ ಉಸ್ತುವಾರಿಯನ್ನು ಮಂಡ್ಯದ ಕಾಂಗ್ರೆಸ್‌ ಮುಖಂಡ ಆತ್ಮಾನಂದ ಅವರಿಗೆ ವಹಿಸಲಾಗಿತ್ತು. ತಡರಾತ್ರಿಯವರೆಗೂ ಸಭೆಯಲ್ಲಿ ಯಾವುದೇ ನಿರ್ಧಾರ ಹೊರಬೀಳಲಿಲ್ಲ. ಪಟ್ಟುಬಿಡದೆ ಇಬ್ಬರೂ ಬುಧವಾರ ನಾಮಪತ್ರ ಸಲ್ಲಿಸಿದರೆ ಕಾಂಗ್ರೆಸ್‌ನ ಬಂಡಾಯ ಅಭ್ಯರ್ಥಿಗೆ ಜೆಡಿಎಸ್‌ ಮತ್ತು ಬಿಜೆಪಿ ಬೆಂಬಲ ನೀಡುವ ಸಾಧ್ಯತೆಯೂ ಇದೆ.

ಪ್ರಸ್ತುತ ಕೌನ್ಸಿಲ್‌ನ ಮೊದಲ ನಾಲ್ಕು ವರ್ಷ ಜೆಡಿಎಸ್‌–ಬಿಜೆಪಿ ಪರಸ್ಪರ ಹೊಂದಾಣಿಕೆ ಮಾಡಿಕೊಂಡು ಅಧಿಕಾರ ನಡೆಸಿತ್ತು. ಮೀಸಲಾತಿಯ ಬಲದಿಂದ ಕೊನೆಯ ಅವಧಿಯ ಆಡಳಿತವು ಕಾಂಗ್ರೆಸ್‌ ತೆಕ್ಕೆಗೆ ಒಲಿಯಲಿದೆ.

2013–2014 ರ ಅವಧಿಗೆ ರಾಜೇಶ್ವರಿ ಮೇಯರ್‌ ಆಗಿದ್ದರು. ಆ ಬಳಿಕ ಕ್ರಮವಾಗಿ ಆರ್‌.ಲಿಂಗಪ್ಪ, ಬಿ.ಎಲ್‌.ಭೈರಪ್ಪ ಮತ್ತು ಎಂ.ಜೆ.ರವಿಕುಮಾರ್‌ ಮೇಯರ್‌ ಗದ್ದುಗೆ ಅಲಂಕರಿಸಿದ್ದರು. ರವಿಕುಮಾರ್‌ ಅವರ ಅಧಿಕಾರಾವಧಿ ಡಿಸೆಂಬರ್‌ 6ರಂದು ಕೊನೆಗೊಂಡಿತ್ತು. ಕೌನ್ಸಿಲ್‌ನ ಐದು ವರ್ಷಗಳ ಅವಧಿ ಸೆಪ್ಟೆಂಬರ್‌ಗೆ ಕೊನೆಗೊಳ್ಳಲಿದೆ.

ಬೆಳಿಗ್ಗೆ 11.30 ರಿಂದ ಚುನಾವಣಾ ಪ್ರಕ್ರಿಯೆ ಆರಂಭವಾಗಲಿದೆ. ಮೇಯರ್‌ ಸ್ಥಾನಕ್ಕೆ ಚುನಾವಣೆ ನಡೆದ ಬಳಿಕ ಉಪಮೇಯರ್‌ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಅಭ್ಯರ್ಥಿಗಳು ಬೆಳಿಗ್ಗೆ 9.30ಕ್ಕಿಂತ ಮುನ್ನ ನಾಮಪತ್ರ ಸಲ್ಲಿಸಬೇಕು. ಹಣಕಾಸು ಸ್ಥಾಯಿ ಸಮಿತಿ, ಸಾರ್ವಜನಿಕ ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸಮಿತಿ, ಪಟ್ಟಣ ಯೋಜನೆ ಸ್ಥಾಯಿ ಸಮಿತಿ ಹಾಗೂ ಲೆಕ್ಕಪತ್ರ ಸ್ಥಾಯಿ ಸಮಿತಿಯ ಸದಸ್ಯರ ಆಯ್ಕೆ ಪ್ರಕ್ರಿಯೆಯೂ ನಡೆಯಲಿದೆ. ಪ್ರಾದೇಶಿಕ ಆಯುಕ್ತ ಶಿವಯೋಗಿ ಸಿ.ಕಳಸದ ಅವರು ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.

ಪಾಲಿಕೆ ಬಲಾಬಲ

65 ಸದಸ್ಯ ಬಲದ ಪಾಲಿಕೆಯಲ್ಲಿ ಕಾಂಗ್ರೆಸ್‌ನ 21 ಸದಸ್ಯರಿದ್ದಾರೆ. ಜೆಡಿಎಸ್‌ನ 20 ಮತ್ತು ಬಿಜೆಪಿಯ 13 ಮಂದಿ ಇದ್ದಾರೆ. ಬಿಎಸ್‌ಆರ್‌, ಕೆಜೆಪಿ, ಎಸ್‌ಡಿಪಿಐ ಮತ್ತು ಪಕ್ಷೇತರರು ಸೇರಿ 11 ಮಂದಿ ಸದಸ್ಯರು ಇದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry